ಬೆಂಗಳೂರು: ಅ.13ರ ಎರಡನೆಯ ಶನಿವಾರದ ರಜೆಯನ್ನು ರದ್ದು ಮಾಡಿ, ಅದರ ಬದಲಾಗಿ ಅ.20ರ ಮೂರನೆಯ ಶನಿವಾರದಂದು ಸಾರ್ವತ್ರಿಕ ರಜೆ ಘೋಷಿಸಲಾಗುತ್ತದೆ ಎಂಬ ಗೊಂದಲಕ್ಕೆ ತೆರೆ ಎಳೆದಿರುವ ರಾಜ್ಯ ಸರ್ಕಾರ ರಜೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಇಂದು ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಈಗಾಗಲೇ ಘೋಷಿತವಾಗಿರುವಂತೆ ಅ.13ರಂದು ಎರಡನೆಯ ಶನಿವಾರ ಸಾರ್ವತ್ರಿಕ ರಜೆಯಿರುತ್ತದೆ. ಹಾಗೆಯೇ ಅ.20ರ ಮೂರನೆಯ ಶನಿವಾರದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.
ಅ.18 ಹಾಗೂ 19ರಂದು ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆಯಿದೆ. ಅ.21ರಂದು ಭಾನುವಾರದ ರಜೆ. ಹೀಗಾಗಿ, ಅ.20ನ್ನು ನಗೋಷಿಯೆಬಲ್ ಆಕ್‌ಟ್ ಅಡಿಯಲ್ಲಿ ಸಾರ್ವತ್ರಿಕ ರಜೆಯ ಎಂದು ಘೋಷಣೆ ಮಾಡಬೇಕು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅ.13ರ ಎರಡನೆಯ ಶನಿವಾರದ ರಜೆಯನ್ನು ರದ್ದು ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಇದನ್ನು ತಿರಸ್ಕರಿಸಿದೆ.

















