ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿಶ್ವದಲ್ಲಿ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವಂತೆಯೇ, ಜಿಲ್ಲೆಯಲ್ಲೂ ಸಹ ಇದರ ಕುರಿತು ಆತಂಕ ವ್ಯಕ್ತವಾಗಿದೆ. ಆದರೆ, ವೈರಸ್ ಹರಡದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕ ಪಡುವಅಗತ್ಯವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಕರೆ ನೀಡಿದ್ದಾರೆ.
ಕೊರೋನಾ ವೈರಸ್ ಕುರಿತಾಗಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ವೈರಸ್ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತ ರೋಗಿಗಳಿಗಾಗಿ ಪ್ರತ್ಯೇಕ ವಿಭಾಗ ಸೃಜಿಸಲಾಗಿದ್ದು, ವಿದೇಶದಿಂದ ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳನ್ನು ಇಲ್ಲಿ ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೋನಾ ವೈರಸ್ ಪತ್ತೆಗೆ ಶಿವಮೊಗ್ಗ ವೈದ್ಯಕೀಯ ಕಾಲೇಜು ಪ್ರಯೋಗಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಹೊರತಾಗಿ ಜಿಲ್ಲೆಯ ಯಾವುದೇ ಪ್ರಯೋಗಾಲಯದಲ್ಲಿ ಕೊರೋನಾ ವೈರಸ್ ಪತ್ತೆ ಮಾಡುವಂತಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ 19 ರಾಷ್ಟ್ರಗಳನ್ನು ಪಟ್ಟಿ ಮಾಡಿದ್ದು, ಅಲ್ಲಿಂದ ಆಗಮಿಸುವ ವ್ಯಕ್ತಿಗಳನ್ನು ಕೊರೋನಾ ವೈರಸ್ ಪ್ರತ್ಯೇಕ ವಿಭಾಗದಲ್ಲಿ 14 ದಿನಗಳ ಕಾಲ ಇರಿಸಿ, ಗಮನಿಸಲಾಗುವುದು. ಅಲ್ಲದೇ ಅವರನ್ನು ಎಲ್ಲ ರೀತಿಯ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.
ವೈದ್ಯರು ಎಂದರೆ ದೇವರ ಸಮಾನಎಂದು ನಾವು ಗೌರವಿಸುತ್ತೇವೆ. ಭವಿಷ್ಯದ ವೈದ್ಯರುಗಳಾದ ನಿಮ್ಮೊಂದಿಗೆಇಂದು ನಾನು ಪಾಲ್ಗೊಂಡಿರುವುದು ನನಗೆ ಸಂತಸ ಮೂಡಿಸಿದೆ. ವಿದ್ಯಾರ್ಥಿ ಹಂತದಲ್ಲಿ ಯಾವುದೇ ರೀತಿಯ ದುಶ್ಚಟಗಳಿಗೆ ಬೀಳದೇ ಗುರಿ ಸಾಧನೆಯತ್ತ ಗಮನ ಕೇಂದ್ರೀಕರಿಸಿ. ನಿಮಗೆ ಯಾವುದೇ ಸಂದರ್ಭದಲ್ಲಿ, ಯಾವುದೇ ರೀತಿಯ ತೊಂದರೆಯಾದರೂ ನನ್ನನ್ನು ಸಂಪರ್ಕಿಸಿ. ನಿಮ್ಮ ರಕ್ಷಣೆ ಹಾಗೂ ಸೇವೆ ನಾನು ಹಾಗೂ ನಮ್ಮ ಇಲಾಖೆ ಸದಾ ಸಿದ್ದವಿರುತ್ತದೆ.
-ಎನ್. ಸಂಜೀವ್ ಕುಮಾರ್, ವೃತ್ತ ನಿರೀಕ್ಷಕರು, ಗ್ರಾಮಾಂತರ ವಿಭಾಗ, ಶಿವಮೊಗ್ಗ
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಮಾತನಾಡಿ, ಚೈನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸಾಂಕ್ರಾಮಿಕ ಕಾಯಿಲೆ ಕೊರೋನಾ ವೈರಸ್ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಇದೇ ವೇಳೆ ಈ ವೈರಸ್ ಹರಡುವಿಕೆ ಕುರಿತಾಗಿ ಸುಳ್ಳು ಸುದ್ದಿಗಳನ್ನೂ ಸಹ ಹರಡಿಸಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ಆತಂಕ ಪಡುವ ಅಗತ್ಯವಿಲ್ಲ. ಇದನ್ನು ತಡೆಗಟ್ಟಲು ವೈದ್ಯಕೀಯ ಸಮೂಹ ಹಾಗೂ ಸರ್ಕಾರ ಯುದ್ದೋಪಾದಿಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೊರೋನಾ ವೈರಸ್ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೂಕ್ಷ್ಮಜೀವಾಣು ವಿಭಾಗದ ಮುಖ್ಯಸ್ಥ ಡಾ.ಅಮೃತ್ ಉಪಾಧ್ಯಾಯ, ಆಸ್ಪತ್ರೆ ವಿಭಾಗದ ಉಪಪ್ರಾಂಶುಪಾಲ ಡಾ.ಸುಜಿತ್ ಹಾಲಪ್ಪ, ಜಿಲ್ಲಾ ಆರೋಗ್ಯ ವಿಚಕ್ಷಣಾ ವಿಭಾಗದ ಡಾ.ಶಂಕರಪ್ಪ ಅವರುಗಳು ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಸಲಹೆಗಳು:
ಶೀತ ಹಾಗೂ ನೆಗಡಿ ಉಂಟಾದಾಗ ಕರ್ಚೀಫ್ ಅಥವಾ ಟಿಷ್ಯೂ ಪೇಪರ್ ಬಳಸಿ
ಕೆಮ್ಮು ಹಾಗೂ ಸೀನುವಾಗ ಕರ್ಚೀಫ್/ಟಿಷ್ಯೂ ಪೇಪರ್ ಅಡ್ಡ ಹಿಡಿಯಿರಿ
ಆಗಾಗ್ಗೆ ಕೈಗಳನ್ನು ಸೋಪಿನಿಂದ ಸ್ವಚ್ಛವಾಗಿ ಶುಭ್ರಗೊಳಿಸಿ
ಸಂತೆ ಹಾಗೂ ಜಾತ್ರೆಗಳಿಗೆ ಹೋಗುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ
ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ವಚ್ಛವಾಗಿರಿಸಿಕೊಳ್ಳಿ
ಹೊರಗಿನ ಅಸ್ವಚ್ಛ ಆಹಾರಗಳನ್ನು ಸೇವನೆ ಮಾಡಬೇಡಿ
ಸಾಂಕ್ರಾಮಿಕ ರೋಗ ಪೀಡಿತರಿಂದ ಸಾಧ್ಯವಾದಷ್ಟು ದೂರವಿರಿ
ಅನಾರೋಗ್ಯ ಪೀಡಿತರು ಸಾಧ್ಯವಾದಷ್ಟು ಹೊರಹೋಗದೇ ವಿಶ್ರಾಂತಿ ಪಡೆಯಿರಿ
ವೈದ್ಯಕೀಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಲತಾ ನಾಗೇಂದ್ರ, ಡಾ.ವಿನಯಾ ಶ್ರೀನಿವಾಸ್, ಶೈಕ್ಷಣಿಕ ನಿರ್ದೇಶಕ ಆರ್.ಪಿ.ಪೈ, ಪ್ರಾಂಶುಪಾಲರಾದ ಡಾ.ಎಸ್.ಎಂ.ಕಟ್ಟಿ, ಡಾ.ಬಿ.ಎಸ್. ಸುರೇಶ್, ವೈದ್ಯಕೀಯ ಅಧೀಕ್ಷಕಡಾ.ಬಿ. ಶ್ರೀನಿವಾಸ್ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು, ವೈದ್ಯಕೀಯ ಹಾಗೂ ವೈದ್ಯಕೀಯೇತರ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.
ಕೊರೋನಾ ವೈರಸ್ ಕಾಣಿಕೊಂಡರೆ ವಿಪರೀತ ಶೀತ, ನೆಗಡಿ ಹಾಗೂ ತಲೆ ನೋವು ಕಾಣಿಸಿಕೊಂಡು ಅದು ನ್ಯುಮೋನಿಯಾ ಆಗಿ ಪರಿವರ್ತಿತವಾಗುತ್ತದೆ. ಇದು ಮಾರಕ ಎಂದು ಹೇಳಲಾದರೂ ಇದರಿಂದಾಗಿ ಸಾವನ್ನಪ್ಪುವ ಸಂಖ್ಯೆ ಶೇ.0.02ರಷ್ಟು ಪ್ರತಿಶತ ಮಾತ್ರ. ಪ್ರಮುಖವಾಗಿ ಭಾರತೀಯರಲ್ಲಿ ಜನ್ಮತಃ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಇದು ವಂಶವಾಹಿಯಲ್ಲೇ ಬಂದಿದೆ. ಇದು, ಕೊರೋನಾ ವೈರಸ್ ಬಾರದಂತೆ ತಡೆಯುತ್ತದೆ. ಆದರೆ, ಭಯ ಪಡಿಸುವ ಸುಳ್ಳು ಸುದ್ದಿಗಳಿಂದ ಮಾನಸಿಕವಾಗಿ ಆತಂಕಕ್ಕೆ ಒಳಗಾಗುವುದರಿಂದ ಸಮಸ್ಯೆ ಹಾಗೂ ಆತಂಕ ಉಂಟಾಗುತ್ತಿದೆ.
-ಡಾ.ಎಸ್. ನಾಗೇಂದ್ರ
Get in Touch With Us info@kalpa.news Whatsapp: 9481252093
Discussion about this post