ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಹೊರ ರಾಜ್ಯಗಳಿಂದ ಬಂದಿರುವವರು 7ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಪೂರ್ಣಗೊಳಿಸಿದರೆ ಅವರನ್ನು ಬಿಡುಗಡೆಗೊಳಿಸಿ ಹೋಂ ಕ್ವಾರೆಂಟೈನ್‍ಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದರು.
ಇದುವರೆಗೆ ಹೊರ ರಾಜ್ಯಗಳಿಂದ ಬಂದವರಿಗೆ 14ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ವಿಧಿಸಲಾಗುತ್ತಿದ್ದು, ಹೊಸ ಮಾರ್ಗಸೂಚಿ ಪ್ರಕಾರ ಇದನ್ನು 7ದಿನಗಳಿಗೆ ಇಳಿಸಲಾಗಿದೆ. ಪ್ರಸ್ತುತ ವಿವಿಧ ಹಾಸ್ಟೆಲ್‍ಗಳಲ್ಲಿ 553ಮಂದಿ ಕ್ವಾರೆಂಟೈನ್‍ನಲ್ಲಿದ್ದಾರೆ. ಪ್ರತಿ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ 7ದಿನಗಳ ಅವಧಿ ಪೂರ್ಣಗೊಳಿಸಿರುವವರ ಆರೋಗ್ಯ ತಪಾಸಣೆ ನಡೆಸಿ ಕೈಗೆ ಸೀಲು ಹಾಕಿ ಮನೆಗೆ ಕ್ವಾರೆಂಟೈನ್‍ಗೆ ಕಳುಹಿಸಬೇಕು. ಇದಕ್ಕಾಗಿ ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಹೋಂ ಕ್ವಾರೆಂಟೈನ್‍ಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಂತವರ ಮೇಲೆ ನಿರಂತರ ನಿಗಾ ಇರಿಸಬೇಕು. ಅಂತವರ ಪಟ್ಟಿಯನ್ನು ಸಂಬಂಧಪಟ್ಟ ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಳುಹಿಸಬೇಕು.
ಸೂಕ್ಷ್ಮ ರಾಜ್ಯಗಳೆಂದು ಗುರುತಿಸಲಾಗಿರುವ ರಾಜ್ಯಗಳಿಂದ ಆಗಮಿಸುವವರನ್ನು ಮಾತ್ರ ಇನ್ನುಮುಂದೆ 7ದಿನಗಳ ಸಾಂಸ್ಥಿಕ ಕ್ವಾರೆಂಟೈನ್‍ಗೆ ಒಳಪಡಿಸಲಾಗುವುದು. ಇನ್ನುಳಿದ ರಾಜ್ಯಗಳಿಂದ ಬರುವವರನ್ನು ನೇರವಾಗಿ ಮನೆಗೆ ಕ್ವಾರೆಂಟೈನ್‍ಗೆ ಕಳುಹಿಸಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಹೊಸ ಮಾರ್ಗಸೂಚಿ ಪ್ರಕಾರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಸಹ ಹೋಂ ಕ್ವಾರೆಂಟೈನ್‍ಗೆ ಒಳಪಡಿಸಬೇಕಾಗಿದೆ. ಕ್ವಾರೆಂಟೈನ್ ವಿಧಿಸುವ ಮೊದಲು ಕಡ್ಡಾಯವಾಗಿ ಕ್ವಾರೆಂಟೈನ್ ವಾಚ್ ಆಪ್ ಡೌನ್‍ಲೋಡ್ ಮಾಡಲು ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಶಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಡಾ.ಶಂಕ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post