ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದಲ್ಲಿ ಲಾಕ್ಡೌನ್ ತೆರವುಗೊಳಿಸಿದ ಬಳಿಕ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತರ ಜಿಲ್ಲಾ ಪಯಣಕ್ಕೆ ಯಾವುದೇ ಪಾಸ್ ಅಗತ್ಯವಿಲ್ಲ. ಖಾಸಗಿ ವಾಹನಗಳಲ್ಲಿ ಸಹ ಜನರು ಮಾರ್ಗಸೂಚಿ ಪ್ರಕಾರ ಪ್ರಯಾಣಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ 5172 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರ ಪೈಕಿ 4828 ಫಲಿತಾಂಶ ಬಂದಿದ್ದು, 320 ಬರಬೇಕಿದೆ. 4804 ನೆಗೆಟಿವ್ ಬಂದಿದೆ. ಹೊರ ರಾಜ್ಯಗಳಿಂದ ಆಗಮಿಸಿದ್ದ 1158 ಜನರನ್ನು ಕ್ವಾರೆಂಟೈನ್ ಮಾಡಿ ಪರೀಕ್ಷೆ ನಡೆಸಲಾಗಿದೆ. 943 ಫಲಿತಾಂಶ ಬಂದಿದೆ. ಪ್ರಸ್ತುತ ಜಿಲ್ಲೆಗೆ ಪ್ರತಿದಿನ 50ರಿಂದ 70ಮಂದಿ ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ ಎಂದರು.
ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 329 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕಂಡು ಬಂದಿದ್ದ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಎಲ್ಲರ ಗಂಟಲ ದ್ರವ ತಪಾಸಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಂತದ ಸಂಪರ್ಕ ಹೊಂದಿದ್ದವರ ತಪಾಸಣೆ ನಡೆಸಲಾಗುವುದು.
ಕ್ವಾರೆಂಟೈನ ಹೆಲ್ಪ್ಲೈನ್
ಜಿಲ್ಲೆಯಲ್ಲಿ ಒಟ್ಟು 52 ಕ್ವಾರೆಂಟೈನ್ ಕೇಂದ್ರಗಳಿದ್ದು, ನಾಲ್ಕು ಕೇಂದ್ರಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕ್ವಾರೆಂಟೈನ್ ಕೇಂದ್ರಗಳಲ್ಲಿರುವವರು ಅಹವಾಲು ಸಲ್ಲಿಸಲು 247 ಕಂಟ್ರೋಲ್ ರೂಂ ಆರಂಭಿಸಲಾಗಿದ್ದು, 08182-220082 ಸಂಖ್ಯೆಗೆ ಕರೆ ಮಾಡಿ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ಪ್ರಕರಣ ದಾಖಲು
ಕೋವಿಡ್ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪಾಸಿಟಿವ್ ಬಂದಿರುವ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಈ ಕರ್ತವ್ಯದಲ್ಲಿದ್ದ ತಂಡವನ್ನು ಈಗಾಗಲೇ ಬದಲಾಯಿಸಲಾಗಿದೆ. ಈ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.
ಮನವಿ
ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ, ಯಾರೂ ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಮಾಸ್ಕ್ ಧರಿಸಬೇಕು. ಜಿಲ್ಲೆಯ ಜನರು ಜಾಗರೂಕರಾಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
Get in Touch With Us info@kalpa.news Whatsapp: 9481252093
Discussion about this post