ಪ್ರಹ್ಲಾದನ ಮಗ ವಿರೋಚನ. ಅವನ ಮಗನೇ ಮಹಾಬಲಿ ಚಕ್ರವರ್ತಿ. ಇವನಿಗೆ ಇಂದ್ರ ಸೇನ ಎಂಬ ನಾಮಾತರವೂ ಇದೆ. ಅಲ್ಲದೆ ಮಹಾವಿಷ್ಣು ಭಕ್ತಾಗ್ರಣಿಯೂ ಹೌದು. ಇದರ ದುರ್ಲಾಭದಿಂದ ಇಡೀ ಸ್ವರ್ಗ ಲೋಕವನ್ನೇ ಆಕ್ರಮಣ ಮಾಡಿ ಇಂದ್ರ ಪದವಿಯನ್ನು ಪಡೆಯಲು ಮುನ್ನುಗ್ಗುತ್ತಾನೆ. ಆದರೆ ಇಂದ್ರನ ವಜ್ರಾಯುಧಾಘಾತದಿಂದ ಸಂಹಾರವಾಗುತ್ತಾನೆ.
ಒಬ್ಬ ಬಲಿಷ್ಟ ಗುರು ಇದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಇಲ್ಲಿ ತಿಳಿಯಬಹುದು. ಬಲಿಯ ಪರಮ ಗುರು ಶುಕ್ರಾಚಾರ್ಯರು ಮೃತಸಂಜೀವಿನಿ ಯಾಗ ಮಾಡಿ ಮತ್ತೆ ಬಲಿಚಕ್ರವರ್ತಿಗೆ ಜೀವದಾನ ಮಾಡಿ ನಂತರ, ಹೇ ರಾಜನ್, ಸ್ವರ್ಗವನ್ನು ಹೀಗೆ ಗೆಲ್ಲಲಾಗದು, ಅದಕ್ಕಾಗಿ ವಿಶ್ವಜಿತ್ ಯಾಗ ಮಾಡಿ, ನಿನ್ನ ಸಕಲೈಶ್ವರ್ಯವನ್ನೂ ದಾನ ಮಾಡಬೇಕು’ ಎಂದರು.
ವಿಶ್ವಜಿತ್ ಯಾಗ ಸಂದರ್ಭ. ಈ ಯಾಗದಲ್ಲಿ ಸಕಲವನ್ನೂ ತ್ಯಾಗ ಮಾಡಿ ಅಗ್ನಿ ದೇವನಿಂದ ರಥಾಶ್ವಧ್ವಜವನ್ನೂ, ಪಿತಾಮಹ ಪ್ರಹ್ಲಾದನಿಂದ ದಿವ್ಯಧನುಸ್ಸು, ಅಕ್ಷಯತೂಣೀರಗಳನ್ನೂ ಪಡೆಯುತ್ತಾನೆ. ನಂತರ ಶುಕ್ರಾಚಾರ್ಯರ ಸಲಹೆಯಂತೆ, ನರ್ಮದಾ ತೀರದಲ್ಲಿ ಶಾಶ್ವತ ಸ್ವರ್ಗಲೋಕಾಧಿಪತ್ಯಕ್ಕಾಗಿ ಸಹಸ್ರ ಅಶ್ವಮೇಧ ಯಾಗಕ್ಕೂ ಶುರುಮಾಡಿದ. 999 ಯಾಗಗಳ ಪೂರ್ಣಾಹುತಿಯಾಗುತ್ತದೆ. ಕೊನೆಯ ಯಾಗಕ್ಕೆ ಮತ್ತೆ ತನ್ನೆಲ್ಲ ಐಶ್ವರ್ಯ ಸಂಪತ್ತುಗಳನ್ನು ದಾನ ಮಾಡಲು ಶುರು ಮಾಡಿದ.(ಒಂದು ನೆನಪಿರಲಿ, ಯಾವುದೇ ಯಜ್ಞ ಯಾಗ ಮಾಡಬೇಕಾದರೆ ಅಲ್ಲಿ ಯಾವುದೇ ಇಹದ ಸ್ವಾರ್ಥಗಳಿರಬಾರದು. ಅದಕ್ಕಾಗಿ ಯಜ್ಞೋದಾನ ತಪಶ್ಚೈವ ಎಂದರು).
ಇದನ್ನು ನೋಡಿ ದೇವಾದಿ ದೇವತೆಗಳು ದಿಙ್ಮೂಢರಾದರು. ಋಷಿ ಮುನಿಗಳೊಡನೆ ಸೇರಿ ನೇರ ಬ್ರಹ್ಮ ಮತ್ತು ಈಶ್ವರನಲ್ಲಿಗೆ ಶರಣಾದರು. ಆಗ ಬ್ರಹ್ಮ ಮತ್ತು ಈಶ್ವರ ದೇವರು,’ ಭಕ್ತರೇ ಇದನ್ನು ತಡೆಯುವ ಸಾಮರ್ಥ್ಯ ನಮಗಿಲ್ಲ. ತಡೆಯುವುದೂ ಅಧರ್ಮವೇ ಆಗುತ್ತದೆ. ಆತ ವಿಷ್ಣು ಭಕ್ತ. ಅಲ್ಲದೆ ಸಕಲವನ್ನೂ ತ್ಯಾಗ ಮಾಡಿಯೇ, ಇಹದ ಸ್ವಾರ್ಥಗಳನ್ನೆಲ್ಲ ಬಿಟ್ಟು ಯಾಗ ನಿರತನಾಗಿದ್ದಾನೆ. ನಾವೇನಾದರೂ ತಡೆದರೆ ವಿಷ್ಣುಕೋಪಕ್ಕೆ ಬಲಿಯಾಗಬೇಕಾದೀತು. ನೀವು ನಾರಾಯಣನಿಗೇ ಶರಣಾಗುವುದು ಒಂದೇ ದಾರಿ’ ಎಂದರು. ಆ ಪ್ರಕಾರ ನಾರಾಯಣನಲ್ಲಿಗೇ ಬಂದು ಶರಣಾಗುತ್ತಾರೆ. ಆಗ ಸಕಲಾನುಗ್ರಹ ನಿಗ್ರಹಿಯಾದ ಭಗವಂತನು, ‘ಚಿಂತೆ ಮಾಡಬೇಡಿ ಭಕ್ತರೇ. ಅನುಗ್ರಹ ಮಾಡುವವನೂ ನಾನೇ, ಅನುಗ್ರಹ ದುರುಪಯೋಗ ಆದಾಗ ನಿಗ್ರಹವನ್ನೂ ನಾನೇ ಮಾಡುವವನು’ ಎಂದು ಧೈರ್ಯತುಂಬಿ ಕಳುಹಿಸುತ್ತಾನೆ.
ಹರಿಯ ಲೀಲೆಯನ್ನು ಬಲ್ಲವರಾರು. ಆ ಶ್ರೀಹರಿಯು ಅದಿತಿ ದೇವಿಯ ಗರ್ಭದಲ್ಲಿ ಆಗಲೇ ವಾಮನ ರೂಪದಲ್ಲಿ ಜನಿಸಿದ. ನಂತರ ಯಾಗ ಶಾಲೆಗೆ ವಾಮನ ವಟುವಾಗಿ ದಾನನಿರತ ಬಲಿಮಹಾರಾಜರ ಎದುರು ನಿಂತ. ಆಗ ಬಲಿಚಕ್ರವರ್ತಿಯು ಈ ವಟುವಿನ ಅಡಿಮುಡಿಯನ್ನು ನೋಡಿ, ಹೇ ಬ್ರಾಹ್ಮಣ ವಟುವೇ, ಯಾರು ನೀನು, ನಿನ್ನ ಹೆಸರೇನು, ನಿನಗೇನು ದಾನ ಬೇಕು ಕೇಳು ಎಂದಾಗ, ಆ ವಟುರೂಪಿ ಭಗವಂತನು,’ ನಿರರ್ಗಳವಾಗಿ,’ ಹೇ ರಾಜನ್, ನಾನೊಬ್ಬ ಅನಾಥ ವಟು. ನನ್ನ ಹೆಸರು ಅವಿನಾಶ ಎಂದು ಮಾತ್ರ ಗೊತ್ತು. ಹೇ ಚಂದ್ರವಂಶ ಶ್ರೇಷ್ಟನೇ, ವಟುವಿಗೇನು ಬೇಕು ಹೇಳು? ಎಂದಿಯಲ್ವೇ. ವಟುವಿಗೆ ಬೇಕಾದದ್ದು ಇಹದ ಭೋಗವಲ್ಲ. ಪರಮಾತ್ಮ ಪ್ರೀತ್ಯರ್ಥವಾಗಿ ಭಗವಂತನ ಸೇವೆ ಮಾತ್ರ. ನನಗೆ ಬೇಕಾದದ್ದು ಕೇವಲ ಮೂರಡಿ ನೆಲ. ಅದು ಅಗ್ನಿಕಾರ್ಯಕ್ಕಾಗಿ ಮಾತ್ರ. ಪರರ ನೆಲದಲ್ಲಿ ನಾನು ಸಂಧ್ಯಾವಂದನೆ, ಅಗ್ನಿಕಾರ್ಯ ಮಾಡುವುದಿಲ್ಲ. ಮನಸ್ಸಿದ್ದರೆ ಕೊಡು, ಇಲ್ಲವಾದರೆ ನಾನು ಹಿಂತಿರುಗುತ್ತೇನೆ’ ಎಂದಿತು ಆ ವಟು!
ಅಪಚಾರ ಅಪಚಾರ. ನಾನಿರುವುದೇ ದಾನ ಕೊಡಲಿಕ್ಕಾಗಿ. ಇದೋ ಕೊಡುತ್ತೇನೆ ಎಂದ ರಾಜ.’ ಯಾರ ಪ್ರೀತ್ಯರ್ಥವಾಗಿ ದಾನ ಕೊಡ್ತಿಯೋ ರಾಜಾ?’ ಎಂದು ಆ ವಟು ಪ್ರಶ್ನಿಸಲಾಗಿ, ರಾಜನೆಂದ,’ ಹೇ ಬ್ರಾಹ್ಮಣೋತ್ತಮಾ, ಸ್ವರ್ಗ ಸಿಂಹಾಸನ ಪಡೆದು ಅಧಿಪತ್ಯಕ್ಕಾಗಿ ಈ ದಾನ ಕೈಂಕರ್ಯ, ಅಶ್ವಮೇಧ ಯಾಗವಪ್ಪಾ’ ಎಂದ. ಇದೋ ನೀನು ಕೇಳಿದ ಮೂರಡಿ ನೆಲವನ್ನು ಧಾರೆಯೆರೆದು ಕೊಡುತ್ತೇನೆ ಎಂದು ದಾನಕ್ಕೆ ಮುಂದಾದನು. ಆಗ ಆಚಾರ್ಯರು ರಾಜನ ಕಿವಿಯಲ್ಲಿ,’ ಆ ವಟು ಯಾರದು ಗೊತ್ತೇನೂ’ಎಂದ. ಅಯ್ಯೋ ಆತನೇ ಹೇಳಿದನಲ್ವೇ.. ಅನಾಥ ಬಾಲಕನೆಂದೂ.. ನಿನ್ದೊಂದು ರಾಗ ಶುರುವಾಯ್ತು ಬೇರೆ’ ಎಂದ ರಾಜ. ಹೇ ರಾಜಾ.. ನೀನು ಹೆಡ್ಡ. ಆ ವಟುವಿನ ಪಾದದ್ದಲ್ಲೇ ಅಳೆವ ಮೂರಡಿಯಂತೆ. ನಿನ್ನ ಪಾದದಲ್ಲಿ ಅಲ್ಲಪ್ಪಾ. ಅನಾಥನೆಂದು ನಮ್ಮ ಮಾನುಷರ ತಿಳುವಳಿಕೆಯಲ್ಲಿ ನೋಡಬೇಡ. ಅ..ನಾಥ ಅಂದರೆ ನಾಥನಿಲ್ಲದವ, ಒಡೆಯನಿಲ್ಲದವ ಎಂದರ್ಥ. ಅದಕ್ಕಾಗಿಯೇ ಯಾರವ ಎಂದು ಕೇಳಿದ್ದು ಮೂರ್ಖನೇ. ನಾರಾಯಣನೊಬ್ಬನೇ ಒಡೆಯನಿಲ್ಲದವ. ನಾರಾ ಆಯನ ಅಂದರೆ ಆಕಾಶದಲ್ಲಿ ಸಂಚರಿಸುವ ಸಾಕ್ಷಾತ್ ಸೂರ್ಯ ನಾರಾಣನಪ್ಪಾ. ಗಗನದೊಡೆಯ. ಅವನಿಗಾರು ಒಡೆಯರು? ಏನು ಬೇಕಾದರೂ ಮಾಡಿಕೊ. ನಿನ್ನ ಸ್ವಾಧೀನದ ರಾಜ್ಯದ ಬಗ್ಗೆ ನಾನೇನು ಹೇಳಲಿ?
ಒಡನೆಯೇ ಬಲಿಚಕ್ರವರ್ತಿಗೆ ಜ್ಞಾನೋದಯ ಆಯ್ತು. ಎದ್ದು ನಿಂತು,’ ಹೇ ಭಗವಂತಾ, ನಿನಗೇ ನಾನು ದಾನ ಕೊಡಬೇಕಾದರೆ ಈ ಕೈಗಳು ಎಷ್ಟು ಜನ್ಮದ ಪುಣ್ಯ ಮಾಡಿರಬೇಕು ಹೇಳು. ಯಾವ ಸಾನ್ನಿಧ್ಯ ವಾಸದ ಬಯಕೆಯಲ್ಲಿ ನನ್ನ ಜೀವನ ಇದೆಯೋ ಅದುವೇ ಬಂದು ನನ್ನೆದುರು ನಿಂತರೆ ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ. ಇದೋ ನಿನ್ನ ಹಸ್ತ ಸ್ಪರ್ಷ ಮಾಡುತ್ತಿದ್ದೇನೆ, ನೀನು ಕೇಳಿದ ಮೂರಡಿ ನೆಲವನ್ನು ದಾನ ಕೊಡುತ್ತಿದ್ದೇನೆ. ನಿನ್ನ ಚರಣ ಕಮಲದಲ್ಲಿ ಅಳತೆ ಮಾಡಿಕೋ ಎಂದು ಆನಂದಭಾಷ್ಪದ ಅಂಜಲಿಯಲ್ಲೇ ದಾನಕೊಟ್ಟ ಆ ಮಹಾಭಕ್ತ ಬಲಿಚಕ್ರವರ್ತಿ’.
ಪ್ರಸನ್ನನಾದ ಆ ವಾಮನ ರೂಪಿ ಭಗವಂತನು, ನಗುತ್ತಾ ಭೂಮ್ಯಾಕಾಶಕ್ಕೆ ಬೆಳೆದ. ತ್ರಿಣೀ ಪಾದ ವಿಚಕ್ರಮೇ ಎಂಬ ವಿಷ್ಣು ಸೂಕ್ತದ ಮಂತ್ರದಲ್ಲಿ ಹೇಳಿದಂತೆ, ಒಂದನ್ನು ನೆಲದಲ್ಲಿಟ್ಟ, ಇನ್ನೊಂದನ್ನು ಅಂಬರಕ್ಕಿಟ್ಟ. ಮೂರನೆಯದ್ದೂ??? ಎಂದು ಕೇಳುತ್ತಿದ್ದಂತೆ ಬಲಿಯು ಶಿರಬಾಗಿದ. ವಿಷ್ಣುವಿನ ಪಾದತಳದಲ್ಲಿ ಬಲಿಯ ಶಿರಸ್ಸು ಲೀನವಾಯ್ತು. ಆಗ ಭಗವಂತನು,’ ಹೇ ಮಹಾರಾಜ, ನೀನು ಚಿರಂಜೀವಿ. ಮುಂದಿನ ಇಂದ್ರ ಪದವಿ ನಿನಗೇ ಸಲ್ಲತಕ್ಕದ್ದು. ಸ್ವಲ್ಪ ಅಜ್ಞಾನಿಯಾಗಿ ಅವಸರಿಸಿದೆ ನೀನು. ಆದರೂ ಆ ಪದವಿಯನ್ನು ನಾನು ನಿನಗೆ ನೀಡುವವರೆಗೆ ನೀನು ನನ್ನ ಪಾದತಳದಲ್ಲೇ ಇರು. ಮುಂದಿನ ಮನ್ವಂತರದಲ್ಲಿ ನೀನು ಇಂದ್ರ ಪದವಿಯನ್ನು ಪಡೆಯುವವನಾಗು. ಆದರೂ ವರ್ಷಕ್ಕೊಮ್ಮೆ ಕಾರ್ತಿಕ ಮಾಸದ ಶುಕ್ಲ ಪ್ರತಿಪತ್’ನಲ್ಲಿ ಭೂಲೋಕದಲ್ಲಿ ನನ್ನ ಸಾನ್ನಿಧ್ಯವಾದ ತುಳಸೀ ವೃಂದಾವನದ ಬಲ ಭಾಗದಲ್ಲಿ ನಿನ್ನ ಆರಾಧನೆಯನ್ನು ನಿನ್ನ ಭಕ್ತರು ಮಾಡುವಂತಾಗಲಿ. ಈ ಬ್ರಹ್ಮಾಂಡದಲ್ಲಿ ನನ್ನ ಪ್ರೀತ್ಯರ್ಥವಾಗಿ ನಡೆಯದ ಯಾವ ಸತ್ಕಾರ್ಯವನ್ನೂ ನಾನೇ ಭಂಗವನ್ನೂ ಮಾಡುತ್ತೇನೆ ಎಂಬುದು ಜಗತ್ತಿಗೆ ತಿಳಿಸಲು ನೀನೊಬ್ಬ ನನಗೆ ಮಾಧ್ಯಮ ಉದಾಹರಣೆಯಾಯ್ತು.
ಜಯ ಜಯಾ ಜಯ ಜಯಾ ಎಂದು ದೇವತೆಗಳು ಹೂಮಳೆಗೆರೆದರು.
Get In Touch With Us info@kalpa.news Whatsapp: 9481252093
Discussion about this post