ಉತ್ತರ ಕೊರಿಯಾ ನಾಗರಿಕರು ದೇಶದಾದ್ಯಂತ ಯಾವುದೇ ನಿಬಂಧನೆಯಿಲ್ಲದೆ ಸಂಚರಿಸುವಂತಿಲ್ಲ. ಪ್ರಯಾಣಿಸುವ ಪ್ರತಿಯೊಬ್ಬ ನಾಗರಿಕನ ಮೇಲೂ ಅವನ ಚಲನವಲನಗಳ ಮೇಲೂ ಹದ್ದಿನ ಕಣ್ಣಿರುತ್ತದೆ. ಹಾಗೆಯೇ ಉತ್ತರ ಕೊರಿಯಾ ಸಾಮಾನ್ಯ ನಾಗರಿಕರು ವಿದೇಶ ಪ್ರವಾಸ ಕೈಗೊಳ್ಳುವುದು ಸಾಧ್ಯವಿಲ್ಲ. ಕೇವಲ ರಾಜತಾಂತ್ರಿಕ ಪ್ರಮುಖರು ಮಾತ್ರ ವಿದೇಶ ಪ್ರವಾಸ ಮಾಡಬಹುದಾಗಿದೆ. ಇನ್ನುಳಿದಂತೆ ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಕಲಾತಂಡಗಳು ವಿದೇಶ ಪ್ರಯಾಣ ಮಾಡಬಹುದಾದರೂ, ಅವರ ಮೇಲೆ ಸದಾ ಒಂದು ಕಣ್ಣಿರುತ್ತದೆ. ಉತ್ತರ ಕೊರಿಯನ್ನರು ವಿದೇಶ ಪ್ರವಾಸದ ಸಂದರ್ಭದಲ್ಲಿ ಹೊರದೇಶದ ಆಶ್ರಯ ಕೇಳಿ ಅರ್ಜಿ ಸಲ್ಲಿಸುವಂತಿಲ್ಲ. ಒಂದೊಮ್ಮೆ ಅಂತಹ ವಿಷಯ ತಿಳಿದದ್ದಾದರೆ ತಮ್ಮ ದೇಶಕ್ಕೆ ಹಿಂತಿರುಗಿದ ಬಳಿಕ ಮರಣದಂಡನೆ ಖಚಿತ.
ಪ್ರತಿವರ್ಷವೂ ಸಾವಿರಾರು ಉತ್ತರ ಕೊರಿಯಾ ನಾಗರಿಕರು ಆ ನರಕದಿಂದ ತಪ್ಪಿಸಿಕೊಂಡು ನೆರೆಯ ದಕ್ಷಿಣ ಕೊರಿಯಾದಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಾರೆ. ಆದರೆ, ಇವರಾರು ಅಧಿಕೃತವಾಗಿ ದಕ್ಷಿಣ ಕೊರಿಯಾಕ್ಕೆ ಹೋಗಲು ಸಾಧ್ಯವಿಲ್ಲ. ಹಾಗಾಗಿ, ಕದ್ದು ಮುಚ್ಚಿ ಗಡಿದಾಟಲು ಪ್ರಯತ್ನ ಪಡುತ್ತಾರೆ. ಇಂತಹ ಸಮಯದಲ್ಲಿ ಸೇನೆಯ ಕಣ್ಣಿಗೆ ಬಿದ್ದರೆ ಆ ತಕ್ಷಣವೇ ಗುಂಡಿಟ್ಟು ಕೊಲ್ಲಲಾಗುತ್ತದೆ. ಇನ್ನು, ಚೀನಾ ದೇಶಕ್ಕೆ ಪರಾರಿಯಾಗುವ ಪ್ರಯತ್ನದಲ್ಲಿ ಸಫಲವಾದರೂ ಚೀನಾ ಸೇನೆಯು ಅಂತಹ ದೇಶಭ್ರಷ್ಟರನ್ನು ಮತ್ತೆ ಉತ್ತರ ಕೊರಿಯಾಕ್ಕೆ ಗಡಿಪಾರು ಮಾಡುತ್ತದೆ. ದೇಶಕ್ಕೆ ಹಿಂತಿರುಗಿದ ಮೇಲೆ ಮುಂದಿನದು ತಾವು ಈ ಹಿಂದೆ ಅನುಭವಿಸಿದ್ದಕ್ಕಿಂತ ದೊಡ್ಡ ನರಕ. ಇಲ್ಲವೇ ಮರಣದಂಡನೆ ಖಚಿತ. ಆದಾಗ್ಯೂ, ಚೀನಾ ದೇಶದೊಳಕ್ಕೆ ಸೇರಿ ತಪ್ಪಿಸಿಕೊಳ್ಳಲು ಸಫಲರಾದರೂ ಅಲ್ಲಿಯೂ ಸಹ ಮತ್ತೊಂದು ರೀತಿಯ ನರಕವನ್ನೆದುರಿಸಬೇಕು.
ಹೀಗೆ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಚೀನಾದಲ್ಲಿ ಬದುಕು ಕಟ್ಟಿಕೊಳ್ಳುವ ಬಯಸುವ ಇವರು, ಚೀನಾದಲ್ಲಿ ಹೆಂಗಸರಾದರೆ ಲೈಂಗಿಕದಾಸಿಯರಾಗಿ ಗಂಡಸರಾದರೆ ಕೂಲಿ-ನಾಲಿ ಮಾಡಿ ಬದುಕಬೇಕಾ ಗುತ್ತದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿ ನಡುವೆಯೂ ಸಹ ಚೀನಾದಲ್ಲಿ ಉತ್ತರ ಕೊರಿಯಾ ದೇಶಭ್ರಷ್ಟರ ಸಂಖ್ಯೆ 2,೦೦,೦೦೦ ಕ್ಕೂ ಹೆಚ್ಚಿದೆ. ಉತ್ತರ ಕೊರಿಯಾ ಹೊರಗೆ ಉ.ಕೊರಿಯನ್ನರು ಅತಿ ಹೆಚ್ಚು ನೆಲೆಸಿರುವುದು ಇಲ್ಲೆ. ಇವರುಗಳು ದಕ್ಷಿಣ ಕೊರಿಯಾಕ್ಕೆ ತಪ್ಪಿಸಿಕೊ!ಳ್ಳಲು ಹಲವು ಬ್ರೋಕರ್‌ಗಳು ಕದ್ದು ಮುಚ್ಚಿ ಸಹಾಯ ಮಾಡುತ್ತಾರೆ. ಶೆನ್ಯಾಂಗ್‌ನಲ್ಲಿರುವ ದಕ್ಷಿಣ ಕೊರಿಯಾ ರಾಯಭಾರ ಕಚೇರಿ ಸಂಪರ್ಕಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪೊಲೀಸರನ್ನು ದಕ್ಷಿಣ ಕೊರಿಯಾ ರಾಯಭಾರ ಕಚೇರಿ ಸುತ್ತಮುತ್ತ ನಿಯೋಜಿಸುವ ಮೂಲಕ ಇಂತಹ ಪ್ರಯತ್ನವನ್ನು ತಡೆಯುವಲ್ಲಿ ಬಹುಪಾಲು ಸಫಲವಾಗಿದೆ.
ಮುಂದುವರೆಯುವುದು…
Discussion about this post