ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಚೋರಡಿ ಅರಣ್ಯ ವಲಯ ವ್ಯಾಪ್ತಿಯ ಹೊಸಗುಂದ ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಹೊಸಗುಂದ ಉತ್ಸವ ಆಯೋಜಕರಾದ ಸಿ.ಎಂ. ನಾರಾಯಣ ಶಾಸ್ತ್ರಿ ಮತ್ತು ಶೋಭಾ ಶಾಸ್ತ್ರಿಯವರಿಗೆ ಆನಂದಪುರಂ ವಲಯ ಅರಣ್ಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಹೊಸಗುಂದ ಗ್ರಾಮದ ನಂದಿತಳೆಯ ಎಚ್.ಎಸ್. ಮುರಳೀಧರ್ ಎನ್ನುವವರು ಸಲ್ಲಿಸಿದ ದೂರನ್ನು ಮಾನ್ಯ ಮಾಡಿದ ಆನಂದಪುರಂ ವಲಯ ಅರಣ್ಯಾಧಿಕಾರಿಗಳು ಉಮಾ ಮಹೇಶ್ವರ ಚಾರಿಟಬಲ್ ಟ್ರಸ್ಟ್‌ನ ನಾರಾಯಣ ಶಾಸ್ತ್ರಿ ಹಾಗೂ ಶೋಭಾ ಶಾಸ್ತ್ರಿಯವರಿಗೆ ನೋಟಿಸ್ ನೀಡಿದ್ದಾರೆ.
ಹೊಸಗುಂದ ಗ್ರಾಮದ ದಟ್ಟ ಅರಣ್ಯ ಪ್ರದೇಶದಲ್ಲಿ ಉಮಾಮಹೇಶ್ವರ ಚಾರಿಟೇಬಲ್ ಟ್ರಸ್ಟ್ ಮಾಡಿಕೊಂಡು ಯಾವುದೇ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಸುಮಾರು 10 ಎಕರೆ ಪರಿಭಾವಿತ ಅರಣ್ಯ ಪ್ರದೇಶಗಳಲ್ಲಿ ಮರಗಳನ್ನು ನಾಶ ಮಾಡಿ ಅರಣ್ಯ ಪ್ರದೇಶ ಸಮತಟ್ಟು ಮಾಡಿ ಭೂ ಕಬಳಿಕೆ ಮಾಡಿಕೊಂಡಿದ್ದೀರಿ ಎಂದು ನೋಟಿಸ್’ನಲ್ಲಿ ಸ್ಪಷ್ಟಪಡಿಸಲಾಗಿದೆ.
ಅರಣ್ಯ ಪ್ರದೇಶದ ವಿಸ್ತೀರ್ಣವು ಗ್ರಾಮ ನಕ್ಷೆಯನ್ನು ಖಾನು ಎಂದು ನಿರೂಪಿತವಾಗಿರುವರಿಂದ ಸದರಿ ಖಾನು ಅರಣ್ಯದಲ್ಲಿ ಐಆವುದೇ ಖಾಸಗಿ ವ್ಯಕ್ತಿಗಳು ಅರಣ್ಯೇತರ ಚಟುವಟಿಕೆ ನಡೆಸಲು ಅವಕಾಶ ಇರುವುದಿಲ್ಲ ಹಾಗೂ ಇದು ಅರಣ್ಯ ಕಾಯ್ದೆ-1980ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ನವೆಂಬರ್ 16 ರಿಂದ 19ರವರೆಗೆ ನಾಲ್ಕು ದಿನಗಳ ಕಾಲ ಪೂರ್ವ ನಿಯೋಜಿತ ಅರಣ್ಯೇತರ ಚಟುವಟಿಕೆ ನಡೆಸಲು ಸಿದ್ಧತೆ ನಡೆದಿರುವ ಬಗ್ಗೆ ದೂರು ಬಂದಿದೆ. ಈ ಅರಣ್ಯ ಪ್ರದೇಶದಲ್ಲಿ ಪೂರ್ವನಿಯೋಜಿತ ಅರಣ್ಯೇತರ ಚಟುವಟಿಕೆ ಕೈಗೊಳ್ಳಬೇಕಾದರೆ, 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಇಂಥ ಕಾರ್ಯಕ್ರಮ ನಡೆಸಿದರೆ ಮುಂದಿನ ಆಗುಹೋಗುಗಳಿಗೆ ನೀವೇ ಜವಾಬ್ದಾರರಾಗಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ವಿವಾದ ಏನು?
ಚೋರಡಿ ಅರಣ್ಯ ಪ್ರದೇಶದ ಹೊಸಗುಂದ ಗ್ರಾಮದ ಸರ್ವೆನಂಬರ್ 55ರಲ್ಲಿ ಸುಮಾರು 400 ಎಕರೆ ಪ್ರದೇಶ ನಕ್ಷೆಯಲ್ಲಿ ಕಾನು ಎಂದು ನಮೂದಿಸಲಾಗಿದೆ. ಇದು ಶಾಸನಬದ್ಧ ಅರಣ್ಯವಾಗಿದ್ದು, ಇದು ನೈಸರ್ಗಿಕ ಜೀವಸಂಕುಲಕ್ಕೆ ಮೀಸಲು ಅರಣ್ಯವಾಗಿದ್ದು, ಕಸ್ತೂರಿ ರಂಗನ್ ವರದಿಯ ಪ್ರಕಾರ, ಪಶ್ಚಿಮಘಟ್ಟ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಇದು ಸೇರಿದೆ. ಇಲ್ಲಿ 800 ವರ್ಷಗಳಷ್ಟು ಪುರಾತನ ಶಿಲಾಮಯ ಕಲ್ಲೇಶ್ವರ ದೇವಸ್ಥಾನ ಇದ್ದು, ಸುತ್ತಲೂ ನೈಸರ್ಗಿಕ ಅರಣ್ಯ ಇದೆ. ಈ ದೇವಾಲಯಕ್ಕೆ ಯಾವುದೇ ಅರಣ್ಯ ಪ್ರದೇಶವನ್ನು ಮುಪತ್ತಾಗಿ ಇಟ್ಟಿರುವುದಿಲ್ಲ ಎಂದು ದೂರುದಾರರು ವಿವರಿಸಿದ್ದರು.
ನಿರ್ಜನ ಪ್ರದೇಶದಲ್ಲಿರುವ ಈ ದೇವಸ್ಥಾನವನ್ನು ಉಮಾಮಹೇಶ್ವರ ದೇವಸ್ಥಾನವೆಂದು ಮರುನಾಮಕರಣ ಮಾಡಿ ಸಿ.ಎಂ.ನಾರಾಯಣ ಶಾಸ್ತ್ರಿ ಮತ್ತು ಶೋಭಾ ಶಾಸ್ತ್ರಿ ಕುಟುಂಬದ ಚಾರಿಟಬಲ್ ಟ್ರಸ್ಟ್ ಮಾಡಿಕೊಂಡಿದ್ದಾರೆ. ಸರ್ಕಾರದ ಅನುಮತಿ ಇಲ್ಲದೇ ಜೀರ್ಣೋದ್ಧಾರ ಹೆಸರಿನಲ್ಲಿ ನಿಧಿಶೋಧನೆ ಮಾಡಿದ್ದಾರೆ ಎನ್ನುವುದು ದೂರುದಾರರ ವಾದ.
ಈ ವಿವಾದಿತ ಸ್ಥಳದಲ್ಲಿ ಈ ತಿಂಗಳ 16ರಿಂದ 18ರವರೆಗೆ ಹೊಸಗುಂದ ಉತ್ಸವ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಮೀಸಲು ಅರಣ್ಯದಲ್ಲಿ ಅನುಮತಿ ಪಡೆಯದೇ ಇಂಥ ಕಾರ್ಯಕ್ರಮ ಆಯೋಜಿಸಿರುವುದು ಸಹಜ ಪರಿಸರಕ್ಕೆ ಧಕ್ಕೆ ತರುತ್ತದೆ ಎನ್ನುವುದು ಪರಿಸರವಾದಿಗಳ ಅನಿಸಿಕೆ. ಇಂಥ ಅಕ್ರಮ ಉತ್ಸವ ನಡೆಯಲು ಸರ್ಕಾರ ಅವಕಾಶ ನೀಡಬಾರದು ಎಂದು ಅರ್ಜಿದಾರರು ವಾದಿಸಿದ್ದರು.
ಇನ್ನು, ಇದರೊಂದಿಗೆ ಈಗಾಗಲೇ ಆಯೋಜನೆಗೊಂಡು ಕಾರ್ಯಕ್ರಮದ ಹೊಸ್ತಿಲಲ್ಲಿರುವ ಹೊಸಗುಂದ ಉತ್ಸವವನ್ನು ರದ್ದು ಮಾಡುವುದು ಬೇಡ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಪ್ರಕರಣದ ಹಿನ್ನೆಲೆಯಲ್ಲಿ ಹೊಸಗುಂದ ಉತ್ಸವಕ್ಕೆ ಬ್ರೇಕ್ ಬೀಳಲಿದೆಯಾ ಅಥವಾ ಆಯೋಜನೆಯೆಂತೆಯೇ ನಡೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
Get In Touch With Us info@kalpa.news Whatsapp: 9481252093
Discussion about this post