ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಸುಣ್ಣದಹಳ್ಳಿ ವಾಸಿ ಶಂಕ್ರಮ್ಮ(70) ಎನ್ನುವವರನ್ನು ಕೊಲೆ ಮಾಡಿ, ಆಕೆಯ ಮೇಲಿದ್ದ ಬಂಗಾರದ ಒಡವೆಗಳನ್ನು ದೋಚಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೇಪರ್ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಗ್ರಾಮದ ನಿವಾಸಿಯಾಗಿದ್ದ ಶಂಕ್ರಮ್ಮ, ಶ್ರೀ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದ ಬೇಡಿ ಹಣ ಪಡೆದು, ಜೀವನ ಸಾಗಿಸುತ್ತಿದ್ದರು. ರಾತ್ರಿ ವೇಳೆಯಲ್ಲಿ ದೇವಸ್ಥಾನದ ಎದುರು ಇರುವ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ಒಳಭಾಗ ಮಲಗುತ್ತಿದ್ದರು. ಆದರೆ, ಡಿ.೩ರಂದು ಬೆಳಿಗ್ಗೆ ದೇವಸ್ಥಾನದ ಅರ್ಚಕರು ಕರೆ ಮಾಡಿ ಶಂಕ್ರಮ್ಮರವರು ಮೃತ ಪಟ್ಟಿರುತ್ತಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿ ಯಾರೋ ಅಪರಿಚಿತರು ಶಂಕ್ರಮ್ಮರವರನ್ನು ಕೊಲೆ ಮಾಡಿ ಅವರ ಎರಡೂ ಕಿವಿಯಲ್ಲಿದ್ದ ಚಿನ್ನದ ಓಲೆಗಳು ಮತ್ತು ಮೂಗು ಬಟ್ಟನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಮೃತೆಯ ಮೊಮ್ಮಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ತನಿಖೆ ನಡೆಸಿದ ಪೊಲೀಸರು ಆರೋಪಿ ಉಡುಪಿ ಜಿಲ್ಲೆಯ ಬೈಂದೂರಿನ ದುಗ್ಗದ ಮನೆಯ ಕರುಣಾಕರ ದೇವಾಡಿಗ(24) ಎಂಬಾತನನ್ನು ಬಂಧಿಸಿದ್ದಾರೆ. ಈತ, ಶಂಕ್ರಮ್ಮ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ಮೇಲಿದ್ದ ಒಂದು ಜೊತೆ ಬಂಗಾರದ ಕಿವಿ ಓಲೆ ಹಾಗೂ ಮೂಗುತಿಯನ್ನು ಕಳ್ಳತನ ಮಾಡಿರುವುದು ತನಿಖೆ ವೇಳೆ ಸಾಬೀತಾಗಿದೆ.
ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮ ಅವರ ಮೇಲ್ವಿಚಾರಣೆಯಲ್ಲಿ ಪೇಪರ್ ಟೌನ್ ಠಾಣೆ ಅಧಿಕಾರಿ ಮಂಜುನಾಥ್, ಪಿಎಸ್’ಐ ಶಿಲ್ಪಾ ನಾಯನೇಗಲಿ, ಸಿಬ್ಬಂದಿಗಳಾದ ರತ್ನಾಕರ, ವಾಸುದೇವ, ಚಿನ್ನ ನಾಯ್ಕ್, ಹನುಮಂತ ಆವಟಿ, ಅದರ್ಶ ಶೆಟ್ಟಿ, ಮೌನೇಶ್ ಶೀಖಲ್, ಆರ್, ಅರುಣ್, ವಿಕ್ರಂ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸದರಿ ತನಿಖಾ ತಂಡದ ಉತ್ತಮ ಕಾರ್ಯವನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post