ಶಿವಮೊಗ್ಗ: ಕಳೆದ ಮೂವತ್ತು ವರ್ಷಗಳಿಂದೀಚೆಗೆ ಶಿವಮೊಗ್ಗ ಕಂಡು ಕೇಳರಿಯದ ರೀತಿಯಲ್ಲಿ ಭಾರೀ ಮಳೆಯಿಂದ ತತ್ತರಿಸಿದ್ದು, ಬಹುತೇಕ ಹಳೇ ಶಿವಮೊಗ್ಗ ಭಾಗ ಅರ್ಧದಷ್ಟು ಮುಳುಗಡೆಯಾಗಿದೆ.
ಗಾಜನೂರು ಜಲಾಶಯದ ಹಿನ್ನೀರಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ 1.4 ಲಕ್ಷ ಕ್ಯುಸೆಕ್ಸ್ ನೀರು ಹೊರಬಿಡಲಾಗಿದೆ. ಪರಿಣಾಮವಾಗಿ ಬಿಬಿ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ವಿದ್ಯಾನಗರ, ಬೈಪಾಸ ಸೇರಿದಂತೆ ಈ ಭಾಗ ನೆರೆಯಿಂದ ತತ್ತರಿಸಿ ಹೋಗಿದೆ.
ಹೊಸಹಳ್ಳಿ, ಹರಕೆರೆ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿರುವ ಕಾರಣ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹೊಳೆ ಬಸ್ ಸ್ಟಾಪ್ ಬಳಿಯ ಎರಡೂ ಸೇತುವೆ ಮೇಲು ಅಂಚಿಗೆ ನೀರು ಹರಿಯುತ್ತಿದ್ದು ಹಾಗೂ ಹಳೆಯ ಸೇತುವೆ ಅಂಚಿನಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎರಡೂ ಸೇತುವೆ ಮೇಲಿನ ಸಂಚಾರಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೇ, ಬೈಪಾಸ್ ರಸ್ತೆಯಲ್ಲಿಯೂ ಸಹ ನಾಲ್ಕೈದು ಅಡಿ ನೀರು ನುಗ್ಗಿ ಪ್ರವಾಹ ಅಪ್ಪಳಿಸಿರುವ ಪರಿಣಾಮ ಶಿವಮೊಗ್ಗ-ಭದ್ರಾವತಿ ಸಂಪರ್ಕವೂ ಸಹ ಕಡಿತಗೊಂಡಿದೆ.
ಕಂಟ್ರೀಕ್ಲಬ್ ರಸ್ತೆಯಲ್ಲಿ ಸುಮಾರು 70 ನಿವಾಸಿಗಳು ನಿನ್ನೆ ರಾತ್ರಿ ಮಳೆಯಲ್ಲಿ ಸಿಲುಕಿಕೊಂಡಿದ್ದರು. ಸುಮಾರು 5-6 ಅಡಿ ಅತ್ತರದ ನೀರಿನಲ್ಲಿ ಮುಳುಗುವ ಅಪಾಯದಲ್ಲಿದ್ದರು. ಆದರೆ, ಸಹಾಯವಾಣಿ, ಕಾರ್ಯಾಚರಣೆ ತಂಡದೊಂದಿಗೆ ಸಂಪರ್ಕ ಸಾಧ್ಯವಾಗದ ಕಾರಣ ಭೀತಿಯಲ್ಲಿದ್ದರು. ಆದರೆ, ಇಂದು ಮುಂಜಾನೆ ಇಲ್ಲಿರುವವರನ್ನು ರಕ್ಷಣಾ ತಂಡ ಬೋಟ್ ಮುಖಾಂತರ ರಕ್ಷಿಸಿದೆ.
ಇನ್ನು, ಪುರಲೆ, ಶಾಂತಮ್ಮ ಲೇಔಟ್, ಕೃಷಿ ನಗರ ಗಣಪತಿ ದೇವಾಲಯದ ಬಡಾವಣೆಯಲ್ಲಿಯೂ ಸಹ ನೀರು ಭಾರೀ ಪ್ರಮಾಣದಲ್ಲಿ ನಿಂತಿದೆ.
ಶಿವಮೊಗ್ಗ ಎನ್ ಆರ್ ಪುರ ರಸ್ತೆಯ ಲಕ್ಕಿನಕೊಪ್ಪದ ಬಳಿ ಕೆಲವೆಡೆ ಕುಸಿತವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೃಷಿನಗರದ ಗಣಪತಿ ಟೆಂಪಲ್ ರಸ್ತೆ ಹಾಗೂ ಪೆಬಲ್ಸ್ ಅಪಾರ್ಟ್ ಮೆಂಟ್ ಸುತ್ತಾ ಸಂಪೂರ್ಣ ಜಲಾವೃತವಾಗಿದ್ದು, ಮನೆಯೊಳಗೆ ನಾಲ್ಕು ಅಡಿಯಷ್ಟು ನೀರು ನುಗ್ಗಿದೆ. ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು, ನೂರಾರು ಮಂದಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ನಗರದ ಹಲವಾರು ಕಡೆ ನಿರಾಶ್ರಿತರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ.
ಶಿವಮೊಗ್ಗ ನೆರೆ ಹಾವಳಿ ಚಿತ್ರಗಳನ್ನು ನೋಡಿ
Discussion about this post