ಭದ್ರಾವತಿ: ಕರ್ನಾಟಕ ರಾಜ್ಯಕ್ಕೆ ಏಕೈಕವಾಗಿ ಮಂಜೂರಾತಿಯಾಗಿರುವ ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್’ಎಎಫ್) ಬೆಟಾಲಿಯನ್ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ಕಾರ್ಯಾರಂಭಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಿಲ್ಟ್ರಿಕ್ಯಾಂಪ್‌ನ ಸಶಸ್ತ್ರ ಮೀಸಲು ಪಡೆಗೆ ಸೇರಿದ ಸ್ಥಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ರಾಜ್ಯದ ಹಾಗೂ ಜಿಲ್ಲೆಯ ರಕ್ಷಣೆಗೆ ಸಂಬಂಧಿಸಿದಂತೆ ಅಗತ್ಯ ತುರ್ತು ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಆರ್’ಎಎಫ್ ಸಿಬ್ಬಂದಿಗಳನ್ನು ಕರೆಸಿಕೊಳ್ಳುವ ಅನಿವಾರ್ಯತೆ ಉಂಟಾಗುತ್ತಿತ್ತು. ಆದರೆ ಇದೀಗ ರಾಜ್ಯದಲ್ಲಿಯೇ ಕಾರ್ಯಾರಂಭ ಮಾಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಆರ್’ಎಎಫ್ ಕಾರ್ಯಾರಂಭಗೊಂಡಲ್ಲಿ ಸುಮಾರು ಒಂದೂವರೆ ಸಾವಿರ ಕುಟುಂಬಗಳು ಈ ಭಾಗದಲ್ಲಿ ನೆಲೆ ನಿಲ್ಲಲಿವೆ. ಇದರಿಂದ ನಗರದ ಆರ್ಥಿಕ ಮಟ್ಟ ಸುಧಾರಣೆಯಾಗಲಿದೆ. ಸಿಬ್ಬಂದಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಸಂಬಂಧ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗಳು ಮುಂದಾಗಲಿವೆ ಎಂದರು.
ಸುಮಾರು ಒಂದು ತಾಸು ಈಗಾಗಲೇ ಗುರುತಿಸಲಾಗಿರುವ ಸ್ಥಳದ ಬಗ್ಗೆ ತಹಸೀಲ್ದಾರ್ ಸೋಮಶೇಖರ್, ಕಂದಾಯಾಧಿಕಾರಿ ಪ್ರಶಾಂತ್ ಹಾಗೂ ಪೊಲೀಸ್ ಉಪಾಧ್ಯಕ್ಷ ಓಂಕಾರ ಅವರೊಂದಿಗೆ ನೀಲ ನಕ್ಷೆಯೊಂದಿಗೆ ಚರ್ಚಿಸಿದರು. ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದಕ್ಕೂ ಮೊದಲು ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್, ಪೊಲೀಸ್ ಉಪಾಧೀಕ್ಷಕ ಓಂಕಾರ ನಾಯ್ಕ, ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಎಂ. ಯೋಗೇಶ್, ಸಶಸ್ತ್ರ ಮೀಸಲು ಪಡೆಯ ಆರ್‌ಎಎಫ್ ರಂಗಸ್ವಾಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಗುರುತು ಮಾಡಲಾಗಿರುವ ಸ್ಥಳವನ್ನು ವೀಕ್ಷಿಸಿದರು.
ಪ್ರಮುಖರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಜಿ. ಧರ್ಮಪ್ರಸಾದ್, ಜಿ. ಆನಂದ್‌ಕುಮಾರ್, ಮಂಗೋಟೆ ರುದ್ರೇಶ್, ಟಿ. ವೆಂಕಟೇಶ್, ದೇವರಾಜ್, ರಾಮಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post