ಸಂಸ್ಕೃತಿ, ಸಂಪ್ರದಾಯದ ವಿಚಾರ ಬಂದಾಗ ಪ್ರಾಚೀನ ಕಾಲದಿಂದಲೂ ಭಾರತ ಮುಂಚೂಣಿಯಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್ ಕಾಲದ ಮೌಲ್ಯಗಳು ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿತು.
ತ್ರೇತಾಯುಗದಲ್ಲಿ ರಾಮ, ತನ್ನ ಶ್ರೇಷ್ಠ ಬದುಕನ್ನು ಬದುಕಿ ಲೋಕಕ್ಕೆಲ್ಲ ಮಾದರಿಯಾದ. ಪಿತೃವಾಕ್ಯ ಪರಿಪಾಲಕನಾಗಿ, ತ್ಯಾಗದ ಅತ್ಯುನ್ನತ ಮಟ್ಟವನ್ನು ತೋರಿಸಿಕೊಟ್ಟ. ರಾಕ್ಷಸರನ್ನು ಸಂಹಾರ ಮಾಡಿ, ಸಜ್ಜನರಿಗೆ ಒಳಿತು ಮಾಡಿದ. ದ್ವಾಪರಯುಗದಲ್ಲಿ ಶ್ರೀಕೃಷ್ಣ, ತನಗಾಗಿ ಬಂದ ಎಲ್ಲವನ್ನು ತ್ಯಾಗ ಮಾಡುತ್ತಾ, ಭಗವದ್ಗೀತೆ ಅಂತಹ ಅತ್ಯುನ್ನತ ಮಂತ್ರವನ್ನು ಬೋಧಿಸಿ ಗೀತಾಚಾರ್ಯನಾಗಿ ಜಗತ್ತಿಗೆ ಗುರುವಾಗಿ ಬಾಳಿದ.
ಇನ್ನು ಕಲಿಯುಗದಲ್ಲಿ, ಶ್ರೀ ರಾಮಕೃಷ್ಣ, ಗೌತಮ ಬುದ್ಧ, ಸ್ವಾಮಿ ವಿವೇಕಾನಂದ, ಯೋಗಿ ಅರವಿಂದ, ಮಹಾತ್ಮ ಗಾಂಧೀಜಿ ಹೀಗೆ ಮುಂತಾದವರು ನಮ್ಮ ಭಾರತೀಯ ಸಂಸ್ಕೃತಿಯ ಕನ್ನಡಿಯಾಗಿ ಜಗತ್ತಿಗೆ ಮಾರ್ಗದರ್ಶಕರಾಗಿದ್ದಾರೆ. ಹಾಗೆಂದರೆ ಭಾರತದಲ್ಲಿ ಕೆಟ್ಟದ್ದು ಇರಲಿಲ್ಲ ಎಂದರೆ ತಪ್ಪಾಗುತ್ತದೆ. ರಾಮನ ಕಾಲದಲ್ಲಿ ರಾವಣ, ಕೃಷ್ಣನ ಕಾಲದಲ್ಲಿ ಕಂಸ, ಕೌರವರು ಇದ್ದರು. ಏನೇ ಹೇಳಿ, 10,000 ವರ್ಷ ಇತಿಹಾಸವಿರುವ ಭಾರತದ ಸಂಸ್ಕೃತಿ, ಜಗತ್ತಿಗೆ ಎಂದಿಗೂ ಮಾರಕವಾಗಲಿಲ್ಲ. ಜಗತ್ತಿನಲ್ಲಿ ಎಂದಿಗೂ ಭಯೋತ್ಪಾದನೆ ಮಾಡಲಿಲ್ಲ. ಆದರೆ ಜಗತ್ತಿನ ಅನೇಕ ಭಾಗ ಈ ವಾದಕ್ಕೆ ಹೊರತು. ಕಾಲದಿಂದ ಕಾಲಕ್ಕೆ ಸಂಸ್ಕೃತಿ ನಾಶವಾಗಿತ್ತಲೇ ಇದೆ.
ಭಾರತದಲ್ಲಿ ಯಾವುದೇ ಯುದ್ಧವಾದರೂ ಜನಜೀವನ ಬದಲಾಗುತ್ತಿರಲಿಲ್ಲ. ರಾಜರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಕಾದಾಡುತ್ತಿದ್ದರೆ ಹೊರತು ಸಾಮಾನ್ಯ ಜನತೆಗೆ ತೊಂದರೆ ಉಂಟು ಮಾಡುತ್ತಿರಲಿಲ್ಲ. ಯುದ್ಧವೆಂದರೆ ಅದು ಧರ್ಮ ಯುದ್ಧವಾಗಿರುತ್ತಿತ್ತು. ಅದರೆ, ಜಗತ್ತಿನ ಮೇಲೆ ದಾಳಿ ಮಾಡಿದ ಅಲೆಕ್ಸಾಂಡರ್, ಹೂಣರು, ಶಖರು, ಕುಶಾನರು ತಾವು ದಾಳಿ ಮಾಡಿ ಆಯಾ ಪ್ರಾಂತ್ಯದ ರಾಜರುಗಳನ್ನು ಕೊಲ್ಲುವುದಲ್ಲದೆ ಸಾಮಾನ್ಯ ಜನರ ಮೇಲೂ ದಾಳಿ ಮಾಡುತ್ತಿದ್ದರು. ಹೂಣರ ಆಕ್ರಮಣಕ್ಕೆ ಗ್ರೀಕಿನ ಸಂಸ್ಕೃತಿ ಸಂಪೂರ್ಣ ನಾಶವಾಯಿತು. ಸ್ಪೇನಿನ ದಾಳಿಯಿಂದಾಗಿ ಅಮೆರಿಕಾದ ನಾಗರಿಕತೆ ಇಲ್ಲವಾಯಿತು.
ಯೂರೋಪಿನ್ ಖೈದಿಗಳ ಆಕ್ರಮಣದಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಾಗರಿಕತೆ ಅಂತ್ಯಕಂಡಿತು. ಈಗಲೂ ಆಫ್ರಿಕಾ ಖಂಡದ ಅನೇಕರು ಸ್ವೀಡನ್ ಅಂತಹ ರಾಷ್ಟ್ರಗಳಲ್ಲಿ ಟಾಕ್ಸಿ ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ಯೂರೋಪಿನ ಆಕ್ರಮಣದಿಂದಾಗಿ ನೈಲ್ ನದಿ ತೀರದಲ್ಲಿದ್ದ ಈಜಿಪ್ಟಿನ ನಾಗರೀಕತೆ ಇಲ್ಲವಾಯಿತು. ಅರಬ್ ಮತ್ತು ಬ್ರಿಟೀಷರ ಆಕ್ರಮಣ ಭಾರತದ ವೇದ ಮತ್ತು ಗುರುಕುಲ ಶಿಕ್ಷಣ ಪದ್ಧತಿ ನಾಶವಾಗಿ, ನಮ್ಮನ್ನು ಮಾನಸಿಕವಾಗಿ ಗುಲಾಮರನ್ನಾಗಿ ಮಾಡುವ ಆಂಗ್ಲ ಶಿಕ್ಷಣ ಪದ್ಧತಿ ತಂದರು. ನಮ್ಮ ಜವಳಿ ಮತ್ತು ಉಕ್ಕು ಉದ್ಯಮಗಳನ್ನು ನಾಶಮಾಡಿದರು. ಹೀಗೆ, ಇತಿಹಾಸದ ಉದ್ದಕ್ಕೂ ಜಗತ್ತಿನ ಬಹುತೇಕ ರಾಷ್ಟ್ರಗಳು ಇತರರ ಮೇಲೆ ಆಕ್ರಮಣ ಮಾಡಿ ಅಲ್ಲಿನ ಸಂಸ್ಕೃತಿಯನ್ನು ನಾಶಮಾಡಲು ಯತ್ನಿಸಿದ್ದಾರೆ.
ಇದು ಇತಿಹಾಸದ ಕಥೆಯಾದರೆ, ಇಪ್ಪತ್ತೊಂದನೆ ಶತಮಾನದಲ್ಲಿ ಸಭ್ಯ ಸಂಸ್ಕೃತಿಗೆ ವಿರುದ್ದಾರ್ಥಕ ಎಂಬಂತೆ ಬಾಳುತ್ತಿರುವ ದೇಶವೊಂದಿದೆ. ಅದುವೇ, ಚೀನಾ! ಸರಳವಾಗಿ ಹೇಳುವುದಾದರೆ, ಭಾರತ ’ಅಥಿತಿ ದೇವೋ ಭವ’ ಎಂಬುದನ್ನು ಅಕ್ಷರಶಃ ಪಾಲಿಸುತ್ತದೆ. ನಾನು ಕಂಡಿರುವ ಹಾಗೆ, ಯೂರೋಪ್ ರಾಷ್ಟ್ರಗಳು ಭಾರತದವರಷ್ಟು ಅಲ್ಲದಿದ್ದರೂ ಅವರ ಸಂಸ್ಕೃತಿಗೆ ಅನುಗುಣವಾಗಿ ಅತಿಥಿಗಳನ್ನು ಸತ್ಕರಿಸುತ್ತಾರೆ. ಈ ವಿಚಾರದಲ್ಲಿ ಜಪಾನ್ ಭಾರತಕ್ಕೆ ಸರಿ ಸಮಾನವಾಗಿ ನಿಲ್ಲುತ್ತದೆ.
ಆದರೆ, ಚೀನಾ ಮಾತ್ರ ಹಾಗಲ್ಲ. ಎಲ್ಲರನ್ನೂ ತಮಗಿಂತಲೂ ಕೆಳಮಟ್ಟದಲ್ಲಿ ನೋಡುವ ಮತ್ತು ಆಡಿಕೊಳ್ಳುವ ಒಂದು ನೀಚ ಮನಃಸ್ಥಿತಿ. ಕೆಲವು ತಿಂಗಳುಗಳ ಹಿಂದೆ ನಾನು, ನನ್ನ ಸ್ನೇಹಿತ ಮತ್ತು ಸಹೋದ್ಯೋಗಿಗಳು ಕಚೇರಿಯ ಕೆಲಸದ ಮೇರೆಗೆ ಚೀನಾಕ್ಕೆ ಹೋಗಿದ್ದೆವು. ಅದೊಂದು ಸಂಜೆ ನಾನು, ನನ್ನ ಸ್ನೇಹಿತ ಊಟ ಮಾಡಲು ಹೋಟೆಲನ್ನು ಹುಡುಕುತ್ತಾ ಹೊರಟೆವು. 15-20 ನಿಮಿಷ ಹುಡುಕಿದ ನಂತರ ಒಂದು ಹೋಟೆಲಿಗೆ ಹೋದೆವು. ಎಲ್ಲಾ ಚೀನೀ ಭಾಷೆಯಲ್ಲಿದ್ದ ಕಾರಣ ಚಿತ್ರವನ್ನು ನೋಡಿ ನಾವು ಅರ್ಥ ಮಾಡಿಕೊಳ್ಳಬೇಕಿತ್ತು ಅಥವಾ ಗೂಗಲ್ ಬಳಸಿ ಅವರೊಂದಿಗೆ ಸಂಭಾಷಿಸಬೇಕಿತ್ತು. ಇದರ ಮಧ್ಯದಲ್ಲಿ ನಾನು ಸಸ್ಯಾಹಾರಿ ಬೇರೆ. ಮೊಟ್ಟೆ ಅಥವಾ ಮಷ್ರೂಮ್ ಕೂಡ ತಿನ್ನುವುದಿಲ್ಲ. ಇದನ್ನೆಲ್ಲ ಅವರಿಗೆ ಗೂಗಲ್ ಮೂಲಕ ತಿಳಿಸಬೇಕಾದರೆ ನನಗಂತೂ ಸಾಕಾಯಿತು.
ಅಷ್ಟೇ ಆಗಿದ್ದರೆ ಇದನ್ನು ಬರೆಯುವ ಅಗತ್ಯವಿರುತ್ತಿರಲ್ಲಿಲ್ಲ. ನಾನು ಅವರಿಗೆ ಭಾಷಾಂತರಿಸಿ ಹೇಳಬೇಕಾದರೆ ಹೊಟೇಲಿನ ಜನ ನಗುತ್ತಿದ್ದರು, ಅವರ ಮುಖಭಾವವೇ ಹೇಳುತ್ತಿತ್ತು ಆ ನಗು ವ್ಯಂಗ್ಯ ಮತ್ತು ಆಡಿಕೊಳ್ಳುವಿಕೆಯಿಂದ ತುಂಬಿತ್ತು ಎಂದು. ನಾನು ಸಸ್ಯಹಾರಿ, ಮೊಟ್ಟೆ ಸಹ ತಿನ್ನುವುದಿಲ್ಲ ಎಂದು ತಿಳಿದ ಕೂಡಲೇ ’ಈತ ಮತ್ತೇನು ತಿನ್ನಬಹುದು?’ ಎಂಬಂತೆ ಇದ್ದ ಆ ಹೋಟೆಲಿನವರ ಮುಖಭಾವ ನನಗೆ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಈ ರೀತಿ ಭಾಷೆ ಗೊತ್ತಿಲ್ಲದೆ ಊಟಕ್ಕಾಗಿ ಯೂರೋಪಿನಲ್ಲೂ ನಾನು ಒದ್ದಾಡಿದ್ದೆ. ಆದರೆ, ಅಲ್ಲಿನ ಜನರಾರು ಈ ರೀತಿ ವ್ಯಂಗ್ಯ ಮಾಡಿರಲಿಲ್ಲ ಮತ್ತು ಆಡಿಕೊಳ್ಳುವ ನಗು ನಕ್ಕಿರಲಿಲ್ಲ. ಬದಲಾಗಿ, ನಾನು ಹೇಳಿದನ್ನು ಅರ್ಥ ಮಾಡಿಕೊಂಡ ಮೇಲೆ ಖುಷಿಯಿಂದ ನಗೆ ಬೀರಿದ ಅನುಭವ ನನಗೆ ಜರ್ಮನಿ, ಫ್ರಾನ್ಸಿನಲ್ಲಿ ಆಗಿದೆ. ಇದು ನಮಗೆ ಪರಿಚಯವಿಲ್ಲದ ಅಲ್ಲಿನ ಸಾಮಾನ್ಯ ನಾಗರಿಕರ ಮನಃಸ್ಥಿತಿ.
ನನ್ನ ಸ್ನೇಹಿತ; ತನ್ನ ಚೀನಿ ಸಹೋದ್ಯೋಗಿಗಳೊಂದಿಗೆ ಮತ್ತು ನಾನು ನಮ್ಮ ಸಹೋದ್ಯೋಗಿಗಳೊಂದಿಗೆ 13 ದಿನಗಳ ಮಟ್ಟಿಗೆ ‘ಜೀಲಿ’ ಕಂಪನಿಯ ಕಚೇರಿಗೆ ಹೋಗಿದ್ದೆವು. ಆ ಕಚೇರಿ ಒಳಗೆ ಹೋಗಬೇಕಾದರೆ ಅವರದೇ ಆದ ನಿಯಮಗಳನ್ನು ಪಾಲಿಸಬೇಕಾಗಿತ್ತು. ಆ ಕಂಪನಿಯ ಅತಿಥಿ ಪಾಸ್ ನಾವು ತೆಗೆದುಕೊಳ್ಳಬೇಕಿತ್ತು. ಇದು ಅಲ್ಲಿದ್ದಷ್ಟು ದಿವಸ ದಿನಾಗಲೂ ಮಾಡಬೇಕಾಗಿತ್ತು. ದಿನವೂ ಚೀನಿ ಸಹೋದ್ಯೋಗಿಗಳಿದ್ದ ಕಾರಣ ನಮಗೆ ಎಲ್ಲವೂ ಸುಗಮವಾಗಿತ್ತು. ನನ್ನ ಸ್ನೇಹಿತನಿಗೂ ಅವರ ಸಹೋದ್ಯೋಗಿಗಳ ಕಾರಣ ಅಲ್ಲಿನ ಪ್ರಕ್ರಿಯೆ ಸುಗಮವಾಗಿತ್ತು. ನಮ್ಮ 13 ದಿನಗಳ ಕೆಲಸಗಳು ಮುಗಿದ ನಂತರ ನಾವು ಹೊರಡಲು ಅಣಿಯಾದೆವು. ನನ್ನ ಸ್ನೇಹಿತ ಮಾತ್ರ ಮತ್ತೊಂದು ದಿನ ಜೀಲಿ ಕಚೇರಿಗೆ ಹೋಗಬೇಕಿದ್ದ ಕಾರಣ ಆತ ಒಂದು ದಿನದ ಮಟ್ಟಿಗೆ ಅಲ್ಲೇ ಉಳಿದುಕೊಂಡ. ಆದರೆ, ಅವನ ಚೀನಿ ಸಹೋದ್ಯೋಗಿಗಳು ಯಾರೂ ಅವನನ್ನು ಲೆಕ್ಕಿಸದೆ ತಮ್ಮ ತಮ್ಮ ಊರುಗಳಿಗೆ ವಾಪಸ್ಸು ಹೊರಟೇ ಹೋದರು. ಅವನು ನಮ್ಮ ಹತ್ತಿರ ಅವನ ಪರಿಸ್ಥಿತಿಯನ್ನು ಹೇಳಿಕೊಂಡ. ನಾವುಗಳು ಜೀಲಿ ಉದ್ಯೋಗಿಗಳೊಂದಿಗೆ ಮಾತಾಡಿ, ನನ್ನ ಸ್ನೇಹಿತನಿಗೆ ಮಾರನೆ ದಿವಸದ ವ್ಯವಸ್ಥೆ ಮಾಡಿ ಹೊರಟೆವು.
ತಮ್ಮ ದೇಶಕ್ಕೆ ಅತಿಥಿಯಾಗಿ ಬಂದಿರುವ ತಮ್ಮ ಸಹೋದ್ಯೋಗಿಯೊಬ್ಬನನ್ನು ನೋಡುಕೊಳ್ಳುವ ಕನಿಷ್ಠ ಸೌಜನ್ಯ ಕೂಡ ಅಲ್ಲಿನ ಜನಗಳಿಗೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು ನಮಗೆ. ಒಬ್ಬ ವ್ಯಕ್ತಿಯನ್ನು ತಮ್ಮ ಕೆಲಸಕ್ಕಾಗಿ ಬೇರೆ ದೇಶದಿಂದ ಅತಿಥಿಯಾಗಿ ಕರೆಸಿಕೊಂಡು, ಆತನಿಗೆ ಆಲ್ಲಿನ ಭಾಷೆ ಪರಿಚಯವಿಲ್ಲ ಎಂಬುದು ತಿಳಿದು, ತಮ್ಮ ಕೆಲಸವಾದ ನಂತರ ತಮ್ಮ ಪಾಡಿಗೆ ತಾವು ಇದ್ದು ಬಿಡುವಂತಹ ಹೀನ ಮನಃಸ್ಥಿತಿ ಅವರದ್ದು. ಹೇಳೋದು ಮರೆತಿದ್ದೆ, ನನ್ನ ಸ್ನೇಹಿತನೊಂದಿಗೆ ಬಂದಿದ್ದ ಆತನ ಸಹೋದ್ಯೋಗಿಗಳ ಸಂಖ್ಯೆ ಬರೋಬ್ಬರಿ 12 ಜನ! 12 ರಲ್ಲಿ ಒಬ್ಬರೂ ಸಹ ಆತನನ್ನು ಅತಿಥಿಯಾಗಿ ನೋಡಲೇ ಇಲ್ಲ.
ಈ ಎರಡು ಘಟನೆಗಳು ತೀರ ಚಿಕ್ಕದಾದರೂ ಭಾಷೆ, ಜನ ಜೀವನ ಪರಿಚಯವೇ ಇಲ್ಲದ ದೇಶಗಳಲ್ಲಿ ತುಂಬಾ ಮುಖ್ಯವಾಗುತ್ತದೆ. ಅಂತಹ ಸಮಯದಲ್ಲಿ ಅಸಹಾಯಕತೆ ಕಾಡುತ್ತದೆ. ಎಲ್ಲಿ, ಯಾಕೆ, ಯಾರು, ಏನು, ಎತ್ತ ಎಂಬ ಎಲ್ಲಾ ಪ್ರಶ್ನೆಗಳು ದೈತ್ಯಾಕಾರವಾಗಿ ಕಾಡುತ್ತದೆ. ನಮ್ಮ ನೆಂಟರ ಮನೆಗೆ ಹೋಗಿ ಅಲ್ಲಿ ರಾತ್ರಿ ತಂಗಿದರೆ ಮನೆಯನ್ನು ಪರಿಚಯಿಸುವ, ‘ಎಚ್ಚರವಾದರೆ, ಏನಾದರೂ ಬೇಕಾದರೆ ಕೇಳಿ’ ಎಂಬ ಮಾತುಗಳು ನಮ್ಮ ಮನೆಗಳಲ್ಲಿ ಸರ್ವೇ ಸಾಮಾನ್ಯ. ಭಾರತೀಯ ಸಂಸ್ಕೃತಿ ಚಿಕ್ಕ ವಯಸ್ಸಿನಿಂದಲ್ಲೂ ಮಕ್ಕಳಿಗೆ ’ಅತಿಥಿ ದೇವೋ ಭವ’ ಎಂಬುದರ ಅರ್ಥವನ್ನು ಮನದಟ್ಟು ಮಾಡಿಸುತ್ತದೆ. ಇಂತಹ ಶ್ರೇಷ್ಠ ಸಂಸ್ಕೃತಿಯಲ್ಲಿ ಬೆಳೆದ ನಾವು ಚೀನಾದಲ್ಲಿ ನೋಡಿದ್ದು, ಅನುಭವಿಸಿದ್ದು ಅತ್ಯಂತ ನೀಚ ಮಟ್ಟದ ಸಂಸ್ಕೃತಿಯನ್ನು.
’ಅಧಿಕಾರ ಕೊಟ್ಟ ಮೇಲೆ ಮಾತ್ರ ನಮಗೆ ನಮ್ಮ ಯೋಗ್ಯತೆ ಅರಿವಾಗೋದು’ ಎಂಬ ಮಾತು ಹಿರಿಯರು ಹೇಳಿದ್ದನ್ನು ಕೇಳಿದ್ದೆ. ಅಧಿಕಾರವಿಲ್ಲದೆ ಈ ರೀತಿ ನಡೆದುಕೊಳ್ಳುವ ಚೀನಾ ನಾಗರಿಕತೆ, ಇನ್ನು ತಾನು ಆಕ್ರಮಿಸಿಕೊಂಡ ಟಿಬೇಟ್, ಈಗ ಪಾಕಿಸ್ಥಾನವನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಿರುವ ಪರಿ ಹೇಗಿರಬಹುದು ಎಂಬುದನ್ನು ಉಹಿಸಲೂ ಕಷ್ಟ. ಚೀನಾದ ಆ ನೀಚತನವನ್ನು ಮುಂದಿನ ಸಂಚಿಕೆಯಲ್ಲಿ ಅನಾವರಣ ಮಾಡುವ ಪ್ರಯತ್ನ ಮಾಡುತ್ತೇನೆ. ಏನೇ ಹೇಳಿ, ಸಭ್ಯ ಸಂಸ್ಕೃತಿಯ ವಿರುದ್ಧಾರ್ಥಕ – ಚೀನಾ…!!!
Discussion about this post