ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವಾಣಿ ರಸವತೀ ಯಸ್ಯ ಯಸ್ಯ ಶ್ರವಣ ಮಂಗಲಮ್ l
ಸ ವಶೀಕರೋತಿ ಲೋಕಾನಂ ಸತ್ಯಂ ಸತ್ಯಂ ನ ಸಂಶಯಃ ll
ಯಾರ ಮಾತು ರಸ ಪೂರ್ಣವಾಗಿದೆಯೋ ಅವರ ಮಾತು ಕೇಳುವುದು ಶುಭವಾಗಿದೆ ಅವರು ಜನಮನವನ್ನು ವಶಪಡಿಸಿಕೊಳ್ಳುತ್ತಾರೆ ಇದು ನಿಸ್ಸಂಶಯ ಸತ್ಯ. ಅಲ್ಲದೇ
ಸಂಸ್ಕಾರಸ್ಯ ಗುರುರ್ವಾಣಿ ವಾಣ್ಯಾ ಲೋಕಃ ಪ್ರಕಾಶ್ಯ ತೇ ll
ಯಸ್ಯ ಶುದ್ಧಾ ವಚೋಭಿಃ ಸ ಪೂಜ್ಯೋ ಭವತಿ ದ್ರುವಮ್ ||
ವಾಣಿಯೇ ಸಂಸ್ಕಾರದ ಗುರುತು ವಾಣಿಯಿಂದಲೇ ವ್ಯಕ್ತಿ ಲೋಕದಲ್ಲಿ ಗುರುತಿಸಲ್ಪಡುತ್ತಾನೆ. ಶುದ್ಧ ಮಾತುಳ್ಳವನು ನಿಶ್ಚಿತವಾಗಿ ಗೌರವಕ್ಕೆ ಪಾತ್ರನಾಗುತ್ತಾನೆ ಎನ್ನುವ ಸುಭಾಷಿತ ನೋಡುತ್ತಿದ್ದಾಗ ಇದರಂತೆಯೇ ಇರುವವರು ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದರು ಎನ್ನುವುದು ಅನ್ನಿಸಿತು. ಏಕೆಂದರೆ ಅವರ ಮಾತುಗಳು ಸಂಸ್ಕಾರ ಪೂರ್ಣ ಮತ್ತು ಅವರು ತಮ್ಮ ಮಾತಿನಿಂದಲೇ ಗುರುತಿಸಲ್ಪಟ್ಟು ಗೌರವಕ್ಕೆ ಪಾತ್ರರಾಗಿದ್ದಾರೆ.
ನ್ಯಾಯಾಧೀಶರೊಬ್ಬರ ಸ್ಥಾನ ಕೇವಲ ತೀರ್ಪು ನೀಡುವ ಅಧಿಕಾರಕ್ಕೆ ಮಾತ್ರ ಸೀಮಿತವಾಗಿರದೇ ಅದು ಸಮಾಜದ ನೈತಿಕ ದಿಕ್ಕನ್ನು ರೂಪಿಸುವ ಹೊಣೆಗಾರಿಕೆ ಆಗಿರುತ್ತದೆ. ಅವರು ನ್ಯಾಯಾಲಯದಲ್ಲಿ ಬಳಸುವ ಪ್ರತೀ ಪದಗಳು ಕಾನೂನು ಬದ್ಧ, ಮಹತ್ವದ ಜೊತೆಗೆ ಸಾಮಾಜಿಕ ಅರ್ಥವನ್ನು ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾದ ವಿ ಶ್ರೀಶಾನಂದ ಅವರ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹು ಪ್ರಸಿದ್ಧವಾಗಿದೆ ಅವರು ತಮ್ಮ ಸ್ಪಷ್ಟವಾದ ಮಾತಿನ ಶೈಲಿ, ನೇರ ಅಭಿವ್ಯಕ್ತಿ ಮತ್ತು ತಾತ್ವಿಕ ಚಿಂತನೆಗಳಿಂದ ಗುರುತಿಸಲ್ಪಟ್ಟವರಾಗಿದ್ದಾರೆ. ನ್ಯಾಯಾಲಯದಲ್ಲಿನ ವಿಚಾರಣೆಯ ಸಂದರ್ಭದಲ್ಲಿ ಅವರು ಬಳಸುವ ಉದಾಹರಣೆಗಳು, ಪುರಾಣ, ಉಪನಿಷತ್ತುಗಳ ಸನ್ನಿವೇಶಗಳು ವ್ಯಾಪಕವಾಗಿ ಗಮನ ಸೆಳೆದ ಅಂಶಗಳಾಗಿವೆ.
ಇವರ ಉಪನ್ಯಾಸಗಳಲ್ಲಿ ಬಹುಮುಖ್ಯವಾಗಿ ಕಂಡುಬರುವ ಅಂಶಗಳೆಂದರೆ ಭಾರತೀಯ ಸಂಸ್ಕೃತಿ, ಜೀವನ ಮೌಲ್ಯಗಳು, ಧರ್ಮ ಮತ್ತು ನ್ಯಾಯದ ತತ್ವಗಳ ಕುರಿತ ಚಿಂತನೆಗಳಾಗಿವೆ. ಬಹು ಮುಖ್ಯವಾಗಿ ಕಾನೂನು ಎಂದರೆ ಕೇವಲ ದಂಡನೆಯ ಸಾಧನವಲ್ಲ ಅದು ಸಮಾಜವನ್ನು ಸೌಹಾರ್ದ ಮತ್ತು ನ್ಯಾಯದ ದಾರಿಯಲ್ಲಿ ನಡೆಸುವ ಮಾರ್ಗದರ್ಶಿಯ ಹಾಗೆ ಎಂಬ ಅಭಿಪ್ರಾಯ ಅವರಾಗಿದೆ. ಅಲ್ಲದೇ ಕಾನೂನಿನ ಕುರಿತಾಗಿ ಜನರು ಕೇವಲ ನಿಯಮಗಳ ಸಮೂಹವಾಗಿ ನೋಡದೆ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಸಾಧನವಾಗಿ ನೋಡಬೇಕೆಂಬುದೇ ಅವರ ಆಶಯವಾಗಿದೆ.
ನನಗೆ ಆಶ್ಚರ್ಯವಾದ ಸಂಗತಿ ಎಂದರೆ ಒಮ್ಮೆ ನನ್ನಮ್ಮ ಮಾತನಾಡುತ್ತಿದ್ದಾಗ ಯೂ.ಟ್ಯೂಬ್ ನಲ್ಲಿ ತಾನು ಕೆಲವು ಉಪನ್ಯಾಸಕರ ಕುರಿತು ಹೇಳುತ್ತಿದ್ದೆ ಆಗ ತಕ್ಷಣವೇ ಆಕೆ -‘ಪುಟ್ಟಿ ಶ್ರೀಶಾನಂದ ಅಂತ ಒಬ್ಬರಿದ್ದಾರೆ ತುಂಬಾ ಚೆನ್ನಾಗಿರುತ್ತೆ ನೀನೊಮ್ಮೆ ಕೇಳು’ ಅಂತ ನನಗೆ ಹೇಳಿದ್ಲು. ಅಷ್ಟೇ ಅಲ್ಲ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಕೆಲಸ ಮಾಡುವ ಪುಷ್ಪ ಅವರು ಸಹ ತಾನು ಅವರ ಅಭಿಮಾನಿ ಎಂದರು ಹೀಗೆ ಸುತ್ತಮುತ್ತಲಿನ ಯಾರಿಗೆ ಕೇಳಿದರು ಸಹ ಒಂದಲ್ಲ ಒಂದು ವಿಷಯದ ಉದಾಹರಣೆಗಳಿಂದ ಪರಿಚಿತರಾಗಿ ಖ್ಯಾತರಾಗಿರುವ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಉಪನ್ಯಾಸವನ್ನು ಇದೇ ಡಿಸೆಂಬರ್ 25 ರ ಗುರುವಾರ ಸಂಜೆ 6ಕ್ಕೆ ನಗರದ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಯಾದ ಶ್ರೀಗಂಧ ಹಾಗೂ ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದೆ.
ಇಲ್ಲಿಯವರೆಗೆ ಯೂಟ್ಯೂಬ್ ನಲ್ಲಿ ಇವರ ಮಾತು ಕೇಳಿ ಅಭಿಮಾನಿಗಳಾದ ಎಲ್ಲರೂ ಪ್ರತ್ಯಕ್ಷವಾಗಿ ನೋಡಿ ಉಪನ್ಯಾಸವನ್ನು ಕೇಳಿಸಿಕೊಳ್ಳಲು ಒಂದು ಉತ್ತಮವಾದ ಅವಕಾಶವಾಗಿದೆ. ಹಾಗಾಗಿ ತಾವೆಲ್ಲರೂ ಆ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹೃದಯ, ಸಜ್ಜನ, ವಾಗ್ಮಿಯ ಮಾತುಗಳನ್ನ ಆಲಿಸಲು ಆಗಮಿಸಬೇಕೆಂಬುದೇ ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಈಶ್ವರಪ್ಪನವರ ಹೆಬ್ಬಯಕೆಯಾಗಿದೆ. ಬನ್ನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















