ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶಿವಮೊಗ್ಗ ಜನರು ಸಾಂಸ್ಕೃತಿಕವಾಗಿ ಅಭಿರುಚಿ ಉಳ್ಳವರು ಮತ್ತು ಅವರು ಆ ರೀತಿಯ ಸದಭಿರುಚಿಯ ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸುವವರು ಕೂಡ. ಇದು ಮತ್ತೆ ಅರಿವಿಗೆ ಬರುತ್ತಲೇ ಇರುತ್ತದೆ. ಅಂತಹ ಒಂದು ಅದ್ಭುತವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಮೊನ್ನೆಯ ಕುವೆಂಪು ರಂಗಮಂದಿರದಲ್ಲಿ ನಡೆದ ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟೇಬಲ್ ಟ್ರಸ್ಟ್ ನ ಶ್ರೀ ಪ್ರಕಾಶ್ ಪ್ರಭು ಹಾಗೂ ಶ್ರೀಮತಿ ರೀತಾ ಪ್ರಭು ದಂಪತಿಗಳು ಹಾಗೂ ಅವರ ಕುಟುಂಬದವರೆಲ್ಲರೂ ಸೇರಿ ಆಯೋಜಿಸಿದ ಪದ್ಮಭೂಷಣ ಎಂಬ ಡಾ. ರಾಜ್ – ಅನಂತ್ ಗಾನ ವೈಭವ ಕಾರ್ಯಕ್ರಮ.
ಇದು ವಿಶೇಷವೇ ಏಕೆಂದರೆ ಕನ್ನಡ ಚಿತ್ರರಂಗದ ಮೇರು ನಾಯಕ ನಟರಾದ ಡಾ. ರಾಜಕುಮಾರ್ ಹಾಗೂ ಡಾ. ಅನಂತ್ ನಾಗ್ ಅವರ ಚಿತ್ರಗಳಿಂದ ಆಯ್ದ ಗೀತೆಗಳ ಗಾಯನ ಕಾರ್ಯಕ್ರಮವು ರಂಗಮಂದಿರದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರನ್ನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮರು ದಿವಸವು ಸಿಕ್ಕಂತಹ ಅನೇಕರು ನಾನು ಕಾರ್ಯಕ್ರಮಕ್ಕೆ ಬಂದಿದ್ದೆ ಎಷ್ಟು ಚೆನ್ನಾಗಿತ್ತಲ್ವಾ ಹಾಡುಗಳು ಎಂಬ ಮಾತನ್ನು ಬಹು ಜನರಲ್ಲಿ ಕೇಳಿದೆ. ಮರುದಿನವಲ್ಲ ಬಹುದಿನಗಳವರೆಗೆ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಅದಾಯಿತು.
ಒಂದು ವಿಶಿಷ್ಟವಾದ ಕಾರ್ಯಕ್ರಮ “ಪದ್ಮಭೂಷಣ”. ಏಕೆಂದರೆ ಹಳತರಲ್ಲಿ ಸೆಳೆತವಿದೆ ಎಂಬಂತೆ ಎಲ್ಲಾ ಹಳೆಯ ಹಾಡುಗಳು ಕೇಳಲು ಬಹು ಇಂಪಾಗಿ ಕೇಳುಗರನ್ನು ಹೊಸ ಲೋಕಕ್ಕೆ ಕೊಂಡೊಯ್ದವು ಸಂಜೆಯ ತಂಪಿಗೆ ಮನಸ್ಸಿಗೆ ಹಿತವಾದ ಅನುಭವ ಆದಂತಾಯಿತು.
ಪರಿಕಲ್ಪನೆಯ ರೂವಾರಿಗಳಾದ ಶ್ರೀ ವಿನಯ್ ಶಿವಮೊಗ್ಗ ಅವರಿಗೆ ಮೊದಲು ಸವಿನಯದ ಕೃತಜ್ಞತೆಗಳು ಸಲ್ಲಲೇ ಬೇಕು. ಏಕೆಂದರೆ ಚಿತ್ರರಂಗದ ಇಬ್ಬರೂ ದಿಗ್ಗಜರ ಚಿತ್ರಗೀತೆಗಳ ಆಯ್ಕೆ ಅಂದರೆ ಅದೊಂದು ದೊಡ್ಡ ಸವಾಲೇ ಸರಿ. ಅಂತಹದ್ದನ್ನು ಸೊಗಸಾದ ಹಾಡುಗಳನ್ನು ಆಯ್ಕೆ ಮಾಡಿ ಅವರು ಗೆದ್ದರು. ಅದು ಭಕ್ತಿ ಆಗಿರಬಹುದು, ಶೃಂಗಾರವೇ ಆಗಿರಬಹುದು ಅಥವಾ ಯುಗಳ ಗೀತೆ ಆಗಿರಬಹುದು ಎಲ್ಲವೂ ಸಹ ವೈಶಿಷ್ಟ್ಯ ಪೂರ್ಣವಾಗಿತ್ತು. ಇದೆಲ್ಲಕ್ಕಿಂತ ಮನಸ್ಸಿಗೆ ಮುದ ನೀಡಿದ್ದು ಈ ಹಾಡುಗಳ ಹಿನ್ನೆಲೆ ಮತ್ತು ಆಯ್ಕೆಯ ಕಾರಣ ಇವೆಲ್ಲವನ್ನ ಕಟ್ಟಿಕೊಟ್ಟ ರೀತಿ ಇದೆಯಲ್ಲ ಅದು ಬಣ್ಣಿಸಲಸದಳ.
ಸಾಮಾಜಿಕವಾದಂತಹ ಸನ್ನಿವೇಶಗಳಲ್ಲಿ ನಟರ ಮೇರು ವ್ಯಕ್ತಿತ್ವ ನಮಗೆ ಅನಾವರಣವಾಗುತ್ತಾ ಹೋದದ್ದು ಅವರ ಮೇಲಿನ ಗೌರವ ಪ್ರೀತಿ ಮತ್ತಷ್ಟು ಹೆಚ್ಚಾದಂತೆ ಆಯಿತು. ಏಕೆಂದರೆ ಇಬ್ಬರು ಸಹ ಅಭಿಮಾನಿಗಳನ್ನು ಹೊಂದಿದ್ದು ತಮ್ಮ ನಟನೆಯ ಜೊತೆಗೆ ತಾವಿರುವ ರೀತಿಯಿಂದಲೇ ಆದರ್ಶ ಪ್ರಾಯರಾಗಿದ್ದರು. ನಮ್ಮ ಸಂಸ್ಕೃತಿಯ ಹಿರಿಮೆ ಹೆಚ್ಚಿಸುವಲ್ಲಿ ಮಾನವೀಯ ಮೌಲ್ಯಗಳನ್ನು ತಿಳಿಸುವಲ್ಲಿ ಅವರ ವ್ಯಕ್ತಿತ್ವ ಎಷ್ಟೊಂದು ಪ್ರಭಾವ ಬೀರಿದವು ಎನ್ನುವುದನ್ನು ನಿರೂಪಣೆಯಲ್ಲಿ ವಿನಯಣ್ಣ ಬಹಳ ಚೆನ್ನಾಗಿ ತಿಳಿಸಿದರು. ಸ್ವತಹ ಅವೆಲ್ಲವುಗಳನ್ನು, ಅದರ ಸೊಗಸನ್ನು ತಾವು ಅನುಭವಿಸಿ ಹೇಳಿದಾಗಲೇ ಅದು ಮತ್ತಷ್ಟು ಇಮ್ಮಡಿಯಾಗುತ್ತದೆ, ಆ ರೀತಿಯ ನಿರೂಪಣೆ ವಿನಯಣ್ಣನದಾಗಿತ್ತು. ಡಾ. ರಾಜ್ ಮತ್ತು ಅನಂತ್ ನಾಗ್ ಅವರ ಹಾಡುಗಳ ರಸದೌತಣದ ಜೊತೆಗೆ ಅವರ ವ್ಯಕ್ತಿತ್ವವು ಇಲ್ಲಿ ಅನಾವರಣವಾದದ್ದು ಎಲ್ಲರೂ ಮೆಚ್ಚಿದ ವಿಷಯ.
ಚಿ. ಉದಯ ಶಂಕರ್, ಹುಣಸೂರು ಕೃಷ್ಣಮೂರ್ತಿ, ಇಳಯರಾಜ ಮುಂತಾದ ದಿಗ್ಗಜರುಗಳ ಹಾಡುಗಳನ್ನು ಪಿ.ಬಿ ಶ್ರೀನಿವಾಸ್, ಎಸ್. ಪಿ. ಬಿ, ಎಸ್. ಜಾನಕಿ ಇಂಥ ಲೆಜೆಂಡ್’ಗಳ ಹಾಡುಗಳನ್ನು ಕೇಳುವ ಸುಯೋಗ ನಮ್ಮದಾಗಿ ನಿಜ ಅರ್ಥದ ಪದ್ಮಭೂಷಣವೇ ಆಗಿ ಹೋಯಿತು.
ಮನೋಜವಂ ಆತ್ರೇಯ ಅಂತೂ ಡಾ. ರಾಜ್ ಅವರೇ ಆವಾಹನೆಯಾದಂತೆ ಹಾಡಿದರೆ, ಶ್ರೀಮತಿ ಮಂಗಳಾ ರವಿ ಅವರು ಜೇನಿನ ಕಂಠದ ಗಾಯಕಿ, ಅವರೂ ಸಹ ಎಸ್. ಜಾನಕಿಯ ಅಪರಾವತಾರದಂತೆ ಕಂಡು ಬಂದರು. ವಿಶಾಕ್ ನಾಗಲಾಪುರ, ಪೃಥ್ವಿ ಗೌಡ, ಪಾರ್ಥ ಚಿರಂತನ್ ಇವರುಗಳು ಕೂಡ ಮಧುರವಾಗಿ ಹಾಡಿ ನಮ್ಮ ಶಿವಮೊಗ್ಗದ ಹಿರಿಮೆ ಹೆಚ್ಚಿಸಿದರು. ಇವರುಗಳ ನಡುವೆ ನಮ್ಮ ವಿನಯಣ್ಣನ ತಂಗಿ ದೂರದ ಸಿಂಗಪುರದವರಾದ ಶ್ರೀಮತಿ ರಮ್ಯಾ ಕೂಡ ಇಂಪಾಗಿ ಹಾಡಿ ಮನತಣಿಸಿದರು. ಶ್ಯಾಮಲಾ ದಂಡಕ, ಮುಂಜಾನೆ ಮೂಡಿದ ಹಾಗೆ, ಎಂಥ ಸೌಂದರ್ಯ ಕಂಡೆ, ನಗು ನಗುತಾ ನಲೀ ನಲೀಏನೇ ಆಗಲಿ, ಕನಸಲೂ ನೀನೇ ಮನಸಲೂ ನೀನೇ, ನಂಬಿದೆ ನಿನ್ನ ನಾದ ದೇವತೆಯೇ, ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ, ಕನ್ನಡ ಹೊನ್ನುಡಿ ದೇವಿಯನು, ನಾವಾಡುವ ನುಡಿಯೇ, ನಾದಮಯ… ಅಬ್ಬಾ ಒಂದಕ್ಕಿಂತ ಒಂದು ಅದ್ಭುತವಾದ ಹಾಡುಗಳ ಆಯ್ಕೆಯೇ ನಮ್ಮೆಲ್ಲರಲ್ಲೂ ರೋಮಾಂಚನ ತರಿಸಿದರೆ, ಇವರಿಗೆಲ್ಲ ಒಟ್ಟಾಗಿ ವಾದ್ಯವೃಂದದಲ್ಲಿ ಸಾಥ್ ನೀಡಿದ್ದು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ನಮ್ಮೂರಿನವರೇ ಆದ ದೀಪಕ್ ಜಯಶೀಲನ್ ತಂಡ.
ಹಾಗೆ ಈ ಹಾಡುಗಳು ಸಭ್ಯತೆಯ ಎಲ್ಲೆಮಿರದೆ ತಮ್ಮ ವಿಷುಯಲ್ಸ್’ಗಳು ಹಾಗೂ ಉತ್ತಮ ಸೌಂಡ್’ನಿಂದಲೇ ನಮಗೆ ಇಂಪಾಗಿ ಕೇಳುವಂತೆ ಮಾಡಿದ್ದು ನಮ್ಮ ಚಿನ್ನು ಅವರ ಎಸ್’ಆರ್’ಎಸ್ ಸೌಂಡ್ ಸಿಸ್ಟಮ್. ಒಟ್ಟಾರೆಯಾಗಿ ಈ ಎಲ್ಲರ ಶ್ರಮ ಹೃನ್ಮನಕೆ ತಂಪೆರೆಯಿತು. ಪ್ರತಿಯೊಂದು ಹಾಡುಗಳು ಸಹ ವಾವ್! ಅನ್ನುವಂತಿದ್ದು, ಕೆಲವೊಂದು ಅರಿಯದೆ ಕಣ್ಣಂಚಲಿ ನೀರು ತರಿಸಿತು, ಮತ್ತೆ ಕೆಲವೊಂದು ಹೃದಯಕ್ಕೆ ನೆಮ್ಮದಿಯ ಸಾಂತ್ವನ ನೀಡಿದಂತಿತ್ತು. ಮೃದು ಮಧುರ ಇಂಪಿನ ತಂಪಿಗೆ ಸಾಕ್ಷಿ ಆಗುವಂತೆ ಮಾಡಿದ ಎಲ್ಲ ಗಾಯಕರಿಗೆ ನಾವು ಚಿರಋಣಿಗಳು. ಏಕೆಂದರೆ ಅವರ ಹಾಡು ನಮ್ಮ ಮನಗಳಿಗೆ ನೀಡಿದ ಸಂತೋಷ ವರ್ಣನಾತೀತ. ತಂಪಾದ ಐಸ್ ಕ್ರೀಮ್ ಅಷ್ಟೇ ಅಲ್ಲದೆ ತಂಪಾದ ಹಾಡುಗಳ ಈ ಕಾರ್ಯಕ್ರಮದ ಆಯೋಜನೆಯಿಂದಲೂ ಪಂಚತಾರಾದ ಪ್ರಭುಗಳು ತಾರೆಯಾಗಿ ಮಿನುಗಿದ್ದಾರೆ.
ನಿಜವಾಗಿ ಹೇಳಬೇಕೆಂದರೆ ಹಾಡು, ಹಾಡಿನ ನಿರೂಪಣೆ, ಹಾಡಿದ ರೀತಿ, ಹಿನ್ನೆಲೆ ಸಂಗೀತ, ಸೌಂಡ್ ಸಿಸ್ಟಮ್ ಇವೆಲ್ಲವೂ ಒಂದೇ ದಾರದಲ್ಲಿ ಸಮವಾಗಿ ಪೋಣಿಸಿದ ದುಂಡು ಮಲ್ಲಿಗೆಯ ದಂಡೆಯಂತೆ ತುಂಬಾ ನೀಟಾಗಿ ತುಂಬಾ ಸೊಗಸಾಗಿ ಕಂಡುಬಂತು ಎನ್ನುವುದರಲ್ಲಿ ಮಾತೇ ಇಲ್ಲ ಹಾಗಾಗಿ ಈ ಎಲ್ಲ ಸೊಗಸಿಗೆ ಕಾರಣೀಭೂತರಾದ ಸರ್ವರಿಗೂ ಸಹೃದಯರ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post