ನವದೆಹಲಿ: ಇನ್ನು ಮುಂದೆ 18 ವರ್ಷಕ್ಕಿಂತಲೂ ಕೆಳಗಿನ ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿ, ಸಂಚಾರ ನಿಯಮ ಉಲ್ಲಂಘಿಸಿದರೆ ಅಥವಾ ಅಪಘಾತ ಮಾಡಿದರೆ ಅದಕ್ಕೆ ಅವರ ಪೋಷಕರೇ ಹೊಣೆಗಾರರಾಗುತ್ತಾರೆ.
ಹೌದು.. 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದೆ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದ್ದು, ಸಂಚಾರ ನಿಯಮವನ್ನು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣಗೊಳಿಸಿದೆ.
ಇದರ ಅನ್ವಯ, 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದರೆ ಅಥವಾ ಅಪಘಾತ ಮಾಡಿದರೆ ಅದಕ್ಕೆ ಆವರ ಪೋಷಕರೇ ಹೊಣೆಗಾರರಾಗುತ್ತಾರೆ.
ಅದರಲ್ಲೂ ಅಪಘಾತ ಸಂಭವಿಸಿ ಅದು ಗಂಭೀರ ಸ್ವರೂಪದ್ದಾಗಿದ್ದರೆ, ವಾಹನ ಚಾಲನೆ ಮಾಡಿದ ಅಪ್ರಾಪ್ತ ಬಾಲಕ/ಬಾಲಕಿ ಬಾಲಾಪರಾಧಿಗಳ ಕಾನೂನಿನ ಅನ್ವಯ ಕ್ರಮ ಎದುರಿಸಬೇಕಾಗುತ್ತದೆ. ಅಲ್ಲದೇ. ಆ ವಾಹನದ ನೋಂದಣಿಯನ್ನು 1 ವರ್ಷದವರೆಗೆ ಅಮಾನತಿನಲ್ಲಿ ಇಡಲಾಗುತ್ತದೆ. ಆ ಮಕ್ಕಳಿಗೆ 25 ವರ್ಷ ತುಂಬುವವರೆಗೆ ವಾಹನ ಚಾಲನಾ ಪರವಾನಿಗೆಯನ್ನು ನೀಡಲಾಗುವುದಿಲ್ಲ. ಅಲ್ಲದೆ ಪೋಷಕರು ಅಥವಾ ವಾಹನ ಮಾಲೀಕರು 25 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಪೋಷಕರು ಅಥವಾ ಮಾಲೀಕರು 3 ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ.
ಯಾವ ಸಂಚಾರ ನಿಯಮ ಉಲ್ಲಂಘನೆಗೆ ಎಷ್ಟು ದಂಡ?
- ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಚಾಲನಾ ಪರವಾನಗಿ ಅನರ್ಹ
- ಅನರ್ಹತೆ ಅವಧಿಯ ನಂತರ ಆ ವ್ಯಕ್ತಿಯು ಮರು ತರಬೇತಿ ಪಡೆದರೆ ಮಾತ್ರ ಪರವಾನಗಿ ನೀಡಿಕೆ
- ಪರವಾನಗಿ ಇಲ್ಲದೆ ಚಾಲನೆಗೆ 5,000 ರೂ.ವರೆಗೂ ದಂಡ
- ಕುಡಿದು ವಾಹನ ಚಲಾಯಿಸಿದರೆ 2 ರಿಂದ 10 ಸಾವಿರ ರೂ. ದಂಡ
- ಅತಿವೇಗದ ಚಾಲನೆಗೆ 1 ಸಾವಿರ ರೂ.ಗಳ ದಂಡ
- ರಸ್ತೆಯಲ್ಲಿ ರೇಸಿಂಗ್, ಡ್ರ್ಯಾಗ್ ರೇಸ್, ಬೈಕ್ ಸ್ಟಂಟ್’ಗಳಂತಹ ಅಪಾಯಕಾರಿ ಚಟುವಟಿಕೆಗಳಿಗೆ 5 ಸಾವಿರ ರೂವರೆಗಿನ ದಂಡ, ಪರವಾನಗಿ ಅನರ್ಹತೆ ಮಾಡುವ ಸಾಧ್ಯತೆ
- ವಿಮೆ ಇಲ್ಲದೆ ವಾಹನ ಚಾಲನೆಗೆ ಕನಿಷ್ಠ 1 ಸಾವಿರ ರೂ ದಿಂದ 2 ಸಾವಿರ ರೂ.ವರೆಗೆ ದಂಡ
- ದ್ವಿಚಕ್ರ ವಾಹನದಲ್ಲಿ ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ 2 ಸಾವಿರ ರೂವರೆಗೂ ದಂಡ ಮತ್ತು ಮೂರು ತಿಂಗಳು ಚಾಲನಾ ಪರವಾನಗಿ ಅಮಾನತು
ಈ ಎಲ್ಲಾ ನೂತನ ನಿಯಮಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ.
Discussion about this post