ನವದೆಹಲಿ: ನಾವೆಲ್ಲಾ ದೇಶದ ಒಳಗೆ ನೆಮ್ಮದಿಯಿಂದ, ಧೈರ್ಯದಿಂದ ಜೀವನ ಮಾಡುತ್ತೇವೆ, ಪ್ರತಿ ರಾತ್ರಿ ಬಹಿರಂಗ ಶತ್ರುಗಳಿಂದ ಆತಂಕವಿಲ್ಲದೇ ತಣ್ಣಗೆ ನಿದ್ದೆ ಮಾಡುತ್ತೇವೆ ಎಂದರೆ ಅದರ ಹಿಂದೆ ನಮ್ಮ ದೇಶದ ವೀರ ಯೋಧರ ತ್ಯಾಗ ಹಾಗೂ ಬಲಿದಾನವಿದೆ.
ತಮ್ಮ ಕುಟುಂಬ, ನೆಮ್ಮದಿ ತ್ಯಾಗ ಮಾಡಿ ಎಲ್ಲಕ್ಕೂ ಮಿಗಿಲಾಗಿ ಜೀವವನ್ನೇ ಪಣಕ್ಕಿಟ್ಟು ಗಡಿಯಲ್ಲಿ ನಮ್ಮ ದೇಶವನ್ನು ಕಾಯುವ ವೀರ ಯೋಧರ ತ್ಯಾಗಕ್ಕೆ ಇಡಿಯ ದೇಶ ಏನು ಕೊಟ್ಟರೂ ಸರಿದೂಗಿಸಲು ಸಾಧ್ಯವಿಲ್ಲ.
ಆದರೆ, ಇಂತಹ ಯೋಧರ ತ್ಯಾಗವನ್ನು ಅರಿಯದ ಕೆಲವು ಅರಿವುಗೇಡಿ, ಮರ್ಯಾದೆಗೇಡಿ ಜನರ ರೈಲಿನಲ್ಲಿ ಕೇವಲ ಒಂದು ಸೀಟು ಬಿಟ್ಟುಕೊಡದೇ ದಾರ್ಷ್ಟ್ರ್ಯ ಮೆರೆದಿದ್ದಾರೆ. ಇಂತಹುದ್ದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರಯಾಣಿಕರ ಮನಃಸ್ಥಿತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದು ಎಲ್ಲಿ ನಡೆದ ಘಟನೆ ಎಂದು ಸರಿಯಾಗಿ ತಿಳಿದುಬಂದಿಲ್ಲ. ಆದರೆ, ಮೆಟ್ರೋ ರೈಲಿನಲ್ಲಿ ಎಂಬುದು ಫೋಟೋದಿಂದ ತಿಳಿದುಬರುತ್ತದೆ. ಅಲ್ಲಿ ಆ ಯೋಧ ಸೀಟು ಇಲ್ಲದೇ ರೈಲಿನಲ್ಲಿ ಓಡಾಡುವ ಜಾಗದಲ್ಲಿ ಬ್ಯಾಗ್ ಮೇಲೆ ಕುಳಿತೇ ಅದರಲ್ಲೂ ಸೇನಾ ಸಮವಸ್ತ್ರದಲ್ಲೇ ಕುಳಿತ ನಿದ್ದೆಗೆ ಜಾರಿದ್ದಾರೆ. ಸುತ್ತಲೂ ಜನ ಕುಳಿತಿದ್ದಾರೆ.
ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಯೋಧನಿಗೆ ಸೀಟು ಬಿಟ್ಟುಕೊಡಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಆ ಜನ ಅನಾಗರೀಕರೇ ಸರಿ.















