ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೆ ಎಂಡ್ ಮ್ಯಾನೇಜ್‌ಮೆಂಟ್(ಪಿಇಎಸ್‌ಐಟಿಎಂ) ಹಾಗೂ ಇಂಟರ್ನೆಟ್ ಸೊಸೈಟಿ (ಐಎಸ್‌ಒಸಿ) ಬೆಂಗಳೂರು ವಿಭಾಗದ ಸಹಯೋಗದಲ್ಲಿಬಿಲ್ಡಿಂಗ್ ವೈರ್‌ಲೆಸ್ ಕಮ್ಯೂನಿಟಿ ನೆಟ್‌ವರ್ಕ್ BWCN ಬೂಟ್‌ಕ್ಯಾಂಪ್‌ಗೆ ಇಂದು ಚಾಲನೆಯನ್ನು ನೀಡಲಾಯಿತು.
ಜುಲೈ 13 ರಿಂದ 17ರವರೆಗೆ ನಡೆಯಲಿರುವ ಈ ತರಬೇತಿ ಶಿಬಿರವು ಬೋಧಕ ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ವೈರ್‌ಲೆಸ್ ಸಮುದಾಯ ಜಾಲಗಳು, ಡಿಜಿಟಲ್ ಒಳಗೊಳ್ಳುವಿಕೆ, ಆನ್‌ಲೈನ್ ಟ್ರಸ್ಟ್, ಹಾಗೂ ಸೈಬರ್ ಭದ್ರತೆ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡುವ ಉದ್ದೇಶವನ್ನು ಇದು ಹೊಂದಿದೆ.
ಪಿಇಎಸ್ ಐಟಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸ್ವಾಮಿ ಡಿ ಆರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಗಣ್ಯರನ್ನು ಮತ್ತು ಸಭಾಸದರನ್ನು ಸ್ವಾಗತಿಸುತ್ತಾ ಸಮಾಜಮುಖಿ ತಾಂತ್ರಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಾಂತ್ರಿಕ ಪ್ರಗತಿ ಹಾಗೂ ಸಮುದಾಯದ ಅಭಿವೃದ್ಧಿಗೆ ಸಂಸ್ಥೆಯು ನಿರಂತರವಾಗಿ ಬದ್ಧವಾಗಿದೆ ಎಂದು ನುಡಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಇಂಟರ್ನೆಟ್ ಸೊಸೈಟಿ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷರಾದ ಡಾ. ಶೋಭಾ ಶಂಕರ್ ಅವರು ಸೇವೆಯಿಂದ ವಂಚಿತ ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಜಾಲಗಳನ್ನು ಸ್ಥಾಪಿಸುವ ಮೂಲಕ ಡಿಜಿಟಲ್ ಅಂತರವನ್ನು ನಿವಾರಿಸುವುದು ಇಂಟರ್ನೆಟ್ ಸೊಸೈಟಿಯ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.
Also read: Shivamogga – Sringeri Train | ಕೋಟ ಶ್ರೀನಿವಾಸ ಪೂಜಾರಿ ಹೊಸ ಮಾಹಿತಿ
ತಮ್ಮ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳನ್ನು ಗುರುತಿಸಿ ಅಂತರ್ಜಾಲ ಸಂಪರ್ಕವನ್ನು ವಿಸ್ತರಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇಂಟರ್ನೆಟ್ ಸೊಸೈಟಿಯ ಬೆಂಗಳೂರು ಚಾಪ್ಟರ್‌ನ ಉಪಾಧ್ಯಕ್ಷರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಆದರ್ಶ್ ಬಿ. ಯು ಅವರು ಮಾತನಾಡುತ್ತಾ ವೈರ್‌ಲೆಸ್ ನೆಟ್‌ವರ್ಕಿಂಗ್ ತಂತ್ರಜ್ಞಾನಗಳನ್ನು ನೈಜ ಪರಿಸ್ಥಿತಿಗಳಲ್ಲಿ ಪರಿಣಾಕಾರಿಯಾಗಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಜೊತೆಗೆ ಮುಂದಿನ ತಲೆಮಾರಿಗೆ ಇಂಟರ್ನೆಟ್ ಪ್ರೋಟೋಕಾಲ್‌ಗಳ ಕುರಿತು ಸಂಶೋಧನೆ ನಡೆಸುವಂತೆ ಸಭಿಕರಿಗೆ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಿಇಎಸ್ ಟ್ರಸ್ಟ್‌ನ ಕುಲಸಚಿವರಾದ ಡಾ. ನಾಗರಾಜ ಆರ್ ಅವರು ಮಾತನಾಡುತ್ತಾ ಸಮಾಜದ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಇಂತಹ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಇಂತಹ ಸಮಾಜಮುಖಿ ಚಟುವಟಿಕೆಗಳಿಗೆ ಆಡಳಿತ ಮಂಡಳಿಯ ಸಂಪೂರ್ಣ ಬೆಂಬಲ ಮುಂದುವರೆಯಲಿದೆ ಎಂದು ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಇಎಸ್ ಐಟಿಎಂ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶೇಖರ್ ಆರ್ ಅವರು ವಹಿಸಿದ್ದರು. ಬೂಟ್‌ಕ್ಯಾಂಪ್‌ನ ಸಂಚಾಲಕರು ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ವಿಷ್ಣು ವಿ ಎಂ ಅವರು ವಂದಿಸಿದರು.
ಈ ಬೂಟ್ ಕ್ಯಾಂಪ್‌ನಲ್ಲಿ ವಿವಿಧ ಪ್ರತಿಷ್ಠಿತ ಕೈಗಾರಿಕೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ ಸುಮಾರು 50 ಜನರು ಭಾಗವಹಿಸಿದ್ದಾರೆ. ಐದು ದಿನಗಳ ತರಬೇತಿ ಅವಧಿಯಲ್ಲಿ ವೈರ್‌ಲೆಸ್ ಸಮುದಾಯ ಜಾಲಗಳು, ಮೆಶ್‌ನೆಟ್ ವರ್ಕಿಂಗ್, ನೆಟ್‌ವರ್ಕ್ ಯೋಜನೆ, ಮುಕ್ತಮೂಲ (ಓಪನ್ ಸೋರ್ಸ್) ನೆಟ್‌ವರ್ಕಿಂಗ್ ತಂತ್ರಜ್ಞಾನಗಳು, ಅಂತರ್ಜಾಲ ಸಂಪರ್ಕ, ಜಾಲ ಸ್ಥಾಪನೆ ತಂತ್ರಗಳು, ಸೈಬರ್ ಭದ್ರತೆ ಹಾಗೂ ಆನ್‌ಲೈನ್ ವಿಶ್ವಾಸ ಮತ್ತು ಸುರಕ್ಷತೆ ಕುರಿತಂತೆ ಸವಿಸ್ತಾರ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








