ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತದ ಹೈಸ್ಪೀಡ್ ರೈಲು ಮೂಲಸೌಕರ್ಯವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರು ರೈಲು ನಿಲ್ದಾಣದಿಂದ ಮೂರು ಹೊಸ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಬೆಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಚಾಲನೆ ನೀಡಿದರು.
ಬಹುನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿನ ಜೊತೆಗೆ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ಅಮೃತಸರ ಹಾಗೂ ಅಜ್ನಿ (ನಾಗ್ಪುರ)-ಪುಣೆ ಮಾರ್ಗಗಳ ವಂದೇ ಭಾರತ್ ರೈಲುಗಳ ಸೇವೆಗಳನ್ನು ಪ್ರಧಾನಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಪ್ರಧಾನಿ ಮೋದಿ ಅವರು ನಿಲ್ದಾಣಕ್ಕೆ ಆಗಮಿಸಿದಾಗ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡರು. ಭೇಟಿಯ ಸಂದರ್ಭದಲ್ಲಿ, ಅವರು ಐತಿಹಾಸಿಕ ಕ್ಷಣದಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದಷ್ಟೇ ಅಲ್ಲದೆ, ಭಾರತದ ರೈಲ್ವೆ ಪರಿವರ್ತನೆಯಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಲೋಕೋ ಪೈಲಟ್’ಗಳನ್ನು ಭೇಟಿಯಾಗಿ ಅವರ ಸೇವೆಯನ್ನು ಪ್ರಶಂಸಿಸಿದರು.
ಬೆAಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿಗೆ ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ ಮತ್ತು ಹುಬ್ಬಳ್ಳಿ ನಿಲ್ದಾಣಗಳಲ್ಲಿ ಸಾರ್ವಜನಿಕರಿಂದ ಹೃದಯಪೂರ್ವಕ ಸ್ವಾಗತ ದೊರೆಯಿತು.
ಸ್ಥಳೀಯರು ಹಾಗೂ ಪ್ರಯಾಣಿಕರು ಈ ಆಧುನಿಕ, ವೇಗದ ರೈಲಿನ ಬಗ್ಗೆ ಹೆಮ್ಮೆ ಹಾಗೂ ಸಂತೋಷ ವ್ಯಕ್ತಪಡಿಸಿದರು. ಹಲವರು ಈ ಸೇವೆಯನ್ನು ತಮ್ಮ ಜೀವನದಲ್ಲಿಯೇ ಹೊಸ ಹಾಗೂ ಉಲ್ಲಾಸಕರ ಅನುಭವವೆಂದು ವಿವರಿಸಿದರು. ಈ ರೈಲಿನ ಚಾಲನೆಯೊಂದಿಗೆ ಕರ್ನಾಟಕದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ಸೇವೆಗಳ ಸಂಖ್ಯೆ ಹನ್ನೊಂದಕ್ಕೆ ಏರಿದೆ, ಇದು ರಾಜ್ಯದ ರಾಷ್ಟ್ರೀಯ ಸಾರಿಗೆ ಜಾಲದಲ್ಲಿನ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಸುಮಾರು 611 ಕಿಮೀ ದೂರವನ್ನು ಕೇವಲ 8 ಗಂಟೆ 30 ನಿಮಿಷಗಳಲ್ಲಿ ಈ ರೈಲು ಸಂಚರಿಸಲಿದ್ದು, ಈ ಮೂಲಕ ಸದ್ಯದ ರೈಲುಗಳಿಗಿಂತ ಪ್ರಯಾಣ ಸಮಯದಲ್ಲಿ ಸುಮಾರು 1 ಗಂಟೆ 20 ನಿಮಿಷ ಹಾಗೂ ಹಿಂದಿರುಗುವ ಪ್ರಯಾಣದಲ್ಲಿ ಸುಮಾರು 1 ಗಂಟೆ 40 ನಿಮಿಷ ಕಡಿತವಾಗಲಿದೆ. ಇದರಿಂದಾಗಿ ಇದು ವೇಗವಲ್ಲದ ರೈಲುಗಳಿಗೆ ಹೋಲಿಸಿದರೆ ಹೆಚ್ಚು ಪರಿಣಾಮಕಾರಿ ಹಾಗೂ ಅನುಕೂಲಕರ ಆಯ್ಕೆಯಾಗಿ ಪರಿಣಮಿಸುತ್ತದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಮಧ್ಯ ಸಂಸದ ಪಿ.ಸಿ. ಮೋಹನ್, ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಸತೀಶ್ ಕುಮಾರ್ ಮತ್ತು ನೈಋತ್ಯ ರೈಲ್ವೆ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್’ಪ್ರೆಸ್ ಸಂಚಾರವು ಆಗಸ್ಟ್ 11, 2025 ರಿಂದ ಆರಂಭವಾಗಲಿದೆ. ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 26751 ಬೆಳಿಗ್ಗೆ 5:20 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1:50 ಕ್ಕೆ ಬೆಂಗಳೂರು ತಲುಪಲಿದೆ. ಈ ಮಾರ್ಗದಲ್ಲಿ ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 26752 ಮಧ್ಯಾಹ್ನ 2:20 ಕ್ಕೆ ಹೊರಟು ರಾತ್ರಿ 10:40 ಕ್ಕೆ ಬೆಳಗಾವಿಗೆ ತಲುಪಲಿದೆ. ಈ ರೈಲು ಕೂಡಾ ಇದೇ ನಿಲ್ದಾಣಗಳಲ್ಲಿ ನಿಲ್ಲಲಿದೆ (ಗುರುವಾರ ಹೊರತುಪಡಿಸಿ ವಾರದ ಆರು ದಿನಗಳು).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post