ಕಲ್ಪ ಮೀಡಿಯಾ ಹೌಸ್ | ಉಡುಪಿ |
ಪ್ರಧಾನಿಯಾದ ನಂತರ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ನರೇಂದ್ರ ಮೋದಿಯವರನ್ನು ಕರಾವಳಿಯ ಮಂದಿ ಅದ್ದೂರಿಯಾಗಿ ಹೂಮಳೆ ಸುರಿಸಿ ಸ್ವಾಗತಿಸಿದ್ದಾರೆ.
ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್’ನಲ್ಲಿ ಆದಿ ಉಡುಪಿಯ ಹೆಲಿಪ್ಯಾಡ್’ಗೆ ಪ್ರಧಾನಿಯವರು ಬಂದಿಳಿದರು. ಅಲ್ಲಿಂದ ರೋಡ್ ಶೋ ಆರಂಭವಾಗಿದ್ದು, ದಾರಿಯುದ್ದಕ್ಕೂ ಲಕ್ಷಾಂತರ ಮಂದಿ ನೆರೆದು ತಮ್ಮ ನೆಚ್ಚಿನ ನಾಯಕನನ್ನು ಹತ್ತಿರದಿಂದ ಕಣ್ತುಂಬಿಕೊಂಡರು.
ಆದಿ ಉಡುಪಿಯಿಂದ ಕೃಷ್ಣ ಮಠದವರೆಗೂ ನಡೆಯುತ್ತಿರುವ ರೋಡ್ ಶೋದಲ್ಲಿ ಪ್ರಧಾನಿಯವರು ಅಭಿಮಾನಿಗಳತ್ತ ಕೈ ಬೀಸಿ ಸಾಗಿದ್ದಾರೆ. ರೋಡ್ ಶೋ ಆರಂಭವಾದಾಗಿನಿಂದಲೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನಿಂತು ಜೈಘೋಷ ಹಾಕಿ, ಹೂಮಳೆ ಸುರಿಸಿ ವಿಶ್ವ ನಾಯಕನನ್ನು ಸ್ವಾಗತಿಸಿದ್ದಾರೆ.
11:05ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನ ರಾಜ್ಯ ಸರ್ಕಾರದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















