ನವದೆಹಲಿ: ಒಂದು ದೇಶ-ಒಂದು ಚುನಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತಾಗಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದು, ಇದಕ್ಕೆ ಮಮತಾ ಬ್ಯಾನರ್ಜಿ ಹಾಗೂ ಉದ್ಧವ್ ಠಾಕ್ರೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ.
ಲೋಕಸಭೆ ಹಾಗೂ ರಾಜ್ಯಸಭೆಗೆ ಆಯ್ಕೆಯಾಗಿರುವ ಎಲ್ಲ ಪಕ್ಷಗಳ ಮುಖಂಡರನ್ನು ಸಭೆಗೆ ಪ್ರಧಾನಿಯವರು ಆಹ್ವಾನಿಸಿದ್ದು, 2022ಕ್ಕೆ 75ನೆಯ ಸ್ವತಂತ್ರ ದಿನಾಚರಣೆ ಹಾಗೂ ಮಹಾತ್ಮ ಗಾಂಧೀಜಿಯವರ 150ನೆಯ ಜನ್ಮದಿನಾಚರಣೆಯೂ ಇರುವ ಹಿನ್ನೆಲೆಯ ವಿಚಾರವೂ ಸಹ ಸಭೆಯಲ್ಲಿ ಚರ್ಚೆಗೆ ಬರಲಿದೆ.
ಆದರೆ, ದೇಶದ ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಈಗಾಗಲೇ ವಿರೋಧಿಸಿದ್ದು, ಈ ಹಿನ್ನೆಲೆಯಲ್ಲಿ ಹಲವು ಪ್ರತಿಪಕ್ಷಗಳ ಮುಖಂಡರು ಸಭೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಪಾಲ್ಗೊಳ್ಳುವ ಕುರಿತಾಗಿ ಕಾಂಗ್ರೆಸ್ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲವಾದರೂ, ಟಿಎಂಸಿಯ ಮಮತಾ ಬ್ಯಾನರ್ಜಿ, ಡಿಎಂಕೆಯ ಸ್ಟಾಲಿನ್ ಹಾಗೂ ಟಿಆರ್‌ಎಸ್’ನ ಕೆ. ಚಂದ್ರಶೇಖರ್ ರಾವ್ ಅವರುಗಳು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ಇನ್ನು, ನೂತನವಾಗಿ ಲೋಕಸಭೆಗೆ ಆಯ್ಕೆಯಾಗಿರುವ ಎಲ್ಲ ಸಂಸದರಿಗೆ ನಾಳೆ ರಾತ್ರಿ ಭೋಜನ ಕೂಟದ ಜೊತೆಗೆ ಸಭೆಯನ್ನು ಏರ್ಪಡಿಸಲಾಗಿದೆ.
Discussion about this post