ಕರ್ನಾಟಕದ ರಾಜಕಾರಣದ ನಾಟಕಗಳನ್ನು ನೋಡಿದರೆ ರಾಜಕೀಯದ ಲಾಭಿ, ದೊಂಬರಾಟ, ಅಧಿಕಾರದ ದಾಹ ಇದೆಲ್ಲವೂ ಎದ್ದು ಕಾಣುತ್ತಿದ್ದು ಜನರಿಗೆ ರಾಜಕಾರಣಿಗಳು ಮತ್ತು ರಾಜಕೀಯವೇ ಅಸಹ್ಯ ಮೂಡಿಸುವಷ್ಟು ಗಬ್ಬೆದ್ದಿದೆ ರಾಜಕಾರಣ.
ಗೆದ್ದು ಬೀಗಲಾಗದ ಭಾರತೀಯ ಜನತಾ ಪಕ್ಷ ಪ್ರತಿಪಕ್ಷದಲ್ಲಿ ಕೂತರೆ ಸೋತು ಸುಣ್ಣವಾಗದ ಜನತಾದಳ ಕೈ ಹಿಡಿದು ಅಧಿಕಾರ ಅನುಭವಿಸುತ್ತಿದೆ. ಕುದುರೆ ವ್ಯಾಪಾರಕ್ಕೆ ಹೆದರಿ ರೆಸಾರ್ಟ್‌ಗಳತ್ತ ಮುಖಮಾಡಿ ನಿಂತವರು ಇಂದು ಮಂತ್ರಿ ಪದವಿಗಾಗಿ ಮತ್ತೊಂದು ರೆಸಾರ್ಟ್ ಹತ್ತಿದರೆ ಅನುಮಾನವಿಲ್ಲ!
ಪ್ರತಿಭಾರಿ ರಾಜಕೀಯದ ದೊಂಬರಾಟ ನಡೆದಾಗಲು ಸಾಮಾನ್ಯ ಜನರಾದ ನಾವು ಇದಕ್ಕೆಲ್ಲ ಒಂದು ಅಂತ್ಯ ಬೇಕು ನಮಗೆ ಉತ್ತಮ ಆಡಳಿತ ಬೇಕು ಅಷ್ಟೇ. ಇವರೆಲ್ಲ ಯಾಕೆ ಹೀಗೆ ಬೀದಿ ನಾಟಕವಾಡುತ್ತಾರೋ ಗೊತ್ತಿಲ್ಲ ಅನ್ನುವುದು ಸಹಜ. ಆದರೆ ಅದು ನಡೆಯುವುದಿಲ್ಲ ಎಂದು ತಿಳಿದು ಸುಮ್ಮನಾಗುತ್ತೇವೆ, ಮುಂದೆಯೂ ಸುಮ್ಮನಾಗುತ್ತೇವೆ. ಆದರೆ ಈ ವ್ಯವಸ್ಥೆ ಬದಲಾಗುವುದಿಲ್ಲ. ರಾಜತ್ವದಿಂದ ಪ್ರಜಾಪ್ರಭುತ್ವಕ್ಕೆ ಹೊರಳಿದ ನಾವು ದೇಶದಲ್ಲಿ ಮತ್ತು ರಾಜ್ಯದಲ್ಲಿ ಅದೇ ವಂಶವಾಹಿನಿಯ ಅಧಿಕಾರಕ್ಕೆ ಜೋತು ಬಿದ್ದಿದ್ದೀವಿ.
ಕುಟುಂಬ ರಾಜಕಾರಣ ಮೂರು ಪ್ರಮುಖ ಪಕ್ಷಗಳಲ್ಲಿಯೂ ಇದೆ. ಜಾತ್ಯತೀತ ಜನತಾದಳದಲ್ಲಂತೂ ಇಡೀ ಕುಟುಂಬವೇ ಪಕ್ಷ, ಪಕ್ಷವೇ ಕುಟುಂಬ! ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಾಗಲಿ, ರಾಜ್ಯ ಮಟ್ಟದಲ್ಲಾಗಲಿ ವ್ಯತ್ಯಾಸವೇ ಇಲ್ಲ. ಒಂದು ಕುಟುಂಬಕ್ಕೆ ಅಧಿಕಾರ, ಮಕ್ಕಳಿಗೆ ಚುನಾವಣಾ ಅಭ್ಯರ್ಥಿ ಟಿಕೇಟ್, ಭಾರತೀಯ ಜನತಾ ಪಕ್ಷವೂ ಇದಕ್ಕೆ ಹೊರತಾಗಿಲ್ಲ ರಾಜ್ಯಾಧ್ಯಕ್ಷರು ಸಾಂಸದರಾದರೆ ಮಗ ಶಾಸಕ, ಮಗ ಸಾಂಸದರಾದರೆ ಅಪ್ಪ ಶಾಸಕ. ಇದು ಕುಟುಂಬ ರಾಜಕಾರಣವಾದರೆ ಮತ್ತೊಂದು ಅದೆಷ್ಟೆ ವರ್ಷವಾದರು ಆಯಾಯ ಕ್ಷೇತ್ರಗಳಲ್ಲಿ ಅವರೇ ಶಾಸಕರು ಅವರೇ ಮಂತ್ರಿಗಳು ಅವರದೇ ಪಾರುಪತ್ಯ.
ಇದಕ್ಕೆಲ್ಲ ಒಂದು ಕಡಿವಾಣ ಹಾಕಬೇಕಾದರೆ ಚುನಾವಣಾ ರಾಜಕಾರಣ ಮತ್ತು ಸರ್ಕಾರದ ರಚನೆಯಲ್ಲಿ ಕೆಲವೊಂದು ನಿಯಮ ಜಾರಿಗೆ ಬರಬೇಕು. ಈ ಕೆಳಗಿನ ನಿಯಮಗಳನ್ನು ಜಾರಿಗೆ ತಂದಲ್ಲಿ ರಾಜಕಾರಣದಲ್ಲಿ ಒಂದಷ್ಟು ಬದಲಾವಣೆ ತರಬಹುದು.
ಈ ಕೆಳಗಿನ ನಿಯಮಗಳನ್ನು ಜಾರಿಗೆ ತರಬಹುದು:
- ಶಾಸಕ ಅಥವಾ ಸಾಂಸದನಾಗಲು ಕನಿಷ್ಠ ಒಂದು ಪದವಿಯ ವಿದ್ಯಾರ್ಹತೆ
- ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಕೇವಲ ಮೂರು ಬಾರಿ ಮಾತ್ರ ಚುನಾವಣಾ ರಾಜಕಾರಣದಲ್ಲಿ ಸಕ್ರಿಯವಾಗಿರಬಹುದು, ಗರಿಷ್ಠ 3 ಬಾರಿ ಮಾತ್ರ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು
- ಯಾವುದೇ ಚುನಾವಣೆಯಾಗಿರಲಿ ಗ್ರಾಮಪಂಚಾಯ್ತಿಯಿಂದ ಹಿಡಿದು ಲೋಕಸಭೆಯ ತನಕ ಕೇವಲ 3 ಬಾರಿ ಮಾತ್ರ ಅವರಿಗೆ ಅವಕಾಶ
- ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಮಂತ್ರಿಯಾಗಬಹುದು
- ಮುಖ್ಯಮಂತ್ರಿ, ಪ್ರಧಾನಮಂತ್ರಿ ಹೀಗೆ ಒಬ್ಬ ವ್ಯಕ್ತಿ ಗರಿಷ್ಠ ಎರಡು ಬಾರಿ ಮಾತ್ರ ಅಧಿಕಾರ ಹೊಂದಬಹುದು
- ಕುಟುಂಬದಿಂದ ಗರಿಷ್ಠ ಒಬ್ಬರು ಮಾತ್ರ ಚುನಾವಣಾ ರಾಜಕಾರಣದಲ್ಲಿರಬೇಕು
- ಸದನಗಳಿಗೆ ಶೇ.50ರಷ್ಟು ಹಾಜರಾಗದ ಶಾಸಕರ ಶಾಸಕತ್ವ ಆ ಕ್ಷಣದಲ್ಲೇ ಅನುರ್ಜಿತಗೊಳ್ಳಬೇಕು
- ಚುನಾವಣಾ ರಾಜಕಾರಣ ಅಥವಾ ಶಾಸಕ ಮಂತ್ರಿಗಳಾದವರ ಕುಟುಂಬದ ವರ್ಗದವರಿಗೆ ಹತ್ತು ವರ್ಷಗಳ ತನಕ ಯಾವುದೇ ಚುನಾವಣೆಗಳಲ್ಲಿ ನಿಲ್ಲುವ ಹಾಗಿಲ್ಲ
- ಚುನಾವಣಾ ರಾಜಕಾರಣದ ಗರಿಷ್ಠ ವಯೋಮಿತಿ 70 ವರ್ಷವಾಗಬೇಕು
- ಎರಡು ಬಾರಿ ಶಾಸಕರಾದವರು ಮೂರನೆಯ ಬಾರಿ ಶಾಸಕರಾದರೆ ಅಥವಾ ಸಾಂಸದರಾದವರಿಗೆ ಮಂತ್ರಿಸ್ಥಾನಕ್ಕೆ ಮೊದಲ ಆದ್ಯತೆ ನೀಡಬೇಕು
- ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಮಂತ್ರಿಸ್ಥಾನ ಮತ್ತು ಕೇಂದ್ರದಲ್ಲಿ ರಾಜ್ಯಕ್ಕೊಂದು ಮಂತ್ರಿಸ್ಥಾನ ಖಡ್ಡಾಯ ಮಾಡಬೇಕು
ಕನಿಷ್ಠ ಮಟ್ಟದಲ್ಲಿ ಈ ಮೇಲಿನ ವಿಷಯಗಳನ್ನು ಗಂಭೀರವಾಗಿ ಚಿಂತಿಸಿ ಚರ್ಚಿಸಿದರೆ ರಾಜಕೀಯದಲ್ಲಿ ನಿಜವಾಗಲು ಬದಲಾವಣೆ ತರಬಹುದು. ಆದರೆ ಈ ಬದಲಾವಣೆಗಳನ್ನು ತರಲು ಯಾವ ಸರ್ಕಾರಗಳು ಮುಂದೆ ಬರುವುದಿಲ್ಲ. ಈ ತರಹದ ಕಠಿಣ ನಿಯಮಗಳು ಜಾರಿಯಾಗುವ ತನಕಲೂ ರಾಜಕೀಯದಲ್ಲಿ ಈ ರೆಸಾರ್ಟ್ ರಾಜಕಾರಣ, ಗುಂಪುಗಾರಿಕೆ, ಪಕ್ಷಾಂತರ ಇದೆಲ್ಲವೂ ಸಹಜ.
ಇದಕ್ಕೆ ಸಂಬಂಧಿಸಿದಂತೆ ಸರ್ಕಾರವೋ ಅಥವಾ ಸರ್ವೋಚ್ಛ ನ್ಯಾಯಲಯವೋ ತೀರ್ಮಾನ ಮಾಡಿದರೆ ಒಳಿತು ಇಲ್ಲದಿದ್ದರೆ ರಾಜಕಾರಣದಲ್ಲಿ ಯುವಕರಿಗೆ, ಉತ್ಸಾಹಿಗಳಿಗೆ, ಹೊಸಬರಿಗೆ ಅವಕಾಶವೇ ಇರದೆ ಬರೀ ಅವರವರೆ ದೇಶ/ರಾಜ್ಯ ಆಳುತ್ತಿರುತ್ತಾರೆ ಅನ್ನುವುದು ಒಂದಾದರೆ ಮತ್ತೊಂದು ಗುಜರಾತ್ ಮತ್ತು ತಮಿಳುನಾಡಿನಲ್ಲಿ ಏಕವ್ಯಕ್ತಿಗಳ ಆಡಳಿತ ಇದ್ದು, ಅವರ ನಿರ್ಗಮನದ ನಂತರ ಅಲ್ಲಿ ಕ್ರಿಯೇಟ್ ಆದ ಪೊಲಿಟಿಕಲ್ ವ್ಯಾಕ್ಯುಮ್ ಅನ್ನು ತುಂಬಲು ಈಗಲು ಆ ರಾಜ್ಯಗಳು ಹೆಣಗಾಡುತ್ತಿವೆ. ಇಂತಹದೇ ಪರಿಸ್ಥಿತಿ ಇತರ ರಾಜ್ಯಗಳಿಗೂ, ಜಿಲ್ಲೆಗಳಿಗೂ, ಕ್ಷೇತ್ರಕ್ಕೂ ಬರಬಾರದು ಎಂದಾದರೆ ಈ ಮೇಲಿನ ನಿಯಮಗಳು ಜಾರಿಯಾದರೆ ಒಳ್ಳೆಯದು.
Discussion about this post