ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಲ್ಲ ಒಂದು ಅಂತರ್ಗತವಾದ ವೈಶಿಷ್ಟ್ಯತೆ ಇದ್ದೇ ಇರುತ್ತದೆ. ಆ ವಿಶಿಷ್ಟತೆಯನ್ನು ಹಲವರು ಬಾಹ್ಯ ಜಗತ್ತಿಗೆ ತೋರ್ಪಡಿಸುವುದಿಲ್ಲ. ಸ್ವತಃ ಅವರುಗಳೇ ಅದರಲ್ಲಿ ವಿಶೇಷವನ್ನು ಕಂಡುಕೊಂಡಿರುವುದಿಲ್ಲ. ಮತ್ತೆ ಕೆಲವರು ಹೇಗಾದರೂ ಮಾಡಿ ಹೊರ ಜಗತ್ತಿಗೆ ತೆರೆದುಕೊಂಡರೂ ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡ ಪರಿಸ್ಥಿತಿ.
ಅಜ್ಞರು ಮತ್ತು ಅನಾಸಕ್ತ ಜನರಿಂದ ಪ್ರಚೋದನೆ ಮತ್ತು ಪ್ರಚಾರ ಎರಡೂ ದೊರೆಯುವುದಿಲ್ಲ. ಕಲೆಯ ಬೆಲೆಯನ್ನು ಅರಿಯದವರಿಂದಾಗಿ ಕಲೆಯ ಕೊಲೆಯಾಗುವುದನ್ನು ನಾವು ಸಮಾಜದಲ್ಲಿ ಕಾಣುತ್ತಿರುತ್ತವೆ. ಎಂದಾದರೊಂದು ದಿನ ಕಲೆಯ ನಿಜ ಬೆಲೆ ಬಲ್ಲ ತಜ್ಞರಿಂದಲೋ, ಕಲಾಪೋಷಕರಿಂದಲೋ ಪ್ರೋತ್ಸಾಹ, ಪ್ರಚೋದನೆ, ಪ್ರಚಾರ ದೊರೆತು ಮರೆಯಾಗಿರುವ ಕಲಾವಿದರು ಬೆಳಕಿಗೆ ಬರುವುದುಂಟು. ಈ ರೀತಿ ಬೆಳಕಿಗೆ ಬರಲು ಹಾತೊರೆಯುತ್ತಿರುವವರು ಭಾವಚಿತ್ರ ಕಲಾವಿದೆ ಪಾವನ ಬೈಲೂರು ಅವರು. ಕಲಿಯುವ ಕಿಂಚಿತ್ ಸೌಲಭ್ಯ ಪ್ರಾಪ್ತವಾದರೂ ಹುಡುಗರಿಗಿಂತ ಯಾವಾಗಲೂ ಹೆಣ್ಮಕ್ಕಳು ಎರಡೇ ಹೆಜ್ಜೆ ಮುಂದಿರುತ್ತಾರೆ.
ಪ್ರತಿಭೆ ಇದ್ದರೂ ಪ್ರಕಾಶಕ್ಕೆ ಬರಲಾಗದ ಪಾವನ ಉತ್ತಮ ಭಾವಚಿತ್ರ ಕಲಾವಿದೆ. ನೃತ್ಯದಲ್ಲೂ ಉತ್ತಮ ಅಭಿರುಚಿನ್ನು ಹೊಂದಿದ್ದಾರೆ. ಇವರ ಹುಟ್ಟೂರು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಬೈಲೂರು ಗ್ರಾಮ. ಬೈಲೂರು ಆಧುನಿಕ ಮೂಲ ಸೌಕರ್ಯಗಳಿಂದ ವಂಚಿತವಾದ ಒಂದು ಕುಗ್ರಾಮ. ಪಾವನ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಾದ ಬೈಲೂರಲ್ಲೇ ಮುಗಿಸಿ, ಪ್ರೌಢ ಶಿಕ್ಷಣವನ್ನು ಅಂಪಾರು ಹೈಸ್ಕೂಲಿನಿಂದ ಮುಗಿಸಿದ್ದಾರೆ. ಕುಂದಾಪುರದ ಪ್ರತಿಷ್ಠಿತ ಭಂಡಾರಕರ್ಸ್ ಕಾಲೇಜಿನಿಂದ ಸ್ನಾತಕ ಪದವಿಯನ್ನು ಪಡೆದು, ತೆಂಕನಿಡಿಯೂರು ಕಾಲೇಜಿನಿಂದ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಬಾಲ್ಯದಿಂದಲೇ ಚಿತ್ರಕಲೆಯಿಂದ ಆಕರ್ಷಿತರಾದ ಪಾವನ ಅವರಿಗೆ ಜನನಿ ತಾನೇ ಮೊದಲ ಗುರುವಾದವರು. ಚಿತ್ರಕಲೆಯ ’ಅ, ಆ, ಇ, ಈ’ ಯನ್ನು ತಾಯಿಯಿಂದ ಬರೆಯಿಸಿ, ತಿದ್ದಿಸಿಕೊಂಡ ಪಾವನ ನಂತರ ತಮ್ಮ ಆಸಕ್ತಿಯಿಂದ ಚಿತ್ರಕಲೆಯನ್ನು ವೃದ್ಧಿಸಿಕೊಂಡರು.
ಅನಂತರ ಪಾವನ ಒಂದು ವರ್ಷ ಉಡುಪಿಯ ಚಿತ್ರಕಲಾ ಸಂಸ್ಥೆಯಿಂದ ತರಬೇತಿ ಪಡೆದುಕೊಂಡರು. ಕಲಾ ಕಾಲೇಜಿನ ಹಿರಿಯ ವಿದ್ಯಾರ್ಥಿಯೊರ್ವರ ’ವ್ಯಕ್ತಿಚಿತ್ರ’ ರಚನಾ ಕೌಶಲ್ಯದಿಂದ ಪ್ರಭಾವಿತರಾದ ಪಾವನ ನಿಧಾನವಾಗಿ ವ್ಯಕ್ತಿಚಿತ್ರ ರಚನೆಯಲ್ಲಿ ತಮ್ಮ ರುಚಿಯನ್ನು ಕಂಡುಕೊಳ್ಳುವುದರೊಂದಿಗೆ ಪರಿಣತಿಯನ್ನು ಪಡೆದರು. ಸ್ತಿಮಿತ ಅವಧಿಯ ತರಬೇತಿಗಳಿಂದ ಹೆಚ್ಚಿದನ್ನು ಅಭ್ಯಾಸಿಸುವುದು ಕಷ್ಟ ಎಂದರಿತ ಇವರು ಏಕಲವ್ಯನಂತೆ ’ಯುಟ್ಯೂಬ್’ ನ್ನು ತನ್ನ ಗುರುವೆಂದು ಪರಿಭಾವಿಸಿ ಮುಂದಿನ ಹಂತದ ಕಲಿಕೆಯನ್ನು ಕಲಿತರು. ತಮ್ಮ ಊರು ಬೈಲೂರಿನಲ್ಲಿ ’ವಾಲ್ ಪೈಂಟ್’ ಬಿಡಿಸಿದ್ದಾರೆ. ಮದರ್ ತೆರೆಸಾ ಶಾಲೆ, ಶಂಕರನಾರಾಯಣ, ಟಿ.ಟಿ. ರೋಡ್ ಮುಂತಾದ ಕಡೆ ವಾಲ್ ಪೈಂಟಿನಲ್ಲಿ ಕೈ ಚಳಕ ತೋರಿಸಿದ್ದಾರೆ. ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ಇವರು ಸದವಕಾಶಗಳ ಬರವನ್ನು ಎದುರಿಸುತ್ತಿದ್ದಾರೆ. ಅವಕಾಶ ದೊರೆತರೆ ಲೈವ್ ಪೈಂಟಿಂಗ್ ಪ್ರದರ್ಶನ ನೀಡಬೇಕೆಂಬ ಮಹದಾಸೆ ಪಾವನ ಅವರದು. 75ಕ್ಕೂ ಹೆಚ್ಚು ವ್ಯಕ್ತಿ ಚಿತ್ರಗಳನ್ನು ಅವರು ಈಗಾಗಲೇ ರಚಿಸಿದ್ದಾರೆ. ಕಲಾ ಪೋಷಕರು, ಕಲಾಭಿಮಾನಿಗಳು ಪಾವನರಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ.
ಪಾವನ ಅವರ ಮೊದಲ ವ್ಯಕ್ತಿಚಿತ್ರ ಮದರ್ ತೆರೇಸಾ ನಂತರ ದೇಶದ ಪ್ರಧಾನಿ ಶ್ರೀಯುತ ನರೇಂದ್ರ ಮೋದಿಯವರದ್ದು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಓಡುವ ಯಂತ್ರವೆಂದೇ ಖ್ಯಾತಿ ಪಡೆದಿರುವ ಹುಸೇನ್ ಬೋಲ್ಟ್, ಮೋಹಕ ಚೆಲುವೆ ದೀಪಿಕಾ ಪಡುಕೋಣೆ, ರಚಿತಾ ರಾಮ್, ಐಂದ್ರಿತಾ ರಾಯ್, ರಾಧಿಕಾ ಪಂಡಿತ್, ದಿವಂಗತ ಇಂದಿರಾ ಗಾಂಧಿ, ಅಲ್ಲು ಅರ್ಜುನ್ ಮುಂತಾದ ಖ್ಯಾತನಾಮರ ಭಾವಚಿತ್ರಗಳನ್ನು ರಚಿಸಿದ್ದಾರೆ. ಸದ್ಯದಲ್ಲೇ ನೂರು ಭಾವಚಿತ್ರಗಳನ್ನು ಪೂರೈಸುವ ಇಚ್ಚೆ ಹೊಂದಿದ್ದಾರೆ.
ಎಂಎ ಮುಗಿಸಿರುವ ಪಾವನ ಅವರು ಸೂಕ್ತ ಉದ್ಯೋಗವನ್ನು ಅರಸುತ್ತಿದ್ದಾರೆ. ಬೈಲೂರು ಗ್ರಾಮ ನಿವಾಸಿ ಶ್ರೀಮತಿ ಗೀತಾ ಹಾಗೂ ಶ್ರೀ ಮಂಜಪ್ಪ ದಂಪತಿಗಳ ಮುದ್ದಿನ ತನುಜೆ ಪಾವನ ಅವರಿಗೆ ಆಸಕ್ತಿ ಇರುವ ಚಿತ್ರಕಲೆಯಲ್ಲಿ ವಿಪುಲವಾದ ಅವಕಾಶಗಳು ಪ್ರಾಪ್ತವಾಗಲಿ. ಅವರು ನೆಚ್ಚಿ ನಂಬಿ, ಪರಿಶ್ರಮದಿಂದ ಕಲಿತ ವ್ಯಕ್ತಿಚಿತ್ರ ಕಲೆಯಿಂದ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ.
Get In Touch With Us info@kalpa.news Whatsapp: 9481252093
Discussion about this post