ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೆಲಸ ನಿಮಿತ್ತ ಅಂಚೆ ಕಚೇರಿಗೆ ಬಂದಿದ್ದ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ದಾಖಲೆ ಹಾಗೂ ಹಣವಿದ್ದ ಪರ್ಸ್ ಹಿಂತಿರುಗಿಸುವ ಮೂಲಕ ನಗರದ ಮುಖ್ಯ ಅಂಚೆ ಕಚೇರಿ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ.
ಹೊಸಮನೆಯ ಬೋರಯ್ಯ ಎನ್ನುವವರು ಇಂದು ಮುಂಜಾನೆ ಕೆಲಸ ನಿಮಿತ್ತ ಮುಖ್ಯ ಅಂಚೆ ಕಚೇರಿಗೆ ಬಂದಿದ್ದರು. ತಮ್ಮ ಕೆಲಸ ಮುಗಿಸಿ ಹಿಂತಿಗುವ ವೇಳೆ ರೈಟಿಂಗ್ ಡೆಸ್ಕ್ ಮೇಲೆಯೇ ತಮ್ಮ ಪರ್ಸ್ ಮರೆತು ಹೋಗಿದ್ದಾರೆ.
ಇದೇ ಕಚೇರಿಯಲ್ಲಿ ತಾತ್ಕಾಲಿಕ ಅಟೆಂಡರ್ ಜಾರ್ಜ್ ಎನ್ನುವವರು ಈ ಪರ್ಸನ್ನು ಗಮನಿಸಿ ಪೋಸ್ಟ್ ಮಾಸ್ಟರ್ ವಿ. ಶಶಿಧರ್ ಅವರಿಗೆ ನೀಡಿದ್ದಾರೆ. ಇದನ್ನು ಇನ್ಸ್’ಪೆಕ್ಟರ್ ಪ್ರಹ್ಲಾದ್ ಅವರ ಸಮ್ಮುಖದಲ್ಲಿ ತೆರೆದು ನೋಡಿದಾಗ ಪರ್ಸ್’ನಲ್ಲಿ 5530 ರೂ. ಹಣ, ಡಿಎಲ್, ಆರ್’ಸಿ, ಪ್ಯಾನ್ ಕಾರ್ಡ್ ಸೇರಿದಂತೆ ಹಲವು ಮೂಲ ದಾಖಲೆಗಳಿದ್ದವು.
ಈ ವೇಳೆ ಪೋಸ್ಟ್ ಮ್ಯಾನ್ ಮಧುಸೂಧನ್ ಅವರ ಸಹಾಯದಿಂದ ಪರ್ಸ್ ಕಳೆದುಕೊಂಡ ವ್ಯಕ್ತಿ ಯಾರು ಎಂದು ಪತ್ತೆ ಮಾಡಿ, ಸಂಪರ್ಕಿಸಿದ್ದಾರೆ. ಬೋರಯ್ಯ ಮುಖ್ಯ ಅಂಚೆ ಕಚೇರಿಗೆ ಆಗಮಿಸಿ ಅದು ತಮ್ಮದೇ ಎಂದು ಸಾಬೀತು ಮಾಡಿದ ನಂತರ ಪೋಸ್ಟ್ ಮಾಸ್ಟರ್ ವಿ. ಶಶಿಧರ್ ಅವರು ಪರ್ಸ್‌ನ್ನು ಹಸ್ತಾಂತರಿಸಿದ್ದಾರೆ.
ಈ ವೇಳೆ ತಮ್ಮ ಸಂತಸ ವ್ಯಕ್ತಪಡಿಸಿದ ಬೋರಯ್ಯ ಅವರು, ಪೋಸ್ಟ್ ಮಾಸ್ಟರ್ ಹಾಗೂ ಅಂಚೆ ಇಲಾಖೆ ಸಿಬ್ಬಂದಿಗಳ ಪ್ರಾಮಾಣಿಕತೆಯಿಂದಾಗಿ ನನಗೆ ನನ್ನ ಪರ್ಸ್ ದೊರೆತಿದೆ. ಇವರುಗಳ ಸೇವೆಗಾಗಿ ಅಂಚೆ ಇಲಾಖೆಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093















