ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆವರ್ಸೆ ಗ್ರಾಮದಲ್ಲಿ ಇರುವ ಕಿರಾಡಿ ಸುಂದರ ಸಸ್ಯಗಳಿಂದ ಸಂಪದ್ಭರಿತ ಸಸ್ಯಕಾಶಿ, ಸದಾ ಜುಳು-ಜುಳು ನಿನಾದ ಮಾಡುತ್ತಾ ಹರಿಯುವ ಸೀತಾ ನದಿಯ ದಡ ಪ್ರದೇಶ. ಭತ್ತ, ಅಡಿಕೆ, ತೆಂಗು ಬೆಳೆದು ಸಂತೃಪ್ತಿಯ ಜೀವನ ನಡೆಸುತ್ತಿರುವ ಕೃಷಿಕರ ತವರೂರು. ಇಂತಹ ಕಿರಾಡಿಯಲ್ಲಿ ಹುಟ್ಟಿದ ಯಕ್ಷ ಲೋಕದ ಕೀರ್ತಿಯ ಕಿರೀಟದಂತೀರುವ ಯಕ್ಷ ಲೋಕದ ಧ್ರುವತಾರೆ, ಉದಯೋನ್ಮುಖ ಪ್ರತಿಭೆ ಕಿರಾಡಿ ಪ್ರಕಾಶ್ ಮೊಗವೀರ ಅವರ ಯಕ್ಷ ಚೈತ್ರ ಯಾತ್ರೆಯ ಬಗೆಗೆ ನನ್ನ ಈ ಲೇಖನದಲ್ಲಿ ತಿಳಿಸಲು ಪ್ರಯತ್ನಿಸುತ್ತೇನೆ.
ಯಕ್ಷಗಾನ ಇದು ಕರಾವಳಿ ಹಾಗೂ ಮಲೆನಾಡು ಭಾಗದ ಜನರ ಬದುಕಿನೊಂದಿಗೆ ಬೆರೆತು ಹೋದ ಕಲೆಯಿದು. ಟಿವಿ ಮೊಬೈಲ್ ಜಗತ್ತಿಗೆ ಪರಿಚಯವಾಗುದಕ್ಕೂ ಮೊದಲು ಜನರ ಮನಗೆದ್ದು ಮನೋರಂಜನೆಯೊಂದಿಗೆ ಜೀವನ ತತ್ವವನ್ನು ಸಾರಿದ ಕಲೆಯಿದು. ಹಾವಾ-ಭಾವ, ನಡೆ-ನುಡಿ, ಬೆಡಗು-ಬಿನ್ನಾಣ ರಾಗ ತಾಳ ಲಯ ಶೃತಿಬದ್ಧವಾಗಿ ನವರಸಗಳನ್ನೂ ಅತ್ಯಂತ ನಾಜೂಕಾಗಿ ಪ್ರಚುರಪಡಿಸುವ ಪರಮ ಶ್ರೇಷ್ಠ ಕಲೆಯಿದು.
ಪ್ರಕಾಶ್ ಅವರು ಚಿಕ್ಕ ಪ್ರಾಯದಲ್ಲಿ ಇರುವಾಗ ತಮ್ಮ ಊರಿನಲ್ಲಿ ನಡೆಯುವ ಯಕ್ಷಗಾನ ಬಯಲಾಟವನ್ನು ನೋಡಲು ತಮ್ಮ ಸಹೋದರಿಯ ಜೊತೆಗೆ ತೆರಳುತ್ತಿದ್ದರು. ನಾನು ಕೂಡ ಮುಂದೆ ಯಕ್ಷಗಾನಕ್ಕೆ ಸೇರಬೇಕು ರಂಗದಲ್ಲಿ ರಂಜಿಸುವ ಕಲಾವಿದನಾಗಬೇಕು ಎಂದು ಕನಸು ಕಾಣುತ್ತಿದ್ದರು. ರಾತ್ರಿ ರಂಗದಲ್ಲಿ ನೋಡಿದ ನೃತ್ಯವನ್ನು ಮನೆಗೆ ಬಂದು ಮನೆಯವರ ಮುಂದೆ ಮನಸ್ಸಿಗೆ ತೋಚಿದ ಹಾಗೆ ಕುಣಿದು ಕುಶಿ ಪಡುತ್ತಿದ್ದರು.
ಬಡತನ ಹಸಿವು ಜೀವನದಲ್ಲಿ ಕಲಿಸುವ ಪಾಠ ಇನ್ನಾವುದರಿಂದಲೂ ಕಲಿಯಲು ಸಾಧ್ಯವಿಲ್ಲ. ಕಿರಾಡಿಯವರ ತಂದೆ ನಾರಾಯಣ ಅವರು ಬೆಂಗಳೂರಿನಲ್ಲಿ ಪುಟ್ಟ ಹೋಟೆಲ್ ಒಂದನ್ನು ನಡೆಸುತ್ತಿದ್ದರು. ಕಿರಾಡಿಯವರು 3ನೆಯ ತರಗತಿಯ ತನಕ ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ದಿನ ಕಳೆದಂತೆ ಅಪ್ಪನ ಉದ್ಯಮ ಕುಂಟುತ್ತಾ ಸಾಗಿತು. ಆದಾಯವಿಲ್ಲದ ವ್ಯಾಪಾರಕನ್ನು ಅಲ್ಲಿಗೆ ಕೈ ಬಿಟ್ಟು ಕುಟುಂಬ ಸಮೇತ ಊರಿನ ಕಡೆ ಹೆಜ್ಜೆ ಹಾಕಿದರು. ಮಗನನ್ನು ಆವರ್ಸೆ ಶಾಲೆಗೆ ಸೇರಿಸಿದರು.
ಕಡು ಬಡತನದಲ್ಲಿ ಹುಟ್ಟಿದ ಕಿರಾಡಿಯವರು ಅಪ್ಪ ಅಮ್ಮನ ಕಷ್ಟಕ್ಕೆ ಹೆಗಲು ಕೊಡಬೇಕು ಎನ್ನುವ ಭಾವನೆ ಹೊಂದಿದ್ದರು. ತಂದೆಯೊಬ್ಬರ ದುಡಿಮೆಯಿಂದ ಸಂಸಾರದ ನೊಗ ಎಳೆಯಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡ ಕಿರಾಡಿಯವರು ವಿದ್ಯಾಭ್ಯಾಸದ ಕಡೆ ನಿರಾಸಕ್ತಿಯನ್ನು ತೋರಿ ಸಂಪಾದನೆಯ ಮಾರ್ಗ ಹಿಡಿಯಬೇಕು ಎಂದು ತನ್ನಿಷ್ಟ ಕಲೆ ಯಕ್ಷಗಾನದತ್ತ ಆಸಕ್ತಿ ವಹಿಸಿದರು.
ಕಿರಾಡಿಯವರ ತಾಯಿ ಕೂಲಿ ಕೆಲಸಕ್ಕೆ ಹೋಗಲು ಆರಂಭಿಸಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊರುತ್ತಾರೆ. ಕಿರಾಡಿಯವರಿಗೆ ಶಾಲೆ ಬಿಟ್ಟು ನೇರವಾಗಿ ಯಕ್ಷಗಾನಕ್ಕೆ ಸೇರುವ ಹಾಗಿರಲಿಲ್ಲ. ಯಾಕೆಂದರೆ ಕಿರಾಡಿಯವರಿಗೆ ಅವರ ತಾಯಿ ಒಂದು ಮಾತು ಕೊಟ್ಟಿದ್ದರು. ಎಷ್ಟೇ ಕಷ್ಟ ಬರಲಿ ನಾನು ಒಂದು ಹೊತ್ತು ಊಟ ಮಾಡಿಲ್ಲ ಅಂದ್ರು ಪರವಾಗಿಲ್ಲ. ನೀನು ಎಷ್ಟು ಓದುತ್ತಿಯೋ ಅಷ್ಟು ನಾನು ಓದಿಸುತ್ತೇನೆ ಅಂತ ಹೇಳಿದ್ದರು.
ಕಿರಾಡಿಯವರು 7ನೆಯ ತರಗತಿ ಓದುತ್ತಿದ್ದಾಗ ಹೇಗಾದರೂ ಮಾಡಿ ಅಮ್ಮನ ಮನ ಒಲಿಸಬೇಕು, ಅಪ್ಪನ ಕಷ್ಟಕ್ಕೆ ಹೆಗಲು ಕೊಡಬೇಕು ಎಂದು ಯೋಚಿಸುತ್ತಿದ್ದರು. ಇದಕ್ಕೆ ಏನಾದರೂ ಒಂದು ಉಪಾಯ ಮಾಡಬೇಕು ಎಂದು ಕಿರಾಡಿಯವರು ತಾವು ಆವರ್ಸೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ನಾನು ಫೇಲಾದೆ ಅಂಥ ಅಮ್ಮನ ಬಳಿ ಸುಳ್ಳು ಹೇಳಿದ್ದರು. ನಿಜವಾಗಿ ಕಿರಾಡಿಯವರು ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅಂದು ಕಿರಾಡಿಯವರು ತಮ್ಮ ತಂದೆತಾಯಿಯವರಿಗೆ ಹೇಳಿದ ಒಂದು ಸುಳ್ಳು ಅವರ ಬದುಕಿನ ಪಥವನ್ನು ಬದಲಾಯಿಸಿ ಬಿಟ್ಟಿತು. ಅಂದಿನಿಂದ ಕಿರಾಡಿಯವರ ಯಕ್ಷಲೋಕದ ಪಯಣ ಆರಂಭಗೊಂಡಿತು.
ಕಿರಾಡಿಯವರು ಹಿತೈಷಿಯಾದ ಬಾರಾಳಿ ರಮೇಶ್ ಎನ್ನುವವರ ಸಹಾಯದಿಂದ ಇಂದ್ರಾಳಿಯ ಯಕ್ಷಗಾನ ಕಲಾ ಕ್ಷೇತ್ರವನ್ನು ಸೇರಿಕೊಂಡರು. ಕಿರಾಡಿಯವರು ಕಲಾ ಕೇಂದ್ರಕ್ಕೆ ಹೋದಾಗ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ನಗರ ಸುಬ್ರಹ್ಮಣ್ಯ ಆಚಾರ್ಯ ಅವರ ಬಳಿ ನಾಟ್ಯ ತಾಳ ಅಭ್ಯಾಸ ಮಾಡಲು ಆರಂಭಿಸಿದರು. ಬಳ್ಳಿಯೊಂದು ಅಂಬರಕ್ಕೆ ಮುತ್ತಿಕ್ಕಬೇಕು ಎನ್ನುವ ಹಂಬಲ ಹೊತ್ತು ಬೆಳೆಯುವಾಗ ಮಾಮರವೊಂದು ನೆರವಿಗೆ ನಿಂತ ಹಾಗೆ ಕಿರಾಡಿಯವರ ಯಕ್ಷಗಾನದ ಹಸಿವನ್ನು ನೀಗಿಸಲು ಯೋಗ್ಯ ಗುರುಗಳು ದೊರಕಿದರು. ಕಿರಾಡಿಯವರು ಕಲಾ ಕೇಂದ್ರದಲ್ಲಿ ಯಕ್ಷ ಕಲಾಕೃಷಿ ಮಾಡಿ ಎಲ್ಲಾ ಭಂಗಿಯ ನಾಟ್ಯಗಳನ್ನು ಕಲಿತು ರಂಗಭೂಮಿಗೆ ಪಾದಾರ್ಪಣೆ ಮಾಡಲು ಸಕಲ ವಿಧದಲ್ಲೂ ಸಿದ್ಧಗೊಂಡರು.
ಉಡುಪಿ ಕಲಾ ಕೇಂದ್ರದಲ್ಲಿ ಬಾಲ ಕಲಾವಿದನಾಗಿ ರೂಪುಗೊಂಡ ಕಿರಾಡಿಯವರು ತಮ್ಮ ಯಕ್ಷ ಜೀವನದ ಚೈತ್ರಯಾತ್ರೆಯನ್ನು ಆರಂಭಿಸಲು ಆಯ್ದುಕೊಂಡದ್ದು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಂದರ್ತಿ ಮೇಳವನ್ನು. ಆರಂಭದಲ್ಲಿ ಕಿರಾಡಿಯವರು ಬಾಲಗೋಪಾಲ, ದೇವೇಂದ್ರ, ರಕ್ಕಸ ಹೀಗೆ ಅನೇಕ ಪೋಷಕ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಬಬ್ರುವಾಹನ, ವತ್ಸಾಖ್ಯ, ಧರ್ಮಂಗದ, ಕುಶ-ಲವ, ವೃಷಸೇನ, ಸುಧನ್ವ, ಅರ್ಜುನ ಹೀಗೆ ಅನೇಕ ಪುಂಡು ವೇಷಗಳನ್ನು ಕಿರಾಡಿಯವರು ಅತ್ಯಂತ ಚಾಕಚಕ್ಯತೆಯಿಂದ ನಿರ್ವಹಿಸಿ ಯುವ ಕಲಾವಿದನಾಗಿ ಗುರುತಿಸಿಕೊಂಡರು. ಸದಾ ಪುಂಡು ವೇಷ ಮಾಡುವ ಕಿರಾಡಿ ಮದನಾಕ್ಷಿ ತಾರವಳಿಯಂತಾ ಕಶಿ ವೇಷವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕಿರಾಡಿಯವರು ಮಂದರ್ತಿ ಮೇಳದಲ್ಲಿ 4 ವರ್ಷ ಯಶಸ್ವಿ ತಿರುಗಾಟ ಮುಗಿಸಿ, ಸಾಲಿಗ್ರಾಮ ಮೇಳದ ರಂಗಸ್ಥಳದಲ್ಲಿ 3 ವರ್ಷ ರಂಜಿಸಿ, ಹಿರಿಯಡ್ಕ ಮೇಳದಲ್ಲಿ 1 ವರ್ಷ ಕಲಾಸೇವೆ ಮಾಡಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ನಂತರ ಪೆರ್ಡೂರು ಮೇಳಕ್ಕೆ ಕಿರಾಡಿಯವರು ಪಾದಾರ್ಪಣೆ ಮಾಡಿದರು. ಪೆರ್ಡೂರು ಮೇಳದಲ್ಲಿ 8 ವರ್ಷಗಳ ಕಾಲ ಯಶಸ್ವಿ ತಿರುಗಾಟ ಮುಗಿಸಿ, ಪ್ರಸ್ತುತ ಪೆರ್ಡೂರು ಮೇಳದಲ್ಲೇ ತಮ್ಮ ಕಲಾಸೇವೆಯನ್ನು ಮುಂದುವರಿಸಲಿದ್ದಾರೆ. ಕಳೆದ ಹದಿನಾರು ವರ್ಷಗಳಿಂದ ಕಿರಾಡಿಯವರು ತಮ್ಮನ್ನು ಯಕ್ಷಗಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಕಿರಾಡಿಯವರ ನೃತ್ಯ, ಮಾತುಗಾರಿಕೆ, ಯಕ್ಷಗಾನಕ್ಕೆ ಹೊಸತನವನ್ನು ತರಬೇಕು ಎನ್ನುವ ಹಂಬಲ ಅವರನ್ನು ಯಶಸ್ವಿ ಕಲಾವಿದನಾಗಿ ರೂಪಿಸಿದೆ. ಪ್ರೊ. ಪವನ್ ಕಿರಣಕೆರೆ ಅವರು ನಿರ್ದೇಶನದಲ್ಲಿ ಮೂಡಿಬಂದ ಶಂಕರಾಭರಣ ಪ್ರಸಂಗದಲ್ಲಿ ಹೇಮಾ ಸಾಗರ ಎನ್ನುವ ಪಾತ್ರವನ್ನು ಕಿರಾಡಿಯವರು ನಿರ್ವಹಿಸಿದ್ದರು. ಕಿರಾಡಿಯವರು ನಿರ್ವಹಿಸಿದ ಆ ಪಾತ್ರ ಅಪಾರವಾದ ಜನ ಮೆಚ್ಚುಗೆಯನ್ನು ಗಳಿಸಿ ಕಿರಾಡಿಯವರಿಗೆ ಅಪಾರ ಗೌರವವನ್ನು ತಂದು ಕೊಟ್ಟಿತು. ಬಡಗಿನ ಪ್ರಸಿದ್ಧ ಮೇಳಗಳಲ್ಲಿ ಒಂದಾದ ಪೆರ್ಡೂರು ಮೇಳದಲ್ಲಿ ಕಿರಾಡಿಯವರಿಗೆ ಭದ್ರ ನೆಲೆ ಸಿಕ್ಕಿತು.
ಪ್ರಸ್ತುತ ಪೆರ್ಡೂರು ಮೇಳದಲ್ಲಿ ವೃತ್ತಿ ಜೀವನ ನಡೆಸುತ್ತಿರುವ ಪ್ರಕಾಶ್ ಅವರು ಸಾಧನೆಯ ಮೆಟ್ಟುಲುಗಳನ್ನು ಏರುತ್ತಿದ್ದಾರೆ. ರಂಗಸ್ಥಳದ ಕೋಲ್ಮಿಂಚು ಎಂದು ಕರೆಸಿಕೊಂಡ ಕಿರಾಡಿ ರಂಗದಲ್ಲಿ ಮಿಂಚುತ್ತಿದ್ದಾರೆ. ಕಿರಾಡಿ ನಮ್ಮ ಊರಿನ ಹೆಮ್ಮೆಯ ಕಲಾವಿದ ಎನ್ನುವುದಕ್ಕೆ ನಮಗೆಲ್ಲಾ ಅತೀವ ಹೆಮ್ಮೆಯಾಗುತ್ತಿದೆ.
ಕಿರಾಡಿಯವರು ವಯಸ್ಸಿನಲ್ಲಿ ಚಿಕ್ಕವರಿರಬಹುದು. ಆದರೆ ಅವರು ಮಾಡಿರುವ ಸಾಧನೆ ಚಿಕ್ಕದಲ್ಲ. ಈ ಗೆಲುವಿಗಾಗಿ ಸಾವಿರಾರು ಬೆವರಿನ ಹನಿ ಸುರಿಸಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿಲ್ಲ. ಕಿರಾಡಿಯವರ ಈ ಯಶಸ್ಸಿನ ಹಿಂದೆ ನಿರಂತರ ಪರಿಶ್ರಮವಿದೆ. ಅದೇಷ್ಟೋ ರಾತ್ರಿ ನಿದ್ದೆ ಬಿಟ್ಟು ಕಲಾ ಸೇವೆ ಮಾಡಿದ ಶ್ರಮವಿದೆ. ಪ್ರತಿಯೊಬ್ಬ ಕಲಾವಿದನಲ್ಲೂ ಇರುವ ಒಂದೊಂದು ಗುಣಗಳನ್ನು ಕಲಿತು ಅದನ್ನು ತನ್ನಲ್ಲಿ ಅಳವಡಿಸಿಕೊಂಡು ನಾನು ಅವರಂತೆ ಆಗಬೇಕು ಎನ್ನುವ ಹಠ ಇರುವುದರಿಂದ ಕಿರಾಡಿ ಇಂದು ಗುರುತಿಸಿಕೊಳ್ಳುವ ಮಟ್ಟಕ್ಕೆ ಬಂದಿರುವುದು.
ಒಬ್ಬ ಯಕ್ಷಗಾನ ಕಲಾವಿದನಿಗೆ ರೂಪ, ನೃತ್ಯ, ವಾಕ್ಚಾತುರ್ಯ ಬಹುಮುಖ್ಯವಾದ ಅರ್ಹತೆಗಳು. ಕಿರಾಡಿಯವರಿಗೆ ದೈವದತ್ತವಾಗಿ ಈ ಮೂರು ಗುಣಗಳು ಒಲಿದು ಬಂದಿದೆ. ಕಿರಾಡಿ ಒಬ್ಬ ಪರಿಪೂರ್ಣ ಕಲಾವಿದ ಯಾಕೆಂದರೆ ಕಥಾ ನಾಯಕಕನೇ ಇರಲಿ, ಖಳ ನಾಯಕನೇ ಇರಲಿ, ಪೋಷಕ ಪಾತ್ರವೇ ಆಗಿರಲಿ, ಪುಂಡು ವೇಷವೇ ಆಗಿರಲಿ, ಎಲ್ಲಾ ತರದ ಪಾತ್ರಗಳನ್ನು ನಿರ್ವಹಿಸುವ ಯೋಗ್ಯತೆ ಇರುವ ಯುವ ಕಲಾವಿದ ಪೈಕಿ ಅಗ್ರಗಣ್ಯ ಕಲಾವಿದ ಕಿರಾಡಿ ಪ್ರಕಾಶ ಎನ್ನುವುದು ಯಕ್ಷಗಾನ ಅಭಿಮಾನಿಗಳ ಅಂಬೋಣ.
ಕಿರಾಡಿ ರಂಗದಲ್ಲಿ ಅಭಿನಯಿಸುವ ಪಾತ್ರದಾರಿ. ಆದರೆ ಅವರನ್ನು ನಿರ್ದೇಶಿಸುವ ಸೂತ್ರದಾರಿ ಪವನ್ ಕಿರಣ್ ಅವರು ಎನ್ನುವುದು ಕಿರಾಡಿಯವರ ಮಾತು. ಪವನ್ ಸರ್ ನನ್ನ ಬದುಕಿಗೆ ಹೊಸ ತಿರುವು ನೀಡಿದರು. ಇವತ್ತು ಕಿರಾಡಿಯ ಹೆಸರು 4 ಜನರಿಗೆ ಗೊತ್ತಿದೆ ಅಂದರೆ ಅದು ಪವನ್ ಕಿರಣ್ ಸರ್ ಅವರ ಅನುಗ್ರಹ ಹಾಗೂ ಆಶೀರ್ವಾದ ಎಂದು ಹೇಳುತ್ತಾರೆ ಕಿರಾಡಿಯವರು. ಪೌರಾಣಿಕ ಪಾತ್ರವಿರಲಿ ಸಾಮಾಜಿಕ ಪಾತ್ರವಿರಲಿ ಕಿರಾಡಿಯವರು ನಿರ್ವಹಿಸುವ ಎಲ್ಲಾ ಪಾತ್ರಗಳನ್ನು ತೆರೆಯ ಮರೆಯಲ್ಲಿ ನಿರ್ದೇಶಿಸುವವರು ಪವನ್ ಕಿರಣ್ ಅವರು ಎನ್ನುವ ವಿಚಾರವನ್ನು ಕಿರಾಡಿಯವರು ಅತ್ಯಂತ ಖುಷಿಯಿಂದ ಹೇಳಿಕೊಳ್ಳುತ್ತಾರೆ. ಜನ್ಮ ಕೊಟ್ಟ ಅಮ್ಮ, ಮೇಳದಲ್ಲಿ ಅವಕಾಶ ಕೊಟ್ಟು ಅನ್ನ ಕೊಡುತ್ತಿರುವ ದನಿಗಳಾದ ವೈ ಕರುಣಾಕರ್ ಶೆಟ್ಟಿಯವರು, ಗುರುವಾಗಿ ಮಾರ್ಗದರ್ಶನ ನೀಡುತ್ತಿರುವ ಪವನ್ ಕಿರಣ್ ಕೆರೆಯಾವರು, ಕೇಂದ್ರದ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ನಗರ ಸುಬ್ರಹ್ಮಣ್ಯ ಆಚಾರ್ಯ ನನ್ನ ಜೀವನದಲ್ಲಿ ಸಿಕ್ಕ ಅಮೂಲ್ಯ ರತ್ನಗಳು ಎನ್ನುವುದು ಕಿರಾಡಿಯವರ ಅಭಿಪ್ರಾಯ.
ಯಾವ ಹಿರಿಯ ಕಲಾವಿದರು ನಿಮಗೆ ಮಾದರಿ, ಯಾರನ್ನು ನೀವು ಅನುಸರಿಸುತ್ತೀರಿ ಎನ್ನುವ ಪ್ರಶ್ನೆಗೆ, ಗೋಪಾಲ್ ಆಚಾರ್ಯ, ಕೃಷ್ಣಯ್ಯ ಯಾಜಿ, ಈಶ್ವರ್ ನಾಯ್ಕ್ ಮಂಕಿ, ಕಣ್ಣಿಮನೆ ಗಣಪತಿ ಭಟ್ ಹೀಗೆ ಪ್ರತಿಯೊಬ್ಬ ಕಲಾವಿದರು ನನಗೆ ಮಾದರಿ ನಾನು ಪ್ರತಿಯೊಬ್ಬರಿಂದಲೂ ಒಂದೊಂದು ನಡೆಯನ್ನು ಕಲಿತಿದ್ದೇನೆ ಅವರೆಲ್ಲರಿಗೂ ನಾನು ಚಿರಋಣಿ ಎಂದು ಕಿರಾಡಿಯವರು ಹೇಳುತ್ತಾರೆ. ಯಕ್ಷರಂಗದ ಪಾದರಸ ಎಂದು ಕರೆಸಿಕೊಂಡ ಚುರುಕು ನಡೆಯ ಪೆರ್ಡೂರು ಮೇಳದ ಯುವ ಕಲಾವಿದ ಪ್ರಕಾಶ ಮೊಗವೀರ ಇವರಿಗೆ ಕೋಟೇಶ್ವರದಲ್ಲಿ ನಡೆದ ಸಮಾರಂಭದಲ್ಲಿ 2018ರ ಸಾಲಿನ ಯಕ್ಷೋತ್ಸವ ಪ್ರಶಸ್ತಿ ನೀಡಲಾಯಿತು. ಅನೇಕ ಕಡೆ ಸಾರ್ವಜನಿಕ ಸನ್ಮಾನ ಮಾಡಿ ಬೆಳೆಯುತ್ತಿರುವ ಯುವ ಕಲಾವಿದನಿಗೆ ಗೌರವಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಕಲೆಯ ಜೀವಾಳವನ್ನು ತಿಳಿದು ಯಕ್ಷಗಾನ ಕಲೆಯಲ್ಲಿ ತಮ್ಮ ಬದುಕನ್ನು ಕಂಡುಕೊಳ್ಳುತ್ತಿರುವ ನೀವು ಯುವ ಕಲಾವಿದರಿಗೆ ದಾರಿ ದೀಪವಾಗಿ, ಕಲಾ ಮಾತೆಯ ಕೀರ್ತಿಯ ಕಿರೀಟಕ್ಕೆ ಹೊನ್ನ ಕಲಶವಾಗಿರಿ. ನಿಮ್ಮನ್ನು ಅತಿಯಾಗಿ ಪ್ರೀತಿಸುವ ಅಭಿಮಾನಿಗಳ ಅಭಿಮಾನದ ಶ್ರೀ ರಕ್ಷೆ ಸದಾ ನಿಮ್ಮ ಮೇಲಿರಲಿ. ಕಲಾ ಸೇವೆಗೆ ಮುಡುಪಾಗಿಟ್ಟ ನಿಮ್ಮ ಜೀವನದಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನಲಿದಾಡುತಿರಲಿ. ಜಗಮೆಚ್ಚುವ ಕಲಾವಿದ ನೀವಾಗಿ, ಕಲಾ ಮಾತೇ ಮಂದರ್ತಿ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹ ನಿಮಗಿರಲಿ, ಎನ್ನುವುದು ನಮ್ಮೆಲ್ಲರ ಹರಕೆ ಹಾಗೂ ಹಾರೈಕೆ. ಶುಭವಾಗಲಿ.
ಲೇಖನ: ಗೌರೀಶ್ ಆವರ್ಸೆ
Discussion about this post