ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ರಾಮಸ್ವಾಮಿ ಕಳಸವಳ್ಳಿ |
ಇದು ಅಮೃತ ಗಳಿಗೆ ಎನ್ನಲು ಸಂತೋಷವಾಗುತ್ತಿದೆ. ಸೇತುವೆ ಅನ್ನುವುದು ಹಗಲುಗನಸು ಎಂದುಕೊಂಡಿದ್ದ ಶರಾವತಿ ಹಿನ್ನೀರ ಜನತೆ ತಮ್ಮ ಮೈಯ ಚಿವುಟಿ ನೋಡಿ ಇದು ಕನಸಲ್ಲ ನನಸು ಎಂದುಕೊಳ್ಳುವ ಸಮಯ. ಇನ್ನೇನು ಸದ್ಯದಲ್ಲೇ ಕಳಸವಳ್ಳಿ- ಅಂಬಾರಗೊಡ್ಲು ಬೃಹತ್ ಸೇತುವೆ ಜನಸಂಚಾರಕ್ಕೆ ಮುಕ್ತವಾಗಲಿದೆ.
ಈ ಸೇತುವೆ ರಾಜ್ಯದಲ್ಲಿಯೇ ಅತಿ ಉದ್ದವಿರುವ ಎರಡನೆ ಸೇತುವೆ ಎಂದು ಗುರುತಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನಿರ್ಮಾಣವಾದ ಈ ಸೇತುವೆ 2.16 ಕಿ.ಮೀ ಉದ್ದವಿದೆ. ಈ ಸೇತುವೆಯ ವೆಚ್ಚ 456.6 ಕೋಟಿ. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಈ ಸೇತುವೆ ಹೊಸ ತಂತ್ರಜ್ಞಾನದಿಂದ ಕೂಡಿದ್ದು ಇದನ್ನು “ಎಕ್ಸ್ಟ್ರಾಡೋಸಡ್ ಬ್ಯಾಲೆನ್ಸಡ್ ಕ್ಯಾಂಟಿಲಿವರ್ ಕೇಬಲ್ ಸ್ಟೇಯ್ಡ್ ಸೇತುವೆ” ಎಂದು ಕರೆಯುತ್ತಾರೆ. 16 ಮೀಟರ್ ಅಗಲವಿರುವ ಈ ಸೇತುವೆಯ ಎರಡು ಬದಿಯಲ್ಲಿ ಪಾದಚಾರಿ ರಸ್ತೆ ನಿರ್ಮಿಸಲಾಗಿದೆ. 12 ಮೀಟರ್ ಅಗಲದ 604 ಸೆಗ್ಮೆಂಟುಗಳನ್ನು ಇದಕ್ಕಾಗಿಯೇ ಜೋಡಿಸಲಾಗಿದೆ. ಈ ಸೇತುವೆ ನಿರ್ಮಿಸಲೋಸುಗವೇ ಇದನ್ನು ರಾಷ್ಟ್ರೀಯ ಹೆದ್ದಾರಿ -369E ಎಂದು ಘೋಷಿಸಲಾಗಿದೆ. ಇದರಿಂದ ಪ್ರಸಿದ್ದ ಯಾತ್ರಾ ಸ್ಥಳವಾದ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ನೀರ ಮೇಲೆ ಲಾಂಚಿನ ಮೂಲಕ ಹೋಗುವ ತಾಪತ್ರಯಕ್ಕೆ ಮುಕ್ತಿ ಸಿಕ್ಕಂತಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಶಿವಮೊಗ್ಗಕ್ಕೆ ಹತ್ತಿರವಾಗಲಿದೆ.
ಸುಮಾರು ಮೂವತ್ತು ಸಾವಿರ ಜನಸಂಖ್ಯೆ ಇರುವ ಶರಾವತಿ ನದಿಯ ಎಡದಂಡೆಯಿದು. 1945 ರಲ್ಲಿ ಮಡೆನೂರು ಎಂಬ ಅಣೇಕಟ್ಟಿನಿಂದ ಪರ್ಯಾಯ ದ್ವೀಪವಾದ ಕರೂರು ಹಾಗೂ ಬಾರಂಗಿ ಹೋಬಳಿ ಮತ್ತೆ 1965 ರಲ್ಲಿ ಲಿಂಗನಮಕ್ಕಿ ಅಣೇಕಟ್ಟಿನಿಂದಾಗಿ ಮತ್ತಷ್ಟು ಸಂಕಟಕ್ಕೆ ತಳ್ಳಲ್ಪಟ್ಟತ್ತು. 50 ಕಿ.ಮೀ ದೂರದ ತಾಲ್ಲೂಕು ಕೇಂದ್ರ ತಲುಪಲು ಮೊದಮೊದಲು ದೋಣಿ ನಂತರ ಲಾಂಚಿನ ಮೂಲಕ ಹಿನ್ನೀರನ್ನು ದಾಟಿ ಬರಬೇಕಿತ್ತು. ಇದರಿಂದಾಗಿ ಅಲ್ಲಿನ ಜನ ವಿದ್ಯಾಭ್ಯಾಸ, ಆರೋಗ್ಯದ ವಿಚಾರಗಳಲ್ಲಿ ತುಂಬಾ ಸಂಕಟಪಡುವ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನವರ ಈ ಕರಿನೀರ ಶಿಕ್ಷೆಗೆ ಮುಕ್ತಿಯೆಂದರೆ ಸೇತುವೆ ನಿರ್ಮಾಣ ಮಾತ್ರವಾಗಿತ್ತು.ರಾಜ್ಯ ಸರ್ಕಾರ ಹಾಗೂ ಕೆಪಿಸಿ ಅಣೇಕಟ್ಟಿನಿಂದ ಕಡಿಮೆ ವೆಚ್ಚದಲ್ಲಿ ಜಲ ವಿದ್ಯುತ್ ಉತ್ಪಾದಿಸಿ ಕೋಟಿ ಕೋಟಿ ಲಾಭ ಪಡೆಯುತ್ತಿದ್ದು ಇಲ್ಲಿಯ ಜನರಿಗೆ ಮೂಲಭೂತ ಸೌಕರ್ಯವಾದ ಸೇತುವೆ ನಿರ್ಮಿಸುವುದು ಅವರ ಕರ್ತವ್ಯವಾಗಿತ್ತು. ನಾಡಿಗೆ ಬೆಳಕು ನೀಡಲು ಇಲ್ಲಿನ ಜನತೆ ಮಾಡಿದ ತ್ಯಾಗ ಬೆಲೆಕಟ್ಟಲು ಅಸಾಧ್ಯ. ಹಿನ್ನೀರಿನ ಜನಕ್ಕೆ ಅತಿ ಅವಶ್ಯವಾದ ಸೇತುವೆ ವಿಚಾರದಲ್ಲಿ ಲಾಭ ನಷ್ಟದ ಲೆಕ್ಕಾಚಾರ ಒಂದು ಮಾನವೀಯ ಕ್ರೌರ್ಯ. ಇಲ್ಲಿ ಸೇತುವೆ ನಿರ್ಮಿಸುವುದು ಅತೀ ವೆಚ್ಚದಾಯಕ ಎಂದು ರಾಜ್ಯ ಸರ್ಕಾರ ತೀರ್ಮಾನಿಸಿಯಾಗಿತ್ತು.
ಆಗುವುದೇ ಇಲ್ಲ ಎಂದಿದ್ದನ್ನು ಆಗಿಸಿದ ಕೀರ್ತಿ ನಿಜಕ್ಕೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಬೇಕು. ಹಾಗೆ ನೋಡಿದರೆ ಅವರು ಶಿವಮೊಗ್ಗ ಜಿಲ್ಲೆಯವರಾದರೂ ಸಾಗರ ತಾಲ್ಲೂಕಿನವರಲ್ಲ. ಸಾಗರದವರೇ ಆದ ಕಾಗೋಡು ತಿಮ್ಮಪ್ಪನವರು ಪ್ರಭಾವಿ ಮಂತ್ರಿಗಳಾಗಿದ್ದವರು. ಸೇತುವೆಗಾಗಿ ರಾಜ್ಯ ಸರ್ಕಾರದೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಸಿದ್ದು ಹೌದು. ಆದರೆ ಸೇತುವೆಯ ಬೇಡಿಕೆ ಬೇಡಿಕೆಯಾಗಿಯೇ ಉಳಿಯಿತು.
ಹೀಗಿದ್ದೂ ಕಳಸವಳ್ಳಿ- ಅಂಬಾರಗೊಡ್ಲು ಆ ಸ್ಥಳದಲ್ಲಿಯೇ ಸೇತುವೆಯಾಗಬೇಕು ಎನ್ನುವ ಹಟದಲ್ಲಿ ಅಸಾಧ್ಯವಾಗಿದ್ದನ್ನು ಸಾಧ್ಯವಾಗಿಸಲು ಇನ್ನಿಲ್ಲದ ಶ್ರಮ ಹಾಕಿದವರೇ ಪ್ರಸನ್ನ ಕೆರೆಕೈ.
ಪ್ರಸನ್ನ ಕೆರೆಕೈ ಇವರಿಗೆ ಯಾವ ರಾಜಕೀಯ ಹಿನ್ನಲೆಯೂ ಇಲ್ಲ. ಒಬ್ಬ ಸಾಮಾನ್ಯ ಶಿಕ್ಷಕನ ಮಗನಾಗಿ, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಇದನ್ನು ಸಾಧಿಸಿದ್ದಾರೆ. ಅವರ ಪ್ರಯತ್ನದ ಹಾದಿಯನ್ನು ಅವಲೋಕಿಸಿದಾಗ ಕಂಡದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಿದರೆ ಮಧ್ಯೆ ಬರುವ ಈ ಹಿನ್ನೀರಿಗೆ ಸೇತುವೆ ಆಗಬಹುದು ಎಂದು ದಾಖಲೆಗಳನ್ನು ಸಂಗ್ರಹಿಸಿ 2005 ರಲ್ಲಿ ಕಾಗೋಡು ತಿಮ್ಮಪ್ಪನವರೊಂದಿಗೆ ಬೆಂಗಳೂರಿಗೆ ಬಂದಿದ್ದ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಮನವಿಯನ್ನು ಕೊಟ್ಟಿದ್ದರು. ಅದು ಕೈಗೂಡಲಿಲ್ಲ.
ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದ ಕಾಲ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಪ್ರಸನ್ನ ಸೇತುವೆಗಾಗಿ ವಾರಕ್ಕೊಂದು ಬಾರಿ ವಿಧಾನಸೌಧಕ್ಕೆ ದೌಡಾಯಿಸುತ್ತಿದ್ದರು.ಸೇತುವೆಗೆ ಬೇಕಾದ ವಿಷಯಗಳೆಲ್ಲವನ್ನೂ ಸಂಗ್ರಹಿಸಿ ಯಡಿಯೂರಪ್ಪನವರ ಗಮನಕ್ಕೆ ತಂದರು.ತಾತ್ವಿಕವಾಗಿ ಯಡಿಯೂರಪ್ಪನವರು ಈ ಬೃಹತ್ ಕಾರ್ಯಕ್ಕೆ ಒಪ್ಪಿಗೆ ಕೊಟ್ಟರು. ಫೈಲು ತಯಾರಾಯಿತು. ಸರ್ಕಾರದ ಕೆಲಸವೇ ಹಾಗೆ. ಸುಮ್ಮನೆ ಒಂದು ಫೈಲೂ ಚಲಿಸುವುದಿಲ್ಲ. ಅದನ್ನು ಬೆನ್ನಟ್ಟಬೇಕು. ಸೇತುವೆಯ ಫೈಲು ಯಾವ ಹಂತದಲ್ಲಿದೆ, ಯಾವ ಅಧಿಕಾರಿ ಅದಕ್ಕೆ ಅಡ್ಡಬರುತ್ತಿದ್ದಾರೆ, ಅವರಿಗೆ ಯಾವ ರಾಜಕಾರಣಿಯಿಂದ ಬಿಸಿ ಮುಟ್ಟಿಸಬೇಕು. ಎಂಬ ಎಲ್ಲಾ ವಿಷಯಗಳನ್ನು ನಿರ್ವಹಿಸುತ್ತಿದ್ದರು. ಅದಕ್ಕಾಗಿ ಯಾರಿಂದಲೂ ಹಣ ಪಡೆಯಲಿಲ್ಲ.ತನ್ನ ದುಡಿಮೆಯ ಹಣವನ್ನೇ ವ್ಯಯಸಿದರು. ಅವರ ಗುರಿ ಒಂದೆ, ಶರಾವತಿ ಹಿನ್ನೀರ ಸಂತ್ರಸ್ತರಿಗೆ ಸೇತುವೆಯನ್ನು ಮಾಡಿಸಲೇ ಬೇಕೆಂಬುದು. ಅವರ ನಂಬುಗೆ, ಪ್ರಯತ್ನ ಹುಸಿಯಾಗಲಿಲ್ಲ. 2008ರ ಬಜೆಟ್ಟಿನಲ್ಲಿ ಯಡಿಯೂರಪ್ಪನವರು ಹೊಳೆಬಾಗಿಲಿನ ಸೇತುವೆಯನ್ನು ಘೋಷಿಸಿಯೇ ಬಿಟ್ಟರು.ಅವರ ನಂತರ ರಾಜಕೀಯ ಸ್ಥಿತ್ಯಂತರದಲ್ಲಿ ಸೇತುವೆಗೆ ಹಣ ಬಿಡುಗಡೆಯಾಗದೇ ಅದು ಸಾಕಾರಗೊಳ್ಳಲಿಲ್ಲ.
ಪ್ರಸನ್ನ ಹಠ ಬಿಡಲಿಲ್ಲ. 2012ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ಮೊಟ್ಟಮೊದಲ ಬಾರಿಗೆ ಕರೂರು ಸೀಮೆಯ ಜನರನ್ನು ಸಂಘಟಿಸಿ ನಡೆಸಿದ ಪ್ರತಿಭಟನೆ, ಅಲ್ಲಿ ಯಡಿಯೂರಪ್ಪನವರು, ಕಾಗೋಡು ತಿಮ್ಮಪ್ಪನವರು ಭಾಗವಹಿಸಿದ್ದು ಇವೆಲ್ಲ ಪ್ರಸನ್ನರ ನೇತೃತ್ವದ ಸೇತುವೆ ಆಗಬೇಕೆಂಬ ಹಕ್ಕೊತ್ತಾಯದ ಚಳುವಳಿಯ ಭಾಗಗಳು.
2014 ರಲ್ಲಿ ಹಮ್ಮಿಕೊಂಡ ಹೊಳೆಬಾಗಿಲಿನಿಂದ ಸಾಗರದವರೆಗಿನ ಯಶಸ್ವಿ ಪಾದಯಾತ್ರೆಗೆ ಪ್ರಸನ್ನ ಎಲ್ಲ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು “ಸೇತುವೆ- ನಮ್ಮ ಹಕ್ಕು, ನಾವು ಕೇಳುವ ಭಿಕ್ಷೆಯಲ್ಲ” ಎಂಬ ಘೋಷಣೆಯೊಂದಿಗೆ ಸ್ಥಳೀಯರೆಲ್ಲರನ್ನು ಒಗ್ಗೂಡಿಸಿ ಸಿಗಂದೂರು ರಾಮಪ್ಪನವರ ಮುಂದಾಳತ್ವದಲ್ಲಿ ನಡೆಸಿದ್ದು ಅದರಲ್ಲಿ ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ,ಮಲ್ಲಿಕಾರ್ಜುನ ಹಕ್ರೆ ಮುಂತಾದವರು ಭಾಗವಹಿಸಿದ್ದು ಇವೆಲ್ಲದರ ರೂವಾರಿ ಪ್ರಸನ್ನ ಕೆರೆಕೈ.
ಈ ಯೋಜನೆ ರಾಜ್ಯ ಸರ್ಕಾರಕ್ಕೆ ದೊಡ್ಡ ವೆಚ್ಚದ್ದಾಗಿತ್ತು. 2016 ರಲ್ಲಿ ಯಡಿಯೂರಪ್ಪನವರ ದೂರದರ್ಶಿತ್ವದಿಂದ ಕೇಂದ್ರ ಸರ್ಕಾರದ ಭಾರತ್ ಮಾಲ ಯೋಜನೆಯಡಿ ಅದನ್ನು ಸೇರಿಸಲು, ರಾಷ್ಟ್ರೀಯ ಹೆದ್ದಾರಿ ಘೋಷಿಸಿ ಅದರ ಮಧ್ಯೆ ಬರುವ ಈ ಹಿನ್ನೀರಿಗೆ ಸೇತುವೆ ನಿರ್ಮಿಸಲು ಕೇಂದ್ರ ಭೂಸಾರಿಗೆ ಮಂತ್ರಿಗಳಾದ ಗಡ್ಕರಿಯವರನ್ನು ಒಪ್ಪಿಸಿದ್ದೂ ನಂತರ ಅದಕ್ಕೆ ಸ್ಪಷ್ಟ ರೂಪಬಂದು ಇಂದು ಇದು ಸಾಧ್ಯವಾದದ್ದು. ಈ ಎಲ್ಲ ಪಯಣದಲ್ಲಿ ಸೇತುವೆ ಪ್ರಸನ್ನ ಎಂದು ಅಲ್ಲಿಯ ಜನರಲ್ಲಿ ಲೇವಡಿಗೆ ಒಳಗಾಗುತ್ತಿದ್ದ ಪ್ರಸನ್ನ ಇಂದು ನಿಜವಾದ ಸೇತುವೆಯ ಪ್ರಸನ್ನರಾಗಿದ್ದಾರೆ.
ನಿಜ ಇಂತಹ ಬೃಹತ್ ಕಾರ್ಯ ಒಬ್ಬರಿಂದಲೇ ಆಗುವುದಲ್ಲ. ಪಾದಯಾತ್ರೆ, ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಪ್ರತಿಭಟನೆ, ಪತ್ರಿಕೆಗಳಲ್ಲಿನ ಲೇಖನಗಳು, ಎಲ್ಲ ರಾಜಕೀಯ ಪಕ್ಷದವರ ಸಹಕಾರ, ಶಾಸಕರಾಗಿದ್ದ ಹರತಾಳು ಹಾಲಪ್ಪನವರು ಸೇತುವೆಗೆ ಅಡ್ಡಿಪಡಿಸಿದ ಕಚೇರಿಯ ಎದುರಿಗೆ ಪ್ರತಿಭಟನೆ ಕುಳಿತಿದ್ದು ಸೇತುವೆಯ ಬೇಡಿಕೆಯ ಕಿಡಿ ಹೊತ್ತಿಸಿದ ಹಿರಿಯ ಜೀವ ಚದುರವಳ್ಳಿ ಪರಮೇಶ್ವರ್ ಅವರು ಇವೆಲ್ಲವೂ ಈ ಪರಿಪೂರ್ಣತೆಯಲ್ಲಿನ ಕೊಡುಗೆಗಳು.
ಎಲ್ಲಕ್ಕಿಂತ ಮುಖ್ಯವಾಗಿ ಸಂಸದರಾದ ಬಿ ವೈ ರಾಘವೇಂದ್ರರ ನಿರಂತರ ಪ್ರಯತ್ನ. ಒಬ್ಬ ಸಂಸದ ಜನಪರವಾಗಿ ಎಷ್ಟೊಂದು ಕೆಲಸ ಮಾಡಬಹುದು ಎಂದು ಮೊಟ್ಟಮೊದಲ ಬಾರಿ ಶಿವಮೊಗ್ಗದ ಕ್ಷೇತ್ರದಲ್ಲಿ ತೋರಿಸಿಕೊಟ್ಟವರು. ಸೇತುವೆಯ ವಿಚಾರದಲ್ಲಿ ತಮ್ಮ ಬದ್ಧತೆಯನ್ನು ತೋರಿದವರು.ಅವರ ನಯ-ವಿನಯ ಇತರೆ ರಾಜಕಾರಣಿಗಳಿಗೊಂದು ಮಾದರಿ. ಗಡ್ಕರಿಯವರೊಂದಿಗೆ ಒಳ್ಳೆಯ ಸಂಬಂಧವಿರಿಸಿಕೊಂಡು ಸೇತುವೆ ನಿರ್ಮಾಣವಾಗಲು, ಹೈವೇ ವಿಸ್ತರಣೆಗೆ ಅವರ ಕೊಡುಗೆ ಅಪಾರ.
ಪ್ರಸನ್ನ ಅವರಿಗೆ ಇರುವ ಬದ್ಧತೆ, ಪ್ರೌಢಿಮೆ, ಚುರುಕುತನ,ಗ್ರಹಿಕೆ, ಅಧಿಕಾರಿಗಳೊಂದಿಗಿನ ಸಮನ್ವಯತೆ, ಜನತೆಯ ಬಗೆಗಿರುವ ಕಾಳಜಿ ಇವೆಲ್ಲಾ ಉತ್ತಮ ನಾಯಕನಾಗುವ ಗುಣ ಲಕ್ಷಣಗಳು. ಅವರನ್ನು ಬೆಳೆಸುವ ಜವಬ್ಧಾರಿ ಅವರು ತೊಡಗಿಕೊಂಡ ಪಕ್ಷದ್ದು. ಅವರಿಗೆ ಒಳಿತಾಗಲಿ ಎಂದು ಮಾತ್ರ ನಾವು ಹಾರೈಸಲು ಸಾಧ್ಯ.ಇದು ರಾಜಕಾರಣದ ಯುಗ.ಯಶಸ್ಸಿಗೆ ಸಾವಿರಾರು ಅಪ್ಪಂದಿರು. ಇತಿಹಾಸವನ್ನೇ ತಿರುಚಲಾಗುವ ಸಮಯ. ಕತೆಗಳು ನೂರಾರು ಹುಟ್ಟುವ ಕಾಲ. ನಾಳೆ ಸೇತುವೆಯ ಕಾರಣೀಭೂತರ- ಅಲ್ಲದವರ ಅದೆಷ್ಟೋ ಫ್ಲೆಕ್ಸ್ ಗಳು ರಾರಾಜಿಸಬಹುದು. ಅಲ್ಲಿ ಸತ್ಯ ತಣ್ಣಗಿರುತ್ತದೆ. ಸುಳ್ಳುಗಳು ವಿಜೃಂಭಿಸುತ್ತವೆ. ಈ ಸಮಯದಲ್ಲಿ ಮತ್ತೆ ನೆನಪಾಗುವುದು ಸತ್ಯದ ಮಾರ್ನುಡಿಗಳು. ಸತ್ಯನಾರಾಯಣ ಜಿ ಟಿ, ಕರೂರು, ಸಾಮಾಜಿಕ ಹೋರಾಟಗಾರರು ಇವರು ಪ್ರಸನ್ನ ಕೆರೆಕೈ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದ ಸತ್ಯದ ಮಾತುಗಳು.
“ಎಲ್ಲರೂ ಕತ್ತಲಿನ ಬಗ್ಗೆ ಮಾತಾಡುತ್ತಾ ಇದ್ದಾಗ ನೀವು ಬೆಳಕಿನ ಬಗ್ಗೆ ಮಾತಾಡಿದಿರಿ. ವಿಶ್ವಾಸ ತುಂಬಿದಿರಿ, ದಿಟವಾಗಿ ನಿಂತಿರಿ. ಯಾವುದೇ ದೊಡ್ಡ ಅಧಿಕಾರ ಸ್ಥಾನಮಾನ ಇಲ್ಲದೆ ಗಿಮಿಕ್ ರಾಜಕೀಯ ಮಾಡದೇ ನಂಬಿಕೆ ಮತ್ತು ಶ್ರದ್ಧೆಯಿಂದ ಬದುಕಿನ ಬಹುಮುಖ್ಯ ಸಮಯವನ್ನ ನದಿ ನೆಲದ ನೋವಿಗೆ ಮದ್ದು ತರುವುದಕ್ಕೆ ಬಳಸಿ ಯಶಸ್ವಿ ಆಗಿದ್ದೀರಿ. ಎಲ್ಲರನ್ನೂ ಒಟ್ಟಾಗಿಸಿ ಇದನ್ನು ಸಾಧಿಸಿದ್ದೀರಿ. ಈಗ ಅವರನ್ನ ಪುನಃ ನೆನೆಯುತ್ತಾ ಇದ್ದೀರಿ.”
ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ ಪ್ರಸನ್ನ ಕೆರೆಕೈ ಇಂದು ಶರಾವತಿ ಸಂತ್ರಸ್ತರ ಬದುಕಿನಲ್ಲಿ ಭರವಸೆಯ ಆಶಾಕಿರಣವಾಗಿದ್ದಾರೆ. ಕರಿನೀರ ಶಿಕ್ಷೆಯ ಬಿಡುಗಡೆಯ ದಾರಿಯಾಗಿದ್ದಾರೆ. ಸೇತುವೆಯ ಸಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post