ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮ ದೇಶದಲ್ಲೇ ಶೀಘ್ರವಾಗಿ ಕೊರೊನಾ ಲಸಿಕೆ ಆವಿಷ್ಕಾರ ಮಾಡಿದ್ದು, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಸಿಕೆ ಆವಿಷ್ಕಾರಕ್ಕಾಗಿ ಶ್ರಮವಹಿಸಿದ ವಿಜ್ಞಾನಿಗಳು ಮತ್ತು ಪ್ರೋತ್ಸಾಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸುತ್ತೇನೆ. ಅಭಿವೃದ್ಧಿ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮದೇ ಆದ ಕೊರೊನಾ ಲಸಿಕೆ ಕಂಡುಹಿಡಿಯಲಾಗಿದೆ. ಈ ಲಸಿಕೆಯನ್ನು ಮೊದಲಿಗೆ ಕೊರೊನಾ ಯೋಧರಿಗೆ ನೀಡಬಹುದು ಎಂಬ ಅಭಿಪ್ರಾಯ ಇದೆ. 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದ ಬಳಿಕ ಅಂತಿಮವಾಗಿ ಪರವಾನಗಿ ದೊರೆಯಬಹುದು. ನಾನು ಕೂಡ ಸಂಬಂಧಪಟ್ಟ ವಿಜ್ಞಾನಿಗಳೊಂದಿಗೆ ಮಾತನಾಡಿದ್ದು, ಇದು ಯಶಸ್ವಿಯಾದ ಲಸಿಕೆ ಹಾಗೂ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ತಿಳಿದುಬಂದಿದೆ. ಇದು ವಿಶ್ವಕ್ಕೆ ಭಾರತೀಯರ ಕೊಡುಗೆ ಎಂದರು.
ಯುನೈಟೆಡ್ ಕಿಂಗ್ ಡಮ್ ನಿಂದ ಬಂದವರು ಮತ್ತು ಅವರ ಸಂಪರ್ಕಿತರಲ್ಲಿ ಒಟ್ಟು 48 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಪೈಕಿ 34 ಮಂದಿ ಯುಕೆಯಿಂದ ಹಿಂದಿರುಗಿದವರಾಗಿದ್ದಾರೆ. ಇವರೆಲ್ಲರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, 10 ಮಂದಿಯಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್ ಪತ್ತೆಯಾಗಿದೆ. ಇವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಯಾರಿಗೂ ರೋಗ ತೀವ್ರವಾಗಿ ಕಾಡಿಲ್ಲ ಎಂದರು.

(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post