ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ #Airport ಉದ್ಘಾಟನೆಗೆ ಬಂದ ವೇಳೆ ಹಕ್ಕಿಪಿಕ್ಕಿ #HakkiPikki ಸಮುದಾಯದ ಕುಟುಂಬಗಳನ್ನು ಭೇಟಿಯಾಗಿದ್ದ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ #NarendraModi ಸ್ಮರಿಸಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಆಪರೇಶನ್ ಕಾವೇರಿ ಅಡಿಯಲ್ಲಿ ಸುಡಾನ್’ನಿಂದ ಸುರಕ್ಷಿತವಾಗಿ ರಕ್ಷಿಸಿ, ತಾಯ್ನಾಡಿಗೆ ಕರೆತಂದ ಹಕ್ಕಿ ಪಿಕ್ಕಿ ಸಮುದಾಯದ ಮಂದಿಯೊಂದಿಗೆ ತಾವು ಸಂವಾದ ನಡೆಸಿದ್ದನ್ನು ಪ್ರಧಾನಿಯವರು ಇಂದು ಸ್ಮರಿಸಿದರು.
ಸಾಮಾಜಿಕ ನ್ಯಾಯ ನೀಡುವುದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದ ಪ್ರಧಾನಿಯವರು, ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿದ್ದು ನಮ್ಮ ಪಕ್ಷ ಮಾತ್ರ. ಬಿಜೆಪಿಗೆ ಮತ ನೀಡುವುದು ಸಾಮಾಜಿಕ ನ್ಯಾಯಕ್ಕೆ ಮತ ನೀಡಿದಂತೆ ಎಂದರು.
ಅಂದಿನ ಸಂವಾದ ಹೇಗಿತ್ತು?
ಸಮಯೋಚಿತ ಹಾಗೂ ಸುರಕ್ಷಿತವಾಗಿ ತಮ್ಮನ್ನು ಸ್ಥಳಾಂತರ ಮಾಡಿದ್ದಕ್ಕಾಗಿ ಹಕ್ಕಿ ಪಿಕ್ಕಿ ಜನಾಂಗದ ಮಂದಿ ಅಂದು ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದ್ದರು.
ಪ್ರಧಾನಿ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಅವರುಗಳು, ಸುಡಾನ್’ನಲ್ಲಿ ತಾವು ಎದುರಿಸಿದ ಕಠಿಣ ಸಂದರ್ಭಗಳನ್ನು ಮತ್ತು ಸರ್ಕಾರ, ಭಾರತೀಯ ರಾಯಭಾರ ಕಚೇರಿ ತಮ್ಮ ಸುರಕ್ಷತೆಯನ್ನು ಹೇಗೆ ಖಾತ್ರಿಪಡಿಸಿದೆ ಎಂಬುದನ್ನು ವಿವರಿಸಿದ್ದರು.
ಪ್ರಧಾನಿಯವರ ಹಾಗೂ ಭಾರತ ಸರ್ಕಾರದ ಪ್ರಯತ್ನದಿಂದಾಗಿ ನಮಗೆ ಒಂದು ಸಣ್ಣ ಗಾಯವೂ ಸಹ ಆಗದಂತೆ ಅಲ್ಲಿಂದ ಸುರಕ್ಷಿತವಾಗಿ ಹಿಂದಿರುಗಿದ್ದೇವೆ. ಇಂತಹ ಪ್ರಧಾನಿ ನಮ್ಮ ಹೃದಯದಲ್ಲಿ ಡಬಲ್ ಇಂಜಿನ್ ಅಲ್ಲ, ಟ್ರಿಪಲ್ ಇಂಜಿನ್ ಶಕ್ತಿಯಾಗಿದ್ದಾರೆ ಎಂದಿದ್ದರು.
ಅಂದು ಮಾತನಾಡಿದ್ದ ಪ್ರಧಾನಿಯವರು, ಸಮುದಾಯದ ಸದಸ್ಯರ ಪೂರ್ವಜರು ಮಹಾರಾಣಾ ಪ್ರತಾಪ್ ಜೊತೆಗೆ ಹೇಗೆ ನಿಂತಿದ್ದರು ಎಂಬುದನ್ನು ಸ್ಮರಿಸಿದ್ದರು.
ಇಡೀ ವಿಶ್ವದಲ್ಲಿ ಯಾವುದೇ ಭಾರತೀಯನಿಗೆ ಯಾವುದೇ ರೀತಿಯ ತೊಂದರೆಯಾದರೆ, ಸಮಸ್ಯೆ ಬಗೆಹರಿಯುವವರೆಗೂ ಸರ್ಕಾರ ವಿರಮಿಸುವುದಿಲ್ಲ ಎಂದಿದ್ದರು.
ಕೆಲ ರಾಜಕಾರಣಿಗಳು ಈ ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸಿದ್ದು, ಭಾರತೀಯರು ಎಲ್ಲೆಲ್ಲಿದ್ದಾರೆ ಎಂಬುದನ್ನು ಬಯಲಿಗೆಳೆದರೆ ಹೆಚ್ಚಿನ ಅಪಾಯ ಎದುರಾಗಬಹುದು ಎಂಬುದು ನಮ್ಮ ಆತಂಕ ಎಂದರು. ಹಾಗಾಗಿ ಸರ್ಕಾರ ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸದ್ದಿಲ್ಲದೆ ಕೆಲಸ ಮಾಡಿದೆ. ಅವರ ಪರವಾಗಿ ನಿಂತಿರುವ ದೇಶದ ಶಕ್ತಿಯನ್ನು ಸ್ಮರಿಸಬೇಕು ಎಂದಿದ್ದರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮತ್ತು ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಲು ಯಾವಾಗಲೂ ಸಿದ್ಧರಾಗಿರಬೇಕು ಎಂದಿದ್ದ ಪ್ರಧಾನಿಯವರು, ವಿದೇಶದಲ್ಲಿರುವ ಜನರು ಭಾರತೀಯ ಔಷಧದಲ್ಲಿ ನಂಬಿಕೆ ಇಡುತ್ತಾರೆ, ಅವರು ಭಾರತದವರು ಎಂದು ಕೇಳಿದಾಗ ಹೇಗೆ ಸಂತೋಷಪಡುತ್ತಾರೆ ಎಂಬುದರ ಕುರಿತು ಮಾತನಾಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















