ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೈದರಾಬಾದ್: ನನ್ನ ಮಗ ಹಾಗೂ ಅವನ ಸ್ನೇಹಿತರು ಆ ಹೆಣ್ಣು ಮಗಳನ್ನು ಹೇಗೆ ಭೀಕರವಾಗಿ ಹತ್ಯೆ ಮಾಡಿದರೋ ಅದೇ ರೀತಿಯಲ್ಲೇ ನನ್ನ ಮಗನನ್ನೂ ಸಹ ಕೊಂದು ಬಿಡಿ. ಅವನನ್ನು ಯಾವುದೇ ಕಾರಣಕ್ಕೂ ಬಿಡಬೇಡಿ…
ಈ ರೀತಿ ಆಕ್ರೋಶದ ನುಡಿಗಳನ್ನು ಆಡಿರುವುದು ತೆಲಂಗಾಣ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಸುಟ್ಟುಹಾಕಿದ ಆರೋಪಿಗಳಲ್ಲಿ ಒಬ್ಬನಾದ ಮೊಹಮದ್ ತಾಯಿ…
ಹೌದು..ಇಡಿಯ ದೇಶದಲ್ಲೇ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಈ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿರುವ ಮೊಹಮದ್ ತಾಯಿ ಮೊಲಂಬಿ ಮಾತನಾಡಿದ್ದು, ನನ್ನ ಮಗನ ಈ ಹೀನ ಕೃತ್ಯ ನಮಗೆ ಅಸಹ್ಯ ಹುಟ್ಟಿಸುತ್ತಿದೆ. ನನ್ನ ಮಗ ನಿಜಕ್ಕೂ ಇದನ್ನು ಮಾಡಿದ್ದು ನಿಜವೇ ಆದರೆ, ಆ ಹೆಣ್ಣು ಮಗಳನ್ನು ಕೊಂದ ರೀತಿಯಲ್ಲೇ ನನ್ನ ಮಗನನ್ನೂ ಸಹ ಕೊಂದು ಬಿಡಿ. ಅವನನ್ನು ಬಿಡಬೇಡಿ ಎಂದಿದ್ದಾರೆ.
ನಾರಾಯಣಪುರ ಜಿಲ್ಲೆಯ ನಿವಾಸಿಯಾದ ಆಕೆ ಮಾತನಾಡಿ, ಘಟನೆ ನಡೆದ ದಿನ ನನ್ನ ಮಗ ಮನೆಗೆ ಬಂದು, ನಾನು ಲಾರಿ ಚಲಾಯಿಸುವಾಗ ಅಪಘಾತ ಮಾಡಿದೆ. ಸ್ಕೂಟರ್ ಓಡಿಸುತ್ತಿದ್ದ ಹೆಣ್ಣು ಇದರಲ್ಲಿ ಸತ್ತು ಹೋದಳು ಎಂದು ಹೇಳಿದ್ದ. ಆದರೆ, ಅಂದು ರಾತ್ರಿ ಪೊಲೀಸರು ಅವನನ್ನು ಬಂಧಿಸಿ ಕರೆದುಕೊಂಡು ಹೋದರು. ಆನಂತರ ಈ ವಿಚಾರ ನನಗೆ ತಿಳಿಯಿತು ಎಂದಿದ್ದಾರೆ.
ಇನ್ನು, ಪ್ರಕರಣದ ಇನ್ನೋರ್ವ ಆರೋಪಿ ಚೆನ್ನಕೇಶವಲು ಎಂಬಾತನ ತಾಯಿ ಶ್ಯಾಮಲಾ ಮಾತನಾಡಿದ್ದು, ನನ್ನ ಮಗ ಇಂತಹ ಕೃತ್ಯ ಎಸಗಿ ಒಂದು ಹೆಣ್ಣಿನ ಜೊತೆಯಲ್ಲಿ ಈ ರೀತಿ ನಡೆದುಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ. ಈ ವಿಚಾರ ನನ್ನ ಮನಸ್ಸಿಗೆ ತೀವ್ರ ಆಘಾತವನ್ನು ಉಂಟು ಮಾಡಿದೆ. ಇದೇ ವೇಳೆ ಇವರ ಕ್ರೌರ್ಯಕ್ಕೆ ಬಲಿಯಾದ ಆ ಹೆಣ್ಣು ಮಗಳ ಕುಟುಂಬಸ್ಥರ ಅದರಲ್ಲೂ ಆಕೆಯ ತಂದೆ-ತಾಯಿಗಳ ನೋವು ಎಂತಹುದ್ದು ಎಂದು ನಾನು ಅರಿತುಕೊಳ್ಳಬಲ್ಲೆ. ನನಗೂ ಒಬ್ಬಳು ಮಗಳಿದ್ದಾಳೆ. ನನ್ನ ಮಗ ಮಾಡಿದ್ದರೂ ಅದು ತಪ್ಪೇ. ನಾನು ನನ್ನ ಮಗನ ತಪ್ಪನ್ನು ಸಮರ್ಥನೆ ಮಾಡಿಕೊಂಡರೆ ತಪ್ಪಿತಸ್ಥ ಭಾವನೆ ನಾನು ಬದುಕಿರುವವರೆಗೂ ಕಾಡುತ್ತದೆ. ಆ ಹೆಣ್ಣು ಜೀವ ಬಿಡುವಾಗ ಎಷ್ಟು ನೋವು ಅನುಭವಿಸಿದಳೋ. ಆಕೆಯನ್ನು ಹೇಗೆ ಕೊಂದರೋ ನನ್ನ ಮಗನನ್ನೂ ಸಹ ಹಾಗೆಯೇ ಜೀವಂತ ಸುಟ್ಟುಬಿಡಿ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post