ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-17 |
ಕನ್ನಡ ಭಾಷೆಯು ಸಂಪತ್ತು ಹಾಗೂ ಸಂಸ್ಕೃತಿ ಉಳ್ಳಂತಹ ಭಾಷೆಯಾಗಿದೆ. ಭಾರತೀಯ ಪಾರಂಪರಿಕ ಸಂಸ್ಕೃತಿಯಿಂದ ಪೋಷಿಸಲ್ಪಟ್ಟ ಈ ಭಾಷೆ ಸುಸಂಸ್ಕೃತವೂ ಹಾಗೂ ಸುಂದರವೂ ಪುರಾತನವೂ ಆಗಿದೆ.
ಈ ಭಾಷೆಯ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವೇ ಗಾದೆ ಮಾತುಗಳು. ನಮ್ಮ ಪೂರ್ವಜರ ಅನುಭವದ ಸಾರಾಂಶವನ್ನು ಸುಲಭವಾಗಿ ಜನರಿಗೆ ತಲುಪಿಸುವ ಪರಿಯೇ ಈ ಗಾದೆ ಮಾತುಗಳು. ನಮ್ಮ ಭಾಷೆ ನಮ್ಮ ಜನರ ಸಂಸ್ಕೃತಿಯನ್ನು ಬಿಂಬಿಸುವ ಈ ಗಾದೆಗಳು ದಿನನಿತ್ಯದ ವ್ಯವಹಾರಿಕ ಭಾಷೆಯ ಅಂಗವಾಗಿವೆ. ಗಾದೆಗಳಲ್ಲಿ ಕೆಲವೊಂದು ಗಾದೆಗಳು ನೀತಿಯೊಡನೆ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತವೆ. “ವೇದ ಸುಳ್ಳಾದರು ಗಾದೆ ಸುಳ್ಳಾಗದು” ಎಂಬ ಗಾದೆಯಂತೆ ಈ ಗಾದೆಗಳು ಸತ್ಯವನ್ನೇ ನಡೆಯುತ್ತವೆ. ಅಂತಹ ಕೆಲವು ಗಾದೆ ಮಾತುಗಳನ್ನು ಉದಾಹರಣೆಯ ರೂಪದಲ್ಲಿ ನೋಡುತ್ತಾ, ಗಾದೆ ಮಾತುಗಳು ಸಂಸ್ಕೃತಿಯೊಂದಿಗೆ ಹೇಗೆ ಬೆಸೆದುಕೊಂಡಿವೆ ಎಂಬುದನ್ನು ಗಮನಿಸೋಣ.
“ದುಡ್ಡೇ ದೊಡ್ಡಪ್ಪ ದುಡಿಮೇಯೇ ದೇವರು” ಎಂಬ ಈ ಗಾದೆ ಮಾತಿನಲ್ಲಿ ದುಡಿಮೆಯ ಮಹತ್ವವನ್ನು ಎತ್ತಿ ತೋರಲಾಗಿದೆ. ಕಾಯಕವೇ ಕೈಲಾಸ ಎಂಬಂತೆ ನಾವು ಮಾಡುವ ಕೆಲಸ ನಮಗೆ ಹಿತ ಹಾಗೂ ನಮ್ಮ ಪ್ರಾಮಾಣಿಕವಾದ ಕೆಲಸವೇ ಮೋಕ್ಷದವರೆಗೂ ನಮ್ಮನ್ನು ಕರೆದೊಯುತ್ತವೆ. ಅಂತೆಯೇ ಮೋಕ್ಷದ ದಾರಿ ತೋರುವ ದುಡಿಮೆಗೆ ನಮ್ಮ ಜೀವನದಲ್ಲಿ ಅತ್ಯಂತ ಎತ್ತರದ ಸ್ಥಾನವಾದ ಮಾತೃಸ್ಥಾನವನ್ನು ನೀಡಲಾಗೀದೆ ಎಂದು ಹೇಳುವಾಗ ದುಡಿಮೆಯೇ ದೇವರು ಎಂದು ಹೇಳಲಾಗಿದೆ. ಇದರಿಂದ ನಾವು ಅರಿಯಬಹುದಾದ ಒಂದು ಅಂಶ ತಾಯಿಯನ್ನು ನಾವು ದೇವರಂತೆ ಉತ್ತಮ ಸ್ಥಾನದಲ್ಲಿ ಕಾಣುತ್ತೇವೆ. ತಾಯಿಯನ್ನು ಗೌರವಿಸುವುದು, ಪೂಜ್ಯಳಾಗಿ ಕಾಣುವುದು ನಮ್ಮ ಸಂಸ್ಕೃತಿಯ ಒಂದು ವಿಶಿಷ್ಟ ಅಂಗವಾಗಿದೆ. ಮಾತೃದೇವೋಭವ ಎಂಬ ಸಂಸ್ಕೃತದ ಮಾತು ತಾಯಿಯನ್ನು ದೇವರು ಎಂದು ತಿಳಿಸುತ್ತದೆ. ಅಂತಹ ದೈವಸ್ಥರೂಪಿಯಾದ ಮಾತೆಗೆ ದುಡಿಮೆಯನ್ನು ಹೋಲಿಕೆ ಮಾಡಿರುವುದು ನಮ್ಮ ಸಂಸ್ಕೃತಿಯ ಒಂದು ವಿಶಿಷ್ಟವಾದ ಹಿರಿಮೆಯನ್ನು ತೋರಿಸಿ ಕೊಡುತ್ತದೆ.“ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಈ ಮಾತಿನಲ್ಲಿ ನಮ್ಮ ಜನರು ಹೊರಗಿನ ತೋರಿಕೆಯಲ್ಲದೆ ಗುಣಗಳನ್ನು ಹೆಚ್ಚಾಗಿ ಪರಿಗಣಿಸುತ್ತಾರೆ ಎಂಬುದನ್ನು ಅರಿಯಬಹುದು. ಬಾಹ್ಯ ಅಂಶಗಳಿಗೆ ಬೆಲೆಯನ್ನು ಕೊಡದೆ ಆಂತರಿಕ ಗುಣಕ್ಕೆ ಬೆಲೆ ಕೊಡುವುದರ ಮೂಲಕ ಭಾರತೀಯರು ಗುಣ ಗ್ರಾಹಿಗಳಾಗಿದ್ದರು ಎಂಬ ಬಹು ಮುಖ್ಯವಾದ ಅಂಶವನ್ನು ಈ ಗಾದೆ ಮಾತು ತಿಳಿಸಿಕೊಡುತ್ತದೆ.
“ಶಕ್ತಿಗಿಂತ ಯುಕ್ತಿ ಮೇಲು” ಎಂಬ ಗಾದೆಯಲ್ಲಿ ಕನ್ನಡಿಗರ ದೃಷ್ಟಿಕೋನ ವಿಚಾರವು ತುಂಬಾ ಉತ್ತಮವಾಗಿ ಮೂಡಿಬಂದಿದೆ. ಈ ಗಾದೆಯಲ್ಲಿ ನಮ್ಮಲ್ಲಿ ಕೇವಲ ಶ್ರಮಿಕರನ್ನು ಮಾತ್ರವಲ್ಲದೇ ಯುಕ್ತಿಯಿಂದ ಕೆಲಸ ಮಾಡಬಲ್ಲ ಜ್ಞಾನಿಗಳೂ ಇದ್ದರು ಎಂಬ ವಿಷಯವನ್ನು ಮನಗಾಣಬಹುದು. ಜೊತೆಗೆ ಯುಕ್ತಿಯಿಂದ ಸಾಕಷ್ಟು ಕೆಲಸಗಳನ್ನು ಮಾಡಬಹುದೆಂಬ ವಿಚಾರವನ್ನು ತಿಳಿಯುವುದರೊಂದಿಗೆ ಯುಕ್ತಿಗೆ ಉನ್ನತ ಸ್ಥಾನವಿತ್ತು ಎಂಬುದನ್ನು ಅರಿಯಬಹುದು.ಹೀಗೆ ನಮ್ಮ ಸಂಸ್ಕೃತಿಯಲ್ಲಿ ಗಾದೆ ಮಾತುಗಳು ನೀತಿ ಹಾಗೂ ಸಂಸ್ಕೃತಿಯನ್ನು ವಿವರಿಸುತ್ತವೆ. ಗಾದೆ ಮಾತುಗಳ ಬಳಕೆಯಿಂದ ನಮಗೆ ಭಾಷೆಯ ಮೇಲಿನ ಅಭಿಮಾನ, ಸಂಸ್ಕೃತಿಯ ಮೇಲಿನ ಭರವಸೆ ಹೆಚ್ಚುತ್ತದೆ. ಹೀಗೆ ನಾವು ಗಾದೆಗಳನ್ನು ಪ್ರತಿನಿತ್ಯದ ನಮ್ಮ ಮಾತಿನಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕವಾಗಿ ನಮ್ಮ ಭಾಷೆಯ ಅಮೂಲ್ಯ ಸಂಪತ್ತಾದ ಗಾದೆ ಮಾತುಗಳನ್ನು ಕಾಯ್ದುಕೊಳ್ಳುವ ಹಾಗೆ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಂತಹ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡಬೇಕು. ಇದು ಕೇವಲ ಗಾದೆ ಮಾತಿನ ಸಂರಕ್ಷಣೆ ಮಾತ್ರವಾಗಿರದೆ ಒಂದು ನಾಡಿನ ಸಂಸ್ಕೃತಿಯನ್ನು ಅದರ ಶ್ರೀಮಂತಿಕೆಯನ್ನು ಉಳಿಸುವಂತಹ ಮಹತ್ಕಾರ್ಯವೇ ಆಗಿದೆ ಎಂದು ಹೇಳಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post