ಕಲ್ಪ ಮೀಡಿಯಾ ಹೌಸ್ | ಪುತ್ತೂರು(ಮಂಗಳೂರು) |
ಪಡ್ನೂರು ಗ್ರಾಮದ ಸೆಡಿಯಾಪು ಕೂಟೇಲು ಸಮೀಪ ಹೆಜ್ಜೇನು ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಬಾಲಕಿಯನ್ನು 2ನೇ ತರಗತಿ ವಿದ್ಯಾರ್ಥಿನಿ ಇಶಾ(7) ಎಂದು ಗುರುತಿಸಲಾಗಿದೆ. ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕೂಟೇಲು ನಿವಾಸಿ ಕಿರಣ್ ಎನ್ನುವವರ ಪುತ್ರಿ ಎರಡನೇ ತರಗತಿಯಲ್ಲಿ ಓದುತ್ತಿದ್ದಳು.
ಅ.10ರಂದು ನಡೆದ ಹೆಜ್ಜೇನು ದಾಳಿಯಲ್ಲಿ ಇಶಾ, ಕಿಶೋರ್ ಎನ್ನುವವರ ಪುತ್ರ 5ನೇ ತರಗತಿ ವಿದ್ಯಾರ್ಥಿ ಪ್ರತ್ಯೂಶ್(10) ಹಾಗೂ ಇವರನ್ನು ಕಾಪಾಡಲು ಬಂದ ಸ್ಥಳೀಯ ನಾರಾಯಣ್(40) ಗಾಯಗೊಂಡಿದ್ದರು.
ಅಂದು ಸಂಜೆ ಕೂಟೇಲು ಸಮೀಪ ತೆರಳುತ್ತಿದ್ದ ವೇಳೆ ಹೆಜ್ಜೇನಿನ ಹಿಂಡು ದಾಳಿ ಮಾಡಿತ್ತು. ಇದರಿಂದ ಮಕ್ಕಳು ಕಿರುಚಾಡುವುದನ್ನು ಕೇಳಿ ಸ್ಥಳೀಯರಾದ ನಾರಾಯಣ್ ಎನ್ನುವವರು ರಕ್ಷಣೆಗೆ ಓಡಿಬಂದರು. ಈ ವೇಳೆ ಅವರೂ ಸಹ ಹೆಜ್ಜೇನಿನ ದಾಳಿಗೆ ಗುರಿಯಾದರು.
ಮೂವರನ್ನೂ ಸಹ ನಗರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಇಶಾಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೇ ಆಕೆ ಕೊನೆಯುಸಿರೆಳೆದಿದ್ದಾಳೆ.
ಇನ್ನು, ಪ್ರತ್ಯೂಷ್ ಆರೋಗ್ಯದಲ್ಲೂ ಸಹ ಏರುಪೇರಾಗಿದ್ದು, ಅವರನ್ನೂ ಸಹ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ನಾರಾಯಣ್ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















