ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಅದು ತಂಪಾದ ಸುಂದರ ಸಂಜೆಯ ಸಾಂಸ್ಕೃತಿಕ ವಾತಾವರಣ, ತುಂಬಿ ತುಳುಕುತ್ತಿದ್ದ ಸಭಾಂಗಣ, ಅಬಾಲವೃದ್ದರಾಗಿಯಾಗಿ ಸಭಿಕರೆಲ್ಲರಲ್ಲೂ ಕಾತರದ ಹೂರಣ, ಅಂತಿಮವಾಗಿ ಅಲ್ಲಿ ಧರೆಗಿಳಿದಿತ್ತು ನಾಟ್ಯ ಲೋಕದ ವೈಭವದ ಅನಾವರಣ…
ಹೌದು… ಇಂತಹ ಒಂದು ವೈಭವವನ್ನು ಅಕ್ಷರಶಃ ಧರೆಗಿಳಿಸಿದಂತೆ ಪ್ರತಿ ಸಭಿಕರಲ್ಲೂ ಭಾಸವಾಗಲು ಕಾರಣವಾಗಿದ್ದು ವಿದ್ವಾನ್ ದೀಪಕ್ ಕುಮಾರ್ ಭರತನಾಟ್ಯ ಪ್ರದರ್ಶನ.
ರಾಜ್ಯದ ಪುರುಷ ಭರತನಾಟ್ಯ #Bharatanatyam ಕಲಾವಿದರಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿರುವ ಹಿರಿಯ ಕಲಾವಿದ, ನೃತ್ಯ ಸಂಯೋಜಕ, ನೃತ್ಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್ ಅವರ ರಂಗಪ್ರವೇಶ ಸ್ಮೃತಿ ಸಂಧ್ಯಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಸಭಿಕರ ಮನಗೆದ್ದಿದೆ.
ದೀಪಕ್ ಕುಮಾರ್ ಅವರು ರಂಗಪ್ರವೇಶ ಮಾಡಿ 30 ವರ್ಷ ಸಂದ ಹಿನ್ನೆಲೆಯಲ್ಲಿ ಆದಿತ್ಯವಾರ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ `ನೃತ್ಯೋತ್ಕ್ರಮಣ` ಶೀರ್ಷಿಕೆಯಡಿಯ ಕಾರ್ಯಕ್ರಮ ಯಶಸ್ವಿಯಾಯಿತು.
ಮೂರು ದಶಕದ ಹಿಂದಿನ ರಂಗಪ್ರವೇಶದ ದೃಶ್ಯವನ್ನೇ ಮರುಚಿತ್ರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ, 30 ವರ್ಷಗಳ ಹಿಂದೆ ರಂಗಪ್ರವೇಶ ಮಾಡಿದಾದ ಪ್ರದರ್ಶಿಸಿದ ನೃತ್ಯಗಳನ್ನೇ ಈಗಲೂ ಸಹ ಪ್ರದರ್ಶಿಸಿದ್ದು ಸಭಿಕರ ಮನಸೂರೆಗೊಂಡಿತು.
ಪ್ರಮುಖವಾಗಿ, ಸುಮಾರು 45 ನಿಮಿಷಕ್ಕೂ ಅಧಿಕ ಕಾಲ ನಿರಂತರವಾಗಿ ಇವರು ಪ್ರದರ್ಶಿಸಿದ `ವರ್ಣ’ ಶೈಲಿಯ ನೃತ್ಯದಲ್ಲಿ ಭಾವನೆಗಳ ಆಳವಾದ ಚಿತ್ರಣವನ್ನು ಪ್ರದರ್ಶಿಸಿದ್ದು ವಿಶೇಷ. ಈ ನೃತ್ಯ ಮುಕ್ತಾಯವಾದ ನಂತರವೂ ಸಹ ಸಭಿಕರನ್ನು ಒಂದು ಮಾಯಾ ಲೋಕಕ್ಕೆ ಕರೆದುಕೊಂಡು ಹೋಗುವಷ್ಟು, ಸಾಕ್ಷಾತ್ ನಟರಾಜನೇ ದೀಪಕ್ ಕುಮಾರ್ ಅವರಲ್ಲಿ ನೆಲೆನಿಂತು ಪ್ರದರ್ಶಿಸಿದಂತಿತ್ತು.
ಸುಮಾರು ಎರಡೂವರೆ ಗಂಟೆ ನಡೆದ ಪ್ರದರ್ಶನದಲ್ಲಿ ದೀಪಕ್ ಕುಮಾರ್ ಅವರು ಪ್ರಸ್ತುತಿ ಪಡಿಸಿದ ಪ್ರತಿ ನೃತ್ಯವೂ ಸಹ ಸಾಕ್ಷಾತ್ ಕಲಾಸರಸ್ವತಿಯೇ ಮೇಳೈಸಿದಂತಿತ್ತು. ಕೊನೆಯಲ್ಲಿ ಪ್ರಸ್ತುತಿಪಡಿಸಿದ ರಾಮದೇವರು ಹಾಗೂ ಅನಂತ ಪದ್ಮನಾಭ ದೇವರ ಕುರಿತಾಗಿನ ಪ್ರದರ್ಶನ ಪ್ರತಿಯೊಬ್ಬರ ಮನದಲ್ಲಿ ಭಕ್ತಿಯ ಭಾವ ಮೂಡಿಸುವಂತಹ ಭಾವನೆಗಳು ದೀಪಕ್ ಕುಮಾರ್ ಅವರಲ್ಲಿ ವ್ಯಕ್ತವಾಯಿತು.
ಒಟ್ಟಾರೆಯಾಗಿ, ರಂಗ ಪ್ರವೇಶ ಕಾರ್ಯಕ್ರಮದ ಮರುಸೃಷ್ಠಿಯಂತಹ ವಿಭಿನ್ನ ಪ್ರದರ್ಶನ ಭರತನಾಟ್ಯ ಇತಿಹಾಸದಲ್ಲೇ ಬಹುತೇಕ ಮೊದಲು. ಇಂತಹ ಅಪರೂಪದ ಕಾರ್ಯಕ್ರಮ ದೀಪಕ್ ಕುಮಾರ್ ಅವರ ಮನಮೋಹಕ ಪ್ರದರ್ಶನದ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ನೃತ್ಯ ಕಲಾವಿದರು ಮತ್ತು ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್, ಎಷ್ಟೋ ಮಹನೀಯರ ಕೃತಿ, ಸಾಹಿತ್ಯ, ಕಲೆ ಹಾಗೂ ನೃತ್ಯದಿಂದ ಇಂದು ಭಾರತೀಯ ಸಂಸ್ಕೃತಿ ಉಳಿದಿದೆ. ಇಂತಹ ಮಹತ್ಕಾರ್ಯವನ್ನು ದೀಪಕ್ ಕುಮಾರ್ ಮಾಡುತ್ತಿದ್ದಾರೆ. ಈಗಿನ ಭರತನಾಟ್ಯ ವಿದ್ಯಾರ್ಥಿಗಳಿಗೆ ಎಲ್ಲೂ ಸುಲಭವಾಗಿ ದೊರೆಯುತ್ತಿದೆ. ಆದರೆ, ದೀಪಕ್ ಅವರು ಚಿಕ್ಕ ವಯಸ್ಸಿನಿಂದಲೇ ಬಹಳಷ್ಟು ಕಷ್ಟ ಪಟ್ಟು, ತ್ಯಾಗದಿಂದ ವಿದ್ಯೆ ಕಲಿತಿದ್ದಾರೆ. ಇವರನ್ನು ನೋಡಿ ಇಂದಿನ ಮಕ್ಕಳು ಕಲಿಯಬೇಕು ಎಂದರು.
ಮಂಗಳೂರು ಕೊಲ್ಯದ ನಾಟ್ಯ ನಿಕೇತನದ ನೃತ್ಯ ಕಲಾವಿದರು ಮತ್ತು ಗುರುಗಳಾದ ವಿದುಷಿ ರಾಜಶ್ರೀ ಉಳ್ಳಾಲ ಅವರು ಮಾತನಾಡಿ, ಮೂವತ್ತು ವರ್ಷದ ಹಿಂದೆಯೇ ದೀಪಕ್ ಕುಮಾರ್ ಸುಂದರ ವಿಗ್ರಹವಾಗಿ ರೂಪುಗೊಂಡಿದ್ದಾರೆ. ಇದರ ಹಿಂದೆ ಅವರ ತಂದೆ ತಾಯಿ, ಪತ್ನಿ, ಸಹೋದರ ಸೇರಿದಂತೆ ಕುಟುಂಬಸ್ಥರ ಶ್ರಮ, ಸಾಧನೆ ದೊಡ್ಡದಿದೆ. ಇಂದಿನ ಕಾಲದಲ್ಲಿ ಕಲಿಯುವುದು ಕಷ್ಟವಲ್ಲ. ಆದರೆ, ಅಂದಿನ ಸೌಕರ್ಯ ಇಲ್ಲದ ಕಾಲದಲ್ಲಿ ಕಲಿತು, ಮೂವತ್ತು ವರ್ಷದ ನಂತರವೂ ಸಹ ಇಂತಹ ಸಾಧನೆಯನ್ನು ಮುಂದುವರೆಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ತ್ಯಾಗರಾಜರು ಸೇರಿದಂತೆ ಅನೇಕ ಮಹನೀಯರು ನಮ್ಮ ಸಂಸ್ಕೃತಿ, ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅದೇ ಪರಂಪರೆಯನ್ನು ಉಳಿಸಿಕೊಂಡು ಹೋಗುವಲ್ಲಿ ದೀಪಕ್ ಕುಮಾರ್ ಸಹ ಸಾಗಿದ್ದಾರೆ.
-ವಿದುಷಿ ರಾಜಶ್ರೀ ಉಳ್ಳಾಲ

ಯಾವ ನೃತ್ಯ ಗುರುವೂ ಸಹ ಇಂತಹ ಒಂದು ಕಾರ್ಯಕ್ರಮವನ್ನು ಮಾಡಿಲ್ಲ. ಮೂವತ್ತು ವರ್ಷದ ನಂತರ ಅದೇ ನೃತ್ಯವನ್ನು, ಹಾಗೆಯೇ ಪ್ರದರ್ಶನ ಮಾಡುವುದು ಬಹಳ ಕಷ್ಟ. ಆದರೆ, ಅದನ್ನು ಅತ್ಯಂತ ಲೀಲಾಜಾಲವಾಗಿ ಮಾಡಿದ್ದು ದೀಪಕ್ ಅವರ ಸಾಧನೆ ಎಂದು ಪ್ರಶಂಸಿಸಿದರು.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಲೋಕೇಶ್ ಬನ್ನೂರು, ದೀಪಕ್ ಕುಮಾರ್ ಅವರ ಸಾಧನೆ ನಮ್ಮೂರಿಗೆ ಒಂದು ಹೆಮ್ಮೆಯ ವಿಚಾರ. ಮೂವತ್ತು ವರ್ಷಗಳ ಹಿಂದಿನ ದೃಶ್ಯವನ್ನು ಇಂದು ನೋಡುವ ಭಾಗ್ಯ ನಮಗೆಲ್ಲಾ ದೊರೆತಿರುವುದು ಸಂತಸದ ವಿಚಾರ ಎಂದರು.
ವಿವೇಕಾನಂದ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಡಾ. ಆಶಾ ಮಾತನಾಡಿ, ರಂಗ ಪ್ರವೇಶ ಮಾಡಿ 30 ವರ್ಷದ ನಂತರವೂ ಸಹ ದೀಪಕ್ ಅವರಲ್ಲಿ ಅದೇ ಉತ್ಸಾಹ ಇದೆ. ತಮ್ಮ ನೃತ್ಯ ಸೇವೆಯ ಜೀವನದಲ್ಲಿ ನವನವೀನ ಪ್ರಯೋಗಗಳನ್ನು ಮಾಡುವ ಮೂಲಕ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ವಾನ್ ದೀಪಕ್ ಕುಮಾರ್ ಅವರು ಮಾತನಾಡಿ, ಮೂವತ್ತು ವರ್ಷದ ಹಿಂದೆ ನಡೆದ ರಂಗ ಪ್ರವೇಶದ ದೃಶ್ಯವನ್ನೇ ಮರುಸೃಷ್ಠಿಸುವ ಆಸೆಯಿತ್ತು. ಈಗ ಅದು ಈಡೇರಿದೆ. ನನ್ನನ್ನು ಬೆಳೆಸಿದ್ದು ಪುತ್ತೂರು. ಹೀಗಾಗಿ, ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮ ನೀಡಿರುವುದು ಸಾರ್ಥಕ ಭಾವನೆ ಮೂಡಿಸಿದೆ ಎಂದರು.
ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ಪುತ್ತೂರಿನ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ, ಕೊಳಲಿನಲ್ಲಿ ಮಂಗಳೂರಿನ ಕು. ಮೇಧಾ ಉಡುಪ ಹಾಗೂ ಪಿಟೀಲಿನಲ್ಲಿ ಉಪ್ಪಂಗಳದ ಕು. ತನ್ಮಯಿ ಅವರುಗಳು ಹಿಮ್ಮೇಳದಲ್ಲಿ ಸಹಕಾರ ನೀಡಿದರು.
ಮೂರು ದಶಕಗಳ ಕಾಲ ಭರತನಾಟ್ಯದಲ್ಲಿ ಅಮೋಘ ಸಾಧನೆ ಮಾಡಿ, ರಾಜ್ಯದ ಪುರುಷ ಭರತನಾಟ್ಯ ಕಲಾವಿದರಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ್ದರೂ ಸಹ ವಿದ್ವಾನ್ ದೀಪಕ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ತಮ್ಮ ಎಲ್ಲ ಗುರುಗಳಿಗೆ ನೀಡಿದ ಗೌರವ, ವಿನಯತೆ, ಭಕ್ತಿ ಇಂದಿನ ಮಕ್ಕಳಿಗೆ ಆದರ್ಶಪ್ರಾಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















