ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು: ಮಾತಿನ ಧ್ವನಿಯ ಬೆಲೆ ವೇದಿಕೆ ಆಧಾರದ ಮೇಲೆ ಬದಲಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಧ್ವನಿಯನ್ನು ಬಳಸಿಕೊಂಡು ಜನರನ್ನು ಆಕರ್ಷಿಸುತ್ತಾರೆ. ಹಿನ್ನಲೆ ಧ್ವನಿ ಸಮೂಹ ಮಾಧ್ಯಮದ ಅವಿಭಾಜ್ಯ ಅಂಗವಾಗಿದೆ. ಹಿನ್ನಲೆ ಧ್ವನಿ ಕಲಾವಿದರಿಗೆ ಧ್ವನಿಯ ಜೊತೆಗೆ ಭಾಷಾ ಜ್ಞಾನ, ಭಾಷಾ ಸ್ಪಷ್ಟತೆ ಆವಶ್ಯಕವಾಗಿದೆ. ಹಿನ್ನಲೆ ಧ್ವನಿ ಅನ್ನುವುದು ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಚಾಲನೆಯಲ್ಲಿದೆ. ವೇದಿಕೆ ಯಾವುದೇ ಆಗಿರಲಿ, ಮಾತನಾಡುವಾಗ ನಾವು ಜವಾಬ್ದಾರಿಯುತವಾಗಿರಬೇಕು ಎಂದು ಹಿನ್ನಲೆ ಧ್ವನಿ ಕಲಾವಿದ, ಪತ್ರಕರ್ತ ಬಡೆಕ್ಕಿಲ ಪ್ರದೀಪ್ ಹೇಳಿದರು.
ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯುಎಸಿ ಹಾಗೂ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ವಾಯ್ಸ್ ಆಫ್ ಆಕ್ಟಿಂಗ್ ಕುರಿತಾದ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲಾ ಕ್ಷೇತ್ರದಲ್ಲೂ ಪರೀಕ್ಷೆಗಳು ಎದುರಾಗುತ್ತದೆ. ಆದರೆ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಕಠಿಣ ಶ್ರಮಪಡಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಷೆಯ ಬಗ್ಗೆ ಗಮನ ಕೊಡಬೇಕು. ಧ್ವನಿ ಕಲಾವಿದನಿಗೆ ಅದು ತುಂಬಾ ಮುಖ್ಯ. ಪರಿಸ್ಥಿತಿಯನ್ನು ಗುರುತಿಸಿ ಮಾತನಾಡುವ ಕಲೆಯನ್ನು ಪ್ರಮುಖವಾಗಿ ಕಲಿಯಬೇಕು. ಪದಗಳಿಗೆ ಭಾವನೆಯನ್ನು ತುಂಬುವ ಕೆಲಸವನ್ನು ನಮ್ಮ ಧ್ವನಿ ಮಾಡಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿಕೊಂಡು, ಆ ಕ್ಷೇತ್ರದಲ್ಲಿ ಮುಂದುವರೆಯುವ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ನಂತರದಲ್ಲಿ ವಾಯ್ಸ್ ಆಕ್ಟಿಂಗ್, ವಾಯ್ಸ್ ಓವರ್ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಕ್ಷತ್ ಭಟ್, ಉಪನ್ಯಾಸಕಿಯರಾದ ಪ್ರಜ್ಞಾ ಬಾರ್ಯ, ಸೀಮಾ ಪೋನಡ್ಕ ಉಪಸ್ಥಿತರಿದ್ದರು. ದ್ವಿತೀಯ ಎಂಸಿಜೆ ವಿದ್ಯಾರ್ಥಿನಿ ಅರ್ಪಿತಾ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post