ಕಲ್ಪ ಮೀಡಿಯಾ ಹೌಸ್
ಪುತ್ತೂರು: ನೆಹರೂನಗರದ ವಿವೇಕಾನಂದ ಹಾಸ್ಟೆಲ್ಸ್ ನಲ್ಲಿ ವಿಷು ಹಬ್ಬ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
ವಿವೇಕಾನಂದ ಹಾಸ್ಟೆಲ್ಸ್ ನಳಂದಾ ಹುಡುಗರ ವಸತಿ ನಿಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯೋಗಶಿಕ್ಷಕ ಚಂದ್ರಶೇಖರ ಮಾತನಾಡಿ ರಾಮರಾಜ್ಯದ ಪ್ರತಿಷ್ಠಾಪನೆ, ಆರ್ಯ ಸಮಾಜದ ಸ್ಥಾಪನೆ ಹಾಗೂ ಈ ನಾಡಿನ ಮಹಾನ್ ಪುರುಷರನೇಕರ ಜನ್ಮದಿನ ಯುಗಾದಿಯಂದೇ ಆಗಿದೆ. ಭಾರತದಲ್ಲಿ ಚಂದ್ರಮಾನ ಮತ್ತು ಸೌರಮಾನ ಎಂಬ ಎರಡು ರೀತಿಯ ಯುಗಾದಿ ಆಚರಣೆಗಳು ಅಸ್ತಿತ್ವದಲ್ಲಿದೆ. ಸೌರಮಾನ ಯುಗಾದಿಯನ್ನು ಬಿಸು, ವಿಷು ಮುಂತಾದ ಗ್ರಾಮೀಣ ಹೆಸರುಗಳಿಂದ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ ಎಂದು ನುಡಿದರು
ಸಂವಿಧಾನ ಎನ್ನುವುದು ಒಣ ಉಪದೇಶಗಳ ಕಂತೆಯಲ್ಲ. ಅತ್ಯಂತ ಪವಿತ್ರವಾದದ್ದು ಮತ್ತು ದಿನದರ್ಶಿಕೆಯಂತೆ ಇರಬೇಕಾದದ್ದು. ನಮ್ಮೆಲ್ಲರ ವೈಯಕ್ತಿಕ ಜೀವನಕ್ಕೆ ಹೇಗೆ ಒಂದು ಚೌಕಟ್ಟಿದೆಯೋ, ಹಾಗೆಯೇ ಇಡೀ ರಾಷ್ಟ್ರಕ್ಕೆ ಒಂದು ಚೌಕಟ್ಟನ್ನು ಹಾಕಿಕೊಟ್ಟವರಲ್ಲಿ ಪ್ರಮುಖರು ಡಾ.ಬಿ.ಆರ್. ಅಂಬೇಡ್ಕರ್. ಸ್ವತಃ ಅನೇಕ ಶೋಷಣೆಗಳನ್ನು ಅನುಭವಿಸಿ, ದಲಿತರ ಮತ್ತು ಶೋಷಣೆಗೆ ಒಳಗಾದವರ ದನಿಯಾಗಿ ನಿಂತು ರಾಷ್ಟ್ರನಾಯಕರಾದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಳಂದಾ ವಸತಿ ನಿಲಯದ ನಿಲಯಪಾಲಕ ಶಿವಪ್ರಸಾದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಹಾಸ್ಟೆಲ್ಸ್ ನ ಮುಖ್ಯ ನಿಲಯಪಾಲಕ ಗೋವಿಂದರಾಜ ಶರ್ಮಾ, ನಿಲಯಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಣವ ಪ್ರಾರ್ಥಿಸಿ, ನಿಲಯ ಪಾಲಕ ಭರತ್ ಪೆರ್ಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ವಿವೇಕಾನಂದ ಹಾಸ್ಟೆಲ್ಸ್ ನ ನಿವೇದಿತಾ ಹುಡುಗಿಯರ ವಸತಿ ನಿಲಯದಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಕುಮಾರ್ ಶೇಣಿ, ಅಂಬೇಡ್ಕರ್ ಅವರನ್ನು ಮುಕ್ತವಾಗಿ ಅಧ್ಯಯನ ಮಾಡುತ್ತಾ ಹೋದ ಹಾಗೆ ಒಬ್ಬ ವಿಭಿನ್ನ ರಾಷ್ಟ್ರ ನಾಯಕನ ಪರಿಚಯ ನಮಗಾಗುತ್ತದೆ. ಭಾರತದಂತಹ ವಿಶಾಲ, ವೈವಿಧ್ಯಮಯ ರಾಷ್ಟ್ರಕ್ಕೆ ಒಂದು ಸಂವಿಧಾನವನ್ನು ರಚಿಸುವುದು ಸುಲಭದ ಮಾತಾಗಿರಲಿಲ್ಲ. ಅಂತಹ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಂಬೇಡ್ಕರರನ್ನು ಪ್ರಸ್ತುತ ಸೀಮಿತಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ ಎಂದು ನುಡಿದರು.
ನಾನು ಮೊದಲು ಭಾರತೀಯ ಹಾಗೂ ಅದೇ ಅಂತಿಮ ಎನ್ನುವುದನ್ನು ಧೈರ್ಯವಾಗಿ ಹೇಳುತ್ತಿದ್ದ ಅಂಬೇಡ್ಕರರನ್ನು ಮತ್ತು ಅವರ ಕೊಡುಗೆಗಳನ್ನು ನಾವು ಗುರುತಿಸುವಲ್ಲಿ ಎಡವಿದ್ದೇವೆ. ಅವರು ದೈವದೀನರಾಗಿ 34 ವರ್ಷಗಳ ನಂತರ ನೀಡಿದ ಭಾರತರತ್ನ ಪ್ರಶಸ್ತಿ ಇದಕ್ಕೆ ನಿದರ್ಶನ. ನಮಗೆ ಸಂವಿಧಾನ ಅರ್ಥವಾಗಲಿಲ್ಲ ಅಂದರೆ ನಮಗೆ ಅಂಬೇಡ್ಕರ್ ಅರ್ಥವಾಗಲಿಲ್ಲ ಎಂದರ್ಥ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಹಾಸ್ಟೆಲ್ಸ್ ನ ಮುಖ್ಯನಿಲಯಪಾಲಕ ಗೋವಿಂದರಾಜ ಶರ್ಮಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಸತಿ ನಿಲಯ ಪಾಲಕಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯಶಸ್ವಿ ಸ್ವಾಗತಿಸಿ, ಪ್ರಿಯಾ ವಂದಿಸಿದರು. ವಿದ್ಯಾರ್ಥಿನಿ ದಿವ್ಯಾ ವೈಯಕ್ತಿಕ ಗೀತೆ ಹಾಡಿದರು. ವಿದ್ಯಾರ್ಥಿನಿ ಶ್ರೀಜನಿ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಅರುಣ್ ಕಿರಿಮಂಜೇಶ್ವರ, ಪುತ್ತೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post