ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶಿವ ಹಾಗೂ ವಿಷ್ಣುವಿನ ನಡುವೆ ಯಾವುದೇ ಕಲಹವಿಲ್ಲ. ಆದರೆ ಇಂದು ಶೈವರು ಮತ್ತು ವೈಷ್ಣವರ ನಡುವೆ ಕಲಹ ಮುಗಿಯುವುದೇ ಇಲ್ಲ. ಶಿವ–ವಿಷ್ಣುವಿನ ಹೆಸರಿನಲ್ಲಿ ಜಗಳ ಮಾಡುವುದು ಸಲ್ಲದು ಎಂದು ಶ್ರೀರಾಮಚಂದ್ರಾಪುರ ಮಠದ (Ramachandrapura Matha) ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Shree) ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 18ರಂದು ಲಲಿತೋಪಾಖ್ಯಾನ ಪ್ರವಚನ ಅನುಗ್ರಹಿಸಿದ ಶ್ರೀಗಳು, ಮೋಹ, ಮಾಯೆ, ಸಮುದ್ರ ಮಥನ ಹಾಗೂ ದೇವಾಸುರರ ಪ್ರಸಂಗಗಳನ್ನು ವಿವರಿಸಿ ಜೀವನ ಸಂದೇಶ ನೀಡಿದರು.
ಮೋಹವೆಂಬುದು ದೇವಿಯ ಮಾಯೆ
ಮೋಹವೆಂಬುದು ದೇವಿಯ ಮಾಯೆಯಾಗಿದ್ದು, ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ. ಸಮುದ್ರ ಮಥನದಲ್ಲಿ ಅಮೃತ ಬರುವ ಮೊದಲು ವಿಷವೂ ಹೊರಬಂದಿತು. ಆ ವಿಷವನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕಾಯಿತು. ಅಮೃತ ಬಂದಾಗ ಅದು ಅಸುರರಿಗೆ ಸಿಗದಂತೆ ಮಾಡಲು ಮಹಾವಿಷ್ಣುವಿನ ಅಗತ್ಯವೂ ಎದುರಾಯಿತು ಎಂದು ಶ್ರೀಗಳು ವಿವರಿಸಿದರು.
ದೇವರು ಮತ್ತು ರಾಕ್ಷಸರು ಅಮೃತಕ್ಕಾಗಿ ಯುದ್ಧದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮೋಹಿನಿ ಪ್ರತ್ಯಕ್ಷಳಾಗುತ್ತಾಳೆ. ತನ್ನ ಉಪಸ್ಥಿತಿಯಿಂದಲೇ ಆಕೆ ಯುದ್ಧವನ್ನು ನಿಲ್ಲಿಸುತ್ತಾಳೆ. ಆದರೆ ಮೋಹದ ಜಾಲಕ್ಕೆ ಸಿಲುಕಿದ ರಾಕ್ಷಸರು ಕೊನೆಗೆ ಅಮೃತದಿಂದ ವಂಚಿತರಾಗುತ್ತಾರೆ. ಮೋಹವು ವಿವೇಕವನ್ನು ಮರೆಮಾಚುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಈ ಪ್ರಸಂಗ ಉದಾಹರಣೆ ಎಂದು ತಿಳಿಸಿದರು.

‘ತಲೆ ಪ್ರತಿಷ್ಠೆ ಮಾಡಿದರೆ ಪತನ ಖಂಡಿತ’
ಜೀವನದಲ್ಲಿ ತಲೆ ಪ್ರತಿಷ್ಠೆ ಮಾಡಬಾರದು ಎಂದು ಸಲಹೆ ನೀಡಿದ ಶ್ರೀಗಳು, ಸಮುದ್ರ ಮಥನದ ಪ್ರಸಂಗವನ್ನು ಉದಾಹರಿಸಿದರು. ದೇವಾಸುರರು ಸಮುದ್ರ ಮಥನ ಮಾಡುವ ಸಂದರ್ಭದಲ್ಲಿ ರಾಕ್ಷಸರು ವಾಸುಕಿಯ ತಲೆಯ ಭಾಗವೇ ತಮಗೆ ಬೇಕೆಂದು ಪಟ್ಟುಹಿಡಿದು ಅದನ್ನು ಪಡೆದುಕೊಳ್ಳುತ್ತಾರೆ. ಆದರೆ ಮಥನದ ವೇಳೆ ವಾಸುಕಿಯ ಬಾಯಿಯಿಂದ ಹೊರಬಂದ ವಿಷದ ಪರಿಣಾಮವಾಗಿ ರಾಕ್ಷಸರ ತೇಜಸ್ಸು ಕ್ಷಯಿಸುತ್ತದೆ ಎಂದರು.
ಹೀಗಾಗಿ ಜೀವನದಲ್ಲಿಯೂ ತಲೆ ಪ್ರತಿಷ್ಠೆ, ಅಹಂಕಾರಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಅಂತಿಮವಾಗಿ ಪತನ ಎದುರಾಗುತ್ತದೆ. ಪ್ರತಿಷ್ಠೆಗಿಂತ ವಿನಯ ಮತ್ತು ವಿವೇಕ ಮುಖ್ಯ ಎಂಬ ಸಂದೇಶವನ್ನು ಶ್ರೀಗಳು ನೀಡಿದರು.

ಶಿವ–ವಿಷ್ಣುವಿನ ಹೆಸರಿನಲ್ಲಿ ಜಗಳ ಬೇಡ
ಶಿವ ಹಾಗೂ ವಿಷ್ಣುವಿನ ನಡುವೆ ಯಾವುದೇ ಕಲಹವಿಲ್ಲ. ಆದರೆ ಶೈವರು ಮತ್ತು ವೈಷ್ಣವರ ನಡುವೆ ಮಾತ್ರ ಕಲಹಗಳು ನಡೆಯುತ್ತಲೇ ಇವೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
ಶಿವ ಮತ್ತು ವಿಷ್ಣುವಿನ ಹೆಸರಿನಲ್ಲಿ ನಡೆಯುವ ಜಗಳವನ್ನು ದೇವಲೋಕದಲ್ಲಿರುವ ಅವರಿಬ್ಬರೂ ನೋಡಿ ನಗುತ್ತಿರಬಹುದು. ದೇವರ ಹೆಸರಿನಲ್ಲಿ ಮನುಷ್ಯರು ಪರಸ್ಪರ ಜಗಳವಾಡುವುದು ಸರಿಯಲ್ಲ. ದೇವರ ತತ್ವವನ್ನು ಅರಿತು ಸಾಮರಸ್ಯದಿಂದ ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ದಂಪತಿ, ಅಶೋಕ ಭಟ್ ಉಪ್ಪುಂದ, ಪ್ರಭಾಕರ ಅಳಗೋಡು, ಹೇಮಂತ್ ಭಾಗ್ವತ್ ಸೇರಿದಂತೆ ಹಲವರು ಶ್ರೀಗಳ ಆಶೀರ್ವಾದ ಪಡೆದರು.
Also Read>> ಚಾಮರಾಜನಗರ ದಸರಾದಲ್ಲಿ ಮೊಳಗಿದ ‘ಡಿ ಬಾಸ್’ ಘೋಷಣೆ: ದರ್ಶನ್ ಪರ ಧನ್ವೀರ್ ಗೌಡ ಖಡಕ್ ಮಾತು!
ಮಂಗಳವಾರ ಶತಚಂಡಿಕಾ ಮಹಾಯಾಗ
‘ನವರಾತ್ರ ನಮಸ್ಯಾ’ ಕಾರ್ಯಕ್ರಮದ ಅಂಗವಾಗಿ ದೇವಿಯ ವಿಶೇಷ ಉಪಾಸನೆಯಾಗಿ ಅಕ್ಟೋಬರ್ 20ರ ಮಂಗಳವಾರ ಶತಚಂಡಿಕಾ ಮಹಾಯಾಗ ನೆರವೇರಲಿದೆ.
100 ದೇವಿ ಸಪ್ತಶತೀ ಪಾರಾಯಣದ ಮೂಲಕ ಶತಚಂಡಿಕಾ ಯಾಗ ನಡೆಯಲಿದ್ದು, ಪಾರಾಯಣ ಸೇರಿದಂತೆ ಮಹಾಯಾಗದ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ 50 ಋತ್ವಿಜರು ಭಾಗವಹಿಸಲಿದ್ದಾರೆ. ವಿಶೇಷ ಹೋಮಕುಂಡ ಸೇರಿದಂತೆ ಮಹಾಯಾಗಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













