ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇವಿಯನ್ನು (God) ಭೀತಿಯಿಂದಲ್ಲ, ಪ್ರೀತಿಯಿಂದ (Love) ಆರಾಧಿಸಬೇಕು. ಪ್ರೀತಿಯಿಂದ ಮಾಡುವ ಆರಾಧನೆಗೆ ಅರ್ಥವಿರುತ್ತದೆ, ಆದರೆ ಭೀತಿಯಿಂದ ಮಾಡುವ ಆಚರಣೆಗೆ ಯಾವುದೇ ಅರ್ಥವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ (Raghaveshwara Shri) ಮಹಾಸ್ವಾಮಿಗಳು ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಅ.21ರಂದು ನಡೆದ ‘ನವರಾತ್ರಿ ನಮಸ್ಯಾ’ ಮಹಾ ಸಮಾರೋಪದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ನವರಾತ್ರಿಯ ಆಧ್ಯಾತ್ಮಿಕ ಮಹತ್ವ ಹಾಗೂ ದೇವಿ ಆರಾಧನೆಯ ಉದ್ದೇಶವನ್ನು ವಿವರಿಸಿದರು.
ನಮ್ಮೊಳಗಿನ ದೇವಿಯನ್ನು ಕಾಣಲು ನವರಾತ್ರಿ ಸೂಕ್ತ ಕಾಲ
ನಮ್ಮೊಳಗೇ ದೇವಿಯ ಸಾನ್ನಿಧ್ಯವಿದ್ದು, ಹೃದಯ ಮಂದಿರದಲ್ಲಿರುವ ಆ ದೇವಿಯನ್ನು ಅಂತರ್ಮುಖಿಗಳಾಗಿ ಕಾಣಲು ನವರಾತ್ರಿ ಅತ್ಯಂತ ಸೂಕ್ತ ಕಾಲವಾಗಿದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಹೋಮ, ಪಾರಾಯಣ, ದೀಪ ನಮಸ್ಕಾರ ಸೇರಿದಂತೆ ನವರಾತ್ರಿಯಲ್ಲಿ ನಡೆಯುವ ವಿವಿಧ ಧಾರ್ಮಿಕ ಆಚರಣೆಗಳು ನಮ್ಮೊಳಗಿರುವ ದೇವಿಯ ಸಾನ್ನಿಧ್ಯವನ್ನು ಅನುಭವಿಸಲು ನೆರವಾಗುವ ಸಾಧನಗಳಾಗಿವೆ. ಸತ್ತ್ವ, ರಜೋ ಮತ್ತು ತಮೋಗುಣಗಳಿಂದಲೇ ಪ್ರಪಂಚ ನಿರ್ಮಾಣವಾಗಿದ್ದು, ಈ ಮೂರು ಗುಣಗಳೇ ತ್ರಿಗುಣಾತ್ಮಿಕಾ ದೇವಿಯ ಸ್ವರೂಪವಾಗಿವೆ. ಜೀವನದಲ್ಲಿ ಈ ಮೂರು ಗುಣಗಳ ಸಮತೋಲನವನ್ನು ಸಾಧಿಸುವುದನ್ನು ಕಲಿತರೆ ಜೀವನವನ್ನು ಯಶಸ್ವಿಯಾಗಿ ಮುನ್ನಡೆಸಬಹುದು ಎಂದು ತಿಳಿಸಿದರು.

Raghaveshwara Shri: ಉಪವಾಸದಿಂದ ಆರೋಗ್ಯ ವೃದ್ಧಿ
ನವರಾತ್ರಿಯಲ್ಲಿ ಉಪವಾಸದ ಆಚರಣೆಗೆ ವಿಶೇಷ ಮಹತ್ವವಿದೆ. ಸರಿಯಾದ ರೀತಿಯಲ್ಲಿ ಉಪವಾಸ ಆಚರಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳಬಹುದು. ಇದು ನವರಾತ್ರಿ ಆಚರಣೆಯಿಂದ ದೊರೆಯುವ ಬಾಹ್ಯ ಫಲವಾಗಿದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
‘ನವ’ ಎಂಬುದನ್ನು ಹೊಸತನದ ಕಾಲ ಎಂಬ ಅರ್ಥದಲ್ಲಿಯೂ ಪರಿಗಣಿಸಬಹುದು. ನವರಾತ್ರಿಯ ವ್ರತವನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡದೆ, ನಮ್ಮ ಜೀವನದಲ್ಲಿರುವ ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳಲು ಮತ್ತು ಹೊಸತನವನ್ನು ಅಳವಡಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪಾರಾಯಣದಿಂದ ದೇವಿಯ ಸಾನ್ನಿಧ್ಯದ ಅನುಭವ
ದೇವಿ ಪಾರಾಯಣವು ಕೇವಲ ಕಾಟಾಚಾರದ ಆಚರಣೆಯಾಗಬಾರದು ಎಂದು ರಾಘವೇಶ್ವರ ಶ್ರೀಗಳು ಹೇಳಿದರು. ಸಪ್ತಶತೀ ಹಾಗೂ ಲಲಿತೋಪಾಖ್ಯಾನಗಳಲ್ಲಿ ದೇವಿಯ ವಿವಿಧ ಅವತಾರಗಳು ಮತ್ತು ಲೀಲೆಗಳ ವಿಶೇಷತೆಗಳಿವೆ. ಅವುಗಳನ್ನು ಭಕ್ತಿಯಿಂದ ಓದುವ ಮೂಲಕ ದೇವಿಯ ಲೀಲೆಯನ್ನು ಮನಸ್ಸಿನಲ್ಲಿ ತುಂಬಿಕೊಳ್ಳಬಹುದು ಎಂದರು.
ಧ್ಯಾನದ ಮೂಲಕ ದೇವಿಯ ರೂಪವನ್ನು ಗಂಟೆಗಟ್ಟಲೆ ಮನಸ್ಸಿನಲ್ಲಿ ನೆಲೆಗೊಳಿಸುವುದು ಎಲ್ಲರಿಗೂ ಸುಲಭವಾಗುವುದಿಲ್ಲ. ಆದರೆ ಪಾರಾಯಣದ ಮೂಲಕ ದೇವಿಯ ಸಾನ್ನಿಧ್ಯವನ್ನು ದೀರ್ಘಕಾಲ ಮನಸ್ಸಿನಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದರು.
Also Read>> ವೇ2ವೆಲ್ತ್ ಇನ್ನು ‘ಶ್ರೀರಾಮ್ ಫೈನಾನ್ಷಿಯಲ್ ಸರ್ವಿಸಸ್’; ಅಮಿತ್ ಗೋಲಿಯಾ ಎಂಡಿ, ಸಿಇಒ
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಅವರು ಗುರುಭಿಕ್ಷಾ ಸೇವೆ ಸಮರ್ಪಿಸಿ ಶ್ರೀಗಳ ಆಶೀರ್ವಾದ ಪಡೆದರು. ಹಿರಿಯ ನ್ಯಾಯವಾದಿ ರಾಜಶೇಖರ ಹಿಲ್ಯಾರ್ ಹಾಗೂ ಖ್ಯಾತ ಗಾಯಕ ಗರ್ತಿಕೆರೆ ರಾಘಣ್ಣ ಕೂಡ ಶ್ರೀಗಳ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಂಚಾಲಕ ರಮೇಶ ಹೆಗಡೆ ಕೊರಮಂಗಲ ಸಭಾ ಪೂಜೆ ನೆರವೇರಿಸಿದರು. ಸಂಚಾಲಕ ದೀಪಕ ಹೆಗಡೆ ಗೋಳಿಕೈ ಕಾರ್ಯಕ್ರಮದ ಅವಲೋಕನ ಮಾಡಿದರು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ.ಎಲ್., ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಕಾರ್ಯಕ್ರಮದ ಸಂಚಾಲಕ ವಾದಿರಾಜ ಸಾಮಗ, ಶ್ರೀವತ್ಸ ಮೂಡುಗೋಡು, ಗಾಯತ್ರೀ ಭಾಗ್ವತ್ ಹಾಗೂ ಶಿವರಾಜ ಪೆರ್ಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







