ಬೆಂಗಳೂರು: ಗೋಸಂರಕ್ಷಣೆಗಾಗಿ ಕಳೆದ ಎರಡು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 25ನೆಯ ಚಾತುರ್ಮಾಸ್ಯ ವ್ರತ ಈ ಬಾರಿ ಗೋಸ್ವರ್ಗ ಚಾತುರ್ಮಾಸ್ಯವಾಗಿ ಆಚರಿಸಲ್ಪಡುತ್ತಿದೆ.
ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆಯವರೆಗೆ (ಜುಲೈ 27 ರಿಂದ ಸೆಪ್ಟೆಂಬರ್ 25ರವರೆಗೆ) ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಸಮೀಪದ ಶ್ರೀರಾಮದೇವ ಬಾನ್ಕುಳಿ ಮಠದಲ್ಲಿ ಲೋಕಾರ್ಪಣೆಗೊಂಡಿರುವ ವಿಶ್ವದ ಪ್ರಪ್ರಥಮ ಗೋಸ್ವರ್ಗದಲ್ಲಿ 25ನೆಯ ಚಾತುರ್ಮಾಸ್ಯ ವ್ರತ ಕೈಗೊಳ್ಳುವುದು ವಿಶೇಷ.
ಚಾತುರ್ಮಾಸ್ಯದ ಅಂಗವಾಗಿ ಪ್ರತಿದಿನ ಕಾಮಧೇನು ಹವನ, ಶ್ರೀಕರಾರ್ಚಿತ ಪೂಜೆ, ಮಾತೆಯರಿಂದ ಭಜನೆ ಮತ್ತು ಕುಂಕುಮಾರ್ಚನೆ, ನಡೆಯಲಿದ್ದು, ಗಣ್ಯ-ಮಾನ್ಯರಿಗೆ ಸ್ವರ್ಗಸವ್ಮಾನ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 12.30ಕ್ಕೆ ಶ್ರೀಗಳಿಂದ ಶ್ರೀಮದ್ಭಾಗವತ ಪ್ರವಚನ ಹಾಗೂ ಭಕ್ತಾದಿಗಳಿಗೆ ಮಂತ್ರಾಕ್ಷತೆ ಅನುಗ್ರಹ ನಡೆಯಲಿದ್ದು, ಸಂಜೆ ಗೋಗಂಗಾರತಿಯಂಥ ವಿಶಿಷ್ಟ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾಗಲಿವೆ.
ಗೋವಿನ ಸಂರಕ್ಷ ಣೆ-ಸಂವರ್ಧನೆ, ಸಂಶೋಧನೆ ಎಂಬ ತತ್ವದಡಿ ’ಗೋವು-ಲಕ್ಷ್ಮಿ’ ಎಂಬ ನೈಜತೆಯ ಸಾಧಿಸಿ, ಜನತೆಗೆ ತೋರಿಸಿ, ಜಗವು ಗೋವಿನತ್ತಸಾಗಿ ಸುಖ ಹೊಂದಲಿ ಎಂಬ ಸದಾಶಯದೊಂದಿಗೆ ಸಂಪನ್ನವಾಗಲಿರುವ ಗೋಸ್ವರ್ಗ ಚಾತುರ್ಮಾಸ್ಯವು ಜುಲೈ 27 ಕ್ಕೆ ಮಠೀಯ ಪದ್ಧತಿಯಂತೆ ವ್ಯಾಸಪೂಜೆಯೊಂದಿಗೆ ಶ್ರೀಗಳು ಚಾತುರ್ಮಾಸ್ಯ ವ್ರತಸಂಕಲ್ಪ ಕೈಗೊಳ್ಳುವುದರ ಮೂಲಕ ಶುಭಾರಂಭವಾಗಲಿದೆ.
ಆಗಸ್ಟ್ 1 ರಿಂದ ಆಗಸ್ಟ್ 3ರವರೆಗೆ:
ಸ್ವರ್ಗಯಕ್ಷ ಸಂಭ್ರಮ ಕಾರ್ಯಕ್ರಮವಿದ್ದು, ಮೂರು ದಿನಗಳ ಕಾಲ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅಲ್ಲದೇ, ಚಾತುರ್ಮಾಸ್ಯದ ಅವಧಿಯಲ್ಲಿ 10 ಯಕ್ಷ ಗಾನ ಪ್ರಸಂಗಗಳ ಪ್ರದರ್ಶನ ನಡೆಯಲಿದ್ದು, ನಾಡಿನ ಖ್ಯಾತ ಯಕ್ಷ ಕಲಾವಿದರು ಭಾಗವಹಿಸಲಿದ್ದಾರೆ.
ಆಗಸ್ಟ್ 8 ರಿಂದ ಆಗಸ್ಟ್ 12ರ ವರೆಗೆ:
ಸ್ವರ್ಗಸಂಗೀತ ಸಂಭ್ರಮ ಕಾರ್ಯಕ್ರಮವಿದ್ದು, ನಾದದ್ವೈತ, ಗೋಕುಲನಾದ, ಗೋನಾಧಸುಧಾ, ಸಾತ್ವಿಕ ಸಂಗೀತ, ಧೇನು-ನಾದ-ಅನುಸಂಧಾನ ಎಂಬ ಕಾರ್ಯಕ್ರಮದಡಿ ಪ್ರತಿದಿನವೂ ಖ್ಯಾತ ಸಂಗೀತ ಕಲಾವಿದರಿಂದ ಗಾಯನ ಕಾರ್ಯಕ್ರಮ ಇರಲಿದೆ.
ಸೆಪ್ಟೆಂಬರ್ 2:
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 8ರ ವರೆಗೆ ಶ್ರೀಕೃಷ್ಣಕಥಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಗಾಯನ, ವಾದನ, ನರ್ತನ, ಚಿತ್ರ, ರೂಪಕಗಳ ಸಂಯೋಜನೆಯೊಂದಿಗೆ ಶ್ರೀರಾಮಕಥಾ ಮಾದರಿಯಲ್ಲಿ ಸಂಪನ್ನಗೊಳ್ಳಲಿದೆ. ಸೆಪ್ಟೆಂಬರ್ 13ರ ಗಣೇಶ ಚತುರ್ಥಿ ದಿನದಂದು ವಿಶೇಷ ಪೂಜೆ, ಸೆಪ್ಟೆಂಬರ್ 25ರಂದು ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಹಾಗೂ ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯ ಪೂರ್ಣಗೊಳ್ಳಲಿದೆ.
ರಾಷ್ಟ್ರೀಯ ಗವ್ಯ ಸಮ್ಮೇಳನ:
ಚಾತುರ್ಮಾಸ್ಯದ ಅವಧಿಯಲ್ಲಿ ರಾಷ್ಟ್ರೀಯ ಗವ್ಯ ಸಮ್ಮೇಳನ ನಡೆಯಲಿದ್ದು, ರಾಷ್ಟ್ರಮಟ್ಟದ ಗೋವಿಜ್ಞಾನಿಗಳು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ. ಗವ್ಯೋತ್ಪನ್ನಗಳ ಕುರಿತು ಚರ್ಚೆ ನಡೆಯಲಿದ್ದು, ಗವ್ಯೋತ್ಪನ್ನಗಳ ಮಾರುಕಟ್ಟೆ, ಗವ್ಯಾಧಾರಿತ ಉತ್ಪನ್ನಗಳ ಸಂಶೋಧನೆ ಹಾಗೂ ಅಭಿವೃದ್ಧಿ ಹಾಗೂ ಬಳಕೆಯ ಕುರಿತು ವಿಚಾರ ಸಂಕಿರಣ ಬೆಳಕು ಚೆಲ್ಲಲಿದೆ.
ಪ್ರತಿವ್ಯಕ್ತಿ ಗೋಸ್ವರ್ಗದಲ್ಲಿ ಗಿಡ ನೆಡುವುದು
ಚಾತುರ್ಮಾಸ್ಯದ ಸಮಯದಲ್ಲಿ ಗೋಸ್ವರ್ಗಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ಗಿಡ ನಡಬೇಕು ಎಂಬುದು ಪೂಜ್ಯ ಶ್ರೀಗಳ ಆಶಯವಾಗಿದ್ದು, ಪ್ರತಿಯೊಬ್ಬರು ಒಂದೊಂದು ಗಿಡ ನಡೆಲು ಅವಕಾಶ ಕಲ್ಪಿಸಲಾಗಿದೆ. ಹೂವು ಹಣ್ಣಿನ ಗಿಡಗಳು ಸೇರಿದಂತೆ ಪಶ್ಚಿಮಘಟ್ಟದ ವಿಶಿಷ್ಟ ಸಸ್ಯಸಂಕುಲವನ್ನು ಗೋಸ್ವರ್ಗದ ಪರಿಸರದಲ್ಲಿ ಬೆಳೆಸುವ ಯೋಜನೆ ರೂಪಿಸಲಾಗಿದೆ.
Discussion about this post