ದೊಡ್ಡ ದೊಡ್ಡ ಆಲದ ಮರಗಳ (ಅನುಭವಿ ಕಲಾವಿದರ) ನಡುವೆ ತನ್ನ ಪಾಡಿಗೆ ಸುಂದರವಾಗಿ ನಸುನಗುವ, ತನ್ನ ವಿನಯ, ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಎಳೆಚಿಗುರು ರಕ್ಷಿತ್.
ಹೌದು.. ನಾನ್ಮಾತಾಡ್ತಿರೋದು ಹನುಮಗಿರಿ ಎಂಬ ಮಹಾಮೇಳದ ಯುವ ಕಲಾವಿದ ರಕ್ಷಿತ್ ಶೆಟ್ಟಿ ಫಡ್ರೆಯ ಕುರಿತು. ವಯಸು ಚಿಕ್ಕದಾದ್ರೂ ಅಪ್ಪಟ ಪ್ರತಿಭಾವಂತ. ನಟನೆಯಲ್ಲಿ ಶ್ರದ್ಧೆ, ರಂಗಸ್ಥಳದಲ್ಲಿ ಪಾತ್ರದೊಳಗೆ ತಾದ್ಯಾತ್ಮತೆ.. ಕೃಷ್ಣ, ಸುಧನ್ವ, ಚಂದ್ರದೇವ, ಅಗ್ನಿ, ವರುಣ, ಮೊದಲಾದ ಪುಂಡು ವೇಷಗಳಿರಲಿ, ರಂಭೆ, ಆಸ್ತಿ, ಪ್ರಮೀಳೆ, ರಾಧಾ, ಮೇನಕೆ, ಸುಷಮೆ ಮೊದಲಾದ ಸ್ತ್ರೀ ಪಾತ್ರಗಳಿರಲಿ, ತನಗೆ ತಿಳಿದುದನ್ನು ಯಕ್ಷಗಾನೀಯ ಚೌಕಟ್ಟಿನೊಳಗೆ ಅಚ್ಚುಕಟ್ಟಾಗಿ ಪ್ರದರ್ಶಿಸಬಲ್ಲ ರಕ್ಷಿತ್’ನ ನಾಟ್ಯದಲ್ಲಾಗಲೀ, ವೇಷದಲ್ಲಾಗಲೀ, ಮಾತುಗಾರಿಕೆಯಲ್ಲಾಗಲೀ ಗುಲಗಂಜಿ ದೋಷವಿಲ್ಲ. ಮೇಳದಲ್ಲಿ ಮೂರನೇ ಸ್ತ್ರೀ ವೇಷಧಾರಿಯಾದರೂ ಯಾವುದೇ ಬೇಸರವಿಲ್ಲ. ಸಿಕ್ಕ ಅವಕಾಶಗಳನ್ನೇ ಅದ್ಭುತವಾಗಿ ಬಳಸಿಕೊಳ್ಳುವ ರಕ್ಷಿತ್’ಗೆ ಬೆಳೆಯುವ ಹಸಿವಿದೆ.

ಮತ್ತೊಂದು ವಿಶೇಷ ಅಂದ್ರೆ ಈ ಯಕ್ಷಗಾನದಲ್ಲಿ ಈ ನಾಟ್ಯಶೈಲಿಯನ್ನು ಕ್ಲಾಸ್ ಪ್ರೇಕ್ಷಕರೂ ಒಪ್ಪಿಕೊಂಡಿದ್ದು. ಹನುಮಗಿರಿ ಮೇಳ ಅಂದ್ರೆ ಅಲ್ಲಿರೋದು ಘಟಾನುಘಟಿ ಕಲಾವಿದರೇ. ಹಾಗಾಗಿಯೇ. ಹನುಮಗಿರಿ ಮೇಳಕ್ಕೆ ಇಂಥದ್ದೇ ಒಂದು ಪ್ರೇಕ್ಷಕ ವರ್ಗವಿದೆ. ಅದು ಅಪ್ಪಟ ಯಕ್ಷಗಾನೀಯ ಶೈಲಿಯನ್ನು ನಿರೀಕ್ಷೆ ಮಾಡುವ ಕ್ಲಾಸ್ ಪ್ರೇಕ್ಷಕ ವರ್ಗ, ಪ್ರಸಂಗವನ್ನು ವಿಮರ್ಶೆ ಮಾಡಬಲ್ಲ ವಿದ್ಯಾವಂತ ಪ್ರೇಕ್ಷಕ ವರ್ಗ. ಹಾಗಾಗಿ ಯಕ್ಷಗಾನದಲ್ಲಿ ಹೊಸತು ಪ್ರಯೋಗ ಮಾಡಬೇಕಾದ್ರೆ ಇಂತಹಾ ಪ್ರೇಕ್ಷಕ ವರ್ಗವನ್ನು ಒಪ್ಪಿಸುವುದು ಸುಲಭದ ಮಾತಲ್ಲ. ಇವರು ಲೋಪದೋಷಗಳನ್ನು ಬಲುಬೇಗ ನೋಟಿಫೈ ಮಾಡ್ತಾರೆ. ಉತ್ತಮ ಅಂಶಗಳನ್ನು ಪ್ರಾಮಾಣಿಕವಾಗಿ ಮೆಚ್ಚಿಕೊಳ್ತಾರೆ.

ಒಬ್ಬ ಕಲಾವಿದ ಬೆಳೆಯಬೇಕಾದರೆ ಮೊದಲಾಗಿ ಪ್ರಯೋಗದ ಪ್ರಯತ್ನಶೀಲತೆ ನಂತರ ಅದಕ್ಕೆ ಎದುರಾಗುವ ಇಂತಹಾ ವಿಮರ್ಶೆಗಳು ತೀರಾ ಅತ್ಯಗತ್ಯ. ಇಂತಹಾ ಒಂದು ಪ್ರೇಕ್ಷಕ ವರ್ಗವನ್ನು ಹೊಂದಿರುವ ಮೇಳ ಅದು ಹನುಮಗಿರಿ ಮೇಳ. ಮಾಯಾ ವಿಹಾರಿ ಪೌರಾಣಿಕ ಪ್ರಸಂಗದ ಮೊದಲಲ್ಲೆ ಬರುವ ಈ ದೀಪ ನರ್ತನವನ್ನು ಯಕ್ಷಗಾನಕ್ಕೆ ಲೋಪವಾಗದಂತೆ ಜಾಣ್ಮೆಯಿಂದ ಸೇರಿಸಿಕೊಂಡಿರುವ ರೀತಿ ಮೆಚ್ಚತಕ್ಕಂತದ್ದು. ಇದೇ ಕಾರಣಕ್ಕೆ ಸಾಂಪ್ರದಾಯಿಕತೆಯನ್ನು ಬಯಸುವ ವರ್ಗವೂ ತುಟಿ ಪಿಟಿಕ್ ಎಂದಿಲ್ಲ. ಸತತ 25 ನಿಮಿಷಗಳ ಕಾಲ ಅನಾಯಾಸವಾಗಿ ಹೆಜ್ಜೆ ತಪ್ಪದಂತೆ ಆಕರ್ಷಕವಾಗಿ ನರ್ತಿಸುವ ಮೂಲಕ ರಕ್ಷಿತ್ ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ. ಸತತ ಅಭ್ಯಾಸ, ಹೊಸ ಪ್ರಯೋಗದ ಉತ್ಸಾಹ, ಹಿರಿಯ ಕಲಾವಿದರ ಪ್ರೋತ್ಸಾಹ, , ನಾಟ್ಯದೊಳಗೆ ಪೂರ್ತಿ ತನ್ಮಯತೆ ಇವೆಲ್ಲವೂ ಇಪ್ಪತ್ತೈದು ನಿಮಿಷಗಳ ನಾಟ್ಯ ಪ್ರಸ್ತುತಿಯಲ್ಲಿ ಎರಕವಾಗಿದೆ.
ಮಯಾವಿಹಾರಿ ಪ್ರಸಂಗದಲ್ಲಿ ಕೂಚುಪುಡಿ ಶೈಲಿಯನ್ನು ಹೋಲುವ ಈ ನೃತ್ಯ ಪ್ರದರ್ಶನಕ್ಕೂ ಮುಂಚೆ ಮೇಳದ ಯಜಮಾನರಾದ ಶ್ಯಾಂ ಭಟ್, ಮೇಳದ ಇತರ ಕಲಾವಿದರು, ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯ ಪದ್ಯಾಣ ಮೊದಲಾದವರು ಕೂತು ಸಮಾಲೋಚನೆ ಮಾಡಿದ ನಂತರವೇ ಇದು ರಂಗಪ್ರಯೋಗವಾಗಿದ್ದು. ಅದೂ ಮೊದಲ ಬಾರಿಗೆ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಸಂಪಾಜೆ ಯಕ್ಷೋತ್ಸವದಲ್ಲಿ ಎಂದು ನೆನಪಿಸಿಕೊಳ್ಳುತ್ತಾರೆ ರಕ್ಷಿತ್.

ನಾಟ್ಯವೇ ನನ್ನ ಸ್ಟ್ರೆಂಥ್ ಎಂದು ಹೇಳಿಕೊಳ್ಳುವ ರಕ್ಷಿತ್, ನಾಟ್ಯವೈಭವದ ಬೇಡಿಕೆಯ ಕಲಾವಿದನಾಗಿ ಫಡ್ರೆ ಗುರುತಿಸಿಕೊಂಡಿದ್ದಾರೆ. ಇದೇ ಹಿನ್ನಲೆಯಲ್ಲಿ ಭರತನಾಟ್ಯವನ್ನು ಕಲಿತವರಾಗಿ ತಮ್ಮ ಒಲವು ಭರತನಾಟ್ಯದ ಕಡೆಗೋ ಅಥವಾ ಯಕ್ಷಗಾನವೋ ಎಂಬರ್ಥದಲ್ಲಿ ರಕ್ಷಿತ್’ಗೆ ಪ್ರಶ್ನೆಗಳನ್ನೆಸೆದರೆ ಕೊನೆಗೆ ಬಂದು ನಿಲ್ಲುವ ಪ್ರೀತಿ, ಮಾತು ಅದು ಯಕ್ಷಗಾನ. ತೆಂಕು ಬಡಗು ಎರಡು ತಿಟ್ಟುಗಳಲ್ಲೂ ಬೇಡಿಕೆ ಗಳಿಸಿಕೊಂಡಿರುವ ಪ್ರತಿಭಾವಂತ ಕಲಾವಿದ ರಕ್ಷಿತ್ ಫಡ್ರೆ.

ಮೇಳದಲ್ಲಿ ಮೊದಲ ಬಾರಿಗೆ ಗುರುತಿಸಿಕೊಂಡದ್ದು ಪುಂಡು ವೇಷಗಳಲ್ಲಾದರೂ ಮುಂದೆ ಸ್ತ್ರೀ ಪಾತ್ರಕ್ಕೂ ಒಗ್ಗಿಕೊಳ್ಳುವಷ್ಟು ನೈಪುಣ್ಯತೆ ಪಡೆದುಕೊಳ್ಳುತ್ತಾರೆ. ಪ್ರಸ್ತುತ ಸ್ತ್ರೀವೇಷದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ರಕ್ಷಿತ್ ಮೊದಲ ಬಾರಿಗೆ ಸ್ತ್ರೀ ವೇಷ ಮಾಡಿದ್ದು ಬಪ್ಪನಾಡು ಮೇಳದಲ್ಲಿ ಸಪ್ತ ಮಾತೃಕೆಯರಲ್ಲೊಬ್ಬರಾಗಿ.
ಅದಾದ ಬಳಿಕ ಸಸಿಹಿತ್ಲು ಮೇಳದಲ್ಲಿ ಪಾಪಣ್ಣ ವಿಜಯ ಪ್ರಸಂಗದಲ್ಲಿ ಅನಿವಾರ್ಯವಾಗಿ ರೂಪಸುಂದರಿ ಪಾತ್ರ ಮಾಡುವ ಕಲಾವಿದ ಗೈರಾಗಿದ್ದ ಕಾರಣ ಆ ಪಾತ್ರವನ್ನು ರಕ್ಷಿತ್ ನಿಭಾಯಿಸಬೇಕಾಗಿ ಬಂತು. ಆ ಸಂದರ್ಭ ಹಿರಿಯ ಕಲಾವಿದರಾದ ರಮೇಶ್ ಕುಲಶೇಖರ್, ಸಂಜಯ್ ಕುಮಾರ್ ಗೋಣಿ ಬೀಡು ಮೊದಲಾದವರು ಸ್ತ್ರೀ ಪಾತ್ರ ಮಾಡುವಂತೆ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ.
ಯಕ್ಷಗಾನದ ನಿಪುಣ ಕಲಾವಿದನಾಗಿ ತಾನು ಬೆಳೆಯುವುದರ ಜೊತೆಗೆ ಯಕ್ಷಗುರುವಾಗಿ ಕೂಡಾ ಡಿಮಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ‘‘ನಮ್ಮಲ್ಲೊಂದು ಕ್ಲಾಸ್ ಮಾಡಿ, ನಮ್ಮಲ್ಲೊಂದು ಮಾಡಿ’’ ಎಂದು ಇವರಲ್ಲಿ ಯಕ್ಷಗಾನದ ತರಬೇತಿ ಪಡೆದುಕೊಳ್ಳಲು ಕ್ಯೂ ನಿಲ್ಲುವವರಿದ್ದಾರೆ. ಸದ್ಯ 600 ಕ್ಕೂ ಅಧಿಕ ಶಿಷ್ಯಂದಿರನ್ನು ಹೊಂದಿರುವ ರಕ್ಷಿತ್ ನಾಟ್ಯ ಶೈಲಿ ಮುಂದಿನ ತಲೆಮಾರಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಹಳಷ್ಟಿದೆ. ಅಂದ ಹಾಗೆ ಪಟ್ಲ ಸತೀಶ್ ಶೆಟ್ಟಿಯವರ ಪುತ್ರ ಹೃದಾನ್ ಪಟ್ಲ ಕೂಡಾ ರಕ್ಷಿತ್ ಶೆಟ್ಟಿ ಪಡ್ರೆಯ ಶಿಷ್ಯ.
Sharing of best practices-
ಹೌದು… ಇಂತಹ ಒಂದು ದೊಡ್ಡ ಮಟ್ಟದ ಸಂಭ್ರಮ ರಕ್ಷಿತ್ ಶೆಟ್ಟಿ ಫಡ್ರೆ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ರಕ್ಷಿತ್ ಶೆಟ್ಟಿ ವಿವಿಧ ಕಡೆಗಳಲ್ಲಿ ನಡೆಸಿಕೊಡುವ ಯಕ್ಷಗಾನ ತರಗತಿಗಳ ಆಯ್ದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.. ರಕ್ಷಿತ್ ಮಾರ್ಗದರ್ಶನದಲ್ಲಿ ತಾವು ಕಲಿತ ಉತ್ತಮ ವಿಚಾರಗಳ ವಿನಿಮಯ ಆ ವಿದ್ಯಾರ್ಥಿಗಳ ನಡುವೆ ನಡೆಯೋದಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಿದೆ.
ಈ ಯಕ್ಷಗಾನ ಗಾನ ನಾಟ್ಯ ವೈಭವದ ರಸದೌತಣ ಸವಿಯುವ ಅವಕಾಶವನ್ನು ಮಕ್ಕಳ ಪೋಷಕರಿಗೂ, ಸಾರ್ವಜನಿಕರಿಗೂ ಒದಗಿಸಲಾಗಿದೆ.
ಈ ಬಾರಿಯ ಈ ವಾರ್ಷಿಕ ಕೂಟ ಯಕ್ಷ ಸಿದ್ದಿ ಸಂಭ್ರಮ-2019 ಎಂಬ ಶಿರೋನಾಮೆ ಯಡಿಯಲ್ಲಿ ನವಂಬರ್ ಅದ್ದೂರಿಯಾಗಿ ಮೂಡಿಬರಲಿದೆ. ಬಡಗು ತಿಟ್ಟಿನ ಭಾಗವತರಾದ ಪ್ರಸಾದ್ ಮೊಗೆಬೆಟ್ಟು ವಿರಚಿತ, ಯೋಧ ಧರ್ಮ, ವರಂ ಕರ್ಮ.. ಬಂದೂಕು ಮತ್ತು ಬದುಕು ಎಂಬ ವಿನೂತನ ಪರಿಕಲ್ಪನೆ ಯಕ್ಷಗಾನದಲ್ಲಿ ಜೀವ ಪಡೆದುಕೊಳ್ಳಲಿದೆ. ಪ್ರಮುಖವಾಗಿ ಯೋಧರಿಗಾಗಿಯೇ ಸಮರ್ಪಣೆಯಾಗುತ್ತಿರುವ ಈ ಕಾರ್ಯಕ್ರಮ ಅನೇಕ ಕುತೂಹಲಗಳಿಗೆ ಕಾರಣವಾಗಿದೆ.

ಶೃಂಗಾರ ಪಾತ್ರಗಳಿಗೆ ಬ್ರಾಂಡ್ ಆಗಿರುವ ರಕ್ಷಿತ್ ಗೂ ಸವಾಲಿನ ಪಾತ್ರಗಳನ್ನು ಮಾಡುವ ಮಹದಾಸೆಯಿದೆ. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗಬಾರದೆನ್ನುವ ಪ್ರಜ್ಞೆಯಿದೆ. ಹಾಗಾಗಿ ಮುಂದೊಮ್ಮೆ ಅವರ ಪ್ರತಿಭೆ ಸ್ಪೋಟಗೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಮಹತ್ವಾಕಾಂಕ್ಷಿ ಈ ಯಕ್ಷ ಚೈತನ್ಯ
ಯಕ್ಷ ಚೈತನ್ಯ ಎಂಬ ಬಿರುದು ರಕ್ಷಿತ್ ಮುಕುಟಕ್ಕೆ ಮತ್ತೊಂದು ಗರಿ. ಎಷ್ಟೇ ಪ್ರಸಿದ್ಧಿ ಗಳಿಸಿಕೊಂಡರೂ ಕಲಿಕೆಗೆ ಕೊನೆಯೇ ಇಲ್ಲ ಅನ್ನೋ ಹಾಗೆ ರಕ್ಷಿತ್ ಕಲೆಯೆಂಬ ಸಾಗರದಲ್ಲಿ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿ. ಯಾಕಂದ್ರೆ ಬಡಗು ತಿಟ್ಟಿನ ನಾಟ್ಯ ಪ್ರಕಾರವನ್ನು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯರಾದ ಪ್ರತೀಶ್ ಅವರಿಂದ ಸಿದ್ಧಿಸಿಕೊಳ್ಳುತ್ತಿದ್ದಾರೆ.. ಮುಂದೆ ಬಡಗು ತಿಟ್ಟಿನ ತರಗತಿಯನ್ನು ನಡೆಸುವ ಇರಾದೆಯನ್ನು ಹೊಂದಿದ್ದಾರೆ.











Discussion about this post