ಶಿವಮೊಗ್ಗ: ವಿಶ್ವರಂಗ ಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗ ರಂಗಾಯಣದಲ್ಲಿ ಐದು ದಿನಗಳ ಕಾಲ ರಂಗೋತ್ಸವ ಹಾಗೂ ಪಿ.ಲಂಕೇಶ್ ಅವರಿಗೆ ರಂಗನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಎಂ. ಗಣೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರಂಗೋತ್ಸವ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿಯ ರಂಗೋತ್ಸವವನ್ನು ಪಿ. ಲಂಕೇಶರಿಗೆ ರಂಗನಮನ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿದ್ದು, ಐದು ನಾಟಕಗಳನ್ನು ಪ್ರದರ್ಶಿಸಲಾಗುವುದು. ಶಿವಮೊಗ್ಗ ರಂಗಾಯಣದಲ್ಲಿ ಈ ಸಾಲಿನಲ್ಲಿ ಹೊಸದಾಗಿ ಸಿದ್ಧಪಡಿಸಲಾಗಿರುವ ಮೂರು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ.
ಇದರಲ್ಲಿ ಮಾರ್ಚ್ 27ರಂದು ಪ್ರೊ.ಅರವಿಂದ ಮಾಲಗತ್ತಿ ಅವರ ಆತ್ಮಕಥೆ ಆಧಾರಿತ ಎಂ.ಗಣೇಶ್ ನಿರ್ದೇಶನದ ‘ಗೌರ್ಮೆಂಟ್ ಬ್ರಾಹ್ಮಣ’, ಮಾ.28ರಂದು ಬಂಗಾಳಿ ಮೂಲದ ಬಾದಲ್ ಸರ್ಕಾರ್ ಅವರ ‘ಮೆರವಣಿಗೆ’ ನಾಟಕ ಪ್ರದರ್ಶನವಿದ್ದು, ಪಿ.ಗಂಗಾಧರ ಸ್ವಾಮಿ ಅವರು ನಿರ್ದೇಶಿಸಿದ್ದಾರೆ. ಮಾ.29ರಂದು ಮಣಿಪುರದ ಜಾಯ್ ಮೈಸ್ನಾಂ ನಿರ್ದೇಶನದ ‘ಇದಕ್ಕೆ ಕೊನೆ ಎಂದು?’ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.30ರಂದು ಮಂಜುನಾಥ ಎಲ್ ಬಡಿಗೇರ್ ನಿರ್ದೇಶನದ ಕೆ.ವಿ.ಸುಬ್ಬಣ್ಣ ರಂಗಸಮೂಹ ಹೆಗ್ಗೋಡು ಅಭಿನಯಿಸಿರುವ ‘ಸಂದೇಹ ಸಾಮ್ರಾಜ್ಯ’, ಮಾ.31ರಂದು ಶ್ರೀನಿವಾಸ ವೈದ್ಯರ ಬರಹಗಳನ್ನು ಆಧರಿಸಿದ ಪಾಶ್ವ ಸಂಗೀತ ನಾಟಕ ಪ್ರದರ್ಶನವಿದ್ದು ಬಿ.ಪಿ. ಅರುಣ್ ಅವರು ಇದಕ್ಕೆ ರಂಗರೂಪ ನೀಡಿದ್ದಾರೆ. ಮೈಸೂರಿನ ರಂಗವಲ್ಲಿ ತಂಡ ನಾಟಕ ಪ್ರದರ್ಶಿಸಲಿದೆ ಎಂದವರು ಹೇಳಿದರು.
ರಂಗೋತ್ಸವವನ್ನು ಮಾ.27ರಂದು ಸಂಜೆ 6.30ಕ್ಕೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜೋಗನ್ ಶಂಕರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ರಂಗನಿರ್ದೇಶಕ ಶ್ರೀಪಾದ ಭಟ್, ನಿವೃತ್ತ ಕುಲಸಚಿವ ಪ್ರೊ.ಶ್ರೀಕಂಠ ಕೂಡಿಗೆ, ಚಂದ್ರಶೇಖರ ಹಿರೆಗೋಣಿಗೆರೆ ಭಾಗವಹಿಸುವರು. ಮಾ.31ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಬಿ. ಚಂದ್ರೇಗೌಡ ಅವರ ಸಮಾರೋಪ ನುಡಿ, ರಂಗಕರ್ಮಿ ವೈದ್ಯ ಅವರು ಅನಿಸಿಕೆ ವ್ಯಕ್ತಪಡಿಸುವರು ಎಂದು ಹೇಳಿದರು.
ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ರಂಗೋತ್ಸವದ ಸಂಚಾಲಕ ಕಾಂತೇಶ ಕದರಮಂಡಲಗಿ ಉಪಸ್ಥಿತಿತರಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post