ತಮ್ಮ ಸಿದ್ಧಾಂತ ಮತ್ತು ಕೃತಿಗಳ ಮೂಲಕ ಜನರಿಗೆ ಆಧ್ಯಾತ್ಮದ ಬೆಳಕನ್ನು ತೋರಿದ ಶ್ರೀ ವಿಜಯೀಂದ್ರತೀರ್ಥರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮಗುರುಗಳು. ಜೂನ್ 30 ವಿಜಯೀಂದ್ರ ಆರಾಧನೆ ಹಿನ್ನೆಲೆಯಲ್ಲಿ ಈ ಬರಹ.
ನಮ್ಮ ದೇಶದ ಪ್ರತಿಯೊಬ್ಬ ದಾರ್ಶನಿಕರೂ ತಮ್ಮ ತಮ್ಮ ಚಿಂತನೆಗಳ ಪಕ್ವತೆ-ಪೂರ್ಣತೆಗಳನ್ನು ಸಾಧಿಸುವುದರ ಜೊತೆಗೆ ಇತರ ದರ್ಶನಗಳ ಅಕೌಶಲವನ್ನು ತಮ್ಮ ಕೃತಿಗಳಲ್ಲಿ ನಿರೂಪಿಸಿದ್ದಾರೆ. ಸತ್ಯಶೋಧನೆಯ ದೃಷ್ಟಿಯಿಂದ ಮತ್ತು ಸತ್ಯವನ್ನು ಗೌರವಿಸುವ ಹಿನ್ನೆಲೆಯಲ್ಲಿ ಇಂತಹ ಆರೋಗ್ಯಕರ ಚರ್ಚೆಗಳು ಈ ದೇಶದಲ್ಲಿ ಸಹಸ್ರ ಸಹಸ್ರಮಾನಗಳಿಂದ ನಡೆದುಕೊಂಡು ಬಂದಿವೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಪರಮಗುರುಗಳೇ ಶ್ರೀ ವಿಜಯೀಂದ್ರತೀರ್ಥರು. ಇವರ ವಿದ್ವತ್ತು, ತಪಃಸಿದ್ಧಿ ಅನನ್ಯ. ಮಾಡಿದ ಪವಾಡಗಳು ಇಂದಿಗೂ ದಂತಕಥೆಯಾಗಿವೆ. ಶ್ರೀರಾಘವೇಂದ್ರಸ್ವಾಮಿಗಳ ಅನುಪಮವಾದ ಮಹಿಮೆ ಶ್ರೀಮನ್ಮಧ್ವಾಚಾರ್ಯರಿಂದ ಪ್ರಸಾರಗೊಂಡ ವೈಷ್ಣವ ವೇದಾಂತದ, ದ್ವೈತ ಸಿದ್ಧಾಂತದ ಪ್ರಾತ್ಯಕ್ಷಿಕೆಯಂತಿದೆ. ದೇವರಲ್ಲಿ ಭಕ್ತಿ, ಗುರುಹಿರಿಯರಲ್ಲಿ ಗೌರವ, ಸಮಾಜಮುಖಿಯಾದ ಜೀವನ, ಸಕಲರ ಕಲ್ಯಾಣವನ್ನು ಬಯಸುವ ಉದಾತ್ತ ದೃಷ್ಟಿ, ಸದಾ ನಲಿವಿನ ಬದುಕಿನತ್ತ ದೃಷ್ಟಿ, ಮೊದಲಾದವುಗಳನ್ನು ಬೋಧಿಸುವ ಅಪೂರ್ವ ಸಿದ್ಧಾಂತ ದ್ವೈತಸಿದ್ಧಾಂತ. ಇಂತಹ ಸಿದ್ಧಾಂತದ ಅನುಯಾಯಿಗಳಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪರಮಗುರುಗಳಾದ ಶ್ರೀವಿಜಯೀಂದ್ರ ತೀರ್ಥರು (1505-1595) ಆಗ್ರಶ್ರೇಣಿಯಲ್ಲಿ ನಿಲ್ಲುವ ಮಹನೀಯರು.
ಶ್ರೀ ವ್ಯಾಸರಾಜರು ಇವರ ಗುರುಗಳು. ಇವರ ಪೂರ್ವಾಶ್ರಮದ ಹೆಸರು ವಿಠ್ಠಲಚಾರ್ಯ, ಸನ್ಯಾಸದ ಹೆಸರು ವಿಷ್ಣುತೀರ್ಥರು. ಪೀಠವಾಳಿದ ಹೆಸರು ಶ್ರೀ ವಿಜಯೀಂದ್ರತೀರ್ಥರು. ವಿಜಯನಗರ ಇವರ ಅಧ್ಯಯನ ಕೇಂದ್ರ. ಶ್ರೀ ಸುರೇಂದ್ರತೀರ್ಥರು ಇವರ ಅಸಾಧಾರಣ ಪ್ರತಿಭೆಯನ್ನು ಗುರುತಿಸುತ್ತಾರೆ. ಶ್ರೀ ವ್ಯಾಸರಾಜರನ್ನು ಕೇಳಿಕೊಂಡು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ. ಕುಂಭಕೋಣ ಇವರ ಪ್ರಮುಖ ಕಾರ್ಯಕ್ಷೇತ್ರವಾಗಿತ್ತು. ತಂಜಾವೂರಿನ ಅರಸರಿಂದ ಅಪಾರ ಮನ್ನಣೆಯನ್ನು ಪಡೆದರು. ಕುಂಭಕೋಣದಲ್ಲಿ ವಿದ್ಯಾಪೀಠವನ್ನು ಸ್ಥಾಪಿಸಿ, ಮನೆಮನೆಯಲ್ಲೂ ಸಹ ಪಾಂಡಿತ್ಯದ ಬೆಳಕು ಚಿಮ್ಮುವಂತೆ ಮಾಡಿದ್ದು ಇವರ ಅದ್ಭುತ ಸಾಧನೆ. ದಕ್ಷಿಣ ಭಾರತದ ಕೇಂದ್ರಗಳನ್ನು ಇವರು ಸಂದರ್ಶಿಸಿ, ಭಗವಂತನ ಪಾರಮ್ಯವನ್ನು ಬೋಧಿಸಿ, ಜನರಲ್ಲಿ ಆಸ್ತಿಕ ಭಾವನೆಯನ್ನು ಬೆಳೆಯುವಂತೆ ಮಾಡಿದರು. ಉಡುಪಿಯ ಸೋದೆ ಮಠದ ಇತಿಹಾಸ ಪುರುಷರಾದ ಶ್ರೀವಾದಿರಾಜತೀರ್ಥರು ಇವರ ಸಹಪಾಠಿಗಳು.
ವಿವೇಕಯುತ ಬದುಕು
ವಿದ್ವತ್ತಿನಂತೆ ತಪಃಸಿದ್ಧಿಯು ಅನನ್ಯವಾಗಿದ್ದಿತು. ಸೋಗಿನ ಪವಾಡಪುರುಷರ ವಂಚನೆಯನ್ನು ಬಯಲಿಗೆಳೆದು ಜನರೆಲ್ಲ ಮೂಢನಂಬಿಕೆಗಳಿಂದ ದೂರಾಗಿ ವಿವೇಕಿಗಳಾಗಿ ಬದುಕಲು ಕಾರಣರಾದರು.
ಇವರ ಅನುಗ್ರಹದಿಂದ ತಂಜಾವೂರಿನ ಚೇವಪ್ಪ ನಾಯಕನಿಗೆ ಪುತ್ರೋತ್ಸವವಾಗಿ ರಾಜ್ಯಕ್ಕೆ ಉತ್ತರಾಧಿಕಾರಿ ದೊರಕಿದ. ದೊಂಬನೊಬ್ಬ ತಂತಿಯ ಮೇಲೆ ತನ್ನಂತೆ ನೀವು ನಡೆಯಬಲ್ಲಿರಾ ಎಂದು ಸವಾಲೆಸೆದಾಗ ಇವರು ಸಾರಂಗಪಾಣಿಯ ದೇವಸ್ಥಾನದವರೆಗೆ ಬಾಳೆಯ ನಾರಿನ ಮೇಲೆ ನಡೆದು ತಮ್ಮ ಲಘಿಮಾ ಯೋಗಶಕ್ತಿಯನ್ನು ತೋರಿಸಿದರು. ವಾಮಾಚಾರದಿಂದ ಇವರನ್ನು ಗೆಲ್ಲಲು ಬಯಸಿದ ಒಬ್ಬ ಮಾಂತ್ರಿಕನು ಒಡ್ಡಿದ ಮೋಡಿಯನ್ನು ತಮ್ಮ ಶಿಷ್ಯನ ಮೂಲಕವೇ ಪರಾಭವಗೊಳಿಸಿ, ಕೊನೆಯ ಉಪಾಯವಾಗಿ ಅವನು ಸೃಷ್ಟಿಸಿದ ಘೋರ ವಿಷಸರ್ಪವನ್ನು ಆ ಕೂಡಲೇ ಗರುಡಪಕ್ಷಿ ಬಂದು ‘ಎತ್ತಿಕೊಂಡು ಹೋಗುವಂತೆ ಮಾಡಿ ಜಯಿಸಿದರು. ಇಂದಿಗೂ ಆ ಸ್ಥಳ ಕುಂಭಕೋಣದಲ್ಲಿ ಗರುಡ ತೀರ್ಥವೆಂದೇ ಹೆಸರಾಗಿದೆ. ಸಾರಂಗಪಾಣಿ, ಕುಂಭೇಶ್ವರದ ಮಧ್ಯದ ಪುಷ್ಕರಣಿಯು ತಮ್ಮದೆಂದು ಸಾಧಿಸಲು ಕೆಲವರು ರಾತ್ರೋರಾತ್ರಿ ಶಿವಲಿಂಗಗಳನ್ನು ಹಾಕಿದರು. ಮಾರನೆಯ ದಿನ ಬೆಳಿಗ್ಗೆ ಪ್ರಾಜ್ಞರ ಸಮ್ಮುಖದಲ್ಲಿ ಅದರ ಪರೀಕ್ಷೆ ನಡೆದಾಗ ಆ ಶಿವಲಿಂಗಗಳೆಲ್ಲಾ ಶ್ರೀ ವಿಜಯೀಂದ್ರರ ತಪಃಶಕ್ತಿಯಿಂದ ಹನುಮ ಪ್ರತೀಕಗಳಾಗಿ ಬದಲಾಗಿದ್ದವು, ತಲೆಬಾಗಿಸಿದ ಅವರಿಗೆ ಸಾಂತ್ವಾನ ಹೇಳಿ ಆ ಪುಷ್ಕರಿಣಿ ಇಬ್ಬರಿಗೂ ಸೇರುವಂತೆ ಮಾಡಿದ ವಿಶಾಲ ಹೃದಯ ಇವರದು.
ಅದ್ವಿತೀಯ ಪಂಡಿತರು
ಉತ್ತರಾದಿ ಹಾಗೂ ದಕ್ಷಿಣಾದಿ ಎರಡೂ ಸಂಗೀತದಲ್ಲೂ ಪ್ರಾವೀಣ್ಯತೆ ಸಾಧಿಸಿದ್ದರು. ಸಂಸ್ಕೃತದಲ್ಲಿ ಬಗೆಬಗೆಯ ಶಾಸ್ತ್ರಗಳಲ್ಲಿ ಅದ್ವಿತೀಯ ಪಂಡಿತರಾಗಿದ್ದ ಇವರು, ಆ ಕಾಲದ ವಿದ್ವತ್ ಸಭೆಗಳಲ್ಲಿ ಅಸಾಮಾನ್ಯ ಮನ್ನಣೆಗೆ ಪಾತ್ರರಾಗಿದ್ದರು. ಇವರು ತಮ್ಮ ಸಮಕಾಲೀನರಾದ ಅಪ್ಪಯ್ಯದೀಕ್ಷಿತರೊಂದಿಗೆ ನಡೆಸುತ್ತಿದ್ದ ಶಾಸ್ತ್ರ ಚರ್ಚೆಯು ಇಂದಿಗೂ ವಿದ್ವದ್ವಲಯಗಳಲ್ಲಿ ಸ್ಮರಣೀಯವೆನಿಸಿದೆ. 104 ಗ್ರಂಥಗಳ ರಚನೆ ಇವರ ಮತ್ತೊಂದು ದಾಖಲೆ. ಆ ಗ್ರಂಥಗಳಲ್ಲೂ ಸಹ ಅಪಾರ ವೈವಿಧ್ಯತೆ. ವೇದಾಂತದಿಂದ ಪ್ರಾರಂಭಿಸಿ ಕಾವ್ಯ, ನಾಟಕಗಳವರೆಗೆ ವಾಙ್ಮಯದ ಸಕಲ ಪ್ರಾಕಾರಗಳಲ್ಲೂ ಸಹ ಬಗೆಬಗೆಯ ಗ್ರಂಥಗಳನ್ನು ರಚಿಸಿದ ಕೀರ್ತಿ ಇವರದ್ದು. ಬ್ರಹ್ಮಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತೆ, ಮೀಮಾಂಸೆ, ಕಾವ್ಯ-ನಾಟಕಗಳು ಮೊದಲಾದವುಗಳನ್ನು ಒಳಗೊಂಡಂತೆ ಬೃಹತ್ಕøತಿಗಳ ರಾಶಿಯನ್ನೇ ಇವರು ನೀಡಿದ್ದಾರೆ. ಕೆಲವು ಕೀರ್ತನೆಗಳು ಹಾಗೂ ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೂ ಕಾಣಿಕೆಯನ್ನು ನೀಡಿದ್ದಾರೆ..
ಸಕಲ ವಿದ್ಯಾ ಪಾರಂಗತರು
64 ವಿದ್ಯೆಗಳಲ್ಲೂ ಅವರು ಪಾರಂಗತರಾಗಿದ್ದರು. ಇವರೇ ಸ್ವತಃ ಹೊಯ್ದು ನಿರ್ಮಾಣ ಮಾಡಿರುವ ನೂರಾರು ಪಂಚಲೋಹ ವಿಗ್ರಹಗಳು ಅವರ ಶಿಲ್ಪಶಾಸ್ತ್ರ ಕೌಶಲಕ್ಕೆ ನಿದರ್ಶನವಾಗಿ ಇಂದಿಗೂ ಕುಂಭಕೋಣ ಮಠದಲ್ಲಿ ಕಂಗೊಳಿಸುತ್ತಿವೆ.
ದಕ್ಷಿಣ ಕನ್ನಡದ ಮುಲ್ಕಿಯಲ್ಲಿ ಇವರು ಪ್ರತಿಷ್ಠಾಪಿಸಿದ ಶ್ರೀನಿವಾಸನ ಮೂರ್ತಿ ಆ ಪ್ರಾಂತ್ಯದ ಜನರಿಗೆ ಆರಾಧ್ಯ ದೈವವೆನಿಸಿದೆ. ಇವರು ಸ್ಥಾಪಿಸಿದ ವಿದ್ಯಾಪೀಠದಲ್ಲಿ ಆಧ್ಯಾಪಕರಾಗಿ ನಿಂತವರು ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ತಂದೆಯಾದ ತಿಮ್ಮಣ್ಣಭಟ್ಟರು. ಸ್ವತಃ ಶ್ರೀ ರಾಘವೇಂದ್ರಸ್ವಾಮಿಗಳು ತಮ್ಮ ಬಾಲ್ಯದ ಅನೇಕ ವರ್ಷಗಳನ್ನು ಈ ವಿದ್ಯಾಪೀಠದಲ್ಲಿ ಕಳೆದು ಇವರು ಶಿಷ್ಯರಾಗಿದ್ದರು. ಮುಂದೆ ಅವರ ಪ್ರತಿಶಿಷ್ಯರಾಗಿದ್ದರು. ಮುಂದೆ ಅವರ ಪ್ರಶಿಷ್ಯರಾಗಿ ಆ ಪೀಠದಲ್ಲಿ ರಾರಾಜಿಸಿದ್ದು ಇತಿಹಾಸ. ಶ್ರೀರಾಘವೇಂದ್ರಸ್ವಾಮಿಗಳ ಯಶಸ್ಸಿನಲ್ಲಿ ಇವರ ಪಾತ್ರ ತುಂಬಾಹಿರಿದು. ಈ ಅಂಶವನ್ನು ರಾಘವೇಂದ್ರ ಸ್ತೋತ್ರದಲ್ಲಿ ‘ವಿಜಯೀಂದ್ರಕರಾಬ್ಜೀತ್ಥಸುಧೀಂದ್ರ ವರಪುತ್ರಕಃ’ ಎಂದು ದಾಖಲಿಸಿದೆ.
ಕುಂಭಕೋಣದಲ್ಲಿ ಶೈವ-ವೈಷ್ಣವರಲ್ಲಿ ಉಂಟಾಗಿದ್ದ ಮತೀಯ ಕಲಹವನ್ನು ಪರಿಹರಿಸಿ, ಅಲ್ಲಿಯ ಸಾರಂಗಪಾಣಿ ಹಾಗೂ ಕುಂಭೇಶ್ವರರ ಆರಾಧನೆಗೆ ಉಭಯರಿಗೂ ಅವಕಾಶ ಕಲ್ಪಿಸಿದ್ದು ಇವರ ಸಾಮಾಜಿಕ ಹಿತಚಿಂತನೆಗೆ ಹಿಡಿದ ಕನ್ನಡಿ, ಶ್ರೀ ವಿಜಯೀಂದ್ರರ ಬಹುಮುಖ ವ್ಯಕ್ತಿತ್ವ ಹಾಗೂ ಅದ್ಭುತ ಸಾಧನೆಯ ಫಲವಾಗಿ ಅವರು ಮತಾತೀತವಾಗಿ, ಜಾತ್ಯಾತೀತವಾಗಿ ಸಕಲರ ಮನ್ನಣೆಗೆ ಪಾತ್ರರಾದರು. ಅದಕ್ಕೆ ಇಂದಿಗೂ ಸಹ ಅವರ ಅರಾಧನೆಗೆ ಸಮಾಜದ ಎಲ್ಲಾ ವರ್ಗದ ಜನರೂ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಶ್ರೀವಿಜಯೀಂದ್ರತೀರ್ಥರು ಗುರುರಾಜರೂ ಹೌದು! ರಾಜಗುರುಗಳೂ ಹೌದು! ಎಲ್ಲಾ ಶಾಸ್ತ್ರಗಳಲ್ಲಿ ತಲಸ್ಪರ್ಶಿ ಪಾಂಡಿತ್ಯ ಅವರದು. ಮಾಂತ್ರಿಕರನ್ನು ದಿಗ್ಭ್ರಮೆ ಗೊಳಿಸುವ ಮಂತ್ರಶಕ್ತಿ ಸಂಪನ್ನರು. ಸದ್‍ವೈಷ್ಣವ ಸಿದ್ಧಾಂತದಲ್ಲಿ ವೀರನಿಷ್ಠೆಯವರು, ಪ್ರಮಾಣಪ್ರಮೇಯಗಳ ಪರಿಜ್ಞಾನ ಸಂಪನ್ನರು. ಆಡಿದ ಮಾತೆಲ್ಲ ಗ್ರಂಥವಾಗುವ ಧೀಮಂತರು, ವಿಮತೀಯ ವಿದ್ವಾಂಸರನ್ನೂ ಪುರಸ್ಕರಿಸುವ ಉದಾರಿಗಳು. ಸಾಮಾನ್ಯ ಭಕ್ತರಿಗೆ ಶ್ರೀಹರಿವಾಯುಗಳ ಅನುಗ್ರಹ ತಲುಪಿಸುವ ಹರಿದಾರಿಗಳು.
ಪರಕೀಯರ ಆಕ್ರಮಣ ವೇದ ಸಂಸ್ಕೃತಿಯ ನಾಶ. ಕುಹಕಿಗಳು, ಸ್ವಾರ್ಥಕ್ಕೋಸ್ಕರ ದೇಶದ್ರೋಹಿಗಳಾಗಿ ಪರದೇಶೀಯರ ಸಂಸ್ಕೃತಿಯನ್ನು ಅವಲಂಬಿಸಿ ರಾಷ್ಟ್ರವಿಘಾತಕರಾಗಿದ್ದಾರೆ. ಇದನ್ನು ತಡೆಯಲು ಶ್ರೀವಿಜಯೀಂದ್ರತೀರ್ಥರು ತೋರಿದ ಮಾರ್ಗ ಐಕ್ಯಮತ್ಯ, ರಾಷ್ಟ್ರಪ್ರೇಮ, ದೈವಭಕ್ತಿ ಮತ್ತು ಯುವಕರಲ್ಲಿ ಸದ್ಭಾವನೆ ಉಂಟು ಮಾಡಿತು, ವಿಜಯನಗರದ ರಕ್ಷಣೆಗೆ ಬಹಳಷ್ಟು ಶ್ರಮಿಸಿದ ಶ್ರೀವಿಜಯೀಂದ್ರರ ಉಪದೇಶ ಎಲ್ಲಾ ಮಾಂಡಲೀಕರನ್ನು ಐಕ್ಯಮತ್ಯ ಮತ್ತು ಕೆಚ್ಛೆದೆಯ ಸಾಹಸ ಪ್ರದರ್ಶನಕ್ಕೆ ಕಾರಣವಾಯಿತು. ಯಾವುದೇ ರಾಜ್ಯಗಳ ಅವನತಿಗೆ ಕಾರಣ, ಸನಾತನ ಸಂಸ್ಕೃತಿಯ ತಿರಸ್ಕಾರ, ಇದು ಆಗಬಾರದು ಎಂಬ ಸಾಮಾಜಿಕ ಪ್ರಜ್ಞೆಯನ್ನು ತೋರಿಸಿದವರು ಶ್ರೀವಿಜಯೀಂದ್ರರು.
ದ್ವೈತ ದುಂದುಭಿಯನ್ನು ಅವ್ಯಾಹತವಾಗಿ ಮೊಳಗುವಂತೆ ಮಾಡಿದವರೇ ಶ್ರೀವಿಜಯೀಂದ್ರ ತೀರ್ಥರು, ಇವರ ಹರಿತವಾದ ಶೈಲಿ, ಕೂಲಂಕುಷ ವಿಮರ್ಶಾದೃಷ್ಟಿ, ಸ್ವಸಿದ್ಧಾಂತ ನಿಷ್ಠೆ, ಸಂಪ್ರದಾಯ ಸಂರಕ್ಷಣಾ ದೀಕ್ಷೆಗಳೆಲ್ಲವೂ ಸಮಕಾಲೀನ ಶೈವ, ಅದ್ವೈತ ವಿಶಿಷ್ಟಾದ್ವೈತ ದಿಗ್ಧಂತಿ ಪಂಡಿತರನ್ನೂ ಮೂಕೂಭೂತರನ್ನಾಗಿ ಮಾಡಿತು. ಅವರು ತರ್ಕ, ಮೀಮಾಂಸಾ ಶಾಸ್ತ್ರಗಳಲ್ಲಿ ಎಂತಹ ಪ್ರಕಾಂಡ ಪಂಡಿತರೋ ಅಂತೆಯೇ ಕಾವ್ಯ ನಾಟಕ ಅಲಂಕಾರಾದಿಗಳಲ್ಲಿಯೂ ಪರಿಣಿತರು. ಆದ್ದರಿಂದಲೇ ಅವರು ಬಗೆಬಗೆಯ ಸಾಹಿತ್ಯ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಮಧ್ವರಾದ್ಧಾಂತದ ಸರ್ವತೋಮುಖ ವಿಕಾಸಕ್ಕೆ ಕಾರಣರಾದವರು.
ಶ್ರೀ ವಿಜಯೀಂದ್ರ ಮಹಾಸ್ವಾಮಿಗಳು ಆಸ್ತಿಕ ಸಮಾಜದ ಅಕ್ಷಯ ಆಸ್ತಿ. ಗುರುಗಳು ವೇದಾಂತ ಸಾಮ್ರಾಜ್ಯದ ದಿಗ್ಗಜರೆನಿಸಿದ, ವ್ಯಾಸತ್ರಯ ರಚಿಸಿದ, ಶ್ರೀವ್ಯಾಸರಾಜಗುರುಸಾರ್ವಭೌಮರು. ಶಿಷ್ಯ ಪ್ರಶಿಷ್ಯರ ವೈಭವವೂ ಅಂತಹದ್ದೇ, ಮಹಾಜ್ಞಾನಿಗಳಾದ ವ್ಯಾಖ್ಯಾತರಾದ ಶ್ರೀ ಸುಧೀಂಧ್ರ ಸ್ವಾಮಿಗಳಂತಹ ಶಿಷ್ಯರನ್ನೂ, ಅತ್ಯಂತ ದಯಾಳುಗಳಾದ ಭಕ್ತರಿಗೆ ಸರ್ವಾಭಿಷ್ಟವನ್ನು ಕೊಡತಕ್ಕಂತಹ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮಗುರುಗಳು ಅಂತ ಅಂದರೇ ಶ್ರೀ ವಿಜಯೀಂದ್ರ ಮಹಾಸ್ವಾಮಿಗಳ ಸೌಭಾಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಎಣೆ ಇಲ್ಲದ ವೈಭವ ಇವರದ್ದು, ಶ್ರೀಗಳನ್ನು ದಿನನಿತ್ಯ ನೆನಪಿಸಿಕೊಳ್ಳದೇ ಇರುವ ಮಾಧ್ವ ಸಾಧಕವರ್ಗವೇ ಇಲ್ಲ ಎಂದರೆ ತಪ್ಪಾಗಲಾರದು.
ತಾತ್ವಿಕ ಪ್ರಪಂಚದಲ್ಲಿ ವಿಶೇಷ ಸಾಧನೆಗೈದಂತೆ ಶ್ರೀ ವಿಜಯೀಂದ್ರ ತೀರ್ಥರು ಸಾಮಾಜಿಕವಾಗಿಯೂ ಜನರಲ್ಲಿ ಭಕ್ತಿ ಸಿದ್ಧಾಂತ ಪ್ರತಿಪಾದನೆಯಲ್ಲಿ ಹಿಂದಿಲ್ಲ, ಇಂದಿನ ಗೌಡಸಾರಸ್ವತ ಮಠವಾದ ಕಾಶೀಮಠದ ಮೂಲಸ್ಥಾಪನೆಯು ಶ್ರೀ ವಿಜಯೀಂದ್ರರಿಂದಲೇ ಆಯಿತೆಂಬುವುದು ಅವರ ಸಾಮಾಜಿಕ ಚಿಂತನೆಗೆ ದ್ಯೋತಕವಾಗಿದೆ.
ಕಾರುಣ್ಯ ಸಿಂಧುಗಳಾದ ಶ್ರೀ ವಿಜಯೀಂದ್ರರ ಮಹಿಮೆ ಅಪಾರ. ಸಾಮರಸ್ಯ ಸೌಹಾರ್ಧತೆಗೆ ಮಾದರಿಯಾದವರು. ಮಾನವೀಯತೆಯ ಪರಾಕಾಷ್ಠತೆ, ಕಲೆಯ ಎಲ್ಲಾ ಪ್ರಕಾರಗಳಿಗೆ ಅವರು ಕೊಟ್ಟು ಪ್ರೋತ್ಸಾಹ ಸಂಸ್ಕೃತಿಯ ಉಳಿವಿಗೆ ಕೊಟ್ಟ ದೊಡ್ಡ ಕೊಡುಗೆ, ಸ್ನೇಹ ಅಭಿಮಾನಕ್ಕೆ ಮತ್ತೊಂದು ಹೆಸರೇ ಶ್ರೀ ವಿಜಯೀಂದ್ರರು.
ಶ್ರೀ ರಾಯರ `ಇಂದು ಎನಗೆ ಗೋವಿಂದ’ದಂಥ ಕೃತಿಗೆ ಶ್ರೀ ವಿಜಯೀಂದ್ರರ “ಪಾಪ ವಿಮೋಚನ’’ ಸ್ಫೂರ್ತಿಯಾಗಿದೆ ಎಂದರೆ ಇನ್ನು ವೇದಾಂತ ಗ್ರಂಥಗಳ ಬಗ್ಗೆ ಹೆಚ್ಚೇನು ಹೇಳುವುದು.
ಕುಂಭಕೋಣದಲ್ಲಿ ದ್ವೈತಸಿದ್ಧಾಂತ ಪತಾಕೆಯನ್ನು ಶತಮಾನಗಟ್ಟಲೆ ಹಾರುವಂತೆ ಮಾಡಿದ್ದು ಇವರ ಪಾಠ ಪ್ರವಚನಗಳ ಫಲಶ್ರುತಿ. ಕುಂಭಕೋಣದ ಪ್ರಭುಗಳೆಂದೇ ಖ್ಯಾತರಾದ ಇವರ ಮಹಿಮೆಯನ್ನು ಅಲ್ಲಿನ ಕಲ್ಲುಬಂಡೆಗಳೂ ಸಹ ಇಂದಿಗೂ ಸಾರುವುವು.
ಗ್ರಂಥ ರಚನೆ ಶ್ರೀ ವಿಜಯೀಂದ್ರತೀರ್ಥರ ಸಾಧನೆಗಳ ಕಿರೀಟದ ಮಹಾಮಣಿ, ಒಂದಲ್ಲ, ಎರಡಲ್ಲ, ನೂರಾನಾಲ್ಕು ಗ್ರಂಥಗಳನ್ನು ರಚಿಸಿದ ಕೀರ್ತಿ ಇವರದು. ಅವು ಕೇವಲ ಗ್ರಂಥಗಳಾಗಿರದೇ ಗ್ರಂಥರತ್ನಗಳಾಗಿವೆ ಎಂಬ ಶ್ರೀ ಗುರುಗುಣಸ್ತವನದ ಮಾತು ಅಕ್ಷರಶಃ ನಿಜವಾದುದು. ಸಂಖ್ಯೆ ಹಾಗೂ ಸತ್ತ್ವ ಎರಡರಲ್ಲೂ ಸಹ ಹಿರಿಮೆಯನ್ನು ಹೀಗೆ ಕಾಪಾಡಿಕೊಂಡವರ ಸಂಖ್ಯೆ ವಾಙ್ಮಯ ಪ್ರಪಂಚದಲ್ಲಿಯೇ ಅದ್ಭುತವೆನ್ನಿಸುವಂತಹುದು .ಶ್ರೀ ವಾದಿರಾಜರ ಸಹಪಾಠಿಗಳಾಗಿ ಶ್ರೀ ವಿಜಯೀಂದ್ರರ ಸ್ಮರಣೆ ಸಾರ್ಥಕ. ಕರ್ತವ್ಯ ಕೂಡ ಆದರೆ ಗ್ರಂಥಸಂರಕ್ಷಣೆಯ ಬಗ್ಗೆ ಆಸ್ಥೆ ಇಲ್ಲದ ನಮ್ಮ ಜನತೆಯ ಔದಾಸೀನ್ಯದಿಂದಾಗಿ ಆ ಬಗ್ಗೆ ವಿಶೇಷ ವಿವರಗಳು ಇಂದು ಲಭ್ಯವಾಗಿಲ್ಲ. ಅವರಿಂದ ರಚಿತ ಎಂಬುದಾಗಿ ಕೆಲವು ಕೃತಿಗಳು ಮಾತ್ರ ಇಂದು ಉಪಲಬ್ಧವಿದೆ.
ಕಾವೇರಿ ತೀರದಲ್ಲಿ ಜನಿಸಿದ್ದ ಇವರು ಅದೇ ಕಾವೇರಿ ತೀರದ ಕುಂಭಕೋಣದ ತಮ್ಮ ಮಠದಲ್ಲಿ ಶ್ರೀಮೂಲರಘುಪತಿಯ ಪೂಜಾದಿಗಳನ್ನು ಮುಗಿಸಿ, ಮೌನಯುಕ್ತ ಶ್ರೀಹರಿಯಧ್ಯಾನಾಸಕ್ತರಾಗಿ ಕುಳಿತು, ಓಂಕಾರೋಚ್ಛಾರಣೆ ಮಾಡುತ್ತಾ ಮಾಡುತ್ತಾ ಭೌತಿಕ ದೇಹವನ್ನು ತೊರೆದು ಪರಗತಿಗೆ ತೆರಳಿದ ಇಚ್ಛಾಮರಣಿಗಳು. ಶ್ರೀಸುಧೀಂದ್ರತೀರ್ಥರು ಶಾಸ್ತ್ರೋಕ್ತ ರೀತಿಯಲ್ಲಿ, ವಿಶಿಷ್ಟ ಸುಂದರ ಬೃಹತ್ ಬೃಂದಾವನವನ್ನು ಸ್ಥಾಪಿಸಿದರು. ಬೃಂದಾವನದ ಎದುರಿಗೆ ಶ್ರೀ ಲಕ್ಷ್ಮೀನಾರಾಯಣದೇವರ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇದು ಇಂದಿಗೂ ಬೃಂದಾವನದಲ್ಲಿ ಸದಾ ವಿಷ್ಣುಪರ ಚಿಂತನೆಯನ್ನು ಮಾಡುವ ವಿಷ್ಣುತತ್ಪರರು ಎಂಬುದು ಸೂಚಿತ ಹಾಗೂ `ವಿಠ್ಠಲ’ `ಶ್ರೀವಿಷ್ಣುತೀರ್ಥರು’ `ಶ್ರೀವಿಜಯೀಂದ್ರರು’ ಹೀಗೆ ಮೂರು ಬಾರಿ ಜನ್ಮಾಂತರವಾದರೂ ವಿಷ್ಣುವಿಕಾರವಿಲ್ಲದ ಕೇವಲ ವಿಷ್ಣು ವಿಜಯಕಾರರಿವರು ಎಂಬುದೂ ತಿಳಿಯುತ್ತದೆ. ಈ ರೀತಿಯಲ್ಲಿ ಬೃಂದಾವನದಲ್ಲಿ ತೇಜೋರೂಪದಿಂದ ಇದ್ದು ತಮ್ಮ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವಾಗಿ ಅನುಗ್ರಹಿಸುತ್ತಿದ್ದಾರೆ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಯುವ ಸಂಸ್ಕೃತಿ ಚಿಂತಕರು
Discussion about this post