ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಲೆನಾಡು ಭಾಗದಲ್ಲಿ ಕಣ್ಮನ ಸೆಳೆಯುವ ಸಿದ್ದೇಶ್ವರ ಬೆಟ್ಟಗಳಲ್ಲಿ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ಪ್ರವಾಸಿ ತಾಣಗಳಲ್ಲಿ ಸಿದ್ದೇಶ್ವರ ಬೆಟ್ಟವೂ ಒಂದು.
ತೀರ್ಥಹಳ್ಳಿಯಿಂದ 2 ಕಿಮೀ ದೂರ ಮಂಗಳೂರು ಮಾರ್ಗವಾಗಿ ಸಾಗಿದರೆ ಬಲ ಭಾಗದಲ್ಲಿ ಸಿಗುತ್ತದೆ ಈ ಕ್ಷೇತ್ರ.
ಹಿಂದಿನ ಕಾಲದಲ್ಲಿ ಈ ಬೆಟ್ಟವನ್ನು ಸಂಧ್ಯಾ ಸಿದ್ದೇಶ್ವರ ಮಂಟಪವೆಂದು ಕರೆಯಲಾಗುತ್ತಿತ್ತು. ಕಾಲ ಕ್ರಮೇಣ ಸಿದ್ದೇಶ್ವರ ಬೆಟ್ಟವೆಂದು ಮತ್ತು ಸಿದ್ದೇಶ್ವರ ಸ್ವಾಮಿಯ ಕ್ಷೇತ್ರವೆಂದು ಕರೆಯಲಾಯಿತು.
ಶಿವಪ್ಪ ನಾಯಕನ ಆಳ್ವಿಕೆಯ ಕಾಲದಿಂದಲೂ ಶ್ರೀ ಸ್ವಾಮಿಯ ಪೂಜೆ ನಡೆಯುತ್ತಿದ್ದು, ಸದ್ಯ ಮುಜರಾಯಿ ಇಲಾಖೆಗೆ ಸೇರಿದೆ.
ಇನ್ನು, ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಈ ಬೆಟ್ಟದಲ್ಲಿ ನಡೆಯುವ ಈ ಪೂಜೆಯು ಜಾತ್ರೆಯ ಸಮಾವೇಶದಂತಿರುತ್ತದೆ.
ಶ್ರೀ ಕ್ಷೇತ್ರವು ಮನಸ್ಸಿಗೆ ಶಾಂತಿ ಹಾಗೂ ಉಲ್ಲಾಸ ನೀಡುವಂತಹ ಪ್ರಾಕೃತಿಕ ಸೌಂದರ್ಯ ವೈವಿದ್ಯಮಯ ಪ್ರದೇಶ ಇದಾಗಿದ್ದು, ಕಾರ್ಮುಗಿಲು ಎಂಬ ಚಲನಚಿತ್ರದ ಒಂದು ನೃತ್ಯ ದೃಶ್ಯವಳಿಯನ್ನು ಈ ಬೆಟ್ಟದ ತಪ್ಪಲಿನಲ್ಲೇ ಸೆರೆಹಿಡಿಯಲಾಗಿದೆ.
ದೇವಾಲಯದ ಹೊರಾಂಗಣದಲ್ಲಿರುವ ಶಿಲೆಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವುದು ಆಶ್ಚರ್ಯಕರ ವಿಷಯ. ಶ್ರೀ ಸ್ವಾಮಿಯ ಬೆಟ್ಟವು ಕಲ್ಲು ಬಂಡೆಗಳಿಂದ, ಮಧ್ಯ ಹಸಿರು ಕುರುಚಲುಗಳಿಂದ ಆವೃತವಾಗಿದೆ. ಕರಡಿ ಗುಹೆ ಹಾಗೂ ಹುಲಿ ಗುಹೆಯೂ ಈ ಬೆಟ್ಟದ ತುತ್ತ ತುದಿಯಲ್ಲಿದೆ. ಈ ಬೆಟ್ಟದ ಮೇಲ್ಭಾಗ ಹಸಿರು ಪೊದರುಗಳಿಂದ ಕೂಡಿದ್ದು ಪಕ್ಕದಲ್ಲಿಯೇ ಒಂದು ಸಣ್ಣ ಕೊಳವೂ ಸಹ ಇದೆ.
ಸುಂದರವಾದ ತೀರ್ಥಹಳ್ಳಿಯ ಪ್ರಕೃತಿಯ ತಾಯಿಯ ಮಡಿಲಿಗೆ ಒಂದು ವಿಶೇಷವಾದ ಕೊಡೊಗೆಯೆಂದೇ ಹೇಳಬಹುದು.
ಸಮುದ್ರ ಮಟ್ಟದಿಂದ 650 ಮೀಟರ್ ಅಡಿ ಎತ್ತರದಲ್ಲಿರುವ ಬೆಟ್ಟವು ಸುತ್ತಮುತ್ತಲಿನ ಹಳ್ಳಿಗಳು ಮತ್ತು ಕಾಡುಗಳ ವಿಹಂಗಮ ನೋಟಗಳನ್ನು ನೀಡುತ್ತದೆ. ಈ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ, ಅಕ್ಟೋಬರ್ ತಿಂಗಳಿಂದ ಮೇ ತಿಂಗಳವರೆಗೆ ಮಾತ್ರ ಬೆಟ್ಟವು ಪ್ರವಾಸಿಗರಿಗೆ ತೆರೆದಿರುತ್ತದೆ. ಈ ಬೆಟ್ಟದ ತುದಿಯಿಂದ, ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಮತ್ತು ಕುಂದಾದ್ರಿಯಂತಹ ಇತರ ದೊಡ್ಡ ಬೆಟ್ಟಗಳನ್ನು ನೋಡಬಹುದು.
ಸನ್ನಿಧಾನ
ಈಶ್ವರನ ಮುಂಭಾಗದಲ್ಲಿ ನಂದಿ ಹಾಗೂ ಗರ್ಭ ಗುಡಿಯಲ್ಲಿ ನಾಗ ದೇವರ ಸನ್ನಿಧಾನವಿದೆ.
ಇನ್ನು, ಈ ಕ್ಷೇತ್ರಕ್ಕೆ ಸಣ್ಣಮಕ್ಕಳು ಹಾಗೂ ವಯೋವೃದ್ಧರು ತಲುಪುಸುವು ಕಷ್ಟಕರವಾಗಿತ್ತು. ಹೀಗಾಗಿ, ಶ್ರೀ ಸಿದ್ದೇಶ್ವರ ಸ್ವಾಮಿ ಯುವಕರ ಮಂಡಳಿಯು ಶ್ರೀ ಸ್ವಾಮಿಯ ಸನ್ನಿಧಿ ತಲುಪಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ಕೆತ್ತಿಸುತ್ತಿದೆ.
ಐತಿಹಾಸಿಕ ಹಿನ್ನಲೆ ಹೊಂದಿರುವ ಈ ದೇವಾಲಯವನ್ನು ಪುನಶ್ಚೇತನಗೊಳಿಸುವ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸಬೇಕಾಗಿದೆ.
ಬೆಟ್ಟದ ಮೇಲೊಂದು ಪ್ರತೀತಿ: ನಂಬಿಕೆ
ಶ್ರೀ ಸ್ವಾಮಿಯ ಸನ್ನಿಧಾನಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು ದೇವಾಲಯದ ಆವರಣದ ಸುತ್ತಲೂ ಹಾಗೂ ಬೆಟ್ಟದ ಮೇಲೆ ಅಲ್ಲಲ್ಲಿ ಬಿದ್ದಿರುವ ಪುಟ್ಟ ಪುಟ್ಟ ಕಲ್ಲುಗಳನ್ನು ತೆಗೆದುಕೊಂಡು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಬೇಕು. ಚೌಕಾರವಾಗಿರುವ ಸ್ಥಳದಲ್ಲಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿ, ಕಲ್ಲಿನಿಂದ ಮನೆ ಆಕಾರ ನಿರ್ಮಾಣ ಮಾಡಿದರೆ ಸ್ವಂತ ಮನೆ ಕಟ್ಟುವ ಭಾಗ್ಯ ಒದಗಿ ಬರುತ್ತದೆ ಎನ್ನುತ್ತಾರೆ ಊರಿನ ಹಿರಿಯರು.
ಇಂತಹ ಕ್ಷೇತ್ರದಲ್ಲಿ ನಾಳೆ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲು ಶ್ರೀ ಸಿದ್ದೇಶ್ವರ ಸ್ವಾಮಿ ಯುವಕರ ಮಂಡಳಿ ನಿರ್ಧಾರ ಕೈಗೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಿದೆ.
Get in Touch With Us info@kalpa.news Whatsapp: 9481252093
Discussion about this post