ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆ ಕೆಂಪನೆಯ ಮುಖ. ಕೆಂಡವನ್ನೇ ಕಾರುತ್ತಿದ್ದ ಕಣ್ಣುಗಳು. ದಾಪುಗಾಲು ಹಾಕುತ್ತಾ ಸಭೆಗೆ ಬರುತ್ತಿದ್ದರೆ ಕಾಲಡಿಯ ಭೂಮಿಯೇ ನಡುಗುತ್ತಿತ್ತು. ಇನ್ನು ಎದುರು ನಿಂತವರು ಯಾವ ಲೆಕ್ಕ? ಒಂದೊಂದು ಭುಜವೂ ದೊಡ್ಡ ಬೆಟ್ಟಗಳಂತೆ ಕಾಣುತ್ತಿದ್ದವು. ಎದುರು ಸಿಕ್ಕರೆ ಖಂಡಿತ ನೋಡಿಯೇ ಸಾವು ಬರುತ್ತಿತ್ತು. ಈಗ ಅವನೇ ಬರುತ್ತಿದ್ದಾನೆ ಸಭೆಗೆ. ನಿಂತವರು, ಕುಳಿತವರು ಇರುವ ಜಾಗದಲ್ಲಿ ಗಡಗಡನೆ ನಡುಗುತ್ತಿದ್ದರು. ಆಗಸದಗಲ ಬಾಹುಗಳೊಂದರಲ್ಲಿ ಕಣ್ಣು ಕುಕ್ಕುವ ತೀತೆ ಹೊಂದಿದ್ದ ಗದೆಯನ್ನು ಹಿಡಿದು ಬರುತ್ತಿದ್ದರೆ ಯಮನೇ ಬರುತ್ತಿದ್ದ ಹಾಗಿತ್ತು.
’ಎಲ್ಲಿ? ಎಲ್ಲವನು?’ ಬಂದವನೇ ಅರಚಿದ. ಸಭೆ ಅದುರಿ ಹೋಯಿತು. ಉಸಿರಾಟದ ಸದ್ದನ್ನು ಲೆಕ್ಕ ಹಾಕಬಹುದಿತ್ತು ಅಷ್ಟು ಮೌನ. ಯಾರ ಬಗ್ಗೆ ಕೇಳುತ್ತಿದ್ದಾನೆ? ಎದ್ದು ನಿಂತು ಕೇಳುವ ಧೈರ್ಯ ಯಾರಿಗೂ ಇಲ್ಲ. ಮಂದೆಯಲ್ಲಿ ಕೂತು ಕೂಗು ಹಾಕುವ ಉಸಿರು ಅಲ್ಲಿ ಯಾರಲ್ಲೂ ಇರಲಿಲ್ಲ. ಉತ್ತರವನ್ನು ಅವನೇ ನೀಡಬೇಕಿತ್ತು. ಅದಕ್ಕೆ ಎಲ್ಲರೂ ಕಾಯಬೇಕಿತ್ತು, ಕಾಯುತ್ತಿದ್ದಾರೆ. ನೀರವ ಮೌನ..
’ಹ್ಮ್ ಎಲ್ಲವನು? ಯಾರೋ ಯಕಶ್ಚಿತ್ ಬ್ಯಾಂಕರನಂತೆ. ಎಲ್ಲರಿಗೂ ತಾಪತ್ರಯ ಕೊಡುವನು. ಎಲ್ಲ ಬಲ್ಲೆ ಎನ್ನುವನಂತೆ. ಎಳೆದು ತನ್ನಿ ಆ ಸ್ವ ಘೋಷಿತ ಸರ್ವಜ್ಞನನ್ನು. ತುಳಿದು ಬಿಡುವೆ. ಮತ್ತೊಂದು ಅಸತ್ಯವಾಡಲು ಉಸಿರೇ ಇಲ್ಲದೆ ಹೋಗಲಿ’ ಎಷ್ಟು ಕ್ರೋಧಿತನಾಗಿ ಅರಚಿದ ಎಂದರೆ ಕೇಳುಗರ ಮುಖ ಕೆಂಪೇರಿತ್ತು. ಮೂಲೆ ಮೂಲೆಗಳಿಂದ ನಿಟ್ಟುಸಿರಿನ ಸದ್ದು. ಅಬ್ಬಾ ಇಂದಿನ ಪಾಳಿ ನಮ್ಮದಲ್ಲ. ಬದುಕಿದೆಯಾ ಬಡಜೀವವೇ ಎಂಬ ಸಮಾಧಾನ ಎಲ್ಲರಿಗೂ.
ಒಮ್ಮೆ ಸಭೆಯೆಡೆಗೆ ತಿರುಗಿದ. ಹಿಂದೆ ಮುಂದೆ ಎಲ್ಲಾ ನೋಡಿದ. ಯಾರೂ ಏಳಲಿಲ್ಲ. ತಾಳ್ಮೆಯ ಮಿತಿ ಮೀರಿತ್ತು. ಬಲಗಾಲನ್ನು ಎತ್ತಿ ಅಪ್ಪಳಿಸಿದ. ಆ ರಭಸಕ್ಕೆ ಕಾಲಡಿಯ ಮೆಟ್ಟಿಲು ಪುಡಿಯಾಗಿತ್ತು. ’ಎಲ್ಲಿರುವೆಯೋ ನರಾಧಮ? ಬರುವೆಯೋ? ನಾನೇ ಬರಲಿ?’ ನೆರೆದ ಮಂದಿ ನಡುಗುತ್ತಿದ್ದರು. ಎದುರಿನ ಸೇವಕ ಹೇಗೋ ಧೈರ್ಯ ಮಾಡಿ ದಢದಢನೆ ಓಡಿದ. ಎಲ್ಲರೂ ಅವನು ಹೋದ ದಿಕ್ಕನ್ನು ನೋಡುತ್ತಿದ್ದರು. ಅಲ್ಲೊಂದು ಪ್ರಶ್ನಾರ್ಥಕ ಮನೋಭಾವವಿತ್ತು, ಒಂದು ಆಶಾಭಾವವಿತ್ತು. ಹೋದವನು ಮತ್ತೆ ಅದೇ ವೇಗದಲ್ಲಿ ಎದ್ದೆನೋ ಬಿದ್ದೆನೋ ಎಂದು ಓಡೋಡಿ ಬಂದ. ಇರುವ ಕಿಂಚಿತ್ ಉಸಿರನ್ನು ಒಗ್ಗೂಡಿಸಿ ಕ್ಷೀಣ ದನಿಯಲ್ಲಿ ’ಸ್ವಾಮೀ…..’
’ಹ್ಮ್ ಹೇಳು, ಎಲ್ಲಿ ಆತ? ಓಡಿ ಹೋದನೇನು? ಅಂದುಕೊಂಡೆ.. ಹ್ಹ ಹ್ಹ.. ನನ್ನ ಭಯ ಇಲ್ಲದ ಯಾರಿದ್ದಾರೆ? ಸಿಗಲಿ ಅವನನ್ನು ಅಪ್ಪಳಿಸಿ ತೂರಿಬಿಡುವೆ.’ ತಿರುಗಿದ ರಭಸಕ್ಕೆ ತೋಳ್ಬಂಧಿಯು ತುಂಡರಿದು ಚೆಲ್ಲಾ ಪಿಲ್ಲಿಯಾಯಿತು. ಕೋಪಕ್ಕೆ ನರನಾಡಿಗಳು ಬಿಗಿದು ಬಿಟ್ಟಿದ್ದವು.
’ಇಲ್ಲಾ ಸ್ವಾಮೀ, ನಾನು ಬ್ಯಾಂಕರನಲ್ಲಿಗೆ ತೆರಳಿದ್ದ. ನಿಮ್ಮ ಕರೆ ಮುಟ್ಟಿಸಿದೆ. ಆದರೆ ಅವನು ನಾನೆಲ್ಲಿಗೂ ಬರಲಾರೆ. ಇದು ಮಾರ್ಚ್ ಎಂಡ್. ಯಾವುದೂ ಟಾರ್ಗೆಟ್ ಆಗಿಲ್ಲ. ಏನಾದರೂ ಮಾಡಲೇಬೇಕು. ಇಲ್ಲದಿದ್ದರೆ ಯಾವುದಾದರೂ ಪನಿಷ್ಮೆಂಟ್ ಬ್ರಾಂಚ್ ಕೊಡ್ತಾರೆ ಅಥವಾ ನೀರಿಲ್ಲದ ಜಿಲ್ಲೆಗೆ ಎತ್ತಿ ಹಾಕ್ತಾರೆ ಅಂದ’.
’ಹಾಗೆಂದನೇ ಆ ದುರಹಂಕಾರಿ..?!’
’ಹೌದು ಹುಲಿಯ. ಮತ್ತೆ ಮತ್ತೆ.. ’
’ಹೇಳು ಏನದು?’
’ನೀವಲ್ಲ, ನಿಮ್ಮ ಅಪ್ಪ ಬಂದು ಕರೆದರೂ ಬರುವುದಿಲ್ಲ ಎಂದ.’
ಸಭೆಯಲ್ಲಿ ಗುಸುಗುಸು. ಯಾರೋ ಕಿಸಕ್ಕನೆ ನಕ್ಕ ಹಾಗೆ ಸದ್ದು. ಕೋಪ ಸರಹದ್ದು ದಾಟಿ ಮುಗಿಲೇರಿತ್ತು. ಮುಖ ಕೆಂಪಗೆ ಬಸಿಯುತ್ತಿತ್ತು.
’ಅಯ್ಯೋ ಅಧಮ, ಎಲ್ಲಿದ್ದಾನೆ ಅವನು? ಅವನು ಏಪ್ರಿಲ್ ಒಂದನ್ನು ನೋಡಲೇಬಾರದು. ಮೂರ್ಖ ನಡೆ ಅವನಲ್ಲಿಗೆ. ನಾನವನಿಗೆ ಪಾಠ ಕಲಿಸಿಯೇ ಸಿದ್ಧ.’
ನನ್ನ ಆಜ್ಞೆಯನ್ನು ಮೀರಿದ ಮೇಲೆ ಅವನನ್ನು ಹಾಗೇ ಬಿಟ್ಟರೆ ತಪ್ಪಾಗುತ್ತದೆ. ಯಕಶ್ಚಿತ್ ಒಬ್ಬ (ಕೇಂದ್ರ ವೇತನಾ ಆಯೋಗದಡಿಯೂ ಬಾರದ ಸಂಬಳ ಪಡೆಯುವವ) ನನ್ನ ವಿರುದ್ಧ ಮಾತನಾಡುವುದೇ? ಇತಿಹಾಸದಲ್ಲಿ ಇದೊಂದು ಪಾಠವಾಗಲಿ. ಮತ್ತೆ ಯಾರೂ ಈ ದುಸ್ಸಾಹಸಕ್ಕೆ ಕೈ ಹಾಕದೇ ಇರುವಂತೆ ಮಾಡಲೇಬೇಕು.
ಇಡೀ ಬ್ಯಾಂಕ್ ಖಾಲಿ. ಹೊರಗೆ ಮೂಲೆಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದಾನೆ. ನೋಡಲು ಚೀನಿಯನಂತೆ ಇದ್ದಾನೆ. ಅವನನ್ನು ಬಿಡಿ ಈ ಧೂರ್ತ ಬ್ಯಾಂಕರನನ್ನು ಒಂದು ಗತಿ ಮಾಡದಿದ್ದರೆ ನನಗೆಲ್ಲಿಯ ಸಮಾಧಾನ? ಎಲ್ಲಿದ್ದಾನೆ? ಮೂಲೆಯಲ್ಲಿ ಗಮ್ ಟೇಪ್ ಹಚ್ಚಿ ತೂಗು ಹಾಕಿದ್ದ ಬ್ಯಾಂಕಿನ ಕ್ಯಾಲೆಂಡರಿನಲ್ಲಿ ಇಂದು ಭಾನುವಾರ ಎಂದು ತೋರುತ್ತಿತ್ತು. ಗಂಟೆ ಇಳಿಸಂಜೆಯ 7.30. ಊರಿನ ಕೊನೆ ಬಸ್ ಹೋಗಿ ಅದಾಗಲೇ ಅರ್ಧ ತಾಸು ಕಳೆದಿತ್ತು. ಉದ್ದನೆಯ ಟೇಬಲ್. ಅದರ ಮೇಲೆ ಫೈಲ್ಸ್‌ಗಳ ಕಟ್ಟಡ. ಬದಿಯಲ್ಲಿ ತುಸು ಹಳತೇ ಅನ್ನಬಹುದಾದ ನೀರಿನ ಬಾಟಲ್. ಅದರಲ್ಲಿ ಬೆಳಗ್ಗೆ ತುಂಬಿಕೊಂಡು ಬಂದ ನೀರು ಹಾಗೆ ಇತ್ತು. ಫೈಲುಗಳ ಸಂಧಿಯಲ್ಲಿ ಒಳ ಇಣುಕಿದರೆ ದೊಡ್ಡ ಕುರ್ಚಿಯ ಮೇಲೊಂದು ಐದಡಿ ಮೂರಿಂಚಿನ ಪುಟ್ಟ ದೇಹ. ತಲೆಯನ್ನು ಎತ್ತದೆ ಬೇವರ ಬಸಿಯುತ್ತಿತ್ತು. ವೋಲ್ಟೇಜ್ ಇಲ್ಲದೆ ಫ್ಯಾನ್ ಗಡ ಗಡ ಶಬ್ದ ಅಷ್ಟೇ ಮಾಡುತ್ತಿತ್ತು.
’ಏಯ್ ಮೂರ್ಖ..’
ಬ್ಯಾಂಕರ್ ತಲೆಯನ್ನು ಎತ್ತಲಿಲ್ಲ. ’ನಮಸ್ತೇ ಬನ್ನಿ. ಕುಳಿತುಕೊಳ್ಳಿ. ಇವತ್ತು ಭಾನುವಾರ. ಕ್ಯಾಷ್ ಕಟ್ಟಿಸಿಕೊಳ್ಳಲ್ಲ. ಮತ್ತೆ ಅಕೌಂಟ್ ಬ್ಯಾಲೆನ್ಸ್, ಲೋನ್ ಬಗ್ಗೆ ಮಾತನಾಡುವುದಾದರೆ ನಾಳೆ ಬನ್ನಿ. ನಮ್ಮದು ಲಾಗಿನ್ ಇಲ್ಲ ಇವತ್ತು.’
’ಅಯ್ಯೋ ದುರಹಂಕಾರಿ, ಬಂದವರ ತಲೆ ಎತ್ತಿ ನೋಡಲು ಆಗುವುದಿಲ್ಲವೆ ನಿನಗೆ? ಅಷ್ಟು ಧಿಮಾಕೇ? ಲೇಯ್ ನೋಡಿಲ್ಲಿ. ಯಾರು ನೀನು? ಏನು ನಿನ್ನ ಕೆಲಸ?’
ಮತ್ತೆ ತಲೆ ಎತ್ತಲಿಲ್ಲ. ಹಾಗೆಯೇ, ’ಇದು ಬ್ಯಾಂಕ್. ಏನಾಗಬೇಕು ನಿಮಗೆ? ಸ್ವಲ್ಪ ಬೇಗ ಹೇಳಿ. ನನಗೆ ಟೈಮ್ ಇಲ್ಲ. ಎನ್’ಪಿಎ ಅಂತ ನಿಮಗೆ ಏನಾದರೂ ಫೋನ್ ಬಂದಿತ್ತಾ? ನೀವು ಮುನಿಯಪ್ಪ ಅಲ್ವ? ಏನು ಮಾಡಿದ್ರಿ ಆ ಸಂಘದ್ದು? ಅದು ಮನ್ನಾಕ್ಕೆ ಬರಲ್ಲ ರೀ. ಕಟ್ಟಿಸಿ. ಇಲ್ಲ ಒಂದು ಮೀಟಿಂಗ್ ಕರಿರಿ. ನಾನೂ ಬರ್ತೀನಿ. ಮುಂದೆ ಲಾಯರ್ ಅಂತೆಲ್ಲಾ ಹೋದರೆ ನಿಮಗೆ ತೊಂದರೆ. ಅಲ್ಲದೆ ಅವರ ಫೀಜ್ ನೀವೇ ಕಟ್ಟಬೇಕು. ಕಷ್ಟ ಆಗತ್ತೆ. ನಮ್ಮ ಹುಡುಗರು ನಿಮಗೆ ಹೇಳಿರಬೇಕು ಅಲ್ವ?’
ಅಬ್ಬಾ ಎಂಥಾ ಮೊಂಡ ಇವನು! ಎತ್ತಿ ಕುಕ್ಕಿ ಬಿಡಲೇ? ಮತ್ತೆಂದೂ ನಡೆಯಬಾರದು. ಕಾಲುಗಳ ತಿರುವಿ ಬಿಡಲೇ? ’ಮೂರ್ಖ, ನಾನು ನಿನ್ನ ಸಾವು ಎಂದುಕೋ..’ ಎಂದ ಮತ್ತಷ್ಟು ಉಗ್ರನಾಗಿ.
’ಹೋ ಹೌದಾ, ಓಕೆ ಇದು ಮಾರ್ಚ್ ಎಂಡ್. ಒಂದು ವೀಕ್ ಆಗತ್ತೆ. ಆಡಿಟಿಂಗ್ ಬೇರೆ ಇದೆ. ಆಮೇಲೆ ಬನ್ನಿ ನೋಡೋಣ. ಫೈಲ್ ತೆಗೆಸಿ ವಿಚಾರ ಮಾಡೋಣ. ನಾನು ಫೀಲ್ಡ್ ವಿಸಿಟ್ ಮಾಡಬೇಕು. ಈಗ ಹೊರಡಿ.’
ಅಬ್ಬಾ ಇವನೊಂದಿಗಿದ್ದರೆ ನಾನು ಹುಚ್ಚನಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಆಗುವುದಿಲ್ಲ. ಅವನ ಕತ್ತು ಹಿಡಿದು ಎಳೆದಾಗಿತ್ತು. ಕುರ್ಚಿಯ ಚಕ್ರಗಳು ಕೆಲಸ ಮಾಡದೇ ಎಷ್ಟೋ ಕಾಲವಾಗಿತ್ತು. ಎಳೆದ ರಭಸಕ್ಕೆ ದಡ್ಡನೆ ಬಿದ್ದ ಬ್ಯಾಂಕರ್. ’ಹೇಳಿಲ್ಲವೇ ನಾನು ನಿನ್ನ ಸಾವು. ಅದೇನು ಬಂದವರಿಗೆಲ್ಲ ಹುಸಿಯಾಡಿ ಕಳಿಸುವೆಯಂತೆ. ಮರುಳೇ ನಾವು ಯಾಕಿರುವುದು? ನಿನ್ನ ನೀನು ಏನಂದುಕೊಂಡಿರುವೆ? ನಿನ್ನ ಇಂದು ತುಂಡರಿಸಿಯೇ ನಾನು ತೆರಳುವುದು’ ಅಬ್ಬರಿಸಿ ಬೊಬ್ಬಿರಿದ.
’ನಾನು ಹೇಳುವುದೆಲ್ಲ ಸತ್ಯ. ನಾವು ಎಲ್ಲ ಕೆಲಸಗಳನ್ನು ಮಾಡಬೇಕು. ಯಾವುದು ಮಾಡಿಲ್ಲ ಎಂದರೆ ಹೇಳಬಲ್ಲೆ.’
’ಓಹ್ ಹೌದಾ. ನೀನು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕು. ಇಲ್ಲ ಎಂದ ಮರುಕ್ಷಣವೇ ನಿನ್ನ ಮರಣ ಶತಸಿದ್ಧ. ಅಲ್ಲವೋ ಮಂಕೆ, ನೀನು ಬ್ಯಾಂಕಿನಲ್ಲಿ ಹಣ ಕೊಟ್ಟು, ಪಡೆದಿದ್ದೀಯ. ಸಾಲ ಕೊಟ್ಟು ಮರುಪಾವತಿ ಮಾಡಿಸಿರುವೆ. ಅಷ್ಟಲ್ಲವೇ ನಿನ್ನ ಕೆಲಸ. ಇದಕ್ಕೆ ಹುಸಿಯಾಡಿ ನಿನ್ನ ಜವಾಬ್ದಾರಿಗಳಿಂದ ದೂರ ಓಡುವಿಯೇನು?’
’ಇಲ್ಲ ನಿಮಗೆ ತಪ್ಪು ತಿಳುವಳಿಕೆ ಇದೆ. ಒಬ್ಬ ಸಾಮಾನ್ಯ ಮನುಷ್ಯ ಯಾವೆಲ್ಲ ವೃತ್ತಿಗಳ ನಿರ್ವಹಿಸುವನೋ ಅದೆಲ್ಲವನ್ನೂ ಒಬ್ಬ ಬ್ಯಾಂಕರ್ ಆಗಿ ನಾನು ಮಾಡಿರುವೆ, ಮಾಡುತ್ತಿರುವೆ, ಮಾಡಲಿರುವೆ.’
’ಹೋ ನನಗೂ ಅದೇ ಸುಳ್ಳು. ಇಂದು ನಿನ್ನ ಬಿಟ್ಟರೆ ಜಗತ್ತಿನ ತುಂಬಾ ಇದನ್ನೇ ಹರಡುವೆ. ನಿನಗಿದೆ. ಪ್ರಶ್ನೆಗಳ ಎದುರಿಸಲು ಸಿದ್ದನಾಗು.’
ಪ್ರ- ಮನುಷ್ಯರ ಬಗ್ಗೆ ಅಷ್ಟು ಕಾಳಜಿ ಅಲ್ಲವೆ ನಿನಗೆ. ಅವರಿಗೆ ಏನು ಮಾಡಿರುವೆ?
ಉ- ಸಮಯದ ಪರಿವೆಯೇ ಇಲ್ಲದೆ ಕೆಲಸ ಮಾಡಿರುವೆ. ಹಸಿವನೂ ಲೆಕ್ಕಿಸದೆ ಸಾಲ ನೀಡಿರುವೆ. ಆರೋಗ್ಯವ ಯೋಚಿಸದೆ ಊರ ಸುತ್ತಿರುವೆ.’
ಪ್ರ- ಓಹ್ ಹಾಗಾದರೆ ಅವರಿಗೆ ವಿಮೆ ಮಾಡಿರುವೆಯ?
ಉ- ಹೌದು ಜೀವ ವಿಮೆ, ಅಪಘಾತ ವಿಮೆ ಮಾಡಿರುವೆ.
ಪ್ರ- ಪಿಂಚಣಿ
ಉ- ಅದನ್ನು ಪ್ರತಿ ವಾರವೂ ಮಾಡುತ್ತಿರುವೆ. ಜನಗಳ ಕನ್ವಿನ್ಸ್ ಮಾಡುವುದೇ ದೊಡ್ಡ ಕೆಲಸ.
ಪ್ರ- ಪ್ರಾಣಿಗಳ ವಿಮೆ?
ಉ- ಮಾಡಿರುವೆ. ಹಸು, ಕುರಿ, ಕೋಳಿ ಹೀಗೆ ಹಲವು ಪ್ರಾಣಿಗಳ ವಿಮೆ ಮಾಡಿಸುವೆ. ಅವುಗಳ ಓಲೆಯನ್ನು ತಂದು ಹಂಚಿದ್ದೇನೆ.
ಪ್ರ- ಬೆಳೆ ವಿಮೆ? ಕೃಷಿಕನ ವಿಮೆ?
ಉ- ಯಾರನ್ನೂ ಬಿಟ್ಟಿಲ್ಲ. ಬೇಕು ಬೇಡಗಳ ಕಡೆಗಣಿಸಿ ಮಾಡಿದ್ದೇನೆ. ಈಗ ಬೇಡ ಎಂದು ಧರಣಿ ಮಾಡುವವರು ನಾಳೆ ಕ್ಲೈಂ ಆದಾಗ ಮಾಡಿಲ್ಲವೆಂದು ಕೋರ್ಟಿಗೆ ಹೋಗಿದ್ದೂ ಇದೆ.
ಪ್ರ- ವಾಹನಗಳ ವಿಮೆ
ಉ- ಪ್ರತಿ ತಿಂಗಳೂ ಅದೇ ಕೆಲಸ. ಸಾಲ ಕಟ್ಟದೆ ಹತ್ತಾರು ವರ್ಷಗಳು ಕಳೆದರೂ ವಿಮೆ ತಪ್ಪಿಲ್ಲ.
ಪ್ರ- ನೀನೇನು ವಿಮಾ ಪ್ರತಿನಿಧಿಯೇ?
ಉ- ಇನ್ನೂ ಇವೆ. ಸರಕುಗಳ ವಿಮೆ ಮಾಡಿಸುವೆ, ಎಟಿಎಂ ಕಾರ್ಡ್‌ಗಳಿಗೂ ವಿಮೆ ಇದೆ, ಕೆಲ ಖಾತೆಗಳಿಗೂ ವಿಮೆ ಇದೆ, ಇನ್ನು ಬ್ಯಾಂಕ್ ಯಾವ ಕಂಪೆನಿಯ ಒಪ್ಪಂದ ಮಾಡಿಕೊಳ್ಳುವುದೋ ಅವರ ವಿಮೆಯನ್ನೂ ಮಾರಿದ್ದೇನೆ.
ಪ್ರ- ಇಷ್ಟೆಯೇ?
ಉ- ಇಲ್ಲ, ಇತ್ತೀಚೆಗೆ ಪ್ರತಿ ಸಬ್ಸಿಡಿಗಳನ್ನು ಹುಡುಕಲು ಸರ್ಕಾರಿ ಇಲಾಖೆಗಳ ಸುತ್ತಿದ್ದೇನೆ. ಉದ್ಯೋಗ ಖಾತ್ರಿ ದುಡ್ಡಿಗೂ ಜನ ನಮ್ಮನ್ನೇ ಜವಬ್ದಾರಿ ಮಾಡುತ್ತಾರೆ. ವಿದ್ಯಾರ್ಥಿ ವೇತನಕ್ಕೂ ನಾವೇ ಬೇಕು.
ಪ್ರ- ಮತ್ತೆ ಭೂಮಿ ಎಂಟ್ರಿ ಬಿಟ್ಟೆಯಲ್ಲ
ಉ- ಹೋ ನಿಮಗೂ ಅದರ ಪರಿಚಯ ಇದೆಯ. ಈಗ ಸಿಬಿಲ್, ಭೂಮಿ ಎಂಟ್ರಿ ನಾವೇ ಮಾಡಬೇಕು.
ಪ್ರ- ಆಧಾರ
ಉ- ಅದರ ಕಥೆ ಕೇಳಬೇಡಿ. ಅದೊಂದು ಉತ್ತಮ ನಿರ್ಧಾರ. ಆದರೆ ಮೊದಲು ಬರೀ ಆಧಾರ್ ಲಿಂಕ್ ಮಾಡಿದರೆ ಸಾಕಿತ್ತು. ಈಗ ಹಾಗಲ್ಲ. ನಾವೇ ಆಧಾರ್ ಕ್ರಿಯೇಷನ್, ತಿದ್ದುಪಡಿ ಅಲ್ಲದೆ ಬಯೋ ಮೆಟ್ರಿಕ್ ಮಾಡಿ ಲಿಂಕ್ ಮಾಡಬೇಕು.
ಪ್ರ- ನಂದೊಂದು ಪಾಸ್ ಬುಕ್ ಎಂಟ್ರಿ ಆಗಬೇಕಿತ್ತು.
ಉ- ಮಹಾಸ್ವಾಮಿ ಅದನ್ನು ತಪ್ಪಿಸುವಂತೆಯೇ ಇಲ್ಲ. ಎಷ್ಟೋ ಸಲ ಬರೀ ಗ್ಯಾಸಿನ ದುಡ್ಡಷ್ಟನ್ನೇ ಬಿಡಿಸಿ ಕೊಟ್ಟು ಕಳಿಸಿದ್ದೇನೆ. ಇಷ್ಟೆಲ್ಲಾ ಮಾಡಿಯೂ ಜನರ ಬಾಂಧವ್ಯ ಬೆಳೆದುದಕ್ಕೆ ಮೇಲಿಂದ ಬೈಯ್ಸಿಕೊಂಡಿದ್ದೇನೆ.
’ಸ್ವಲ್ಪ ಇರು ಬ್ಯಾಂಕರನೆ, ನಿನಗೆ ಎಂದೂ ಏತಕಾದರೂ ಈ ಉದ್ಯೋಗ ಆರಿಸಿಕೊಂಡೆ ಎನ್ನಿಸಿಲ್ಲವೇ?’
ಬ್ಯಾಂಕರನ ಫೋನು ರಿಂಗಣಿಸಿತು. ’ಹಾಂ ಹೇಳು, ನೀನು ಆಸ್ಪತ್ರೆಯಿಂದ ಹೊರಡು. ದುಡ್ಡು ನಿನ್ನೆಯೇ ಕೊಟ್ಟಿದ್ದೇನೆ. ನಾನು ಈಗ ಹೊರಟೆ. ಇಂದು ಸ್ವಲ್ಪ ತಡವಾಯಿತು. ಹಲೋ’ ಮಾತನಾಡುತ್ತಿದ್ದಂತೆ ಫೋನ್ ಕಟ್ ಆಯಿತು.
’ಯಾರದು’
’ನನ್ನ ಪತ್ನಿ. ನನ್ನ ಮೂರು ವರ್ಷದ ಮಗನಿಗೆ ಹುಷಾರಿಲ್ಲದೆ ಎರಡು ವಾರವಾಯಿತು. ನನಗೆ ರಜೆಯೂ ಇಲ್ಲ. ನನ್ನ ಪತ್ನಿಗೆ ಈ ಊರು ಗೊತ್ತಿಲ್ಲ. ಸಿಟ್ಟಿನಿಂದ ಫೋನ್ ಕಟ್ ಮಾಡಿದಳು. ಪರಿಚಯದವರ ಆಟೋ ಹತ್ತಿ ಈ ರಾತ್ರಿಯಲ್ಲಿ ಒಬ್ಬಳೇ ಮನೆಗೆ ಹೋಗಬೇಕು ಅವಳು.’
’ಅಯ್ಯೋ ಪುಣ್ಯಾತ್ಮ, ಇಷ್ಟೆಲ್ಲ ನೋವಿನ ನಡುವೆಯೂ ಈ ನಗುಮೊಗದ ಸೇವೆಯೇ? ನಿನಗೆ ನಾನು ಮರುಳನಾದೆ. ಹೇಳು ನಿನಗೆ ಎಂದಾದರೂ ಈ ಉದ್ಯೋಗ ಬೇಡ ಅನ್ನಿಸಿದೆಯೇ?’
ಮತ್ತದೇ ನಗು. ’ಇಲ್ಲ ನನಗೆಂದಿಗೂ ಹಾಗೆ ಅನ್ನಿಸಿಲ್ಲ, ಅನ್ನಿಸುವುದೂ ಇಲ್ಲ. ಕಿಂಚಿತ್ ಲಂಚವಿಲ್ಲದೆ, ಸಮಯದ ವ್ಯರ್ಥವಿಲ್ಲದೆ ಸಮಾಜಕ್ಕೆ ನಾಳೆಗಳ ಮಾರುವ ವ್ಯಕ್ತಿ ನಾನು. ನನಗೆ ನನ್ನ ಜವಾಬ್ದಾರಿ, ನನ್ನ ವೃತ್ತಿಯ ಬಗ್ಗೆ ಹೆಮ್ಮೆಯಿದೆ. ಅವರು ಒಂದರ ಹಿಂದೊಂದು ಇಷ್ಟು ಹೊಣೆಗಾರಿಕೆ ನೀಡುತ್ತಿದ್ದಾರೆ ಎಂದರೆ ಅದು ಅವರು ನಮ್ಮ ಮೇಲಿಟ್ಟ ನಂಬಿಕೆಗೆ ಸಾಕ್ಷಿ. ನಾವು ಕೇವಲ ಅಗತ್ಯ ವ್ಯವಸ್ಥೆಯಿಲ್ಲದೆ ಸೋಲುತ್ತಿದ್ದೇವೆ. ನಮಗೆ ನಮ್ಮದೂ ಅಂತ ಒಂದು ಚಿಹ್ನೆಯೂ ಇಲ್ಲ. ಅಲ್ಲದೆ ಬ್ಯಾಂಕರ್ ಯಾರದೋ ಮನೆ ಮುರಿದ ಉದಾಹರಣೆಯೇ ಇಲ್ಲ. ಮನೆಯ ಯಾವುದೋ ಸಮಸ್ಯೆಗೋ, ಮೇಲಧಿಕಾರಿಗಳ ಒತ್ತಡಕ್ಕೋ ಎಂದೋ ರೇಗಿರಬಹುದು. ಮರುದಿನ ಅದೇ ವ್ಯಕ್ತಿಗೆ ಕೊಂಚವೂ ಬೇಸರ ಮಾಡದೇ ಕೆಲಸ ಮಾಡಿಕೊಟ್ಟಿದ್ದೇನೆ. ನಮಗೂ ವೈಯಕ್ತಿಕ ಬದುಕು ಇದೆ ಅಲ್ಲವೇ, ಅಲ್ಲೂ ತಾಪತ್ರಯಗಳಿರುತ್ತವೆ.’
’ಆಯ್ತು. ನೀನು ಹೇಳುವುದು ಸರಿ. ನಿನ್ನ ಬಗ್ಗೆ ನನಗೆ ಹೆಮ್ಮೆ ಆಗುತ್ತಿದೆ. ನಾನಿನ್ನೂ ಬರುವೆ. ಇನ್ನೂ ತಡವಾದರೆ ನನ್ನ ಹೆಂಡತಿ ಒಳ ಸೇರಿಸುವುದಿಲ್ಲ.’
’ನಮಸ್ತೇ, ಹೋಗಿ ಬನ್ನಿ. ನಿಮ್ಮ ಪಾಸ್ ಬುಕ್ ಕೊಟ್ಟು ಹೋಗಿ. ಎಂಟ್ರಿ ಮಾಡಿಸಿಟ್ಟಿರುವೆ’
’ಅದಿರಲಿ, ಅವನು ಯಾರು ಆಗಿಂದ ಕುಳಿತಿರುವುದು? ಅವನಿಗೆ ಅಕೌಂಟ್ ಮಾಡಿಕೊಡಲ್ಲ ಅಂದ್ರಿ ಅಂತೆ. ಲೀಡ್ ಬ್ಯಾಂಕ್‌ಗೆ ಹೇಳಬೇಕೇನು?’
’ಇಲ್ಲ, ಅವನ ಹೆಸರು ಕರೋನಾ. ಚೀನಾದವನು. ಸೌದಿ ಅರೇಬಿಯಾ ಮೂಲಕ ಇಲ್ಲಿಗೆ ಬಂದಿದಾನೆ. ಅಕೌಂಟ್ ಆಗಬೇಕಂತೆ. ಲೋಕಲ್ ಐಡಿ ಇಲ್ಲ. ಅದಕ್ಕೆ ಕೂರಿಸಿದ್ದೇನೆ. ಅವನ ಹತ್ತಿರ ಆಧಾರ್ ಇದೆ ಪಶ್ಚಿಮ ಬಂಗಾಳದ್ದು.’ ನಿಟ್ಟುಸಿರು ಬಿಟ್ಟು ಎದ್ದ. ಅವನ ಉಸಿರಿಗೆ ಅಲ್ಲಿದ್ದ ಫೈಲಿಂದ ಎರಡು ಪೇಪರ್ ಕೆಳಗೆ ಬಿದ್ದವು. ಎತ್ತಿಕೊಂಡ ಇವನಿಗೆ ಶಾಕ್ ಆಗಿತ್ತು. ಅವು ಸ್ಯಾಲರಿ ಸ್ಲಿಪ್ಸ್. ಒಂದು 2015 ರದ್ದು, ಒಂದು 2020 ರದ್ದು. ಕೇವಲ 500 ರೂಪಾಯಿಗಳು ಜಾಸ್ತಿ ಆಗಿದ್ದು. ಅಶ್ರುಧಾರೆಗೆ ಆ ಕಾಗದ ಒದ್ದೆಯಾಗಿದ್ದವು.
Get in Touch With Us info@kalpa.news Whatsapp: 9481252093
Discussion about this post