ನಮಸ್ಕಾರ ಸ್ನೇಹಿತರೆ ಇವತ್ತು ನಾನು ಬರಿತಾ ಇರೋದು ನಾನು ಅಪಾರ ಗೌರವ ನೀಡುವ ನರ್ಸಿಂಗ್ ವೃತ್ತಿಯಲ್ಲಿ ನಮ್ಮ ಸೇವೆ ಮಾಡುತ್ತಿರುವವರ ಬಗ್ಗೆ.
ಹೌದು ನಾವೆಲ್ಲಾದ್ರೂ ಅರೋಗ್ಯ ಕೈ ಕೊಟ್ಟೋ… ಇಲ್ಲ ಏನಾದರು ಕಾಯಿಲೆಯಿಂದ ಬಳಲುತ್ತ ಆಸ್ಪತ್ರೆ ಸೇರಿದಾಗ ನಮ್ಮ ಮನೆಯವರೋ, ರಕ್ತ ಸಂಬಂಧಿಗಳೋ, ಅಥವಾ ಸ್ನೇಹಿತರಂತೆ ನಮ್ಮ ಸೇವೆಯನ್ನು ಮಾಡುವ ಅದೆಷ್ಟೋ ನರ್ಸ್, ದಾದಿ ಅಥವಾ ಶುಶ್ರುಕಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ.
ಯಾರೋ ಒಬ್ಬರು, ಇಬ್ಬರು ಮಾಡಿದ ತಪ್ಪಿಗೋ ಇಲ್ಲ ನಮ್ಮ ಬೇಜವಾಬ್ದಾರಿಯಿಂದಲೋ ನಮ್ಮವರನ್ನು ಕಳೆದುಕೊಂಡ್ರೆ ಅಥವಾ ಒಂದು ಇಂಜೆಕ್ಷನ್ ಸೂಜಿ ಚುಚ್ಚೋವಾಗ ಸ್ವಲ್ಲ ನೋವಾದ್ರೆ, ಇಲ್ಲಾ ಇನ್ನೇನಾದ್ರು ಸಣ್ಣ ತಪ್ಪು ಅವರಿಂದ ಆದ್ರೂ ಇಡೀ ಆ ವೃತ್ತಿಯಲ್ಲಿರುವ ಎಲ್ಲರಿಗೂ ಬಾಯಿಗೆ ಬಂದಂತೆ ಬೈಯುವುದುಂಟು, ಇನ್ನೂ ಕೆಲವರು ಹಿಡಿ ಶಾಪ ಹಾಕುವುದೂ ಉಂಟು.
ನಮ್ಮಂತೆ ಅವರಿಗೂ ಒಂದು ಜೀವನ ಇದೆ, ಅವರಿಗೂ ಸಂಬಂಧಿಕರು, ಸ್ನೇಹಿತರು ಎನ್ನುವ ಸಂಬಂಧಗಳಿವೆ, ಹೆಚ್ಚಾಗಿ ಅವರಿಗೂ ಒಂದು ಮನಸ್ಸು ಎನ್ನುವುದಿದೆ.
ಸ್ನೇಹಿತರೆ ಅದೆಷ್ಟೋ ಬಾರಿ ನರ್ಸ್‌ಗಳನ್ನು ನಮ್ಮ ಮನೆಯ ಕೆಲಸದವರ ರೀತಿ ನಡೆಸಿಕೊಳ್ಳುವುದು ಇದೆ.
ಒಮ್ಮೆ ಯೋಚಿಸೋಣ, ನಮ್ಮ ಸಂಬಂಧಿಕರೆ ಯಾರಾದರೂ ಹಾಸಿಗೆ ಹಿಡಿದರೆ, ಅಥವಾ ಅವರಿಗೆ ಎನಾದರು ಮಾರಕವಾದ ರೋಗವಿದ್ದರೆ ಅವರು ಮಾಡಿಕೊಂಡ ಹೇಸಿಗೆಯನ್ನು ತೆಗೆಯಲು ಹೇಸುವ ನಾವು, ಅವರನ್ನು ಮುಟ್ಟಲು ಅಸಹ್ಯ ಪಡುವ ನಾವುಗಳು, ಅದೆಲ್ಲವನ್ನು ಮರೆತು ವೃತ್ತಿಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು, ಮಾನವೀಯತೆಯಿಂದ ಅಂತಹ ರೋಗಿಗಳನ್ನು ಆರೈಕೆ ಮಾಡುವ ನರ್ಸ್‌ಗಳಿಗೆ ಬೈಯಲು ನಾವೆಷ್ಟು ಅರ್ಹರು?
ಎಲ್ಲಾದರು ಅವರು ಇಂತಹ ಮಾರಕ ಕಾಯಿಲೆ ಇರುವವರನ್ನು, ಸುಟ್ಟು ಕರಕಲಾದ ದೇಹವನ್ನು, ಯಾವುದೋ ವಾಹನದಡಿ ಸಿಕ್ಕಿ ಭೀಕರವಾಗಿ ಕಾಣಿಸುವ ದೇವವನ್ನು, ಕಜ್ಜಿ ಹಿಡಿದು ಹೇಸಿ ಹೋಗಿರುವ ದೇಹವನ್ನು ಮುಟ್ಟಲು ಅಸಹ್ಯಪಟ್ಟು ನಾವು ಮುಟ್ಟುವುದಿಲ್ಲ, ಆರೈಕೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರೆ ಇಂತಹ ಪರಿಸ್ಥಿತಿಯಲ್ಲಿರುವವರೆಲ್ಲ ನೇರವಾಗಿ ಸೇರಬೇಕಾಗಿರುವುದು ಯಮ ಲೋಕವನ್ನು.
ಇಷ್ಟೆಲ್ಲಾ ಓದಿದವರು ಈಗ ಯೋಚಿಸಬಹುದು ಅವರೇನು ಸುಮ್ಮನೆ ನೋಡಿಕೊಳ್ತಾರಾ? ಅವರು ತಿಂಗಳಿಗೆ ಸರಿಯಾಗಿ ಸಂಬಳ ಎಣಿಸುವುದಿಲ್ವ? ಅವರು ಮಾಡಿದ ಆರೈಕೆಗೆ ಲಕ್ಷಾಂತರ ಹಣ ಕೊಡುವುದಿಲ್ವ ಅಂತ…..ನಿಮಗೆ ಹಾಗೆ ಅನ್ನಿಸುವುದು ಸಹಜ ಆದರೆ ಒಮ್ಮೆ ಯೋಚಿಸಿ ಹಣಕೊಟ್ಟರೆ ನೋಡಿಕೊಳ್ತಾರೆ ಅನ್ನೋ ಯೋಚನೆ ಇರುವ ನಾವು ಯಾಕೆ ನಮಗೆ ಜನ್ಮವನ್ನೇ ಕೊಟ್ಟ ನಮ್ಮ ಹೆತ್ತವರು ಹಾಸಿಗೆ ಹಿಡಿದಾಗ ಅವರ ಹೇಸಿಗೆ ನೋಡಿ ಯಾಕೆ ಅಸಹ್ಯ ಪಡುತ್ತೇವೆ…? ನಮಗೆ ನಮ್ಮ ಹೆತ್ತವರು ಕೊಟ್ಟ ಜನ್ಮ ನಾವು ನರ್ಸ್‌ಗಳಿಗೆ ಕೊಡುವ ಲಕ್ಷಾಂತರ ರೂಗಳಿಗೂ ಮಿಗಿಲಾಗಿದ್ದು ಅಲ್ವಾ?
ಹಾಗೆ ಈ ಕೆಳಗಿನ ವೀಡಿಯೋ ಒಮ್ಮೆ ಪೂರ್ತಿಯಾಗಿ ನೋಡಿ, (ಮಂಗಳೂರು ಶಕ್ತಿನಗರ ಮೂಲದ ಸುಶಾಂತ್ ಎಂಬಾತನಿಂದ ಕೃತ್ಯ, ಬಗಂಬಿಲ ನಿವಾಸಿ ದೀಕ್ಷಾ ಇರಿತಕ್ಕೊಳಗಾದ ವಿದ್ಯಾರ್ಥಿನಿ ವಿದ್ಯಾರ್ಥಿನಿಗೆ ಯುವಕನೋರ್ವನಿಂದ ಚೂರಿ ಇರಿತ ದೇರಳಕಟ್ಟೆ ಬಗಂಬಿಲ ಸಮೀಪ ನಡೆದ ಘಟನೆ).
ಯಾವುದೋ ತಂದೆ ತಾಯಿ ಹೆತ್ತ ಮಗಳನ್ನು ಹಾಡಹಗಲೇ ಒಬ್ಬ ಕಿರಾತಕ ಚೂರಿಯಿಂದ ಇರಿಯುತ್ತಾನೆ, ಆಕೆಯನ್ನು ಇರಿದು ತಾನೂ ಹುಚ್ಚನಂತೆ ಕತ್ತನ್ನು ಇರಿದುಕೊಳ್ಳುತ್ತಾನೆ. ಸುತ್ತಮುತ್ತ ಬೇಕಾದಷ್ಟು ಜನ ಮೂಖವಿಸ್ಮಿತರಂತೆ ನಿಂತು ನೋಡುತ್ತಾ, ಭಯದಿಂದ ಕಿರುಚುತ್ತಾ, ಇನ್ನೂ ಕೆಲವರು ತಮಗೆ ಸಾಧ್ಯವಾದ ರೀತಿಯಲ್ಲೆಲ್ಲ ಆ ಭಯಾನಕ ದೃಶ್ಯವನ್ನು ತಮ್ಮ ಪೋನ್’ನಲ್ಲಿ ಸೆರೆ ಹಿಡಿಯುತ್ತಿದ್ದಾರೆಯೇ ಹೊರತು ಯಾರೊಬ್ಬರು ಆ ಹೆಣ್ಣು ಮಗುವನ್ನು ಕಾಪಾಡಲು ಮುಂದಾಗಲಿಲ್ಲ. ಕಾರಣ ಇಷ್ಟೆ, ಜೀವದ ಭಯ. ಎಲ್ಲಿ ಆ ಯುವಕ ಕೈಯಲ್ಲಿರುವ ಚಾಕುವಿನಿಂದ ನಮಗೆ ಇರಿಯುತ್ತಾನೋ ಎನ್ನೋ ಭಯ.
ಆದರೆ ಅಲ್ಲಿ ಕೊನೆಯಲ್ಲಿ ಆಂಬ್ಯುಲೆನ್ಸ್ ಬಂದ ನಂತರದ ದೃಶ್ಯವನ್ನು ಸರಿಯಾಗಿ ಗಮನಿಸಿ. ಅದರಿಂದ ಇಳಿದು ಬಂದ ನರ್ಸ್ ಒಬ್ಬರು (ಅದು ಕೂಡ ಹುಡುಗಿ) ಆ ಹುಡುಗನ ಕೈಯಲ್ಲಿರುವ ಚಾಕುವನ್ನು ಲೆಕ್ಕಿಸದೆ, ಜೀವದ ಹಂಗನ್ನು ತೊರೆದು ಆ ಇಬ್ಬರ ಪ್ರಾಣ ರಕ್ಷಣೆಯಲ್ಲಿ ತೊಡಗುತ್ತಾರೆ. ಅವರು ಯಾರೋ ಗೊತ್ತಿಲ್ಲ, ಆದರೆ ಅವರ ಆ ಧೈರ್ಯಕ್ಕೆ, ಮಾನವೀಯತೆಗೆ, ಅವರ ಸೇವೆಗೆ ಇಲ್ಲಿಂದಲೆ ಒಂದು ಸೆಲ್ಯೂಟ್. ಇದೊಂದು ಸಣ್ಣ ಉದಾಹರಣೆ ಅಷ್ಟೆ. ಇಂತಹ ಸಾವಿರಾರು ಘಟನೆಗಳು ದೈನಂದಿನ ಜೀವನದಲ್ಲಿ ನಡೆಯುತ್ತಾ ಇರುತ್ತದೆ.
ಪ್ರತಿಯೊಬ್ಬರ ವೃತ್ತಿಯು ಗೌರವಯುತವಾದದ್ದು. ಅದರಲ್ಲೂ ಈ ಪರರ ಸೇವೆ ಮಾಡುವ ಈ ನರ್ಸಿಂಗ್ ವೃತ್ತಿಯನ್ನು ನಾನು ಯಾವಾಗಲೂ ಗೌರವದಿಂದ ನೋಡುತ್ತೇನೆ.
ಖಂಡಿತವಾಗಿ ಎಲ್ಲೋ ಒಂದೆರಡು ಆಸ್ಪತ್ರೆಗಳಲ್ಲಿ ಯಾರೋ ಒಂದಿಬ್ಬರು ತಪ್ಪನ್ನು ಮಾಡಿರಬಹುದು, ಮುಂದೆ ಮಾಡಲೂಬಹುದು. ಆ ಕಾರಣಕ್ಕೆ ಆ ವೃತ್ತಿಯಲ್ಲಿರುವ ಎಲ್ಲರನ್ನೂ ಕೆಟ್ಟದ್ದಾಗಿ ಕಾಣದೆ, ಕೀಳಾಗಿ ಕಾಣದೆ ಗೌರವಿಸೋಣ. ಅದೆಷ್ಟೋ ಜೀವಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ ನರ್ಸಿಂಗ್ ವೃತ್ತಿಯಲ್ಲಿರುವ ಸ್ನೇಹಿತರಿಗೆ ಹೃತ್ಪೂರ್ವಕ ವಂದನೆಗಳು.
ಇಂತಿ ನಿಮ್ಮವ
ಪ್ರದೀಪ್ ಪುತ್ರನ್ ಕೋಟ
Discussion about this post