ಕಲ್ಪ ಮೀಡಿಯಾ ಹೌಸ್ | ಸಿರ್ಸಿ |
ಹಿರಿಯ ಪತ್ರಕರ್ತ–ಸಾಹಿತಿ ಎಲ್.ಎಸ್. ಶಾಸ್ತ್ರಿಯವರ ಅಗಾಧ ಸಾಧನೆಗೆ ತಕ್ಕ ಮಟ್ಟಿನ ಸ್ಥಾನಮಾನ ಹಾಗೂ ಗೌರವಗಳು ಇದುವರೆಗೆ ದೊರಕದಿರುವುದು ವಿಷಾದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಸಿರ್ಸಿ ತಾಲೂಕು ಸಮಿತಿಯ ಗೌರವ ಕಾರ್ಯದರ್ಶಿ ಹಾಗೂ ಬರೆಹಗಾರ ವಾಸುದೇವ ಶಾನಭಾಗ ಹೇಳಿದ್ದಾರೆ.
ನಗರದ ನೆಮ್ಮದಿ ಕುಟೀರದಲ್ಲಿ ಸಿರ್ಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಶಾಸ್ತ್ರಿಯವರ ಎರಡು ಕೃತಿಗಳ ಅವಲೋಕನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯಮಟ್ಟದ ಸಮ್ಮೇಳನಾಧ್ಯಕ್ಷತೆಗೆ ಅರ್ಹರಾಗಿರುವ ಶಾಸ್ತ್ರಿಯವರನ್ನು ಸಾಹಿತ್ಯ ಲೋಕ ಸೂಕ್ತವಾಗಿ ಗುರುತಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಶಾಸ್ತ್ರಿಯವರ ‘ಲಯ’ ಕಾದಂಬರಿಯ ಲೇಖಕರ ಮಾತಿನ ಭಾಗವನ್ನು ವಾಚಿಸುವ ಮೂಲಕ ವಿನೂತನವಾಗಿ ಉದ್ಘಾಟಿಸಲಾಯಿತು. ಗಣಪತಿ ಭಟ್ಟ ವರ್ಗಾಸರ ಸ್ವಾಗತಿಸಿ ಶಾಸ್ತ್ರಿಯವರನ್ನು ಪರಿಚಯಿಸಿದರು. ನಿವೃತ್ತ ಪ್ರೊ. ಸುರೇಶ ಕಡೇಮನಿ ‘ಲಯ’ ಕಾದಂಬರಿ ಕುರಿತು ಹಾಗೂ ಹಿರಿಯ ಸಾಹಿತಿ ಡಿ.ಎನ್. ನಾಯ್ಕ ‘ಯಕ್ಷಗಾನ ರಂಗಪ್ರಜ್ಞೆ’ ಕೃತಿಯ ಬಗ್ಗೆ ಮಾತನಾಡಿ, ಕೃತಿಗಳ ವೈಶಿಷ್ಟ್ಯಗಳನ್ನು ವಿವರಿಸಿದರು.
Also read: ಶಿಕಾರಿಪುರ ಸಮೀಪ ಟಿಟಿ ವಾಹನ ಪಲ್ಟಿ; ಮೂವರಿಗೆ ಗಂಭೀರ ಗಾಯ
ಜಿ.ಎ. ಹೆಗಡೆ ಸೋಂದಾ, ಕಸಾಪ ಘಟಕದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ಬೆಳಗಾವಿಯ ಆನಂದ ಪುರಾಣಿಕ ಸೇರಿದಂತೆ ಹಲವರು ಶಾಸ್ತ್ರಿಯವರ ಸಾಧನೆಯನ್ನು ಪ್ರಶಂಸಿಸಿದರು. ಬಳಿಕ ಕವಿಗೋಷ್ಠಿ ನಡೆಯಿತು.
ಇದೇ ವೇಳೆ ತಾಲೂಕು ಸಮಿತಿಯಿಂದ ಶಾಸ್ತ್ರಿಯವರನ್ನು ಸನ್ಮಾನಿಸಲಾಯಿತು. ಸಮಿತಿಗೆ ಕೃತಜ್ಞತೆ ಸಲ್ಲಿಸಿದ ಶಾಸ್ತ್ರಿಯವರು ತಮ್ಮ ಸಾಹಿತ್ಯಿಕ ಆಸಕ್ತಿಗೆ ಪ್ರೇರಣೆ ನೀಡಿದ ತವರು ಜಿಲ್ಲೆ ಹಾಗೂ ಹಿರಿಯ ಸಾಹಿತಿಗಳನ್ನು ಸ್ಮರಿಸಿದರು.
ವಿ.ಪಿ. ಹೆಗಡೆ ವೈಶಾಲಿ, ಎಂ.ಎ. ಪಾಟೀಲ, ಜಯಪ್ರಕಾಶ ಹಬ್ಬು, ಜಯರಾಮ ಹೆಗಡೆ, ಪರಮಾನಂದ ಹೆಗಡೆ, ರಾಜಶೇಖರ ಹೆಬ್ಬಾರ, ರಘು ಪುರಾಣಿಕ ಸೇರಿದಂತೆ ಅನೇಕ ಗಣ್ಯರು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















