ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಖ್ಯಾತ ರಂಗಕರ್ಮಿ, ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಯಶವಂತ ಸರದೇಶಪಾಂಡೆ(50) ವಿಧಿವಶರಾಗಿದ್ದಾರೆ.
ತೀವ್ರ ಹೃದಯಾಘಾತಕ್ಕೆ ಒಳಗಾದ ಯಶವಂತ ಅವರ ಇಂದು ಇಹಲೋಕ ತ್ಯಜಿಸಿದ್ದು, ಈ ಮೂಲಕ ತಮ್ಮ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆಯ ಸೇರಿ ಜೀವನದ ನಾಟಕಕ್ಕೆ ಅಂಕದ ಪರದೆ ಬಿದ್ದಿದೆ.
ಇವರು ಹಾಸ್ಯನಟ, ನಿರ್ದೇಶಕ, ನಾಟಕಕಾರ, ರಚನೆಕಾರ, ಸಂಭಾಷಣಾಕಾರರಾಗಿ ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದರು. ಇವರು ತಮ್ಮ ಪತ್ನಿ ಖ್ಯಾತ ಕಿರುತೆರೆ ಕಲಾವಿದೆ ಮಾಲತಿ ಹಾಗೂ ಪುತ್ರಿ ದೋಸ್ತಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಚಿಕ್ಕಂದಿನಿಂದಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ ಅವರು, ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪಡೆದರು. ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆ ವಿಷಯದಲ್ಲಿ ವಿಶೇಷ ತರಬೇತಿ ಪಡೆದು ತಮ್ಮ ಕಲೆಗೆ ಅಂತಾರಾಷ್ಟ್ರೀಯ ಅಳತೆ ಸೇರಿಸಿದರು.
ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ ಅನೇಕ ನಾಟಕಗಳನ್ನು ರಚಿಸಿ, ಅಭಿನಯಿಸಿದ್ದ, ಯಶವಂತ ಸರದೇಶಪಾಂಡೆ ಅವರು ಕಲೆ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಜರಾಮರ.
ಇನ್ನು, ರಾಜ್ಯದಾದ್ಯಂತ 60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಂಧಯುಗ, ಇನ್ಸ್ಪೆಕ್ಟರ್ ಜನರಲ್, ಮಿಡ್ಸಮರ್ ನೈಟ್ಸ್ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ನಾಟಕಗಳು ಅವರ ನಿರ್ದೇಶನದ ವಿಶಿಷ್ಟ ಉದಾಹರಣೆಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















Discussion about this post