ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಂವಿಧಾನದ ಆಶಯದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರ ಸಮಸ್ಯೆ ಪರಿಹಾರಕ್ಕೆ ಆಡಳಿತ ಯಂತ್ರವನ್ನೇ ಪ್ರತಿ ಮನೆ ಬಾಗಿಲಿಗೆ ತರಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದ 72ನೆಯ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಹೇಳಿದಂತೆ ನ್ಯಾಯವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದ. ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ದೃಢವಾಗುವುದೂ ಇದರಿಂದಲೇ ಎಂಬ ನಂಬಿಕೆ ನಮ್ಮದು. ದೇಶದ ಆಂತರಿಕ ಭದ್ರತೆ ಹಾಗೂ ಗಡಿಗಳನ್ನು ಕಾಪಾಡಿಕೊಂಡು ಶಾಂತಿ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ನಾವು ಸದಾ ಸನ್ನದ್ಧರಾಗಿದ್ದೇವೆ ಎಂದರು.
ಕಳೆದ ವರ್ಷ ಕಾಡಿದ ಕರೋನಾ ಮಹಾಮಾರಿ ನಮ್ಮ ಮುಂದೆ ಹಲವಾರು ಸವಾಲುಗಳನ್ನು ತಂದೊಡ್ಡಿತ್ತು. ಇಡೀ ದೇಶವೇ ಒಂದಾಗಿ ಕರೋನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿರುವುದು ಹೆಮ್ಮೆಯ ಸಂಗತಿ. ಇದೀಗ ಕರೋನಾ ವಿರುದ್ಧ ಲಸಿಕೆಯನ್ನು ನಾವು ಸಿದ್ಧಪಡಿಸಿದ್ದು, ಇದಕ್ಕಾಗಿ ನಮ್ಮ ವಿಜ್ಞಾನಿಗಳಿಗೆ ಪ್ರಣಾಮ ಅರ್ಪಿಸುತ್ತೇನೆ. ಲಸಿಕೆಯ ಸದುಪಯೋಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ದೊರೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಭದ್ರಾವತಿಯಲ್ಲಿ ಮಾನ್ಯ ಕೇಂದ್ರ ಗೃಹಸಚಿವರು ಇತ್ತೀಚೆಗೆ ಚಾಲನೆ ನೀಡಿರುವ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆಯಿಂದ ಈ ಭಾಗದಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಇನ್ನೊಂದು ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಸಿದ್ಧತೆಗಳು ನಡೆದಿದ್ದು, ಇದರಿಂದ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗಲಿದೆ ಎಂದರು.
ಶಿವಮೊಗ್ಗ ಹೊರವಲಯದಲ್ಲಿ 770ಎಕ್ರೆ ವಿಸ್ತಾರವಾದ ಪ್ರದೇಶದಲ್ಲಿ 384 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ, ಈ ವರ್ಷದ ಅಂತ್ಯದ ಒಳಗಾಗಿ ಬಳಕೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಶಿವಮೊಗ್ಗ ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ 450ಕೋಟಿ ರೂ. ವೆಚ್ಚದ ಹೊರವರ್ತುಲ ರಸ್ತೆ ಕಾಮಗಾರಿ, ಅಂದಾಜು 4800 ಕೋಟಿ ರೂ. ವೆಚ್ಚದ ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ, 528ಕೋಟಿ ರೂ. ಮೊತ್ತದ ಶಿವಮೊಗ್ಗ-ಚಿತ್ರದುರ್ಗ ರಸ್ತೆ ಕಾಮಗಾರಿಗಳು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದೆ. ಹಲವು ವರ್ಷಗಳ ಕನಸಾಗಿದ್ದ 423ಕೋಟಿ ರೂ. ವೆಚ್ಚದ ಕಳಸವಳ್ಳಿ-ಸಿಗಂದೂರು ಬೃಹತ್ ಸೇತುವೆ ನಿರ್ಮಾಣ ಭರದಿಂದ ನಡೆಯುತ್ತಿದೆ ಎಂದರು.
ನಗರ ಪ್ರದೇಶಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು, ನಮ್ಮ ಸರ್ಕಾರ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ಒದಗಿಸುತ್ತಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 217 ಕೋಟಿ ರೂ. ವೆಚ್ಚ ಮಾಡಲಾಗಿದ್ದು, 42 ಕಾಮಗಾರಿಗಳು ಪೂರ್ಣಗೊಂಡಿವೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 125ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಗರೋತ್ಥಾನ 3ನೇ ಹಂತದಲ್ಲಿ ಮಹಾನಗರ ಪಾಲಿಕೆಗೆ 94 ಕೋಟಿ ರೂ. ಬಿಡುಗಡೆಯಾಗಿದ್ದು, 92ಕೋಟಿ ರೂ. ವೆಚ್ಚದಲ್ಲಿ 118 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಧ್ವಜಾರೋಹಣದ ನಂತರ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಲಾಯಿತು.
ಸಚಿವರು ತೆರದ ವಾಹನದಲ್ಲಿ ತೆರಳಿ ಎಂಟು ತುಕಡಿಗಳ ಗೌರವವಂದನೆ ಸ್ವೀಕರಿದರು. ಕೆಎಸ್’ಆರ್’ಪಿ, ಸಿವಿಲ್ ಪೊಲೀಸ್ ತುಕಡಿ, ಮಹಿಳಾ ಪೊಲೀಸ್ ತುಕಡಿ, ಗೃಹರಕ್ಷಕದಳ, ಅಗ್ನಿಶಾಮಕದಳ, ಅರಣ್ಯ ತುಕಡಿಗಳು ಸೇರಿದಂತೆ ಒಟ್ಟು ಎಂಟು ತುಕಡಿಗಳಿಂದ ಪಥಸಂಚಲನ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post