ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ ವ್ಯವಹಾರಗಳಲ್ಲಿ ತುರ್ತು ಮಧ್ಯಪ್ರವೇಶ ಮಾಡಿ ಎಂದು ಹಿರಿಯ ವಿಜ್ಞಾನಿಗಳ ತಂಡವೊಂದ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.
ಇಸ್ರೋದಲ್ಲಿನ ಹಿರಿಯ ವಿಜ್ಞಾನ ತಪನ್ ಮಿಶ್ರಾ ಅವರ ದಿಢೀರ್ ವರ್ಗಾವಣೆ ವಿಚಾರ ಸಂಸ್ಥೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇಲ್ಲಿನ ವ್ಯವಹಾರಗಳಲ್ಲಿ ರಾಜಕೀಯ ತಲೆ ತೂರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ವಿಜ್ಞಾನಿಗಳ ತಂಡವೊಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಮಿಶ್ರಾ ಅವರ ವರ್ಗಾವಣೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ. ಇಸ್ರೋ ಯೊಜನೆಯೊಂದರ ಅನಗತ್ಯ ವಿಳಂಬಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತು ಇಸ್ರೋವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಅಡ್ಡಿಯಾದ್ದರಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವಿಜ್ಞಾನಿಗಳು ಆರೋಪಿಸಿದ್ದಾರೆ.
ತಪನ್ ಮಿಶ್ರಾ ವರ್ಗಾವಣೆಯನ್ನು ವಿರೋಧಿಸಿ ಇಸ್ರೋದ ಹಿರಿಯ ವಿಜ್ಞಾನಿಗಳಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ನ ಮಾಜಿ ಮುಖ್ಯ ವಿಜ್ಞಾನಿ ಗೌಹಾರ್ ರಾಝಾ, ಮೈಸೂರು ವಿಶ್ವವಿದ್ಯಾಲಯದ ವಿಶೇಷ ಪ್ರಾಧ್ಯಾಪಕ ಮತ್ತು ವಿಜ್ಞಾನಿ ಮೇವಾ ಸಿಂಗ್, ವಿಗ್ಯಾನ್ ಪ್ರಸಾರ ಸಂಸ್ಥೆಯ ಮಾಜಿ ನಿರ್ದೇಶಕ ಸುಭಾದ್ ಮಹಂತಿ ಸೇರಿದಂತೆ ಒಟ್ಟು 25 ಮಂದಿ ವಿಜ್ಞಾನಿಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
















