ಇಲ್ಲ… ನನ್ನಿಂದ ನಿನ್ನ ಬರಿದಾಗ್ತಾ ಇರೋ ಮನೆಯನ್ನು, ನೋಡೋಕಾಗ್ತಾ ಇಲ್ಲ… ಇಂತಹ ಒಂದು ದಿನ ಬರುತ್ತೆ ಅಂತ ನಾನ್ಯಾವತ್ತೂ ಕೂಡ ಅಂದುಕೊಂಡಿರಲೇ ಇಲ್ಲ. ಅದ್ಯಾಕೋ ನಿನಗೆ ಮುಖ ತೋರಿಸಲು ಸಾಧ್ಯ ಆಗ್ತಾ ಇಲ್ಲ. ನನ್ನ ಕಂಬನಿ ತುಂಬಿದ ಮುಖವನ್ನು ತೋರಿಸಲಾಗದೆ ಭಾರವಾದ ಮನಸ್ಸಿನಿಂದ ಹಿಂದಿರುಗ್ತಾ ಇದ್ದೀನಿ. ನೀನು ನನಗೆ ಮೊಗೆ ಮೊಗೆದು ಕೊಟ್ಟ ಸಿಹಿಯಾದ ಕ್ಷಣಗಳು, ನಾನು ನಿನ್ನಿಂದ ಈಜು ಕಲಿತ, ಗೆಳೆಯರ ಬಳಗದೊಡನೆ ಆಡಿ ಕುಣಿದ ಅಂದಿನ ಆ ಸಿಹಿಯಾದ ಕ್ಷಣಗಳು, ನಿನ್ನ ತುಂಬು ಹೃದಯದಿಂದ ಸ್ವಚ್ಛ ಪ್ರೀತಿಯನ್ನು ಯಾವುದೇ ಸ್ವಾರ್ಥ ಇರದೇ ಧಾರೆ ಎರೆದ ನಿನಗಾಗಿ ನಾನೇನು ಮಾಡಲಿ ಹೇಳು…
ನನಗೆ ಗೊತ್ತಿರೋ ಹಾಗೆ ಸುತ್ತ ಮುತ್ತ ಎಲ್ಲರ ಮನೆ ಮನ ಬರಿದಾದರೂ ನೀನು ಯಾವಾಗ್ಲೂ ಬತ್ತದ ಚಿಲುಮೆ ಅನ್ನುವ ಹೆಮ್ಮೆ ನನ್ನದಾಗಿತ್ತು. ಇನ್ನು ತೋಟದಲ್ಲಿದ್ದ ಅಡಿಕೆ, ಬಾಳೆ ತೆಂಗಿನ ಮರಗಳಿಗಂತೂ ನಿನ್ನ ಅನವರತ ಸೇವೆಯಿಂದ ಅದೇನೋ ಒಣ ಜಂಭ, ಬಿರು ಬೇಸಿಗೆಯಲ್ಲೂ ಹಸಿರ ರಾಶಿ ಹಾಸಿ, ನೋಡುಗರ ಕಣ್ಣಿಗೆ ಹಬ್ಬ ನೀಡೋ ರೀತಿ ಇರ್ತಾ ಇತ್ತು. ಆದರೆ ಈಗ ನಿನ್ನ ಬರಿದಾದ ಒಡಲಿನ ಕಡೆ ನೋಡಿ ಪ್ರತೀ ಮರ ಗಿಡಗಳು ನಿಟ್ಟುಸಿರ ಗಾಳಿ ಬಿಡುತ್ತಿರುವಂತೆ, ನಡು ನಡುವೆ ತಂಗಾಳಿ ಬೀಸುವುದ ಮರೆತು ಮೌನವಾಗಿ ಕಣ್ಣೇರು ಸುರಿಸುತ್ತಿರವಂತೆ, ಆ ಬಿಸಿ ಗಾಳಿ ನಮ್ಮನ್ನು ಸುಡುತ್ತಿರುವಂತೆ ಭಾಸವಾಗುತ್ತಿದೆ.
ಮೊದಲೆಲ್ಲ ನಿನ್ನ ಮನೆಯನ್ನು ದಾಟಿಕೊಂಡು ಹೋಗೋರೆಲ್ಲ, ಈ ಬೇಸಿಗೆಯಲ್ಲೂ ಎಷ್ಟು ಕಳೆ ಕಳೆಯಾಗಿದ್ದೀಯ, ನಮ್ಮ ಅಕ್ಕ ಪಕ್ಕದವರೆಲ್ಲ ಆಗಲೇ ಬಿಸಿಲಿನ ಝಳಕ್ಕೆ ಸೋತು ಸೊರಗಿ ಹೋಗಿದ್ದಾರೆ ಅನ್ನುವಾಗ, ನಿನ್ನ ಮುಖವೆಲ್ಲ ನಾಚಿಕೆಯಿಂದ ಕೆಂಪು ಕೆಂಪಾದಂತೆ ನನಗನಿಸುತ್ತಿತ್ತು. ಅದೆಷ್ಟೋ ಮನೆಗಳ ಜನರ ಅವಶ್ಯಕತೆಗಳನ್ನು ನೀನು ಹಗಲು ರಾತ್ರಿಯೆನ್ನದೇ ಪೂರೈಸುತ್ತಿದ್ದಾಗಲೆಲ್ಲ ಧರೆಗಿಳಿದ ಕಾಮಧೇನು ಅನ್ನೋ ಫೀಲ್ ನನಗಾಗುತ್ತಿತ್ತು.
ಇನ್ನು ಸುತ್ತ ಮುತ್ತಲಿನ ದನ ಕರುಗಳಂತೂ ಮಧ್ಯಾಹ್ನದ ಉರಿ ಬಿಸಿಲಲ್ಲಿ ನಿನ್ನ ಮನೆಯ ಬಳಿಯೇ ಬಂದು ದಾಹ ನೀಗಿಸಿಕೊಂಡು ನಿನ್ನ ಹೃದಯ ಶ್ರೀಮಂತಿಕೆಯನ್ನು ಮನಸಾರೆ ಹೊಗಳುವಾಗ ನಿನ್ನ ಮುಖದಲ್ಲೇನೋ ಸಂತೃಪ್ತಿ. ಬಿಸಿಲಿನಲ್ಲಿ ಕೆಲಸ ಮಾಡಿ ಸುಸ್ತಾದ ಕೆಲವರು ನಿನ್ನ ತಣ್ಣೀರಿನ ಸಿಂಚನದಲ್ಲಿ ಮೈ ಮರೆಯುತ್ತಿರುವಾಗ, ಜೋಗುಳವ ಹಾಡೋ ತಾಯಿಯಂತೆ ನನ್ನ ಕಣ್ಣಿಗೆ ನೀನು ಕಾಣಿಸುತ್ತಿದ್ದೆ. ನಿನ್ನ ಅಕ್ಕಪಕ್ಕ, ಸುತ್ತಮುತ್ತ ಚಿಲಿಪಿಲಿ ಅನ್ನುತ್ತಾ ಸದಾ ಸಂಗೀತದ ಸರಿಗಮ ಹಾಡುತ್ತಾ, ಊರು ಹಾಗೆ ಪರ ಊರಿನಿಂದ ವಲಸೆ ಬಂದ ಬಣ್ಣ ಬಣ್ಣದ ಹಕ್ಕಿಗಳ ಮುಖದಲಿ, ಅವುಗಳ ಮನೆ ಮನದಲ್ಲಿ ತುಂಬಿದ ಸಂಭ್ರಮದಲ್ಲಿ ನನಗೆ ಕಂಡಿದ್ದು ನಿನ್ನ ವಾತ್ಸಲ್ಯಮಯಿ ಮುಖ. ಇನ್ನು ನಿನ್ನ ಮಡಿಲಲ್ಲೇ ಆಶ್ರಯ ಪಡೆದ ಮೀನು, ಹಾವು, ಚಿಕ್ಕ ಪುಟ್ಟ ಜಲಚರಗಳಿಗಂತೂ ನೀನೇ ಪ್ರಪಂಚ, ನೀನಿಲ್ಲದೆ ಅವುಗಳೂ ಇಲ್ಲ…
ಇಷ್ಟೆಲ್ಲವನ್ನೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ನಿನ್ನ ಮನೆ ನಿನ್ನ, ಮಡಿಲು ಬರಿದಾದರೆ ನಿನ್ನನ್ನೇ ನಂಬಿ ಬದುಕುತ್ತಿರುವ ಜನ ತಮ್ಮ ಹೊಟ್ಟೆ ಬಟ್ಟೆ, ಜೀವನಕ್ಕೆ ಏನು ಮಾಡೋದು, ದನ ಕರುಗಳು ಹಕ್ಕಿ, ಮೀನು, ಪ್ರಾಣಿಗಳಿಂದ ಹಿಡಿದು, ಸೂಕ್ಷ್ಮಾಣು ಜೀವಿಗಳಿಗೆ ಇನ್ಯಾರು ಗತಿ? ನನಗ್ಗೊತ್ತು, ನಿನ್ನಲ್ಲಿ ಸಾವಿರ ಪ್ರಶ್ನೆಗಳಿವೆ ಅಂತ, ಇದಕ್ಕೆಲ್ಲ ಕಾರಣ ಆಗಿರುವ ನನ್ನ ಮಾನವ ಜಾತಿಯ ಪರಿಸರ ವಿರೋಧಿ ಚಟುವಟಿಕೆಗಳಿಗೆ ಕೊನೆ ಎಂದು?
ನಿನ್ನ ಮಡಿಲು ಬರಿದಾದರೂ ಸರಿ, ನಾವು ನೆಟ್ಟ ಮರಗಳಿಗೆ ನೀರು ಬೇಕು ಅನ್ನುವ ಕಾರಣಕ್ಕೆ ನಿನ್ನನ್ನು ಅಗತ್ಯಕ್ಕಿಂತ ಹೆಚ್ಚು ಈಗಲೂ ಈ ಬಿರು ಬೇಸಗೆಯಲ್ಲೂ ಬಳಸಿಕೊಳ್ಳುತ್ತಿರುವ ಸಂಜೆ, ಹಾಗೆ ಬೆಳಗಿನ ಹೊತ್ತಿನಲ್ಲಿ ಅಥವಾ ರಾತ್ರಿ ಹೊತ್ತಲ್ಲಿ ನೀರುಣಿಸಿ ನೀರು ಆವಿಯಾಗುವುದನ್ನು ತಪ್ಪಿಸಿ ಅನ್ನುವ ಮಾತುಗಳ ಕಡೆ ಕಿಂಚಿತ್ತೂ ಗಮನ ಕೊಡದ ಮನಸ್ಸುಗಳು, ನೀರು ಇದ್ದಷ್ಟು ದಿನ ಹಿತ ಮಿತವಾಗಿ ಬಳಸಿಕೊಳ್ಳುವ ಎನ್ನುವ ಯೋಚನೆ ಮಾಡದೆ, ಸ್ಪರ್ಧಾತ್ಮಕವಾಗಿ ನೀರು ಹರಿಸುತ್ತಿರುವ ರೀತಿಗೆ, ನಳ್ಳಿಯನ್ನು ತಿರುಗಿಸಿದ ತಕ್ಷಣ ಬರುವ ಆ ಜೀವ ಜಲ ಎಲ್ಲಿಂದ ಬರುತ್ತದೆ, ಹೇಗೆ ಬರುತ್ತದೆ, ಬರುವುದಿಲ್ಲ ಅಂದರೆ ಅದಕ್ಕೆ ಕಾರಣ ಎಂದು ಯಾವತ್ತೂ ಯೋಚಿಸುವ ಗೋಜಿಗೆ ಹೋಗದ ಅಭಿವೃದ್ದಿಶೀಲ ವಿದ್ಯಾವಂತ ಬುದ್ಧಿವಂತ ಮನಸುಗಳು, ಎಜುಕೇಶನ್’ನಲ್ಲಿ ಎಂದೂ ನೆಲ ಜಲ, ಪರಿಸರದ ಮಹತ್ವ ತಿಳಿಸದೇ ಪದವಿಯ ಪಟ್ಟ ನೀಡುವ, ಶಾಲೆ ಕಾಲೇಜುಗಳು ಅನ್ನುವ ಕಾರ್ಖಾನೆಗಳು, ಅದರಿಂದ ತಯಾರಾಗಿ ಬರುತ್ತಿರುವ ಪದವೀಧರರು ಅನ್ನುವ ಪ್ರಾಡಕ್ಟ್‌ಗಳು ಹೀಗಿರುವಾಗ ಬದಲಾವಣೆಯ ಗಾಳಿ ಬೀಸಬಹುದೇ??
ಇದೆಲ್ಲ ನೋಡುವಾಗ ಪರಿಸರದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಒಂದಿಷ್ಟು ಮನಸುಗಳ ಕೂಗು ಕೇಳುವಾಗ, ಬಿರು ಬಿಸಿಲ ಮರುಭೂಮಿಯಲ್ಲಿ ಕಾಣಿಸಿದ ಓಯಸಿಸ್ ತರಹ ಎಲ್ಲೊ ಆಶಾಭಾವನೆ ಮೂಡುತ್ತದೆ. ಹೌದು ನನ್ನ ಪರಿವಾರ, ನನ್ನ ಸಮಾಜಕ್ಕೆ, ನನ್ನ ದೇಶಕ್ಕೆ ಬದಲಾವಣೆ ಬೇಕು. ನೆಲ-ಜಲ, ಪರಿಸರದ ವಿಷಯದಲ್ಲಿ ಪ್ರತಿಯೊಬ್ಬರೂ ಕೂಡ ಯೋಚನೆ ಮಾಡುವಂತಾಗಬೇಕು. ಅದುವೇ ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡಿಕೊಡುವ ಅತಿ ದೊಡ್ಡ ಉಡುಗೊರೆ…
ನೀರನ್ನು ಹಿತ ಮಿತವಾಗಿ ಬಳಸೋಣ…
ಲೇಖನ: ನಯನಾ ಶೆಟ್ಟಿ, ಆರ್ ಜೆ
ಚಿತ್ರಕೃಪೆ: ಬೇಬಿ ಯಶಸ್ವಿ
Discussion about this post