ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮಹಾ ಸಮಾಧಿ ಇರುವ ಮಾಗಡಿ ತಾಲ್ಲೂಕಿನ ಕೆಂಪಾಪುರ ಗ್ರಾಮವನ್ನು ವಿಶ್ವದರ್ಜೆಯ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಲು 35 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಆಶ್ವತ್ಥನಾರಾಯಣ ಪ್ರಕಟಿಸಿದರು.
ಶುಕ್ರವಾರ ಅವರು, ಕೆಂಪಾಪುರ ಗ್ರಾಮಕ್ಕೆ ಭೇಟಿ ನೀಡಿ ಕೆಂಪೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಕೆಂಪಾಪುರ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾರ್ವಜನಿಕರ ಜತೆ ಮಾತನಾಡುತ್ತ ಈ ವಿಷಯವನ್ನು ಘೋಷಿಸಿದರು.
ಇವತ್ತು ಇಡೀ ಜಗತ್ತೇ ಬೆರಗಾಗುವ ರೀತಿಯಲ್ಲಿ ಬೆಂಗಳೂರು ಮಹಾನಗರ ಅಭಿವೃದ್ಧಿಯಾಗುತ್ತಿದೆ. ಆ ಕಾಲದಲ್ಲಿಯೇ ನಗರೀಕರಣದ ಬಗ್ಗೆ ಸ್ಪಷ್ಟ ದೃಷ್ಟಿಕೋನ ಹೊಂದಿದ್ದ ನಾಡಪ್ರಭುಗಳು, ನಮಗೆ ಬೆಲೆಕಟ್ಟಲಾಗದ ನೆಲೆಯೊಂದನ್ನು ಬಿಟ್ಟುಹೋಗಿದ್ದಾರೆ. ಜಾಗತಿಕ ಭೂಪಟದಲ್ಲಿ ರಾಜ್ಯಕ್ಕೊಂದು ಹೆಮ್ಮೆ ಸ್ಥಾನವಿದ್ದರೆ ಅದು ಬೆಂಗಳೂರಿನಿಂದ ಮಾತ್ರ, ಅದನ್ನು ಕಟ್ಟಿ ನಮಗೆಲ್ಲ ಬಿಟ್ಟುಹೋದ ಕೆಂಪೇಗೌಡರಿಂದ ಮಾತ್ರ ಸಾಧ್ಯವಾಗಿದೆ ಎಂದು
ಅವರು ಪ್ತತಿಪಾದಿಸಿದರು.
ಈ ಹಿನ್ನೆಲೆಯಲ್ಲಿ ಕೆಂಪಾಪುರವನ್ನು ಅಭಿವೃದ್ಧಿಪಡಿಸಲು ಸರಕಾರ ಮುಂದಾಗಿದೆ. ಅವರ ಸಾಧನೆಗಳನ್ನು ಮುಂದಿನ ತಲೆಮಾರುಗಳಿಗೂ ತಿಳಿಯುವಂತೆ ಮಾಡಬೇಕಾಗಿದೆ. ಈ ಯೋಜನೆಗೆ ಎಂಟು ಎಕರೆ ಭೂಮಿಯ ಅಗತ್ಯವಿದ್ದು, ಎಷ್ಟು ಬೇಗ ಭೂಮಿ ಸರಕಾರಕ್ಕೆ ಲಭ್ಯವಾಗಲಿದೆಯೋ ಅಷ್ಟು ತ್ವರಿತವಾಗಿ ನಾವು ಕಾಮಗಾರಿಯನ್ನು ಪ್ರಾರಂಭ ಮಾಡಲಿದ್ದೇವೆ ಎಂದರು.
ಸಮಾಧಿ ಸ್ಥಳ, ಕೆಂಪಾಪುರ ಕೆರೆ ಸೇರಿ ಇಡೀ ಗ್ರಾಮವನ್ನು ಅಭಿವೃದ್ಧಿ ಮಾಡುವ ಬಗ್ಗೆ ಈಗಾಗಲೇ ಸಿಡಾಕ್ ಸಂಸ್ಥೆ ಸಮಗ್ರ ಯೋಜನಾ ವರದಿ ನೀಡಿದೆ. ಜೂನ್ 27ರಂದು ಕೆಂಪೇಗೌಡರ ಜಯಂತಿ ಇದ್ದು, ಆ ದಿನದೊಳಗೆ ಭೂಮಿ ಸಿಕ್ಕರೆ ಆ ಪುಣ್ಯದಿನವೇ ಯೋಜನೆಗೆ ಶಂಕುಸ್ಥಾಪನೆ ಮಾಡಲು ಸರಕಾರ ಸಿದ್ಧವಿದೆ. ಆ ಮುಂದಿನ ವರ್ಷ ನಾಡಪ್ರಭುಗಳ ಜಯಂತಿ ದಿನವೇ ಅಭಿವೃದ್ಧಿಯಾದ ಕೆಂಪಾಪುರವನ್ನು ಲೋಕಾರ್ಪಣೆ ಮಾಡಲಾಗುವುದು. ಒಂದೇ ವರ್ಷದಲ್ಲಿ ಅಷ್ಟೂ ಕಾಮಗಾರಿಯನ್ನು ಮುಗಿಸುವ ಹೊಣೆ ನಮ್ಮದು. ಆ ವರ್ಷದ ಜಯಂತಿಯನ್ನು ಕೆಂಪಾಪುರದಲ್ಲೇ ಆಯೋಜಿಸುವ ಆಶಯ ನಮ್ಮದು ಎಂದು ಅವರು ತಿಳಿಸಿದರು.
ದಾಖಲೆಗಳ ಪ್ರಕಾರ ಕೆಂಪೇಗೌಡರು 46 ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೂ ತಾಣಗಳನ್ನು ಅನುಸಂಧಾನಗೊಳಿಸಿ ಅವರ ಸಾಧನೆಗಳನ್ನು ಅಜರಾಮರಗೊಳಿಸಬೇಕು ಎಂಬುದೇ ಸರಕಾರದ ಆಶಯ. ಇನ್ನೊಂದೆಡೆ ಮಾಗಡಿ ನಮ್ಮ ಪೂರ್ವಿಕರು ಬಾಳಿ ಬದುಕಿದ ನೆಲ. ನನಗೂ ಭಾವನಾತ್ಮಕವಾಗಿ ಈ ನೆಲದ ಜತೆ ಸಂಬಂಧವಿದೆ. ಈ ಮೂಲಕ ನಾಡಪ್ರಭುಗಳಿಗೆ ನನ್ನದೂ ಸೇವೆ ಸಲ್ಲಲಿ ಎಂಬ ಚಿಕ್ಕ ಅಭಿಲಾಶೆ ನನ್ನದು. ಮುಂದಿನ ದಿನಗಳಲ್ಲಿ ಕೆಂಪಾಪುರ ಕರ್ನಾಟಕವಷ್ಟೇ ಅಲ್ಲ ಭಾರತದ ಹೆಸರಾಂತ ಪ್ರವಾಸಿ ತಾಣವಾಗಬೇಕು. ರಾಜ್ಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ತಪ್ಪದೇ ಕೆಂಪಾಪುರಕ್ಕೆ ಭೇಟಿ ನೀಡಲೇಬೇಕು. ಅಂತಹ ಉತ್ಕೃಷ್ಟ ಮಟ್ಟದಲ್ಲಿ ಈ ಗ್ರಾಮವನ್ನು ಅಭಿವೃದ್ಧಿಗೊಳಿಸಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಪ್ರತಿಮೆ
ಬೆಂಗಳೂರು ವಿಮಾನ ನಿಲ್ದಾಣದ ಮುಂದೆ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡುವ 66 ಕೋಟಿ ರೂ ವೆಚ್ಚದ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ವಿಧಾನಸೌಧ ಬಳಿ ಸ್ಥಾಪನೆಯಾಗಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ತಯಾರಿಸಿದ ರಾಮಸುತ ಅವರೇ ನಾಡಪ್ರಭುಗಳ ಈ ಬೃಹತ್ ಪ್ರತಿಮೆಯನ್ನು ಮಾಡುತ್ತಿದ್ದಾರೆ. ಈಗಾಗಲೇ ಅವರಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ. ಯೋಜನೆಗೆ ಕೆಂಪೇಗೌಡರ ಜಯಂತಿ ದಿನವೇ ಶಂಕುಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಉಪ ಮುಖ್ಯಮಂತ್ರಿಗಳು ಘೋಷಿಸಿದರು.
ಮಾಗಡಿ ಶಾಸಕ ಮಂಜುನಾಥ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ರಾಮನಗರ ಜಿಲ್ಲಾಧಿಕಾರಿ ಡಾ. ಎಂ.ಎಸ್. ಅರ್ಚನಾ, ರಾಮನಗರ ಜಿ.ಪಂ. ಸಿಇಒ ಇಕ್ರಂ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post