ಮಳೆಗಾಲವೆಂದರೆ ಹಾಗೆ, ನೆನಪುಗಳ ಕಡಲಿನ ಹಾಗೆ. ಆ ಚಂದದ ಆಸ್ವಾದನ್ನು ಹಳ್ಳಿಗಳಲ್ಲಿ ಆನಂದಿಸಬೇಕು. ಬಿಸಿ ನೀರಿನ, ತಣ್ಣೀರಿನ ಗದ್ದೆಗಳು, ಬೆಚ್ಚನೆಯ ಕಂಬಳಿ, ಕಪ್ಪೆ ಜೀರುಂಡೆಗಳ ಮೇಳ, ಮೀನಿನ ಪುಟ್ಟ ಮರಿಗಳು, ಸಾಕಲೆಂದು ಪೇರಿಸಿದ ಗೊಜಮೊಟ್ಟೆಗಳು, ಆಗಂತುಕರನ್ನು ಕಂಡು ಓಡಿ ಬಾಗಿಲು ಹಾಕಿಕೊಂಡು ಕೂರುವ ಏಡಿಗಳು ಒಂದೇ ಎರಡೇ ಹಲವಾರು. ಬದುಕನ್ನು ಮತ್ತೆ ಜೀವಂತವಾಗಿರಿಸುವ ಹೊತ್ತದು.
ಅಲ್ಲೆಲ್ಲೋ ಕಾಣಿಸುವ ಕಂಬಳಗಳು, ಅದಕ್ಕೆಂದೇ ಪಡೆದ ರಜೆಗಳು, ಅದೆಷ್ಟೇ ಮಳೆಯಲ್ಲಿ ನೆನೆದರೂ ಬಾರದ ಕಾಯಿಲೆಗಳು. ಕುಳಿತು ಯೋಚಿಸಿದಾಗ ಬದುಕು ವಿಸ್ಮಯಕಾರಿ ಅನ್ನಿಸದೆ ಇರದು. ಮಳೆಗಾಲ ಮರ್ರೆ…
ಮಲೆನಾಡಿನ ಜನ ನಾವು, ಕೇಳಬೇಕಾ? ತೂತು ಆಗಿರೋ ಆಕಾಶ, ಗುಡುಗುಡಿಸೋ ಗುಡುಗು, ಬೆಳಕು ಚೆಲ್ಲುವ ಮಿಂಚು, ಕೈಗೆ ಸಿಕ್ಕಿದ್ದು ಸುಟ್ಟು ಹಾಕೋ ಸಿಡಿಲು, ಪುಸಕ್ಕನೆ ಜಾರೋ ಅಂಗಳ, ಹಸಿ ಆಗಿರೋ ಚಡ್ಡಿ, ಅಲ್ಲೆಲ್ಲೋ ಕೂಗೋ ಕಪ್ಪೆ, ತಡವಾಗಿ ಬರೋ ದನಗಳು, ಮನೆ ತುಂಬಾ ಮಳೆ ಹುಳಗಳು ಆಮೇಲೆ ಎಲ್ಲಿ ನೋಡಿದ್ರೂ ಕತ್ತಲು.
ಕರೆಂಟ್ ಅಂತ ನೋಡದೆ ತಿಂಗಳುಗಳ ಕಳೆಯೋ ದಿನಗಳು. ಹೋಗಿ ಬಂದು ಮೀಟರ್ ಬೋರ್ಡ್ ನೋಡೋದು ಒಮ್ಮೆ ಬಾರೋ, ಒಮ್ಮೆ ಬಾರೋ, ಎಲ್ಲೇ ನೀನಿದ್ದರೂ ಅಂತ ಹಾಡು ಹೇಳ್ಕೊಂಡು ಹೋಗೋದು. ಸ್ವಿಚ್ ಹಾಕಿ ಇಡಂಗಿಲ್ಲ, ಸಿಡಿಲು ಹೊಡೆಯೋ ಭಯ. ಬರದೇ ಎರಡು ಮೂರು ದಿನ ಆಯ್ತಾ? ಆಮೇಲೆ ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಅಂತ ರೋಧನೆ. ಆಮೇಲೂ ಟಿಸಿ ಎಲ್ಲಾ ಹೋಗಿ ಬರಲಿಲ್ಲ ಅಂತ ಆಯ್ತೋ ಆವಾಗ ಇನ್ನೆಂತ ಸೀಮೆ ಎಣ್ಣೆ ಕೂಡ ಖಾಲಿ ಆಗಿರತ್ತೆ. ಕತ್ಲು ಆಗೋ ಒಳಗೆ ಊಟ. ಕಡೆಗೆ ಒಂದೇ ದೀಪದ ಹತ್ತಿರ ಕೂತ್ಕೊಂಡು ಹಳೆ ಕಥೆ ಎಲ್ಲಾ ಮಾತಾಡೋದು.
ಕತ್ತಲು ಇದ್ದರೂ ಅದೇ ಚಂದ ಅನ್ನಿಸುತಿತ್ತು. ಒಂದ ಮಾಡೋಕೆ ಹೋಗೋಕು ಗೋಡೆ ಹಿಡಿದುಕೊಂಡು ಹೋಗೋದು, ಯಾರೂ ನೋಡದೆ ಇದ್ದರೆ ಅಲ್ಲೇ ಕಟ್ಟೆ ಮೇಲೆ ಮಾಡಿ ಓಡಿ ಬಂದುಬಿಡೋದು. ಜೋರು ಮಳೆ ನೋಡಿ, ಎಫೆಕ್ಟ್ ಏನೂ ಉಳಿದರಲಿಲ್ಲ ಮಾರನೇ ದಿನ. ಮನೆ ಎದುರೇ ಸಮ್ಮ ನೀರು ಹರಿಯೋ ತೋಡು. ಈ ಕಡೆ ಮಖ ಮಾಡ್ಕೊಂಡ್ ಕುತ್ರೆ ಸಾಕು, ಪುಳಕ್ ಪುಳಕ್..
ಸುಟ್ಟ ಹಲಸಿನ ಬೀಜಗಳು, ಹಪ್ಪಳಗಳು, ಅಲ್ಲೆಲ್ಲೋ ಬಿದ್ದ ನೀರು ಕುಡಿಯದ ಮಾವಿನಹಣ್ಣು, ಗುಡ್ಡದ ಬುಕ್ಕಿ ಹಣ್ಣು, ಅಪರೂಪದ ಗ್ಯಾರಲ ಕಾಯಿ, ಸವಿದವನೇ ಬಲ್ಲ ಅವುಗಳ ರುಚಿಯ.!
ನನ್ನಂಥ ಹಳ್ಳಿ ಮಗನಿಂದ ನೀವೆಂದಿಗೂ ಹಾಳು ಮಳೆ ಎಂದು ಹೇಳಿಸಲಾರಿರಿ. ಕಾಡೊಡಲಿನಿಂದ ಧುಮ್ಮಿಕ್ಕುವ ಹಾಲಿನ ಝರಿಗಳಿಗೆ ತಲೆ ಕೊಟ್ಟು ನಿಂತರೆ ಮುಗಿಯಿತು, ಎದ್ದು ಬರುವ ಮನಸ್ಸು ಎಂದಿಗೂ ಬಾರದು. ಇನ್ನು ಅಣಬೆಗಳ ಅರಸುವವರದ್ದು ಬೇರೆಯದೇ ಕಥೆ, ಅರಳು ಮೊಗ್ಗುಗಳ ಅಬ್ಬರಿಸಿ ಬೊಬ್ಬಿರಿದು ಬೊಗಸೆಯಲ್ಲಿ ಹಿಡಿದು ಓಡಲು ನಿಂತರೆ ಮನೆಯೇ ಮುಂದಿನ ನಿಲ್ದಾಣ.
ಇನ್ನೊಂದು ಇದೆ, ಕೆಸುವಿನ ಸೊಪ್ಪು. ಆಹಾ!! ತಿಂದವರೇ ಅರಿತಾರು ಆ ಅಮೃತವ. ಹಲಸಿನ ಬೀಜಗಳು, ಬೆಳ್ಳುಳ್ಳಿ ಎಸಳುಗಳು.. ಅದ್ಭುತ. ಆಹಾರ ಅಂತ ಬಂದಾಗ ನೆನಪು ಆಗುವುದು ಮಲೆನಾಡು. ಒಂದಿಡೀ ಮಳೆಗಾಲ ಅಂಗಡಿಯಿಂದ ಒಂದು ಚಿಕ್ಕ ಮೆಣಸಿನ ಕಾಯಿ ಅನ್ನು ತರದೇ ಇರಬಲ್ಲೆವು ನಾವು. ಆದರೂ ಮೃಷ್ಟಾನ್ನ ಭೋಜನ ಅನುದಿನ. ತಂಬುಳಿಗಳು, ಚಟ್ನಿಗಳು, ಉಪ್ಪಿನಕಾಯಿ, ಸಂಡಿಗೆ, ಮೆಣಸು, ತೊಂಡೆಕಾಯಿ.. ಇನ್ನೂ ಸಾಕಷ್ಟಿದೆ.
ಸೂರ್ಯನನ್ನು ಕಾಣಲು ಹಪಹಪಿಸುವ ದಿನಗಳವು. ಎಲ್ಲೋ ಚೂರು ಕಾಣ್ಸಿದ್ರೆ ಅದೇ ಅದೃಷ್ಟ. ಓಡಿ ಬಂದು ಕಾಮನಬಿಲ್ಲು ಹುಡುಕೋದು. ಯಾರಿಗುಂಟು ಯಾರಿಗಿಲ್ಲ! ನನ್ನ ಹತ್ತಿರ ಚಿತ್ರ ಕೇಳಬೇಡಿ. ಕಾಮನಬಿಲ್ಲು ಅಂದಾಗೆಲ್ಲ ಮನಸ್ಸಲ್ಲಿ ಮೂಡುವ ಚಿತ್ರದ ಮುಂದೆ ಸೆಲ್ಫಿ, ಡಿಎಸ್‌ಎಲ್‌ಆರ್ ಗಳು ನಿಲ್ಲುವುದಿಲ್ಲ.
ಬೆಚ್ಚನೆಯ ಒಲೆಯಿರಲು,
ಹಚ್ಚನೆಯ ಕಂಬಳಿಯಿರಲು,
ನಚ್ಚನೆಯ ಅಂಬಲಿಯಿರಲು,
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅರಿತಜ್ಞ… (ಸರ್ವಜ್ಞರ ಕ್ಷಮೆ ಕೇಳುತ್ತಾ)
ಇಷ್ಟೇಲ್ಲಾ ಆಗಿ ನಿಮಗೆ ಒಲೆಯ ಬಗ್ಗೆ ಹೇಳದಿದ್ದರೆ ಹೇಗೆ? ಏನು ಕೇಳ್ತಿರಾ ಆ ಚಂದಾನ? ಬೆಕ್ಕು, ನಾಯಿ, ಕರು, ಅಜ್ಜ, ಅಜ್ಜಿ, ಮಕ್ಕಳು ಎಲ್ಲರೂ ಒಟ್ಟಿಗೆ ಸಿಗೋ ಜಾಗ ಅದು. ಜೊತೆಗೆ ಅಪ್ಪನ ಕಂಬಳಿ. ಅದರಿಂದ ಬೀಳುವ ಹನಿ ಹನಿ ನೀರು!
ಜೋರು ಮಳೆಯಲ್ಲಿ ಹುಟ್ಟುವ ಬದುಕು ರಾಶಿ ತಣ್ಣಗಿನ ಜೀವಂತಿಕೆಯನ್ನು ತಂದು ಹರಡುತ್ತದೆ. ಕಾಲಡಿ ಬೆಳೆಯುವ ಗರಿಕೆ ಹುಲ್ಲು, ತಲೆ ಎತ್ತಿ ನೋಡೇ ಕಡು ಹಸಿರೆಲೆಗಳ ಹನಿಯು, ಕೈ ಚಾಚೇ ಬೀಳುವ ಮಳೆಯು. ಒಂದು ಬಾರಿ ಆದರೂ ನಾ ನೆನೆಯಲೇಬೇಕು ಎಂಬ ಭಾವನೆ ಬಂದು ತೀಡದೆ ಇರದು. ಮತ್ತೆ ಮಳೆಯ ವಿಚಾರಕ್ಕೆ ಬಂದರೆ ನೆನಪಾಗುವುದು ದನ ಕರುಗಳ ಆರೈಕೆ. ಒಂದೇ ಸಮನೆ ಬಾರಿಸುವ ಮಳೆಯಲ್ಲಿ ಕಷ್ಟ ಪಟ್ಟು ಇಷ್ಟ ಪಡುವ ಅವುಗಳನ್ನು ಕರೆ ತಂದು ಮನೆ ಸೇರಿಸುವ ಜವಾಬ್ದಾರಿಯು ನಮ್ಮದು. ದಾರಿಯ ಮೇಲೆ ಸಿಗುವ ಅಣಬೆ, ಕೆಲವು ಕಾಯಿಗಳು ಕೂಡ ಮಳೆಗಾಲದ ತರಕಾರಿಗಳು. ಅದು ಬಿಟ್ಟರೆ ಯಾವುದೋ ಒಂದು ಸೇತುವೆ ಮೇಲೆ ನೀರು ಹರಿಯುತ್ತಿದ್ದರೆ ಮಕ್ಕಳ ಶಾಲೆಗೆ ಕರೆ ತರಲು, ಬಿಟ್ಟು ಹೋಗಲು ಬರುವ ತಂದೆ ತಾಯಿಯರು. ಆ ಖುಷಿಗೆ ಪರ್ಯಾಯವೇ ಇಲ್ಲ.
ಇನ್ನು ಮಳೆಗಾಲದ ಚಪ್ಪಲಿ, ಸೊಂಟದ ಮೇಲಿನ ತನಕಾನು ಹಾರಿದ ಕೆಸರು, ಎಷ್ಟೇ ನೆಂದು ತೊಪ್ಪೆ ಆದರೂ ಬೆಚ್ಚಗಿನ ರಕ್ಷೆ ನೀಡುವ ಕಂಬಳಿ, ಅದರೊಳಗೆ ಹಾಕೋ ಬ್ಯಾಗಡೆ, ಗದ್ದೆ ನೆಡೋಕೆ ಹಾಕೋ ಗೊಬ್ಬೆ, ಕಂತುಗುರು, ಕಾಲಿಟ್ಟರೆ ಜಾರೊ ಗದ್ದೆ ಹಾಳಿ, ಆದ್ರೆ ಮಳೆ ಹಬ್ಬ, ಕೊಡೆ ಅಮಾಸೆ, ಥಂಡಿ ಹಚ್ಚಿಕ್ಕೊಳ್ಳೊ ದನಗಳು, ಹಲ್ಸಿನ ಹಣ್ಣಿನ ವಾಸನೆಯ ಹಾಲು, ಉಪ್ಪು ಖಾರದಪುಡಿ ಮದ್ದು, ಉಂಬಳ, ಗೊಜಮೊಟ್ಟೆ ಏನಾದ್ರೂ ನೆನಪು ಆಗ್ತಾ ಇದಿಯ??
ಇಷ್ಟಾದರೂ,
ಭರತನ ನಾಡಿನ
ಕರುನಾಡಿನ
ಮಲೆನಾಡಿನ
ಮಳೆ ಹಾಡೇ ಚಂದ..
ಹೇಳೋಕೆ ಸುಮಾರ್ ಇದೆ. ಇದಲ್ಲ, ಇದರ ಅಪ್ಪನಂತ ಕಾಯಿಲೆ ಬಂದ್ರೂ ನಾವು ಹೆದರಲ್ಲ. ಹಲಸಿನ ಕಾಯಿ ರುಬ್ಬಿ ಹಪ್ಪಳ ಮಾಡೋದೇ, ಮಾವಿನಕಾಯಿ ಕುಯ್ದು ಉಪ್ಪಿನಕಾಯಿ ಹಾಕೋದೇ..
ಮಳೆಯೆಂದರೆ ಹಾಗೆ
ಅಲ್ಲಿ
ಹಸಿರು ಹುಟ್ಟುತ್ತದೆ
ಕನಸು ಹುಟ್ಟುತ್ತದೆ
ನೆನಪು ಹುಟ್ಟುತ್ತದೆ
ಉಸಿರೂ ಹುಟ್ಟುತ್ತದೆ..!
ಮತ್ತೆ ಸಿಗೋಣ.
Discussion about this post