ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲೂಕಿನ ಬೇಸೂರಿನಲ್ಲಿ ಉದ್ದೇಶಿತ ವಿನಾಶಕಾರಿ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು Nuclear power plant project ಸರ್ಕಾರ ಸಂಪೂರ್ಣವಾಗಿ ಕೈಬಿಡುವವರೆಗೆ ವಿಶ್ರಮಿಸದೆ ಹೋರಾಟ ನಡೆಸುವುದಾಗಿ ‘ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ವೇದಿಕೆ’ ಎಚ್ಚರಿಸಿದೆ. ಇದರ ಮೊದಲ ಹೆಜ್ಜೆಯಾಗಿ, ಇಂದು ಹುಲಿದೇವರಬನದಲ್ಲಿ ಶಾಲಾ ಮಕ್ಕಳೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಬೃಹತ್ ಪ್ರತಿಭಟನೆ ದಾಖಲಿಸಲಾಯಿತು.
ಮಕ್ಕಳಿಂದ ‘ಬೇಸೂರು ಉಳಿಸುವ ಪ್ರತಿಜ್ಞೆ’:
“ಅಣುಸ್ಥಾವರ ಬೇಡ, ಬದುಕು ಬೇಕು” ಎಂಬ ಘೋಷಣೆಯೊಂದಿಗೆ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಶಾಲಾ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕರಪತ್ರದಲ್ಲಿ ತಿಳಿಸಿರುವಂತೆ, ಕೊಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಭಾಗದಲ್ಲಿ ಹೋರಾಟಗಾರರ ಸಮ್ಮುಖದಲ್ಲಿ ಮಕ್ಕಳು ‘ಬೇಸೂರು ಉಳಿಸುವ ಪ್ರತಿಜ್ಞೆ’ಯನ್ನು ಸ್ವೀಕರಿಸಿದರು. ಪ್ರತಿಭಟನೆಯ ವೇಳೆ ಮುಖಂಡರು ಮಕ್ಕಳಿಗೆ ಅಣು ವಿದ್ಯುತ್ ಸ್ಥಾವರದಿಂದ ಮಲೆನಾಡಿನ ಸೂಕ್ಷ್ಮ ಪರಿಸರ ಹಾಗೂ ಭವಿಷ್ಯದ ಪೀಳಿಗೆಗೆ ಉಂಟಾಗಬಹುದಾದ ವಿನಾಶಕಾರಿ ದುಷ್ಪರಿಣಾಮಗಳ ಕುರಿತು ಸರಳವಾಗಿ ತಿಳುವಳಿಕೆ ನೀಡಿದರು.
ಈ ಬೃಹತ್ ರಸ್ತೆ ತಡೆ ಹೋರಾಟದ ನೇತೃತ್ವವನ್ನು ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷರಾದ ಬಿ.ಎ. ಇಂದುಧರ ಗೌಡ ಬೇಸೂರು, ಮುಖಂಡರಾದ ನವೀನ ಗೌಡ ಗಿಣಿವಾರ, ಮಲೆನಾಡು ರೈತ ಹೋರಾಟ ವೇದಿಕೆಯ ಸಂಚಾಲಕ ತೀ.ನ. ಶ್ರೀನಿವಾಸ್ ಹಾಗೂ ದಿನೇಶ್ ಅವರು ವಹಿಸಿದ್ದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರು, “ಮಲೆನಾಡಿನ ಪರಿಸರಕ್ಕೆ ಮಾರಕವಾಗಿರುವ ಯಾವುದೇ ಅಣು ಸ್ಥಾವರ ಸ್ಥಾಪನೆಯನ್ನು ನಾವು ಕಟುವಾಗಿ ವಿರೋಧಿಸುತ್ತೇವೆ. ಈಗಾಗಲೇ ಜಿಲ್ಲೆಯ ಜನರು ವಿವಿಧ ಆಣೆಕಟ್ಟು ಹಾಗೂ ಅಭಿವೃದ್ಧಿ ಯೋಜನೆಗಳಿಗಾಗಿ ಲಕ್ಷಾಂತರ ಎಕರೆ ಭೂಮಿಯನ್ನು ತ್ಯಾಗ ಮಾಡಿ ಸಂತ್ರಸ್ತರಾಗಿದ್ದಾರೆ. ಈಗ ಮತ್ತೆ ಅವಿನಹಳ್ಳಿ ಹೋಬಳಿಯ ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸುವ ಭೀತಿ ಎದುರಾಗಿದೆ. ಇಂತಹ ವಿನಾಶಕಾರಿ ಯೋಜನೆಯನ್ನು ಮಲೆನಾಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಖಿತ ಆದೇಶಕ್ಕೆ ಪಟ್ಟು – ಬೆಂಗಳೂರಿನಲ್ಲಿ ಹೋರಾಟದ ಎಚ್ಚರಿಕೆ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟಿರುವುದಾಗಿ ಲಿಖಿತ ಆದೇಶ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಒಂದು ವೇಳೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಮತ್ತು ಈ ಹೋರಾಟಕ್ಕೆ ಉಚ್ಚ ನ್ಯಾಯಾಲಯದ ಹಲವು ವಕೀಲರು ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಮುಂದಿನ ಹೋರಾಟದ ರೂಪರೇಷೆಗಳು :
ಅಣು ಸ್ಥಾವರ ವಿರೋಧಿ ಹೋರಾಟ ಇಂದಿಗೆ ನಿಲ್ಲದೆ, ಹಂತ-ಹಂತವಾಗಿ ತೀವ್ರಗೊಳ್ಳಲಿದ್ದು, ಮುಂದಿನ ದಿನಾಂಕಗಳನ್ನು ಪ್ರಕಟಿಸಲಾಗಿದೆ:
ಮೇ 20 (ಬುಧವಾರ, ಬೆಳಗ್ಗೆ 8:00 ಗಂಟೆಯಿಂದ): ಬೇಸೂರು ಬಸವಣ್ಣ ದೇವಸ್ಥಾನದಿಂದ ಸಾಗರ ಉಪವಿಭಾಗಾಧಿಕಾರಿಗಳ (AC) ಕಚೇರಿಯವರೆಗೆ ಬೃಹತ್ ಪಾದಯಾತ್ರೆ.
ಮೇ 21 ರಿಂದ ಮೇ 25 ( ಬೆಳಗ್ಗೆ 11:00 ರಿಂದ): ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಸರಣಿ ಧರಣಿ ಸತ್ಯಾಗ್ರಹ.
ಮೇ 27 (ಬುಧವಾರ, ಬೆಳಗ್ಗೆ 10:30 ರಿಂದ): ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಜನ ಆಂದೋಲನ ಮತ್ತು ಪ್ರತಿಭಟನಾ ಸಮಾವೇಶ.
“ಇಂದಿನ ಅಲಕ್ಷ್ಯ, ಮುಂದಿನ ವಿನಾಶಕ್ಕೆ ದಾರಿ” ಎಂದು ಎಚ್ಚರಿಸಿರುವ ವೇದಿಕೆಯು, ಸಾಗರ ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರು, ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ಪ್ರತಿಭಟನೆಗಳಲ್ಲಿ ಭಾಗವಹಿಸಬೇಕಾಗಿ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















