ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಆನಂದಪುರ |
ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಒತ್ತಾಯಿಸಿ ಕೆಲವು ದಶಕಗಳ ಹಿಂದೆ ಮಾಡಿದ ಹೋರಾಟದ ಫಲವಾಗಿ ಇಂದು ಸಹಕಾರಿ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ್ ಹೇಳಿದ್ದಾರೆ.
ಅವರು ಇಂದು ಆನಂದಪುರದ ಸಾಗರ ಮುಖ್ಯ ರಸ್ತೆಯಲ್ಲಿ ಸಾರಸ್ವತ ಸೌಹಾರ್ದ ಪತ್ತಿನ ಸಹಕಾರಿಯ ನೂತನ ಶಾಖಾ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅಂದು ಮನೋಹರ್ ಮಸ್ಕಿ ನೇತೃತ್ವದ ತಂಡ ಸೌಹಾರ್ದ ಸಂವರ್ಧಿನಿ ಸಮಿತಿ ಎಂದು ರಚಿಸಿ ಸೌಹಾರ್ದ ಸಹಕಾರಿಗಳ ಸಂಘ ಸ್ಥಾಪನೆಗೆ ಪ್ರಥಮವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದರ ಪರಿಣಾಮ ಸೌಹಾರ್ದ ಸಹಕಾರಿ ಪತ್ತಿನ ಸಂಘಗಳ ಉದಯವಾಯಿತು. ಎರಡನೇ ಸಹಕಾರಿಯಾಗಿ 2002 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಅಂದಿನ ದಿನಗಳಲ್ಲಿ ಬೆರಳೆಣಿಕೆಯಷ್ಟಿದ್ದ ಪತ್ತಿನ ಸಹಕಾರ ಸಂಘಗಳು ಈಗ ರಾಜ್ಯದಲ್ಲಿ 5600 ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳಿವೆ. ಸಾರಸ್ವತ ಸೌಹಾರ್ದ ಸಹಕಾರಿ ಚೊಕ್ಕವಾಗಿ ಬದ್ಧತೆಯಿಂದ ಅಚ್ಚುಕಟ್ಟಾಗಿ ಹಿರಿಯರ ಮಾರ್ಗದರ್ಶನದಲ್ಲಿ ಷೇರುದಾರರ ವಿಶ್ವಾಸ ಗಳಿಸಿ ವರ್ಷದಿಂದ ವರ್ಷಕ್ಕೆ ಲಾಭದೆಡೆಗೆ ಮುನ್ನುಗ್ಗುತ್ತಿದೆ. ಇದಕ್ಕೆ ಗುರುಹಿರಿಯರ ಮಾರ್ಗದರ್ಶನವೂ ಕಾರಣವಾಗಿದ್ದು, ಆಡಳಿತ ಮಂಡಳಿ ಗ್ರಾಹಕರನ್ನು ವಿಶ್ವಾಸದಿಂದ ಕಂಡು ಪ್ರಾಮಾಣಿಕತೆ ರೂಢಿಸಿಕೊಂಡು ಯಶಸ್ವಿಯಾಗಿದೆ ಎಂದರು.
ವಿಶೇಷ ಎಂದರೆ ಅಂದು ಕೈವಲ್ಯಮಠದ ಶ್ರೀಗಳೇ ಈ ಸಹಕಾರಿಯನ್ನು ಉದ್ಘಾಟಿಸಿದ್ದರು. ಇಂದು ಕೂಡ ಅವರ ಕೈಯಲ್ಲೇ ಮೂರನೇ ಶಾಖೆ ಉದ್ಘಾಟನೆಗೊಳ್ಳುತ್ತಿರುವುದು ಒಂದು ಸುಯೋಗ. ದೊಡ್ಡವರನ್ನು ಉದ್ಘಾಟನೆಗೆ ಕರೆಯುವುದು ಮುಖ್ಯವಲ್ಲ, ದೊಡ್ಡವರು ಹಾಕಿದ ಮಾರ್ಗದಲ್ಲೇ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುವುದು ಮುಖ್ಯ ಎಂದರು.
ದೇಶದಲ್ಲಿ ಸಹಕಾರಿ ಸಂಸ್ಥೆಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸ್ವತಃ ಗೃಹ ಸಚಿವ ಅಮಿತ್ ಶಾ ಅವರೇ ವಿಶೇಷ ಮುತುವರ್ಜಿ ವಹಿಸಿ ಸಹಕಾರಿ ಇಲಾಖೆಗೆ ಒಂದು ಸ್ಥಾನ ಮಾನ ನೀಡಿದ್ದಲ್ಲದೇ, ಅವರು ಸಹಕಾರಿ ಸಚಿವರಾಗಿ ಅತ್ಯಂತ ಬಲಿಷ್ಠವಾಗಿ ಸಹಕಾರ ಸಂಘಗಳಿಗೆ ಸಹಾಯ ಹಸ್ತ ಚಾಚಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನಿಗೆ ಹಣ ಬಹಳ ಮುಖ್ಯ. ಆರ್ಥಿಕತೆ ಸ್ಥಿರವಾಗಿದ್ದರೆ ಅವನ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಎಲ್ಲದಕ್ಕೂ ಮನಸ್ಸು ಕಾರಣ. ಆರ್ಥಿಕ ಸ್ಥಿತಿ ಚೆನ್ನಾಗಿದ್ದರೆ ಅವನ ಭೌತಿಕ ಮತ್ತು ಸ್ಥಿತಿಯೂ ಸರಿ ಇರುತ್ತದೆ. ಆದರೆ, ಹಣದ ಸದ್ವಿನಿಯೋಗ ಆಗಬೇಕು. ಹಣಕಾಸು ಸಂಸ್ಥೆಗಳು ಅರ್ಹರಿಗೆ ಆರ್ಥಿಕ ನೆರವು ನೀಡಬೇಕು. ಮತ್ತು ವೃದ್ಧರು ಠೇವಣಿ ಇಟ್ಟರೆ ಅವರಿಗೂ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿ, ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ಸಮಾಜಕ್ಕೆ ಸಹಕಾರಿಗಳು ತಮ್ಮಿಂದಾದಷ್ಟು ಕೊಡುಗೆ ನೀಡಬೇಕು. ಸಮಾಜದ ಕಲ್ಯಾಣವಾಗಬೇಕು ಎಂದರು.
ಅಧ್ಯಕ್ಷ ಎಂ.ಆರ್. ಗೋಪಾಲಕೃಷ್ಣ ಪಂಡಿತ್ ಮಾತನಾಡಿ, 6.80 ಲಕ್ಷ ರೂ. ಮೂಲ ಬಂಡವಾಳದಿಂದ ಪ್ರಾರಂಭವಾದ ಸಂಸ್ಥೆ ಇಂದು 17 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ಮಾಡುತ್ತಿದೆ. ಮೂರು ಶಾಖೆಗಳಿವೆ. ಒಬ್ಬರಿಗೆ 40 ಗರಿಷ್ಠ ಸಾಲ ನೀಡುವಷ್ಟು ಸಂಸ್ಥೆ ಬೆಳೆದಿದೆ. ಷೇರುದಾರರಿಗೆ ಹೆಚ್ಚಿನ ಡೆವಿಡೆಂಟ್ ನೀಡುತ್ತಿದೆ. ಇದುವರೆಗೆ ಎಲ್ಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದರ ಯಶಸ್ಸು ಎಲ್ಲರಿಗೂ ಸೇರುತ್ತದೆ ಎಂದರು.
ವಿಶೇಷ ಆಹ್ವಾನಿತರಾಗಿ ಸಂಸ್ಥಾಪಕ ಅಧ್ಯಕ್ಷ ದೇವದಾಸ್ ಎನ್. ನಾಯಕ್ ಮತ್ತು ಸಂಸ್ಥಾಪಕ ಮಂಡಳಿ ನಿರ್ದೇಶಕ ಹಾಗೂ ಜಿಎಸ್’ಬಿ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್, ಆನಂದಪುರದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ನಾಯಕ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾರಸ್ವತ ಸೌಹಾರ್ದ ಪತ್ತಿನ ಸಹಕಾರಿ ಉಪಾಧ್ಯಕ್ಷ ಸುಧೀರ್ ನಾಯಕ್, ಕಾರ್ಯದರ್ಶಿ ಪಿ. ಸದಾನಂದ ನಾಯಕ್, ಪ್ರಮುಖರಾದ ನರಸಿಂಹ ಕಿಣಿ, ವಿಶ್ವಾಸ್ ಕಾಮತ್, ಸುರೇಶ್ ರಾಮ್ ಪ್ರಭು, ಕೆ. ಮೋಹನ್ ದಾಸ್ ನಾಯಕ್, ಶ್ರೀಧರ ಶೆಣೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post